

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ‘ಗ್ಲೋಬಲ್ ಪಾಸ್ಪೋರ್ಟ್ ಇಂಡೆಕ್ಸ್ 2026’ರ ಪಟ್ಟಿಯಲ್ಲಿ ಭಾರತದ ಪಾಸ್ಪೋರ್ಟ್ ಶ್ರೇಯಾಂಕ ಮತ್ತೆ ಕುಸಿದಿದ್ದು, 197 ದೇಶಗಳ ಪೈಕಿ 125ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಳೆದ ವರ್ಷ 124ನೇ ಸ್ಥಾನದಲ್ಲಿದ್ದ ಭಾರತ ಒಂದು ಸ್ಥಾನ ಕೆಳಗಿಳಿದಿದ್ದರೂ, ಒಟ್ಟಾರೆ ಕಾಂಪೋಸಿಟ್ ಸ್ಕೋರ್ನಲ್ಲಿ 45.1 ಅಂಕ ಪಡೆಯುವ ಮೂಲಕ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಈ ಪಟ್ಟಿಯಲ್ಲಿ ನಮೀಬಿಯಾ 124ನೇ ಸ್ಥಾನದಲ್ಲಿದ್ದರೆ, ಅಜರ್ಬೆಜಾನ್ 126ನೇ ಸ್ಥಾನದಲ್ಲಿದೆ.
ಭಾರತವು ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗುತ್ತಿದ್ದರೂ, ಪಾಸ್ಪೋರ್ಟ್ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿರುವ ಸಿಂಗಾಪುರ (192 ದೇಶಗಳಿಗೆ ಉಚಿತ ಪ್ರವೇಶ) ಅಥವಾ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಇನ್ನೂ ಹಿಂದೆ ಇದೆ. ಇದಕ್ಕೆ ಕಾರಣಗಳೇನು? ಸುಧಾರಣೆಗೆ ಏನೆಲ್ಲ ಮಾಡಬಹುದು? ವಿವರ ಇಲ್ಲಿದೆ.
ಭಾರತೀಯ ಪ್ರಯಾಣಿಕರು ಕೆಲವು ದೇಶಗಳಿಗೆ ವೀಸಾಮುಕ್ತ, ಆಗಮನದ ಮೇಲಿನ ವೀಸಾ ಅಥವಾ ಇ-ವೀಸಾ ಸೌಲಭ್ಯಗಳ ಮೂಲಕ ಪ್ರಯಾಣಿಸಬಹುದಾದರೂ, ಮುಂದುವರಿದ ಪಾಶ್ಚಿಮಾತ್ಯ ದೇಶಗಳಿಗೆ ತೆರಳಲು ಈಗಲೂ ಕಠಿಣ ವೀಸಾ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಆಗಾಗ್ಗೆ ಪ್ರಯಾಣಿಸುವವರಿಗೆ ಇದು ಹೆಚ್ಚಿನ ವೆಚ್ಚ, ದಾಖಲೆಗಳ ಹೊರೆ ಮತ್ತು ದೀರ್ಘ ಕಾಯುವಿಕೆಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಬಲವಾದ ಪಾಸ್ಪೋರ್ಟ್ಗಳು ಮುಂಗಡ ವೀಸಾ ಇಲ್ಲದೆ ಪ್ರಯಾಣಿಸಲು ಅನುವು ಮಾಡಿಕೊಡುವುದರ ಜತೆಗೆ ಉದ್ಯೋಗ, ಹೂಡಿಕೆ ಮತ್ತು ಸುಲಭವಾಗಿ ನೆಲೆಸಲು ಜಾಗತಿಕ ಮಟ್ಟದಲ್ಲಿ ನೆರವಾಗುತ್ತವೆ.
