ಬಾಹ್ಯಾಕಾಶದಲ್ಲೇ ತಾಜಾ ತರಕಾರಿ ಬೆಳೆದು ಅಡುಗೆ ಮಾಡಿದ ನಾಸಾ ಗಗನಯಾತ್ರಿಗಳು: ವಿಡಿಯೋ ವೈರಲ್! NASA

NASA (ಚಿತ್ರ X)
NASA (ಚಿತ್ರ X)
Published on

NASA:

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾ ಗಗನಯಾತ್ರಿ, ಭಾರತೀಯ ಮೂಲದ ಅನಿಲ್ ಮೆನನ್ ಹಾಗೂ ಸಹದ್ಯೋಗಿ ಜಸ್ಸಿಕಾ ಮೈಯರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲೇ ತಾಜಾ ಸೊಪ್ಪುಗಳನ್ನು ಬೆಳೆದು, ಅವುಗಳನ್ನು ಕೊಯ್ಲು ಮಾಡಿ ರುಚಿಕರವಾದ ಆಹಾರ ತಯಾರಿಸುವ ಮೂಲಕ ಭವಿಷ್ಯದ ದೀರ್ಘಾವಧಿ ಬಾಹ್ಯಾಕಾಶ ಪಯಣಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ಬಾಹ್ಯಾಕಾಶದಲ್ಲೇ ಫಾರ್ಮ್-ಟು-ಟೇಬಲ್ ಅನುಭವ

ಬಾಹ್ಯಾಕಾಶ ನಿಲ್ದಾಣದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಳೆಸಿದ ಕೇಲ್​ ಮತ್ತು ಸಾಸಿವೆ ತಳಿಯ ವಾಸಾಬಿ ಮಸ್ಟರ್ಡ್​ ಎಲೆಗಳನ್ನು ಕೊಹ್ಲು ಮಾಡಿ ಅಡುಗೆ ಮಾಡಿರುವ ವಿಡಿಯೋವನ್ನು ಅನಿಲ್​ ಮೆನನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ನಾವು ಬೆಳೆದ ಈ ಸೊಪ್ಪುಗಳಿಂದ ರುಚಿಕರ ಆಹಾರವನ್ನು ತಯಾರಿಸಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಬಹುಶಃ ಇದು ನಾವು ಇಲ್ಲಿಯವರೆಗೆ ಸೇವಿಸಿದ ಅತ್ಯುತ್ತಮ ಆಹಾರ ಇರಬಹುದು, ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಸಸ್ಯಗಳ ಪಾಲನೆಗೆ ಮಾರ್ಗದರ್ಶನ ನೀಡಿದ ನಾಸಾದ ವೆಜ್ಜಿ ತಂಡಕ್ಕೆ ಧನ್ಯವಾದ ಎಂದರು. ಆದಾಗ್ಯೂ, ದಿ ಮಾರ್ಷಿಯನ್ ಸಿನಿಮಾದ ಮಂಗಳ ಗ್ರಹದಲ್ಲಿ ಆಲೂಗಡ್ಡೆ ಬೆಳೆಯುವ ಕಾಲ್ಪನಿಕ ಪಾತ್ರ ಮಾರ್ಕ್ ವ್ಯಾಟ್ನಿ ಕೂಡ ಇದನ್ನು ನೋಡಿ ಹೆಮ್ಮೆಪಡುತ್ತಿದ್ದರು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ನಾಸಾದ ವೆಜ್ಜಿ ಪ್ರಯೋಗ ಮತ್ತು ಭವಿಷ್ಯದ ಮಿಷನ್

ನಾಸಾದ ವೆಜ್ಜಿ ಪ್ರೊಡಕ್ಷನ್ ಸಿಸ್ಟಮ್ ಎಂಬ ವಿಶೇಷ ಕೊಠಡಿಯಲ್ಲಿ ಶೂನ್ಯ ಗುರುತ್ವಾಕರ್ಷಣೆಗೆ ಗಿಡಗಳು ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಕೈಗೊಳ್ಳುವ ವರ್ಷಾನುಗಟ್ಟಲೆ ಅವಧಿಯ ಬಾಹ್ಯಾಕಾಶ ಯಾನಗಳಿಗೆ ಈ ಪ್ರಯೋಗ ಅತ್ಯಂತ ನಿರ್ಣಾಯಕವಾಗಲಿದೆ.

ಸದಾ ಪ್ಯಾಕ್ ಮಾಡಿದ ಸಿದ್ಧ ಆಹಾರವನ್ನೇ ಸೇವಿಸುವ ಗಗನಯಾತ್ರಿಗಳಿಗೆ ತಾಜಾ ತರಕಾರಿಗಳು ಅಗತ್ಯ ಪೋಷಕಾಂಶಗಳನ್ನು ನೀಡುವುದಲ್ಲದೆ, ಮಾನಸಿಕವಾಗಿಯೂ ಹೊಸ ಉತ್ಸಾಹ ನೀಡುತ್ತವೆ. ಜೊತೆಗೆ ಭೂಮಿಯಿಂದ ಆಹಾರ ಧಾನ್ಯಗಳನ್ನು ಬಾಹ್ಯಾಕಾಶಕ್ಕೆ ಸಾಗಿಸುವ ಬೃಹತ್ ವೆಚ್ಚವನ್ನು ಇದು ತಪ್ಪಿಸಲಿದೆ ಎಂದಿದ್ದಾರೆ.

ಮಹತ್ವದ ಸ್ಪೇಸ್‌ವಾಕ್ ಕೈಗೊಳ್ಳಲಿರುವ ಅನಿಲ್ ಮೆನನ್

ಬಾಹ್ಯಾಕಾಶದಲ್ಲಿ ಅಡುಗೆ ಮಾಡಿದ ಖುಷಿಯ ಜೊತೆಯಲ್ಲೇ ಅನಿಲ್ ಮೆನನ್ ಮತ್ತೊಂದು ದೊಡ್ಡ ಸಾಹಸಕ್ಕೆ ಸಜ್ಜಾಗಿದ್ದಾರೆ. ಗಗನಯಾತ್ರಿ ಸೋಫಿ ಅಡೆನೋಟ್ ಅವರೊಂದಿಗೆ ಇವರು ಸುಮಾರು ಆರೂವರೆ ಗಂಟೆಗಳ ಕಾಲ ಸುದೀರ್ಘ ಬಾಹ್ಯಾಕಾಶ ನಡಿಗೆ ನಡೆಸಲಿದ್ದಾರೆ. ಹೂಸ್ಟನ್​ನಲ್ಲಿರುವ ನಾಸಾ ಮಿಷನ್ ಕಂಟ್ರೋಲ್ ಸೆಂಟರ್ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವೆ ಹೈ-ಸ್ಪೀಡ್ ಸಂಪರ್ಕ ಕಲ್ಪಿಸುವ ಪ್ರಮುಖ ಆಂಟೆನಾವನ್ನು ಬದಲಾಯಿಸುವುದು ಈ ಸ್ಪೇಸ್‌ವಾಕ್‌ನ ಮುಖ್ಯ ಉದ್ದೇಶವಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net