ಮಿಡಿಯುತಿದೆ ಭಾರತ! 16 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿದ ವಿದೇಶಿ ರೋಗಿಗಳ ಸಂಖ್ಯೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ರಂಗಗಳಲ್ಲಿ ಜಾಗತಿಕ ಮಟ್ಟದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿರುವ ಭಾರತ ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಪ್ರವಾಸೋದ್ಯಮದಲ್ಲೂ ಭರವಸೆಯ ಬಲವಾದ ಹೆಜ್ಜೆಗಳನ್ನು ಇರಿಸಿದೆ. ಆಸ್ಪತ್ರೆಗಳ ವಿಶಾಲ ಜಾಲ, ತಜ್ಞವೈದ್ಯರ ಲಭ್ಯತೆ, ಗುಣಮಟ್ಟದ ಚಿಕಿತ್ಸೆ ಹೊಂದಿರುವ ಭಾರತಕ್ಕೆ ವಿಶ್ವದ ಹಲವು ರಾಷ್ಟ್ರಗಳ ರೋಗಿಗಳು ಆಗಮಿಸುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು, ಭಾರತೀಯ ವೈದ್ಯಕೀಯ ಕ್ಷೇತ್ರದ ಗುಣಮಟ್ಟ ಹಾಗೂ ಕಾರ್ಯಕ್ಷೇತ್ರದ ಬದ್ಧತೆಗೆ ಸಾಕ್ಷಿಯಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಚಿಕಿತ್ಸಾ ವೆಚ್ಚ ಕೂಡ ಕಡಿಮೆ. ಹಾಗಾಗಿಯೇ, ಭಾರತ ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬೆಳೆದಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಭಾರತವು ಈಗ ಅಗ್ಗದ ದರದ ಚಿಕಿತ್ಸೆಯ ತಾಣವಾಗಿ ಮಾತ್ರ ಉಳಿದಿಲ್ಲ, ಬದಲಿಗೆ ವೈದ್ಯಕೀಯ ಪ್ರವಾಸೋದ್ಯಮದ (ಮೆಡಿಕಲ್ ಟೂರಿಸಂ) ಬೃಹತ್ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. 2009ರಲ್ಲಿ 1.12 ಲಕ್ಷ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದರೆ, 2025ರ ವೇಳೆಗೆ ಈ ಸಂಖ್ಯೆ 5.07 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ, ಕಳೆದ 16 ವರ್ಷಗಳಲ್ಲಿ ವಿದೇಶಿ ರೋಗಿಗಳ ಸಂಖ್ಯೆ 4.5 ಪಟ್ಟು ಹೆಚ್ಚಾಗಿದೆ. ಭಾರತಕ್ಕೆ ಆಗಮಿಸುವ ರೋಗಿಗಳಲ್ಲಿ ಬಾಂಗ್ಲಾದೇಶ, ಇರಾಕ್, ಉಜ್ಬೇಕಿಸ್ತಾನ್, ಸೊಮಾಲಿಯಾ, ಒಮಾನ್ ಮತ್ತು ಕೀನ್ಯಾ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. 2025ರಲ್ಲಿ ಭಾರತದ ಮೆಡಿಕಲ್ ಟೂರಿಸಂ ಮಾರುಕಟ್ಟೆ ಮೌಲ್ಯ 84 ಸಾವಿರ ಕೋಟಿ ರೂಪಾಯಿಷ್ಟಿತ್ತು. 2030ರ ವೇಳೆಗೆ ಇದು 1.56 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಚಿಕಿತ್ಸೆಗಾಗಿ ಟರ್ಕಿ ಮತ್ತು ಥೈಲ್ಯಾಂಡ್​ಗೆ ಹೋಗುತ್ತಿದ್ದ ರೋಗಿಗಳನ್ನು ಸಹ ಭಾರತ ಈಗ ತನ್ನತ್ತ ಆಕರ್ಷಿಸುತ್ತಿದೆ. ಪರಿಣಿತ ವೈದ್ಯರು, ಆಸ್ಪತ್ರೆಗಳ ಮಾನ್ಯತೆ ಮತ್ತು ಚಿಕಿತ್ಸೆಯ ವೆಚ್ಚದಲ್ಲಿನ ದೊಡ್ಡ ವ್ಯತ್ಯಾಸವೇ ಇದಕ್ಕೆ ಕಾರಣ. ಡಿಜಿಟಲ್ ಮಾಧ್ಯಮಗಳ ಮೂಲಕ ರೋಗಿಗಳು ಈಗ ಮೊದಲೇ ವೈದ್ಯರು, ಆಸ್ಪತ್ರೆ ಮತ್ತು ಚಿಕಿತ್ಸಾ ಪದ್ಧತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರಲ್ಲಿ ನಂಬಿಕೆ ಹೆಚ್ಚಿದೆ. ಭಾರತದಲ್ಲಿ ಜಾಗತಿಕ ಮಾನ್ಯತೆ ಪಡೆದ ನೂರಾರು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಅತ್ಯಾಧುನಿಕ ರೊಬೊಟಿಕ್ ತಂತ್ರಜ್ಞಾನ, ಅಂಗಾಂಗ ಕಸಿ ಮತ್ತು ಕ್ಯಾನ್ಸರ್ ಚಿಕಿತ್ಸೆಗಳು ಇಲ್ಲಿ ಸುಲಭವಾಗಿ ಲಭ್ಯ. ಪಾಶ್ಚಿಮಾತ್ಯ ದೇಶಗಳ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಶಸ್ತ್ರಚಿಕಿತ್ಸೆಗಳಿಗೆ ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಆದರೆ ಭಾರತಕ್ಕೆ ಬರುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ದೊರೆಯುತ್ತದೆ.