ವೀಸಾ ಮುಕ್ತ ಪ್ರವೇಶವನ್ನು ಮಾತ್ರ ಪರಿಗಣಿಸುವ ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ ಭಾರತವು 80ನೇ ಶ್ರೇಯಾಂಕದಲ್ಲಿದೆ. ಆದರೆ ಹೂಡಿಕೆ ಮತ್ತು ಜೀವನದ ಗುಣಮಟ್ಟವನ್ನೂ ಅಳೆಯುವ ಗ್ಲೋಬಲ್ ಪಾಸ್ಪೋರ್ಟ್ ಇಂಡೆಕ್ಸ್ನಲ್ಲಿ 125ನೇ ಸ್ಥಾನದಲ್ಲಿದೆ. ಇದರರ್ಥ, ಭಾರತದ ಆರ್ಥಿಕತೆಯು ಬಲಗೊಳ್ಳುತ್ತಿರುವಂತೆಯೇ, ನಾಗರಿಕರ ಒಟ್ಟಾರೆ ಜೀವನಮಟ್ಟ ಸುಧಾರಿಸಿದಾಗ ಮಾತ್ರ ಈ ಶ್ರೇಯಾಂಕದಲ್ಲಿ ಮುಂಚೂಣಿಗೆ ಬರಲು ಸಾಧ್ಯ. ‘ಪಾಸ್ಪೋರ್ಟ್ ಒಂದು ಪ್ರಯಾಣ ದಾಖಲೆಯೇ ಹೊರತು ನಾಗರಿಕತ್ವದ ಪುರಾವೆಯಲ್ಲ’ ಎಂದು ವಿದೇಶಾಂಗ ಸಚಿವಾಲಯ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, 14 ವರ್ಷಗಳ ಬಳಿಕ ಕೇಂದ್ರ ಸರ್ಕಾರವು ಇದೇ ಜುಲೈ 1ರಿಂದ ಪಾಸ್ಪೋರ್ಟ್ ಶುಲ್ಕದಲ್ಲಿ ಏರಿಕೆ ಮಾಡಿದೆ. ಸಾಮಾನ್ಯ 36 ಪುಟಗಳ ಪಾಸ್ಪೋರ್ಟ್ ಶುಲ್ಕವು 1500ದಿಂದ 2000 ರೂ.ಗೆ ಹೆಚ್ಚಳ ಮಾಡಲಾಗಿದೆ.
ವೀಸಾ ಮುಕ್ತ ಪ್ರಯಾಣವನ್ನು ಮಾತ್ರ ಪರಿಗಣಿಸುವ ಸಾಂಪ್ರದಾಯಿಕ ಶ್ರೇಯಾಂಕಗಳಿಗಿಂತ ಭಿನ್ನವಾಗಿ, ‘ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್’ ಸಿದ್ಧಪಡಿಸುವ ಗ್ಲೋಬಲ್ ಪಾಸ್ಪೋರ್ಟ್ ಇಂಡೆಕ್ಸ್ ಸೂಚ್ಯಂಕವು ವಿಶ್ವಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆಯಂಥ ಸಂಸ್ಥೆಗಳ 14 ಸೂಚಕಗಳನ್ನು ಬಳಸುತ್ತದೆ. ಇದು ಮುಖ್ಯವಾಗಿ ವರ್ಧಿತ ಚಲನಶೀಲತೆ, ಹೂಡಿಕೆ ಅವಕಾಶಗಳು ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಎಂಬ ಮೂರು ಆಧಾರಸ್ತಂಭಗಳನ್ನು ಮೌಲ್ಯಮಾಪನ ಮಾಡುತ್ತದೆ. ಪಾಸ್ಪೋರ್ಟ್ನ ಒಟ್ಟಾರೆ ಸಾಮರ್ಥ್ಯ ಮತ್ತು ಅದನ್ನು ಹೊಂದಿರುವ ನಾಗರಿಕರಿಗೆ ಜಾಗತಿಕವಾಗಿ ಸಿಗುವ ವೀಸಾ ಮುಕ್ತ ಪ್ರವೇಶದ ಆಧಾರದ ಮೇಲೆ ಈ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ.
