ಭಯೋತ್ಪಾದನೆ ಮಾನವೀಯತೆಯ ಮೌಲ್ಯಗಳ ಮೇಲಿನ ನೇರ ದಾಳಿ....ಪಹಲ್ಗಾಮ್‌ ಘಟನೆ ಹೇಡಿತನದ್ದು ಎಂದ ಪ್ರಧಾನಿ ನರೇಂದ್ರ ಮೋದಿ | Narendra Modi

 Narendra Modi
Narendra Modi
Published on
ದೆಹಲಿ: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಬಹಳ ಹಿಂದಿನಿಂದಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಾಗಿರಲಿ ಅಥವಾ ಕ್ರೋಕಸ್ ಸಿಟಿ ಹಾಲ್ ಮೇಲಿನ ಹೇಡಿತನದ ದಾಳಿಯಾಗಿರಲಿ, ಈ ಎಲ್ಲಾ ಘಟನೆಗಳ ಮೂಲ ಒಂದೇ, ಅದೇ ಭಯೋತ್ಪಾದನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪದನೆಯು ಮಾನವೀಯತೆಯ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದ್ದು, ಅದರ ವಿರುದ್ಧ ಜಾಗತಿಕ ಏಕತೆ ನಮ್ಮ ದೊಡ್ಡ ಶಕ್ತಿ ಎನ್ನುವುದು ಭಾರತದ ಅಚಲ ನಂಬಿಕೆಯಾಗಿದೆ ಎಂದರು.

ಇಂಧನ ಭದ್ರತೆ ನಮ್ಮ ಪಾಲುದಾರಿಕೆಯ ಆಧಾರಸ್ತಂಭ: ಪ್ರಧಾನಿ ಮೋದಿ

ಇಂಧನ ಭದ್ರತೆಯು ನಮ್ಮ ಪಾಲುದಾರಿಕೆಯ ಬಲವಾದ ಆಧಾರಸ್ತಂಭವಾಗಿದ್ದು, ನಾವು ಈ ಗೆಲುವಿನ ಸಹಕಾರವನ್ನು ಮುಂದುವರಿಸುತ್ತೇವೆ. ನಾಗರಿಕ ಪರಮಾಣು ಶಕ್ತಿಯಲ್ಲಿನ ನಮ್ಮ ಸಹಯೋಗವು ದಶಕಗಳಿಂದ ವ್ಯಾಪಿಸಿದ್ದು, ಶುದ್ಧ ಇಂಧನಕ್ಕೆ ಕೊಡುಗೆ ನೀಡಿದೆ. ವೈವಿಧ್ಯಮಯ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು ನಮ್ಮ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಳೆದ ಎಂಟು ದಶಕಗಳಲ್ಲಿ ಜಗತ್ತು ಅನೇಕ ಏರಿಳಿತಗಳನ್ನು ಕಂಡಿದೆ. ಈ ನಡುವೆಯೂ ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಧ್ರುವ ನಕ್ಷತ್ರದಂತೆ ಮುಂದುವರೆದಿದೆ. ಈ ಸಂಬಂಧವು ಪರಸ್ಪರ ಗೌರವ ಮತ್ತು ನಂಬಿಕೆಯ ಮೇಲೆ ನಿರ್ಮಿತವಾಗಿದ್ದು, ಇಂದು ಈ ಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಆರ್ಥಿಕ ಸಹಕಾರ

ಆರ್ಥಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾವು ವಿಷನ್ 2030ಗೆ ಸಹಿ ಹಾಕಿದ್ದೇವೆ. ಇಂದು ನಾವು ಎರಡು ದೇಶಗಳ ವ್ಯಾಪಾರ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದು, ಈ ವೇದಿಕೆ ನಮ್ಮ ವ್ಯವಹಾರ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಸಹ ಉತ್ಪಾದನೆ ಮತ್ತು ಸಹ ನಾವೀನ್ಯತೆಗಾಗಿ ಹೊಸ ದಾರಿ ತೋರಿಸುತ್ತದೆ ಎಂದು ಹೇಳಿದರು.

ಶಾಂತಿಯ ಪರವಾಗಿದ್ದೇವೆ ಎಂದ ಪ್ರಧಾನಿ ಮೋದಿ

ಸುದ್ದಿಗೋಷ್ಠಿಗೂ ಮುನ್ನ ಹೈದರಾಬಾದ್ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ದೂರದೃಷ್ಟಿಯ ನಾಯಕ ಎಂದು ಹೊಗಳಿದ ಮೋದಿ, ಇದು ಶಾಂತಿಯ ಯುಗ ಎಂದರು. ರಷ್ಯಾ ಮತ್ತು ಉಕ್ರೇನ್ ಕಲ್ಯಾಣವು ಶಾಂತಿಯ ಹಾದಿಯಲ್ಲಿದೆ ಎಂದಿರುವ ಪ್ರಧಾನಿ ಮೋದಿ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳುತ್ತವೆ, ಭಾರತ ಮತ್ತು ರಷ್ಯಾ ಒಟ್ಟಾಗಿ ಜಗತ್ತನ್ನು ಆ ಹಾದಿಯತ್ತ ಕೊಂಡೊಯ್ಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಕ್ರೇನ್ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ, ನಾವು ನಿರಂತರ ಚರ್ಚೆಯಲ್ಲಿದ್ದೇವೆ. ಕಾಲಕಾಲಕ್ಕೆ ನೀವು ಕೂಡ ನಿಜವಾದ ಸ್ನೇಹಿತರಾಗಿ ಎಲ್ಲದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದೀರಿ. ನಂಬಿಕೆ ಎನ್ನುವುದು ದೊಡ್ಡ ಶಕ್ತಿ ಎನ್ನುವುದು ನನ್ನ ನಂಬಿಕೆ, ಯುದ್ಧದ ವಿಷಯವಾಗಿ ನಿಮ್ಮೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ ಮತ್ತು ಅದನ್ನು ಪ್ರಪಂಚದ ಮುಂದೆಯೂ ಪ್ರಸ್ತುತಪಡಿಸಿದ್ದೇನೆ ಎಂದು ಪ್ರಧಾನಿ ಮೋದಿ ಪುಟಿನ್​ಗೆ ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net