ಕುಟುಂಬವನ್ನು ಮುಗಿಸುವುದು ಹೇಗೆ...? ಎಐ ಚಾಟ್‌ಬಾಟ್‌ ಜೊತೆ ಕಥೆ ಹೆಣೆದು ಹೆತ್ತ ತಾಯಿ, ತಮ್ಮನನ್ನೇ ಕೊಂದ 17ರ ಬಾಲಕ! | Massachusetts Crime

Massachusetts Crime |ಎಐ ಚಾಟ್‌ಬಾಟ್‌ ಜೊತೆ ಕಥೆ ಹೆಣೆದು ಹೆತ್ತ ತಾಯಿ, ತಮ್ಮನನ್ನೇ ಕೊಂದ 17ರ ಬಾಲಕ!
Massachusetts Crime |ಎಐ ಚಾಟ್‌ಬಾಟ್‌ ಜೊತೆ ಕಥೆ ಹೆಣೆದು ಹೆತ್ತ ತಾಯಿ, ತಮ್ಮನನ್ನೇ ಕೊಂದ 17ರ ಬಾಲಕ!
Published on

ಅಮೆರಿಕದ ಮಾಸಚೂಸೆಟ್ಸ್ ರಾಜ್ಯದ ಆಕ್ಟನ್ ನಗರದಲ್ಲಿ ಭೀಕರ ಘಟನೆಯೊಂದು ( Massachusetts Crime) ನಡೆದಿದ್ದು, ಭಾರತೀಯ ಮೂಲದ 17 ವರ್ಷದ ಅರ್ಜುನ್ ಅರವಿಂದ್ ಎಂಬ ಹದಿಹರೆಯದ ಯುವಕ ತನ್ನ ತಾಯಿ ಮತ್ತು ಕಿರಿಯ ಸಹೋದರನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಮಂಗಳವಾರ ರಾತ್ರಿ ನಡೆದ ಈ ಕೃತ್ಯದ ನಂತರ ತಲೆಮರೆಸಿಕೊಂಡಿದ್ದ ಆತನನ್ನು ಬುಧವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರ್ಜುನ್ ಅರವಿಂದ್ ವಿರುದ್ಧ ಎರಡು ಕೊಲೆ ಪ್ರಕರಣಗಳು, ಕುಟುಂಬದ ಸದಸ್ಯರ ಮೇಲಿನ ದಾಳಿ ಮತ್ತು ಹಲ್ಲೆಯ ಎರಡು ಪ್ರಕರಣಗಳು, ಅನುಮತಿಯಿಲ್ಲದೆ ವಾಹನ ಬಳಸಿರುವುದು ಹಾಗೂ ಮೋಟಾರು ವಾಹನ ಕಳವು ಸೇರಿದಂತೆ ಹಲವು ಗಂಭೀರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ

ಆಕ್ಟನ್-ಬಾಕ್ಸ್‌ಬರೋ ರೀಜನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಅರ್ಜುನ್, ಬೋಸ್ಟನ್‌ನಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಆಕ್ಟನ್‌ನ ಮಾರ್ಥಾ ಲೇನ್‌ನಲ್ಲಿರುವ ತನ್ನ ನಿವಾಸದಲ್ಲಿ ತಾಯಿ ಸುಧಾ ವೆಂಕಟೇಶನ್ (45) ಮತ್ತು ತಮ್ಮ ಸಿದ್ಧಾರ್ಥ್ ಅರವಿಂದ್ (14) ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೃತ್ಯದ ನಂತರ ಆತ ತಾಯಿಯ ಹೋಂಡಾ ಆಕಾರ್ಡ್ ಕಾರಿನಲ್ಲಿ ಪರಾರಿಯಾಗಿದ್ದ. ಮಂಗಳವಾರ ಸಂಜೆ 6:30ರ ಸುಮಾರಿಗೆ ಪೂರ್ವನಿಗದಿತ ಪಾಠಕ್ಕಾಗಿ ಮನೆಗೆ ಬಂದಿದ್ದ ಬೋಧಕರಿಗೆ ಮನೆ ಬಾಗಿಲು ತೆರೆಯದಿದ್ದಾಗ ಅರ್ಜುನ್‌ನ ತಂದೆಗೆ ಕರೆ ಮಾಡಿದ್ದರು. ತಂದೆಯು ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾದಾಗ ಆಕ್ಟನ್ ಪೊಲೀಸ್ ಠಾಣೆಗೆ ಕರೆ ಮಾಡಿ ತಪಾಸಣೆ ನಡೆಸುವಂತೆ ಮನವಿ ಮಾಡಿದ್ದರು.
ಅರ್ಜುನ್‌ನ ತಂದೆ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುನ್ನ ಕೊನೆಯದಾಗಿ ಪತ್ನಿಯನ್ನು ನೋಡಿದ್ದರು. ಕಿರಿಯ ಮಗ ಸಿದ್ಧಾರ್ಥ್ ಮಧ್ಯಾಹ್ನದ ವೇಳೆಗೆ ಕೊನೆಯದಾಗಿ ಕಾಣಿಸಿಕೊಂಡಿದ್ದ.