ಪಾಸ್ಪೋರ್ಟ್ ರ್ಯಾಕಿಂಗ್ ದೇಶಗಳ ವೀಸಾ ನೀತಿಗಳ ಬದಲಾವಣೆಯನ್ನು ಅವಲಂಬಿಸಿರುತ್ತದೆ. ಒಂದು ದೇಶದ ವೀಸಾ-ಮುಕ್ತ ಪ್ರವೇಶದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಇತರ ರಾಷ್ಟ್ರಗಳು ಹೆಚ್ಚು ವೀಸಾ ಒಪ್ಪಂದಗಳನ್ನು ಮಾಡಿಕೊಂಡರೆ ಅದರ ಸ್ಥಾನ ಕುಸಿಯಬಹುದು. ಪಾಸ್ಪೋರ್ಟ್ನ ಬಲವು ಮುಖ್ಯವಾಗಿ ರಾಜತಾಂತ್ರಿಕ ಸಂಬಂಧಗಳು, ವೀಸಾ ಒಪ್ಪಂದಗಳು, ಗಡಿ ಭದ್ರತೆ ಹಾಗೂ ಪ್ರಯಾಣ ದಾಖಲೆಗಳ ಮೇಲಿನ ಜಾಗತಿಕ ವಿಶ್ವಾಸದ ಮೇಲೆ ಅವಲಂಬಿತವಾಗಿರುತ್ತದೆ.
ಭಾರತದ ಪಾಸ್ಪೋರ್ಟ್ ಹೊಂದಿರುವವರು 56 ದೇಶಗಳಿಗೆ ಮುಂಗಡ ವೀಸಾ ಪಡೆಯದೆ ಅಥವಾ ಸರಳ ಪ್ರವೇಶ ವ್ಯವಸ್ಥೆಯ ಮೂಲಕ ಪ್ರಯಾಣಿಸಬಹುದಾಗಿದೆ. ಇದರಲ್ಲಿ ವೀಸಾ-ಮುಕ್ತ ಪ್ರವೇಶ, ಆಗಮನದ ವೇಳೆ ವೀಸಾ ವಿತರಣೆ (ವೀಸಾ ಆನ್ ಅರೈವಲ್), ಎಲೆಕ್ಟ್ರಾನಿಕ್ ಟ್ರಾವೆಲ್ ಅಥೋರೈಸೇಶನ್ (ಇಟಿಎ) ಎಂಬ ಮೂರು ರೀತಿಯ ಪ್ರವೇಶ ವ್ಯವಸ್ಥೆಗಳಿವೆ. ಆದರೆ, ಪ್ರಸ್ತುತ ಭಾರತೀಯ ನಾಗರಿಕರು ಅಮೆರಿಕ, ಯುನೈಟೆಡ್ ಕಿಂಗ್ಡಮ್ (ಯುಕೆ), ಜರ್ಮನಿ, ಫ್ರಾನ್ಸ್, ಚೀನಾ, ಅಂಡೋರಾ ಮತ್ತು ಯುಎಇ ಸೇರಿದಂತೆ ವಿಶ್ವದ ಒಟ್ಟು 88 ದೇಶಗಳಿಗೆ ಭೇಟಿ ನೀಡಲು ಮುಂಗಡವಾಗಿಯೇ ವೀಸಾವನ್ನು ಹೊಂದುವುದು ಕಡ್ಡಾಯವಾಗಿದೆ.
ದ್ವಿಪಕ್ಷೀಯ ವೀಸಾ ಪರಸ್ಪರತೆಯ ಕೊರತೆ: ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ಒಂದು ದೇಶ ನಮಗೆ ವೀಸಾ ಮುಕ್ತ ಪ್ರವೇಶ ನೀಡಬೇಕಾದರೆ, ನಾವೂ ಅವರ ನಾಗರಿಕರಿಗೆ ಅದೇ ಸವಲತ್ತು ನೀಡಬೇಕು. ಭಾರತವು ಪ್ರವಾಸೋದ್ಯಮ ಮತ್ತು ಭದ್ರತೆಯ ದೃಷ್ಟಿಯಿಂದ ಅಮೆರಿಕ, ಯುರೋಪಿಯನ್ ಒಕ್ಕೂಟದ ದೇಶಗಳಿಗೆ ‘ವೀಸಾ ಆನ್ ಅರೈವಲ್’ ಅಥವಾ ಕಠಿಣ ವೀಸಾ ನಿಯಮಗಳನ್ನು ಅನ್ವಯಿಸುತ್ತದೆ. ಇದರಿಂದಾಗಿ ಆ ದೇಶಗಳೂ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತಿಲ್ಲ.
