ಭಾರತ ಇನ್ನೂ 'ವಿಶ್ವಗುರು' ಆಗಿಲ್ಲ: ಸ್ವಪಕ್ಷದವರಿಗೇ ಶಾಕ್ ಕೊಟ್ಟ ಮುರಳಿ ಮನೋಹರ್ ಜೋಶಿ! Murali Manohar Joshi

ನಾವಿನ್ನೂ ವಿಶ್ವಗುರು ಆಗಿಲ್ಲ : ಮುರಳಿ ಮನೋಹರ ಜೋಶಿ
ನಾವಿನ್ನೂ ವಿಶ್ವಗುರು ಆಗಿಲ್ಲ : ಮುರಳಿ ಮನೋಹರ ಜೋಶಿ
Published on

ಪ್ರಮುಖ ಮುಖ್ಯಾಂಶಗಳು

  • ನಾವಿನ್ನೂ ವಿಶ್ವಗುರು ಆಗಿಲ್ಲ : ಮುರಳಿ ಮನೋಹರ ಜೋಶಿ
  • ವಿಶ್ವಗುರು ಎನ್ನುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಿ
  • ಸ್ವ ಪಕ್ಷದವರಿಗೆ ಟಾಂಗ್​ ಕೊಟ್ಟ ಬಿಜೆಪಿ ಹಿರಿಯ ನಾಯಕ
ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಪದೇ ಪದೇ ಬಳಸುವ ವಿಶ್ವಗುರು ಎಂಬ ಪದದ ಬಗ್ಗೆ ಈಗ ಸ್ವತಃ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕ ಮುರಳಿ ಮನೋಹರ್ ಜೋಶಿ (Murali Manohar Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ಈಗ ವಿಶ್ವಗುರು ಅಲ್ಲ, ಆದ್ದರಿಂದ ಈ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ.
ಸೋಮವಾರ (ಏ.20) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ಸಂಸ್ಕೃತ ಭಾರತಿಯ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.
ನಾವಿನ್ನೂ ಗುರಿ ತಲುಪಿಲ್ಲ!
ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ವೈಯಕ್ತಿಕವಾಗಿ ನಾನು ವಿಶ್ವಗುರು ಎಂಬ ಕಲ್ಪನೆಯನ್ನು ಒಪ್ಪುತ್ತೇನೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಾವು ವಿಶ್ವಗುರು ಆಗಿದ್ದೇವೆ ಎಂದು ಹೇಳಿಕೊಳ್ಳುವುದು ತಪ್ಪು. ನಾವು ಈ ಪದವನ್ನು ಬಳಸುವುದನ್ನು ತಕ್ಷಣ ನಿಲ್ಲಿಸಬೇಕು. ನಾವು ಆ ಹಂತಕ್ಕೆ ಏರಲು ಶ್ರಮಿಸಬೇಕು ಮತ್ತು ಆಶಿಸಬೇಕೇ ಹೊರತು, ಇಂದು ನಾವಿನ್ನೂ ವಿಶ್ವಗುರು ಅಲ್ಲ, ಎಂದು ಅವರು ಹೇಳಿದರು.

ಕ್ವಾಂಟಮ್ ಕಂಪ್ಯೂಟಿಂಗ್‌ಗೆ ಸಂಸ್ಕೃತದ ಶಕ್ತಿ

ಭಾರತವು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಿದ್ದರೆ ಸಂಸ್ಕೃತ ಭಾಷೆಯ ಬಳಕೆಯನ್ನು ಹೆಚ್ಚಿಸಬೇಕು ಎಂದು ಪ್ರತಿಪಾದಿಸಿದರು. ಆಧುನಿಕ ವಿಜ್ಞಾನ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಂಸ್ಕೃತದ ಬಳಕೆ ಅನಿವಾರ್ಯವಾಗಿದೆ. ಸಂವಿಧಾನ ರಚನೆಯ ಸಮಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೂಡ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸಿದ್ದರು ಎಂದು ಅವರು ನೆನಪಿಸಿದರು.

ಸಂಸ್ಕೃತವೇ ಭಾರತದ ಕೊಂಡಿ: ಮೋಹನ್ ಭಾಗವತ್

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಹೇಳಿದರು. ಭಾರತದ ಆತ್ಮವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯುವುದು ಅವಶ್ಯಕ. ಭಾರತವು ವೈವಿಧ್ಯಮಯ ಭಾಷೆಗಳ ತವರೂರು. ಇಲ್ಲಿನ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯೇ. ಆದರೆ, ಈ ಎಲ್ಲಾ ವಿಭಿನ್ನ ಭಾಷೆಗಳನ್ನು ಒಟ್ಟುಗೂಡಿಸುವ ಏಕೈಕ ಕೊಂಡಿ ಎಂದರೆ ಅದು ಸಂಸ್ಕೃತ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net