ಪಾಕ್-ಚೀನಾ ಕುತಂತ್ರಕ್ಕೆ ಭಾರತದ ತಿರುಗೇಟು!...1963ರ ಗಡಿ ಒಪ್ಪಂದ ಅಸಿಂಧು ಎಂದ ವಿದೇಶಾಂಗ ಸಚಿವಾಲಯ | Pakistan-China Boundary

Pakistan-China Boundary | ಪಾಕ್-ಚೀನಾ ಕುತಂತ್ರಕ್ಕೆ ಭಾರತದ ತಿರುಗೇಟು!
Pakistan-China Boundary | ಪಾಕ್-ಚೀನಾ ಕುತಂತ್ರಕ್ಕೆ ಭಾರತದ ತಿರುಗೇಟು!
Published on
ನವದೆಹಲಿ: ಭಾರತೀಯ ಭೂಭಾಗಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಚೀನಾ ನಡುವೆ ಯಾವುದೇ ಮಾನ್ಯತೆ ಪಡೆದ ಗಡಿಯಿಲ್ಲ (Pakistan-China Boundary) ಹಾಗೂ ಅಂತಹ ಯಾವುದೇ ವ್ಯವಸ್ಥೆಗೆ ಕಾನೂನುಬದ್ಧ ಆಧಾರವಿಲ್ಲ ಎಂದು ಪ್ರತಿಪಾದಿಸಿರುವ ಭಾರತ, ಚೀನಾ-ಪಾಕಿಸ್ತಾನ ಗಡಿ ಜಂಟಿ ಆಯೋಗವನ್ನು ಬುಧವಾರ ತಿರಸ್ಕರಿಸಿದೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್, ಈ ವಿಷಯದಲ್ಲಿ ಭಾರತದ ನಿಲುವು ಸಷ್ಟ ಮತ್ತು ಸ್ಥಿರವಾಗಿದೆ ಎಂದು ಹೇಳಿದರು. ಹಾಗೂ 1963 ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವನ್ನು ನವದೆಹಲಿ ಎಂದಿಗೂ ಪರಿಗಣಿಸಿಲ್ಲ ಎಂಬುದನ್ನು ಪುನರುಚ್ಚರಿಸಿದರು.

ಚೀನಾ-ಪಾಕಿಸ್ತಾನ ನಿಲುವನ್ನು ತಿರಸ್ಕರಿಸಿದ ಭಾರತ!

ಜಂಟಿ ಆಯೋಗವನ್ನು ಭಾರತ ತಿರಸ್ಕರಿಸುತ್ತದೆ ಎಂದು ಹೇಳಿದ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್, ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದ್ದವು ಮತ್ತು ಮುಂಬರುವ ದಿನಗಳಲ್ಲೂ ಹಾಗೆಯೇ ಉಳಿಯಲಿವೆ. ಪಾಕಿಸ್ತಾನದ ಅಕ್ರಮ ಹಾಗೂ ಬಲವಂತದ ವಶದಲ್ಲಿರುವ ಭಾರತೀಯ ಭೂಭಾಗಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
1963 ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವು ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಎಂದು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ಮತ್ತು ಅದನ್ನು ಎಂದಿಗೂ ಗುರುತಿಸಿಲ್ಲ.

ಭಾರತದ ಸಾರ್ವಭೌಮತ್ವದ ಮೇಲೆ ಯಾವುದೇ ಪರಿಣಾಮವಿಲ್ಲ

ಆಕ್ರಮಿತ ಪ್ರದೇಶಗಳ ಸದ್ಯದ ಸ್ಥಿತಿಯನ್ನು ಬದಲಾಯಿಸಲು ಅಥವಾ ಅಕ್ರಮ ಆಕ್ರಮಣವನ್ನು ಸಿಂಧುಗೊಳಿಸಲು ನಡೆಸುವ ಪ್ರಯತ್ನವನ್ನು ಭಾರತ ದೃಢವಾಗಿ ವಿರೋಧಿಸುತ್ತದೆ. ಭಾರತೀಯ ಭೂಭಾಗಗಳನ್ನು ಒಳಗೊಂಡಂತೆ ಚೀನಾ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಯಾವುದೇ ಗಡಿ ಸಹಕಾರವು ನವದೆಹಲಿಗೆ ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದರು.
ಪಾಕಿಸ್ತಾನದ ವಶದಲ್ಲಿರುವ ಪ್ರದೇಶಗಳ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಜೈಸ್ವಾಲ್, ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಭೂಭಾಗಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಇಸ್ಲಾಮಾಬಾದ್‌ಗೆ ಆಗ್ರಹಿಸಿದರು. ಇಂತಹ ನಾಟಕೀಯ ಪ್ರದರ್ಶನಗಳಲ್ಲಿ ತೊಡಗಿಕೊಳ್ಳುವ ಬದಲಾಗಿ, ಪಾಕಿಸ್ತಾನವು ತನ್ನ ಅಕ್ರಮ ಹಾಗೂ ಬಲವಂತದ ಆಕ್ರಮಣದಲ್ಲಿರುವ ಪ್ರದೇಶಗಳಿಂದ ತಕ್ಷಣವೇ ನಿರ್ಗಮಿಸಬೇಕು ಎಂದು ಜೈಸ್ವಾಲ್ ಪ್ರತ್ಯುತ್ತರ ನೀಡಿದರು.
ಭಾರತ ತನ್ನ ಹಕ್ಕು ಪ್ರತಿಪಾದಿಸುವ ಭೂಭಾಗಗಳಿಗೆ ಸಂಬಂಧಿಸಿದಂತೆ ಚೀನಾ-ಪಾಕಿಸ್ತಾನ ನಡುವಿನ ಯಾವುದೇ ಒಪ್ಪಂದಗಳಿಗೆ ದೇಶದ ವಿರೋಧ ಮುಂದುವರಿದಿರುವ ಬೆನ್ನಲ್ಲೇ, ಇಂದು ನವದೆಹಲಿಯಲ್ಲಿ ಈ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net