ವೀಸಾ ದುರುಪಯೋಗದ ಆತಂಕ: ಭಾರತದ ಬೃಹತ್ ಜನಸಂಖ್ಯೆ ಮತ್ತು ಆರ್ಥಿಕ ಅಸಮಾನತೆಯ ಕಾರಣದಿಂದಾಗಿ, ಅಭಿವೃದ್ಧಿ ಹೊಂದಿದ ದೇಶಗಳು ಭಾರತೀಯ ನಾಗರಿಕರು ತಮ್ಮ ದೇಶಕ್ಕೆ ಬಂದು ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಬಹುದು ಅಥವಾ ಉದ್ಯೋಗ ಕಸಿದುಕೊಳ್ಳಬಹುದು ಎಂಬ ಆತಂಕವನ್ನು ಹೊಂದಿವೆ. ಇದರಿಂದಾಗಿ ವೀಸಾ ನೀತಿಯನ್ನು ಕಠಿಣಗೊಳಿಸಿವೆ.
ತಲಾವಾರು ಆದಾಯ:‘ಗ್ಲೋಬಲ್ ಪಾಸ್ಪೋರ್ಟ್ ಇಂಡೆಕ್ಸ್’ ಹೂಡಿಕೆಗೆ ಮುಕ್ತ ವಾತಾವರಣವನ್ನೂ ಪರಿಗಣಿಸುತ್ತದೆ. ಭಾರತ ಬೃಹತ್ ಜಿಡಿಪಿ ಹೊಂದಿದ್ದರೂ, ತಲಾವಾರು ಆದಾಯ ಸಿಂಗಾಪುರ ಅಥವಾ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಇಂದಿಗೂ ಕಡಿಮೆಯಿದೆ. ಇದು ನಮ್ಮ ಪಾಸ್ಪೋರ್ಟ್ನ ಆರ್ಥಿಕ ಮೌಲ್ಯವನ್ನು ಜಾಗತಿಕ ಮಟ್ಟದಲ್ಲಿ ಕುಗ್ಗಿಸಿದೆ.
ಜೀವನದ ಗುಣಮಟ್ಟ ಸೂಚ್ಯಂಕ: ಈ ಸೂಚ್ಯಂಕದಲ್ಲಿ ಆರೋಗ್ಯ, ಶಿಕ್ಷಣ, ವೈಯಕ್ತಿಕ ಸುರಕ್ಷತೆ ಮತ್ತು ಪರಿಸರದಂತಹ ಅಂಶಗಳನ್ನು ಅಳೆಯಲಾಗುತ್ತದೆ. ಭಾರತವು ಈ ವಲಯದಲ್ಲಿ 11 ಸ್ಥಾನಗಳ ಸುಧಾರಣೆ ಕಂಡಿದ್ದರೂ, ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ.
ಸ್ವೀಡನ್ ದೇಶದ ಪಾಸ್ಪೋರ್ಟ್ ಜಾಗತಿಕವಾಗಿ ಶಕ್ತಿಶಾಲಿ ಪಾಸ್ಪೋರ್ಟ್ಗಳಲ್ಲಿ ಒಂದಾಗಿದೆ. ಸ್ವೀಡನ್ ಪಾಸ್ಪೋರ್ಟ್ ಹೊಂದಿರುವ ನಾಗರಿಕರು ಪ್ರಪಂಚದ 190ಕ್ಕೂ ಹೆಚ್ಚು ದೇಶಗಳಿಗೆ ಮುಂಚಿತವಾಗಿ ವೀಸಾ ಪಡೆಯದೆಯೇ ವೀಸಾ ಆನ್ ಅರೈವಲ್ ಮೂಲಕ ನೇರವಾಗಿ ಪ್ರಯಾಣಿಸಬಹುದು. ಅಲ್ಲದೆ, ಸ್ವೀಡನ್ ದಶಕಗಳಿಂದಲೂ ಜಾಗತಿಕವಾಗಿ ಶಾಂತಿಪ್ರಿಯ ಮತ್ತು ತಟಸ್ಥ ವಿದೇಶಾಂಗ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಯಾವುದೇ ದೊಡ್ಡ ಅಂತಾರಾಷ್ಟ್ರೀಯ ಸಂಘರ್ಷಗಳಲ್ಲಿ ಭಾಗಿಯಾಗದ ಕಾರಣ, ಜಗತ್ತಿನ ಬಹುತೇಕ ಎಲ್ಲ ದೇಶಗಳೊಂದಿಗೆ ಸ್ವೀಡನ್ ಅತ್ಯುತ್ತಮ ರಾಜತಾಂತ್ರಿಕ ಮತ್ತು ಸ್ನೇಹಪರ ಸಂಬಂಧವನ್ನು ಹೊಂದಿದೆ. ಇದು ಅವರ ನಾಗರಿಕರಿಗೆ ಸುಲಭವಾಗಿ ವೀಸಾ ವಿನಾಯಿತಿ ಸಿಗುವಂತೆ ಮಾಡಿದೆ.
