ಅಮೆರಿಕ ದಾಳಿಗೆ ಇಂಡಿಯಾ ತೀವ್ರ ಪ್ರತಿಭಟನೆ: ಜೈಶಂಕರ್ ಎದುರೇ ದಿಗ್ಬಂಧನ ಉಲ್ಲಂಘನೆ ಸಹಿಸಲ್ಲ ಎಂದ ರೂಬಿಯೋ! ಭಾರತ-ಯುಎಸ್ ವಾಗ್ಯುದ್ಧ! JaishankarVsRubio

ಅಮೆರಿಕ ದಾಳಿಗೆ ಇಂಡಿಯಾ ತೀವ್ರ ಪ್ರತಿಭಟನೆ: ಜೈಶಂಕರ್ ಎದುರೇ ದಿಗ್ಬಂಧನ ಉಲ್ಲಂಘನೆ ಸಹಿಸಲ್ಲ ಎಂದ ರೂಬಿಯೋ! ಭಾರತ-ಯುಎಸ್ ವಾಗ್ಯುದ್ಧ!
ಅಮೆರಿಕ ದಾಳಿಗೆ ಇಂಡಿಯಾ ತೀವ್ರ ಪ್ರತಿಭಟನೆ: ಜೈಶಂಕರ್ ಎದುರೇ ದಿಗ್ಬಂಧನ ಉಲ್ಲಂಘನೆ ಸಹಿಸಲ್ಲ ಎಂದ ರೂಬಿಯೋ! ಭಾರತ-ಯುಎಸ್ ವಾಗ್ಯುದ್ಧ!
Published on
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ, ಒಮಾನ್ ಕರಾವಳಿಯಲ್ಲಿ ಅಮೆರಿಕ ನೌಕಾಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಬಲಿಯಾಗಿರುವುದು ತೀವ್ರ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಭಾರತ(JaishankarVsRubio) ತೀವ್ರವಾಗಿ ಖಂಡಿಸಿದ್ದು, ಅಮೆರಿಕ ಸರ್ಕಾರದ ವಿರುದ್ಧ ಕಠಿಣ ಪ್ರತಿಭಟನೆ ದಾಖಲಿಸಿದೆ.
ಇದರ ಬೆನ್ನಲ್ಲೇ, ಜೂನ್ 12 ರಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ನಡುವೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆದಿದೆ. ಅಲ್ಲದೆ, ಈ ವೇಳೆ ಭಾರತವು ತನ್ನ ಪ್ರಜೆಗಳ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಅತ್ತ ಅಮೆರಿಕವು ಹೊರ್ಮುಜ್ ಜಲಸಂಧಿಯಲ್ಲಿ ತಾನು ಹೇರಿರುವ ಸಮುದ್ರ ದಿಗ್ಬಂಧನವನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ.

"ವಾಣಿಜ್ಯ ಹಡಗುಗಳ ಮೇಲಿನ ದಾಳಿ ಸಮರ್ಥನೀಯವಲ್ಲ": ಜೈಶಂಕರ್ ಆಕ್ರೋಶ

ಅಮೆರಿಕ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಮಾತನಾಡಿದ ನಂತರ ಸಚಿವ ಎಸ್. ಜೈಶಂಕರ್ ಅವರು ತಮ್ಮ ಅಧಿಕೃತ Xನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತನಾಡಿದೆ. ಗಲ್ಫ್ ವಲಯದಲ್ಲಿ ಅಮೆರಿಕ ನೌಕಾಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ವೀರಮರಣ ಅಪ್ಪಿದ ಘಟನೆಗೆ ಭಾರತದ ಪರವಾಗಿ ಅತ್ಯಂತ ಕಠಿಣ ಪ್ರತಿಭಟನೆಯನ್ನು ಪುನರುಚ್ಚರಿಸಿದ್ದೇನೆ. ವಾಣಿಜ್ಯ ಹಡಗುಗಳ ಮೇಲೆ ಇಂತಹ ಪ್ರಾಣಾಂತಿಕ ದಾಳಿಗಳನ್ನು ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಜೈಶಂಕರ್ ಬರೆದುಕೊಂಡಿದ್ದಾರೆ.
ಈ ದಾಳಿಯ ಬೆನ್ನಲ್ಲೇ ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉನ್ನತ ಅಧಿಕಾರಿಗೆ ಭಾರತದ ವಿದೇಶಾಂಗ ಸಚಿವಾಲಯವು ಸಮನ್ಸ್ ಜಾರಿ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಾಗರಿಕ ಹಡಗುಗಳ ವಿರುದ್ಧ ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಸರಿಯಲ್ಲ ಮತ್ತು ಇದು ಅಂತಾರಾಷ್ಟ್ರೀಯ ಕಡಲ ವ್ಯಾಪಾರದ ಭದ್ರತೆ ಹಾಗೂ ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ ಎಂದು ಭಾರತ ಎಚ್ಚರಿಸಿದೆ.