ಪ್ರಮುಖ ನಗರಗಳು: ಭಾರತಕ್ಕೆ ಬರುವ ಒಟ್ಟು ವೈದ್ಯಕೀಯ ಪ್ರವಾಸಿಗ ರಲ್ಲಿ ಚೆನ್ನೈ (ಭಾರತದ ಹೆಲ್ತ್ ಕ್ಯಾಪಿಟಲ್ ಎಂದು ಕರೆಯಲಾಗುತ್ತದೆ), ದೆಹಲಿ-ಎನ್​ಸಿಆರ್, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿ ನಗರಗಳು ಸಿಂಹಪಾಲನ್ನು ಪಡೆಯುತ್ತವೆ.

ತಜ್ಞ ವೈದ್ಯರ ತ್ವರಿತ ಲಭ್ಯತೆ

ಈ ಗಮನಾರ್ಹ ಬೆಳವಣಿಗೆಗೆ ಕಡಿಮೆ ವೈದ್ಯಕೀಯ ವೆಚ್ಚವಷ್ಟೇ ಕಾರಣವಲ್ಲ. ಭಾರತದಲ್ಲಿ ತಜ್ಞ ವೈದ್ಯರ ಅಪಾಯಿಂಟ್​ವೆುಂಟ್ ಶೀಘ್ರವಾಗಿ ಸಿಗುವುದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ವೈದ್ಯಕೀಯ ತಪಾಸಣಾ ವರದಿಗಳು ತಕ್ಷಣವೇ ದೊರೆಯುವುದು ಮತ್ತು ಚಿಕಿತ್ಸಾ ವೆಚ್ಚ ಮೊದಲೇ ನಿಗದಿಯಾಗುವುದು ವಿದೇಶಿ ರೋಗಿಗಳನ್ನು ಆಕರ್ಷಿಸುತ್ತಿದೆ. ಅಮೆರಿಕದಲ್ಲಿ 15,000 ರೂಪಾಯಿ ವೆಚ್ಚವಾಗುವ ಚಿಕಿತ್ಸೆಯು ಭಾರತದಲ್ಲಿ ಕೇವಲ 1,000ದಿಂದ 2,000 ರೂಪಾಯಿಗಳಲ್ಲಿ ಸಾಧ್ಯವಾಗುತ್ತದೆ. ನೆದರ್​ಲ್ಯಾಂಡ್ಸ್​ನಲ್ಲಿ ಸಾಮಾನ್ಯ ಹಲ್ಲಿನ ಚಿಕಿತ್ಸೆಗೆ 16,000 ರೂ.ಗಿಂತ ಹೆಚ್ಚು ವೆಚ್ಚವಾದರೆ, ಅದೇ ಚಿಕಿತ್ಸೆಯು ಲಖನೌದಲ್ಲಿ ಕೇವಲ 3,000 ರೂ.ಗಳಲ್ಲಿ ಪೂರ್ಣಗೊಳ್ಳುತ್ತದೆ.