ಸ್ವೀಡನ್ ಯುರೋಪಿಯನ್ ಯೂನಿಯನ್ನ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ. ಇದರ ಕಾರಣದಿಂದಾಗಿ ಸ್ವೀಡನ್ ನಾಗರಿಕರು ಇತರ ಎಲ್ಲ ಇಯು ದೇಶಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ವಾಸಿಸಲು, ಕೆಲಸ ಮಾಡಲು ಮತ್ತು ವ್ಯಾಪಾರ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಮುಖ್ಯವಾಗಿ, ಸ್ವೀಡನ್ ವಿಶ್ವದಲ್ಲೇ ಉನ್ನತ ಜೀವನಮಟ್ಟ, ಬಲಿಷ್ಠ ಆರ್ಥಿಕತೆ, ಅತ್ಯಲ್ಪ ಭ್ರಷ್ಟಾಚಾರ ಮತ್ತು ಬಲಿಷ್ಠ ಕಾನೂನು ಸುವ್ಯವಸ್ಥೆ ಹೊಂದಿರುವ ದೇಶವಾಗಿದೆ. ಸ್ವೀಡನ್ ನಾಗರಿಕರು ಬೇರೆ ದೇಶಗಳಿಗೆ ಹೋದಾಗ ಅಲ್ಲಿ ಅಕ್ರಮವಾಗಿ ನೆಲೆಸುವ ಅಥವಾ ಕಾನೂನು ಉಲ್ಲಂಘಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಜಗತ್ತಿನ ಇತರ ದೇಶಗಳು ನಂಬುತ್ತವೆ. ಈ ಕಡಿಮೆ ಅಪಾಯದ ಪೊ›ಫೈಲ್ ಕಾರಣದಿಂದಾಗಿ ದೇಶಗಳು ಇವರಿಗೆ ಮುಕ್ತ ಪ್ರವೇಶ ನೀಡುತ್ತವೆ. ಸ್ವೀಡನ್ ಪಾಸ್ಪೋರ್ಟ್ಗಳು ಅತ್ಯಾಧುನಿಕ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳನ್ನು ನಕಲು ಮಾಡುವುದು ಅಸಾಧ್ಯವೆಂಬಷ್ಟರ ಮಟ್ಟಿಗೆ ಸುರಕ್ಷಿತವಾಗಿವೆ.
ಭಾರತದ ಪಾಸ್ಪೋರ್ಟ್ ಶಕ್ತಿಯನ್ನು ಹೆಚ್ಚಿಸಲು ಮತ್ತು ಉನ್ನತ ಸ್ಥಾನಕ್ಕೇರಲು ಈ ಕೆಳಗಿನ ಕಾರ್ಯತಂತ್ರಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ರಾಜತಾಂತ್ರಿಕ ಒಪ್ಪಂದಗಳ ಬಲವರ್ಧನೆ: ಭಾರತ ಸರ್ಕಾರವು ಇತರ ದೇಶಗಳೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸಿ, ಹೆಚ್ಚು ದ್ವಿಪಕ್ಷೀಯ ವೀಸಾ ಮುಕ್ತ ಅಥವಾ ವೀಸಾ ಆನ್ ಅರೈವಲ್ ಒಪ್ಪಂದಗಳನ್ನು ಮಾಡಿಕೊಳ್ಳವುದು ಅಗತ್ಯ ಎನ್ನುತ್ತಾರೆ ರಾಜತಾಂತ್ರಿಕ ತಜ್ಞರು. ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳುವುದು ಮೊದಲ ಹೆಜ್ಜೆಯಾಗಬಹುದು.
