ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ರೈತರಿಗೆ ಮಹಾದ್ರೋಹ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ | Rahul Gandhi
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ರೈತರಿಗೆ ಮಹಾದ್ರೋಹ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
Published on:
Copied
Follow Us
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತೀಯ ರೈತರಿಗೆ ಮಾಡುವ ಮಹಾದ್ರೋಹ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (RahulGandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
DDG ಆಮದಿನ ರಹಸ್ಯವೇನು..?
ಅಮೆರಿಕದಿಂದ ಡ್ರೈಡ್ ಡಿಸ್ಟಿಲರ್ಸ್ ಗ್ರೇನ್ಸ್ (DDG) ಆಮದು ಮಾಡಿಕೊಳ್ಳುವುದರ ಅರ್ಥವೇನು? ಭಾರತದ ಜಾನುವಾರುಗಳಿಗೆ ಅಮೆರಿಕದ ಜಿಎಂ (ತಳಿಪರಿವರ್ತಿತ) ಮೆಕ್ಕೆಜೋಳದ ತ್ಯಾಜ್ಯವನ್ನು ಆಹಾರವಾಗಿ ನೀಡಲಾಗುತ್ತದೆಯೇ? ಇದರಿಂದ ನಮ್ಮ ಡೈರಿ ಉದ್ಯಮವು ಅಮೆರಿಕದ ಮೇಲೆ ಅವಲಂಬಿತವಾಗುವುದಿಲ್ಲವೇ?
ಸೋಯಾ ಬೆಳೆಗಾರರ ಗತಿಯೇನು..?
ಜಿಎಂ ಸೋಯಾ ಎಣ್ಣೆಯ ಆಮದಿಗೆ ಅನುಮತಿ ನೀಡಿದರೆ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಸೋಯಾಬೀನ್ ಬೆಳೆಗಾರರ ಸ್ಥಿತಿ ಏನಾಗಲಿದೆ? ಅವರು ಮಾರುಕಟ್ಟೆಯ ಬೆಲೆ ಕುಸಿತವನ್ನು ಹೇಗೆ ತಡೆದುಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.
ಹೆಚ್ಚುವರಿ ಉತ್ಪನ್ನಗಳು ಎಂಬ ಹೆಸರಿನಲ್ಲಿ ಯಾವ ಬೆಳೆಗಳನ್ನು ಸೇರಿಸಲಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಬೇಳೆಕಾಳು ಮತ್ತು ಇತರ ಆಹಾರ ಧಾನ್ಯಗಳ ಮಾರುಕಟ್ಟೆಯನ್ನೂ ಅಮೆರಿಕಕ್ಕೆ ಬಿಟ್ಟುಕೊಡುವ ಸಂಚು ಇದೆಯೇ ಎಂದು ಮೋದಿ ಸರ್ಕಾರದ ವಿರುದ್ದ ರಾಹುಲ್ ಹರಿಹಾಯ್ದಿದ್ದಾರೆ.
MSP ಮೇಲೆ ಕತ್ತರಿ ಬೀಳಲಿದೆಯೇ..?
ವಾಣಿಜ್ಯೇತರ ಅಡೆತಡೆಗಳನ್ನು ತೆಗೆದುಹಾಕುವುದು ಎಂದರೆ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಬೋನಸ್ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಎಂದರ್ಥವೇ ಎಂದು ರಾಹುಲ್ ತಿಳಿಸಿದ್ದಾರೆ.
ಕೃಷಿ ಸಾರ್ವಭೌಮತ್ವಕ್ಕೆ ಧಕ್ಕೆ: ಒಮ್ಮೆ ಬಾಗಿಲು ತೆರೆದರೆ, ಪ್ರತಿ ವರ್ಷ ಅಮೆರಿಕದ ಒತ್ತಡಕ್ಕೆ ಮಣಿದು ಹೆಚ್ಚು ಬೆಳೆಗಳನ್ನು ಈ ಪಟ್ಟಿಗೆ ಸೇರಿಸಲಾಗುತ್ತದೆಯೇ? ಭಾರತದ ಕೃಷಿ ರಂಗದ ಮೇಲೆ ಮತ್ತೊಂದು ದೇಶದ ಹಿಡಿತಕ್ಕೆ ನಾವು ಅವಕಾಶ ನೀಡುತ್ತಿದ್ದೇವೆಯೇ ಎಂದು ಕೇಂದ್ರವನ್ನು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ ಮಾತೆಯನ್ನು ಮಾರಿದ್ದೀರಿ
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ನೀವು ಭಾರತ ಮಾತೆಯನ್ನು ಮಾರಿದ್ದೀರಿ. ಈ ಒಪ್ಪಂದವು ಸಂಪೂರ್ಣ ಶರಣಾಗತಿಯಾಗಿದೆ ಎಂದು ಕಿಡಿಕಾರಿದ್ದಾರೆ. ಅಮೆರಿಕಕ್ಕೆ ಭಾರತದ ಇಂಧನ ಭದ್ರತೆ ಮತ್ತು ರೈತರ ಹಿತಾಸಕ್ತಿಗಳನ್ನು ಬಿಟ್ಟುಕೊಡಲಾಗಿದೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಸರೆಂಡರ್ ಮೋದಿ
ಪ್ರಧಾನಿ ಮೋದಿಯವರು ಅಮೆರಿಕದ ಮುಂದೆ ಮಂಡಿಯೂರಿದ್ದಾರೆ ಎಂದು ಟೀಕಿಸಿದ ರಾಹುಲ್, ಪ್ರಧಾನಿಯವರ ಕಣ್ಣಲ್ಲಿ ಭಯ ಕಾಣುತ್ತಿದೆ. ಈ ಒಪ್ಪಂದವು ಕೃಷಿ ಕ್ಷೇತ್ರದ ಮೇಲೆ ದೀರ್ಘಕಾಲದ ವಿದೇಶಿ ಹಿಡಿತಕ್ಕೆ ದಾರಿಯಾಗಿದೆ ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).