ಪೊಲೀಸ್ ತನಿಖೆ ಮತ್ತು ಮೃತದೇಹ ಪತ್ತೆ

ಮಿಡಲ್‌ಸೆಕ್ಸ್ ಜಿಲ್ಲಾ ಅಟಾರ್ನಿ ಮೇರಿಯನ್ ರಯಾನ್ ಮತ್ತು ಆಕ್ಟನ್ ಪೊಲೀಸ್ ಮುಖ್ಯಸ್ಥ ಡೌಗ್ಲಾಸ್ ಸ್ಟರ್ನಿಯೋಲೋ ನೀಡಿರುವ ಮಾಹಿತಿಯಂತೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮನೆಯ ಮೊದಲ ಮಹಡಿಯಲ್ಲಿ ಸಿದ್ಧಾರ್ಥ್ ಮತ್ತು ಬೇಸ್‌ಮೆಂಟ್‌ನಲ್ಲಿ ಸುಧಾ ವೆಂಕಟೇಶನ್ ಮೃತದೇಹಗಳು ಪತ್ತೆಯಾಗಿವೆ. ಇಬ್ಬರ ದೇಹಗಳ ಮೇಲೆಯೂ ಗಾಯಗಳಾಗಿರುವುದು ಕಂಡುಬಂದಿದೆ. ಆದರೆ, ಹತ್ಯೆಗೆ ಬಳಸಿದ ಆಯುಧ ಯಾವುದು ಹಾಗೂ ಸಾವಿಗೆ ನಿಖರವಾದ ಕಾರಣಗಳೇನು ಎಂಬುದರ ಕುರಿತು ವರದಿ ಬರಬೇಕಿದೆ.
ಘಟನೆಯ ನಂತರ ಅರ್ಜುನ್ ತನ್ನ ತಾಯಿಯ ಕಾರ್​ ಜೊತೆ ನಾಪತ್ತೆಯಾಗಿದ್ದು, ತನಿಖಾಧಿಕಾರಿಗಳು ಆತನಿಗಾಗಿ ತೀವ್ರ ಹುಡುಕಾಟ ನಡೆಸಿ ಸಾರ್ವಜನಿಕರಿಗೆ ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರು. ಬುಧವಾರ ಮುಂಜಾನೆ ಮಾಸಚೂಸೆಟ್ಸ್‌ನ ವೇಲ್ಯಾಂಡ್‌ನಲ್ಲಿರುವ ಪಾರ್ಕಿಂಗ್ ಸ್ಥಳವೊಂದರಲ್ಲಿ ಬೇರೊಂದು ತುರ್ತು ಅಲಾರಂ ಕರೆಗೆ ಸ್ಪಂದಿಸಲು ಬಂದ ಪೊಲೀಸರಿಗೆ ಕಾರಿನೊಳಗೆ ಕುಳಿತಿದ್ದ ಅರ್ಜುನ್ ಪತ್ತೆಯಾಗಿದ್ದು, ಆತನನ್ನು ಯಾವುದೇ ಪ್ರತಿರೋಧವಿಲ್ಲದೆ ಬಂಧಿಸಲಾಯಿತು.

ಚಾಟ್‌ಜಿಪಿಟಿ ಜೊತೆ ಹೆಣೆದಿದ್ದ ಕಥೆ!..

ಅರ್ಜುನ್ ಇತ್ತೀಚೆಗೆ ಶಂಕಾಸ್ಪದ ಮತ್ತು ಆತಂಕಕಾರಿ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಮಿಡಲ್‌ಸೆಕ್ಸ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯ ಪ್ರಕಟಣೆಯ ಪ್ರಕಾರ, ಅರ್ಜುನ್ ಇಂಟರ್ನೆಟ್ ಹಾಗೂ ಚಾಟ್‌ಜಿಪಿಟಿ ಬಳಸಿ ತನ್ನ ಕುಟುಂಬಸ್ಥರನ್ನೇ ಕೊಲೆ ಮಾಡುವ ಫ್ಯಾಂಟಸಿಗಳ ಕುರಿತು ಹುಡುಕಾಟ ನಡೆಸಿದ್ದ. ಆತ ಕೃತಕ ಬುದ್ಧಿಮತ್ತೆಯ (ಎಐ) ಚಾಟ್‌ಬಾಟ್ ಸಹಾಯದಿಂದ ಗೋಥಿಕ್ ಕಾದಂಬರಿ ಶೈಲಿಯ ಕಥೆಗಳನ್ನು ರಚಿಸಲು ಪ್ರಶ್ನೆಗಳನ್ನು ಕೇಳಿ, ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಎಂದು ತಿಳಿದುಬಂದಿದೆ.
ಬುಧವಾರ ಅರ್ಜುನ್‌ನನ್ನು ಲೋವೆಲ್ ಜ್ಯೂವೆನೈಲ್ (ಸಣ್ಣವರ) ಕೋರ್ಟ್‌ಗೆ ಹಾಜರುಪಡಿಸಲಾಯಿತು. ಕೊಲೆ ಪ್ರಕರಣಗಳು ಜ್ಯೂವೆನೈಲ್ ಕೋರ್ಟ್‌ನ ವ್ಯಾಪ್ತಿಗೆ ಬಾರದ ಕಾರಣ, ಕೊಲೆ ಮತ್ತು ಇತರ ಗಂಭೀರ ಹಲ್ಲೆಯ ಆರೋಪಗಳ ವಿಚಾರಣೆಯನ್ನು ನಂತರ ಕಾನ್‌ಕಾರ್ಡ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net