"ದಿಗ್ಬಂಧನ ಉಲ್ಲಂಘನೆ ಸಹಿಸಲ್ಲ": ಅಮೆರಿಕ ಸಡ್ಡು!

ಭಾರತದ ಆಕ್ಷೇಪಣೆಯ ಬೆನ್ನಲ್ಲೇ ಅಮೆರಿಕದ ನ್ಯಾಯಾಂಗ ಇಲಾಖೆಯು ಉಭಯ ನಾಯಕರ ಮಾತುಕತೆಯ ಕುರಿತು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಆ ಹೇಳಿಕೆಯಲ್ಲಿ ಅಮೆರಿಕ ತನ್ನ ಕಠಿಣ ನಿಲುವನ್ನು ಸಮರ್ಥಿಸಿಕೊಂಡಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರೊಂದಿಗೆ ಹೊರ್ಮುಜ್ ಜಲಸಂಧಿಯಲ್ಲಿ ನಡೆದ ಇತ್ತೀಚಿನ ಘಟನೆಗಳ ಬಗ್ಗೆ ಚರ್ಚಿಸಿದರು. ಈ ವೇಳೆ, ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಅಮೆರಿಕ ಪಡೆಗಳು ನೀಡುವ ಆದೇಶಗಳನ್ನು ಎಲ್ಲಾ ವಾಣಿಜ್ಯ ಹಡಗುಗಳು ತಕ್ಷಣವೇ ಪಾಲಿಸಬೇಕು ಎಂದು ರೂಬಿಯೋ ಒತ್ತಿ ಹೇಳಿದ್ದಾರೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ಇರಾನ್‌ನಿಂದ ಕಾನೂನುಬಾಹಿರವಾಗಿ ಕಚ್ಚಾ ತೈಲವನ್ನು ಸಾಗಿಸುವುದನ್ನು ತಡೆಯಲು ಅಮೆರಿಕ ವಿಧಿಸಿರುವ ಸಮುದ್ರ ದಿಗ್ಬಂಧನವನ್ನು ಯಾವುದೇ ದೇಶ ಅಥವಾ ಹಡಗು ಉಲ್ಲಂಘಿಸಿದರೆ ಅದನ್ನು ನಾವು ಸಹಿಸುವುದಿಲ್ಲ ಎಂದು ಮಾರ್ಕೊ ರೂಬಿಯೋ ಭಾರತದ ಸಚಿವರಿಗೆ ನೇರವಾಗಿಯೇ ಸ್ಪಷ್ಟಪಡಿಸಿದ್ದಾರೆ.

ಮೂವರು ಭಾರತೀಯ ನಾವಿಕರು ಬಲಿಯಾದ ಆ ಭೀಕರ ಘಟನೆ ಏನು?

ಕೆಲವು ದಿನಗಳ ಹಿಂದಷ್ಟೇ ಒಮಾನ್ ಕರಾವಳಿಯ ಸಮೀಪದಲ್ಲಿ ಸಾಗುತ್ತಿದ್ದ ಪಲಾವ್ ದೇಶದ ಧ್ವಜ ಹೊಂದಿದ್ದ ಎಂಟಿ ಸೆಟೆಬೆಲ್ಲೊ ಎಂಬ ತೈಲ ಟ್ಯಾಂಕರ್ ಹಡಗಿನ ಮೇಲೆ ಅಮೆರಿಕದ ನೌಕಾಸೇನೆ ಭೀಕರ ದಾಳಿ ನಡೆಸಿತ್ತು. ಈ ವಾಣಿಜ್ಯ ಹಡಗಿನಲ್ಲಿ ಒಟ್ಟು 24 ಭಾರತೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ದಾಳಿಯ ತೀವ್ರತೆಗೆ ಹಡಗಿನಲ್ಲಿದ್ದ ಮೂವರು ಭಾರತೀಯ ನಾವಿಕರು ನಾಪತ್ತೆಯಾಗಿದ್ದರು, ತದನಂತರ ಅವರು ಮೃತಪಟ್ಟಿರುವುದನ್ನು ಧೃಡೀಕರಿಸಲಾಯಿತು. ಉಳಿದ 21 ನಾವಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರತ್ಯೇಕ ಹೇಳಿಕೆ ನೀಡಿ, ಭಾರತೀಯ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ತಕ್ಷಣವೇ ನಿಲ್ಲಬೇಕು. ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರಳಿ ತರಲು ಕೇವಲ ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದಗಳು ಮಾತ್ರ ಏಕೈಕ ಮಾರ್ಗ," ಎಂದು ಜಗತ್ತಿಗೆ ಕರೆ ನೀಡಿದ್ದಾರೆ. ಸದ್ಯ ಉಭಯ ಮಿತ್ರ ರಾಷ್ಟ್ರಗಳ ನಡುವೆ ನಡೆದಿರುವ ಈ ವಾಗ್ಯುದ್ಧವು ಜಾಗತಿಕ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net