ಇ-ಪಾಸ್ಪೋರ್ಟ್: ಬಯೋಮೆಟ್ರಿಕ್ ಚಿಪ್ ಆಧಾರಿತ ಸುರಕ್ಷಿತ ಇ-ಪಾಸ್ಪೋರ್ಟ್ಗಳನ್ನು ಸಂಪೂರ್ಣವಾಗಿ ಜಾರಿಗೆ ತರುವುದರಿಂದ ನಕಲಿ ಪಾಸ್ಪೋರ್ಟ್ ತಡೆಯಬಹುದು. ಇದು ಜಾಗತಿಕ ಇಮಿಗ್ರೇಷನ್ ವ್ಯವಸ್ಥೆಯಲ್ಲಿ ಭಾರತದ ಪಾಸ್ಪೋರ್ಟ್ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
ಹೂಡಿಕೆ ಆಕರ್ಷಣೆ: ಜಾಗತಿಕ ಹೂಡಿಕೆದಾರರಿಗೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು ಮತ್ತು ಉದ್ಯಮಸ್ನೇಹಿ ವಾತಾವರಣ ನಿರ್ವಿುಸುವುದರಿಂದ ಇಂಡೆಕ್ಸ್ನ ಇನ್ವೆಸ್ಟ್ಮೆಂಟ್ ವಿಭಾಗದಲ್ಲಿ ಭಾರತದ ಅಂಕಗಳು ಹೆಚ್ಚಾಗುತ್ತವೆ.
ಅಕ್ರಮ ವಲಸೆ ತಡೆಗೆ ಕ್ರಮ: ಭಾರತೀಯ ನಾಗರಿಕರು ವಿದೇಶಗಳಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸದಂತೆ ಕಟ್ಟುನಿಟ್ಟಿನ ನಿಗಾ ಇಡುವುದು ಮತ್ತು ಜಾಗೃತಿ ಮೂಡಿಸುವುದು ಅತ್ಯಗತ್ಯ. ವೀಸಾ ದುರುಪಯೋಗ ಕಡಿಮೆಯಾದಂತೆ ಜಾಗತಿಕ ದೇಶಗಳು ಭಾರತೀಯರಿಗೆ ಮುಕ್ತ ಪ್ರವೇಶ ನೀಡಲು ಮುಂದೆ ಬರುತ್ತವೆ. ಅಲ್ಲದೆ, ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ತಲಾವಾರು ಆದಾಯವನ್ನು ಹೆಚ್ಚಿಸುವ ಮೂಲಕ ದೇಶದ ಒಟ್ಟಾರೆ ‘ಜೀವನದ ಗುಣಮಟ್ಟ’ವನ್ನು ಸುಧಾರಿಸಬೇಕು.
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಗಳ ಪಟ್ಟಿಯಲ್ಲಿ ಐರೋಪ್ಯ ದೇಶಗಳು ಎಂದಿನಂತೆ ಪೂರ್ಣ ಪ್ರಾಬಲ್ಯ ಸಾಧಿಸಿವೆ. ಟಾಪ್ 10 ಪಟ್ಟಿಯಲ್ಲಿ 9 ದೇಶಗಳು ಯುರೋಪ್ ಖಂಡದವೇ ಆಗಿವೆ.
1) ಸ್ವೀಡನ್
2) ಸ್ವಿಜರ್ಲೆಂಡ್
3) ಫಿನ್ಲೆಂಡ್
4) ಜರ್ಮನಿ
5) ನೆದರ್ಲ್ಯಾಂಡ್ಸ್
6) ಡೆನ್ಮಾರ್ಕ್
7) ಐರ್ಲೆಂಡ್
8) ಯುನೈಟೆಡ್ ಕಿಂಗ್ಡಮ್
9) ನಾರ್ವೆ
10) ಸಿಂಗಾಪುರ