ಬ್ರಿಟನ್​​ನಲ್ಲಿ ತಿಂಗಳುಗಟ್ಟಲೇ ಕಾಯುವಿಕೆ

ಬ್ರಿಟಿಷ್ ಪ್ರಜೆ ಆಂಡರ್ಸನ್ ಅವ ರಿಗೆ ತಮ್ಮ ದೇಶದಲ್ಲಿ ನರ ರೋಗ (ನ್ಯೂರೋ) ಸಮಾಲೋಚನೆಗಾಗಿ ಕಾದುನೋಡುವ ಅವಧಿ (ವೇಟಿಂಗ್ ಪೀರಿಯಡ್) ಒಂದು ವರ್ಷಕ್ಕಿಂತ ಹೆಚ್ಚಾಗಿತ್ತು. ಆದರೆ ಭಾರತಕ್ಕೆ ಬಂದ ತಕ್ಷಣ ಅವರಿಗೆ ಮರುದಿನವೇ ಅಪಾಯಿಂಟ್​ವೆುಂಟ್ ಸಿಕ್ಕಿತು. ಎಂಆರ್​ಐ ಮತ್ತು ರಕ್ತ ಪರೀಕ್ಷೆಗಳು ತಕ್ಷಣವೇ ನಡೆದವು ಹಾಗೂ ವರದಿಯೂ ಒಂದೇ ಗಂಟೆಯಲ್ಲಿ ಸಿಕ್ಕಿತು. ಚಿಕಿತ್ಸೆಯ ಈ ವೇಗವೂ ಜನರು ಭಾರತಕ್ಕೆ ಬರಲು ಆಕರ್ಷಿಸುತ್ತಿದೆ.

ಹೀಲ್ ಇನ್ ಇಂಡಿಯಾ

ಹೀಲ್ ಇನ್ ಇಂಡಿಯಾ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ದೇಶವನ್ನು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡಲು ಇದನ್ನು ಪ್ರಾರಂಭಿಸಲಾಗಿದೆ. ಈ ಯೋಜನೆ ಮೂಲಕ ವಿದೇಶಿ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಭಾರತದ ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಆಯುಷ್ (ಆಯುರ್ವೆದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪಥಿ) ಪದ್ಧತಿಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ.

‘ಹೀಲ್ ಇನ್ ಇಂಡಿಯಾ’ ಪೋರ್ಟಲ್ ಮೂಲಕ ವಿದೇಶಿ ರೋಗಿಗಳು ಭಾರತದಲ್ಲಿ ಚಿಕಿತ್ಸೆ ಪಡೆಯಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದು. ಭಾರತದಲ್ಲಿರುವ ಮಾನ್ಯತೆ ಪಡೆದ ಅತ್ಯುತ್ತಮ ಆಸ್ಪತ್ರೆಗಳು, ಚಿಕಿತ್ಸಾ ವೆಚ್ಚಗಳು ಮತ್ತು ಪರಿಣಿತ ವೈದ್ಯರ ಪಟ್ಟಿಯನ್ನು ಪರಿಶೀಲಿಸಬಹುದು. ಈ ಪೋರ್ಟಲ್ ಮೂಲಕ ವಿದೇಶಿಯರು ಇ-ಮೆಡಿಕಲ್ ವೀಸಾ ಮತ್ತು ಇ-ಆಯುಷ್ ವೀಸಾ ಪಡೆಯಲು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ವಿಭಿನ್ನ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಗಳ ವೆಚ್ಚವನ್ನು ಹೋಲಿಸಿ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಲು ರೋಗಿಗಳಿಗೆ ಅವಕಾಶವಿದೆ. ವಿದೇಶಿ ರೋಗಿಗಳಿಗೆ ಭಾಷೆಯ ಸಮಸ್ಯೆ ಎದುರಾಗದಿರಲು ವಿವಿಧ ಭಾಷಾ ಅನುವಾದಕರ ನೆರವನ್ನು ಸಹ ಒದಗಿಸಲಾಗುತ್ತದೆ.

69 ಸಾವಿರ ಆಸ್ಪತ್ರೆಗಳು

ವೈದ್ಯಕೀಯ ಪ್ರವಾಸೋದ್ಯಮವನ್ನು ನಿಭಾಯಿಸಲು ಭಾರತದ ಬಳಿ ಬೃಹತ್ ಆರೋಗ್ಯ ಮೂಲಸೌಕರ್ಯವೂ ಲಭ್ಯವಿದೆ. ದೇಶದಲ್ಲಿ ಒಟ್ಟು 69,364 ಆಸ್ಪತ್ರೆಗಳಿವೆ. ಇವುಗಳಲ್ಲಿ 43,486 ಖಾಸಗಿ (ಸುಮಾರು ಶೇಕಡ 66ರಷ್ಟು) ಮತ್ತು 25,778 ಸರ್ಕಾರಿ ಆಸ್ಪತ್ರೆಗಳಿವೆ. 12 ಲಕ್ಷ ನೋಂದಾಯಿತ ವೈದ್ಯರಿದ್ದಾರೆ. 1,299 ಆಸ್ಪತ್ರೆಗಳಿಗೆ ಎನ್​ಎಬಿಎಚ್ ಮಾನ್ಯತೆ ಪ್ರಾಪ್ತವಾಗಿದೆ. ಈ ಖಾಸಗಿ ಆಸ್ಪತ್ರೆಗಳ ಬೃಹತ್ ನೆಟ್​ವರ್ಕ್ ಭಾರತಕ್ಕೆ ಬರುವ ವಿದೇಶಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ವಯದ್ಯಕೀಯ ತಜ್ಞರು.

172 ದೇಶಗಳಿಗೆ ಇ-ಮೆಡಿಕಲ್ ವೀಸಾ

ವಿದೇಶಿ ರೋಗಿಗಳ ಪ್ರವೇಶವನ್ನು ಸುಲಭಗೊಳಿಸಲು ಭಾರತವು 172 ದೇಶಗಳಿಗೆ ಇ-ಮೆಡಿಕಲ್ ವೀಸಾವನ್ನು ನೀಡುತ್ತಿದೆ. ಸಹಾಯಕರಿಗಾಗಿ ಇ-ಮೆಡಿಕಲ್ ಅಟೆಂಡೆಂಟ್ ವೀಸಾ ಸೌಲಭ್ಯವೂ ಇದೆ. ಆಯುರ್ವೆದ, ಯೋಗ, ಯುನಾನಿ ಮತ್ತು ಹೋಮಿಯೋಪಥಿಯಂತಹ ಭಾರತೀಯ ವೈದ್ಯಕೀಯ ಪದ್ಧತಿಗಳ ಮೂಲಕ ಚಿಕಿತ್ಸೆ ಪಡೆಯುವವರಿಗಾಗಿ ಇ-ಆಯುಷ್ ವೀಸಾದ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಲಾಗಿದೆ.

ವಿದೇಶಿ ಗಣ್ಯರಿಗೆ ಚಿಕಿತ್ಸೆ

ಭಾರತದ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಆಸ್ಪತ್ರೆಗಳ ಮೇಲಿರುವ ನಂಬಿಕೆಯಿಂದಾಗಿ, ಜಗತ್ತಿನ ಹಲವಾರು ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕರು ಮತ್ತು ಜಾಗತಿಕ ಖ್ಯಾತಿಯ ಪ್ರಮುಖ ವ್ಯಕ್ತಿಗಳು ಭಾರತದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ರಾಜಕಾರಣಿಗಳು

ರಾಮಚಂದ್ರ ಪೌಡೇಲ್: ನೇಪಾಳದ ಹಾಲಿ ಅಧ್ಯಕ್ಷರಾದ ರಾಮಚಂದ್ರ ಪೌಡೇಲ್ ಎದೆನೋವಿನಿಂದ ಬಳಲುತ್ತಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ಏರ್ ಅಂಬ್ಯುಲೆನ್ಸ್ ಮೂಲಕ ದೆಹಲಿಯ ಏಮ್್ಸ (ಆಲ್ ಇಂಡಿಯಾ ಇನ್​ಸ್ಟಿಕ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ಪಡೆದಿದ್ದರು.

ಮಹ್ಮೂದ್ ಅಬ್ಬಾಸ್: ಪ್ಯಾಲೇಸ್ತೀನ್ ಅಧ್ಯಕ್ಷರಾದ ಮಹ್ಮೂದ್ ಅಬ್ಬಾಸ್ ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಭಾರತದ ಪ್ರಮುಖ ಖಾಸಗಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಆಫ್ರಿಕನ್ ಒಕ್ಕೂಟದ ಅನೇಕ ದೇಶಗಳ ಸಚಿವರು, ಸಂಸದರು ಹೃದ್ರೋಗ ಚಿಕಿತ್ಸೆ , ನರರೋಗ ಮತ್ತು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಪಡೆದುಕೊಂಡಿದ್ದಾರೆ.

ಇಮಾನ್ ಅಹ್ಮದ್ ಅಬ್ದುಲ್ ಅತಿ: ವಿಶ್ವದ ಅತ್ಯಂತ ಹೆಚ್ಚು ತೂಕ ಹೊಂದಿದ್ದ ಮಹಿಳೆ (ಸುಮಾರು 500 ಕೆಜಿ) ಎನಿಸಿಕೊಂಡಿದ್ದ ಈಜಿಪ್ತ್​ನ ಇಮಾನ್ ಅಹ್ಮದ್, ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಬಾರಿಯಾಟ್ರಿಕ್ ಸರ್ಜರಿ (ತೂಕ ಇಳಿಸುವ ಶಸ್ತ್ರಚಿಕಿತ್ಸೆ) ಪಡೆದುಕೊಂಡು ಯಶಸ್ವಿಯಾಗಿ 300 ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡಿದ್ದರು.

ಡೇನಿಯಲ್ ಕ್ರೇಗ್: ಜೇಮ್ಸ್ ಬಾಂಡ್ ಸರಣಿಯ ಚಲನಚಿತ್ರಗಳ ನಟ ಡೇನಿಯಲ್ ಕ್ರೇಗ್, ಶೂಟಿಂಗ್ ವೇಳೆ ಉಂಟಾಗಿದ್ದ ಗಾಯಗಳ ಚಿಕಿತ್ಸೆಗೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.

ಡೆಮಿ ಮೂರ್: ಹಾಲಿವುಡ್​ನ ಪ್ರಸಿದ್ಧ ನಟಿ ಡೆಮಿ ಮೂರ್, ಮಾನಸಿಕ ನೆಮ್ಮದಿಗಾಗಿ ಕೇರಳದ ಪ್ರಸಿದ್ಧ ಆಯುರ್ವೆದ ಮತ್ತು ಪಂಚಕರ್ಮ ವೆಲ್ನೆಸ್ ಸೆಂಟರ್​ಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net