ಭಾರತ-ಇಯು ವ್ಯಾಪಾರ ಒಪ್ಪಂದ: ಯಾವೆಲ್ಲಾ ವಸ್ತುಗಳು ಅಗ್ಗವಾಗಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ | Trade Agreement

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
Published on

ಪ್ರಮುಖ ಮುಖ್ಯಾಂಶಗಳು

  • ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಯುರೋಪಿಯನ್ ಯೂನಿಯನ್ ಸಹಿ
  • ಈ ಒಪ್ಪಂದವನ್ನು ಎಲ್ಲಾ ಒಪ್ಪಂದಗಳ ತಾಯಿ ಎಂದು ಬಣ್ಣಿಸಲಾಗುತ್ತಿದೆ
  • ಹಲವಾರು ವಲಯಗಳಲ್ಲಿ ಸುಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜ.27) ಭಾರತ ಮತ್ತು ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದ (Trade Agreement) ಕ್ಕೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ.
ಈ ಒಪ್ಪಂದವು ಜಾಗತಿಕ GDP ಯ ಸುಮಾರು 25 ಪ್ರತಿಶತ ಮತ್ತು ವಿಶ್ವ ವ್ಯಾಪಾರದ ಸುಮಾರು ಮೂರನೇ ಒಂದು ಭಾಗದಷ್ಟು ಆರ್ಥಿಕತೆಗಳನ್ನು ಒಳಗೊಂಡಿದ್ದು, ಹಲವಾರು ವಲಯಗಳಲ್ಲಿ ಸುಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ. ಆದ್ದರಿಂದ ಈ ಒಪ್ಪಂದವನ್ನು ಎಲ್ಲಾ ಒಪ್ಪಂದಗಳ ತಾಯಿ ಎಂದು ಬಣ್ಣಿಸಲಾಗುತ್ತಿದೆ. ಹಾಗಾದರೆ ಈ ಒಪ್ಪಂದ ಪರಿಪೂರ್ಣವಾಗಿ ಜಾರಿಯಾದರೆ ಯಾವ-ಯಾವ ವಸ್ತುಗಳ ಮೇಲಿನ ಸುಂಕ ಕಡಿಮೆಯಾಗಲಿದೆ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳೊಣ.

1. ಐಷಾರಾಮಿ ಕಾರುಗಳು

ಭಾರತವು ಪ್ರಸ್ತುತ ಸಂಪೂರ್ಣವಾಗಿ ನಿರ್ಮಿಸಿದ ಆಮದು ಕಾರುಗಳ ಮೇಲೆ ಶೇಕಡಾ 70 ರಿಂದ 110 ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ. ಪ್ರಸ್ತಾವಿತ FTA ಅಡಿಯಲ್ಲಿ, EU ನಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಸುಮಾರು ಶೇಕಡಾ 40 ಕ್ಕೆ ಇಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಕ್ರಮವು ಯುರೋಪಿಯನ್ ಐಷಾರಾಮಿ ಕಾರು ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ತಂತ್ರಜ್ಞಾನ ವರ್ಗಾವಣೆ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ವೋಕ್ಸ್‌ವ್ಯಾಗನ್, ರೆನಾಲ್ಟ್, ಬಿಎಂಡ್ಬ್ಲೂ(BMW) ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ವಾಹನ ತಯಾರಕರು ಈಗಾಗಲೇ ಸ್ಥಳೀಯವಾಗಿ ಉತ್ಪಾದಿಸುತ್ತಿವೆ. ಈ ಒಪ್ಪಂದದ ಮೂಲಕ ಇವುಗಳ ಆಮದು ಹೆಚ್ಚಾಗಿ ಸುಂಕ ಕಡಿಮೆಯಾಗಿ ಲಾಭ ಪಡೆಯಬಹುದು ಎಂದು ಹೇಳಲಾಗುತ್ತಿದೆ.

2. ಬಟ್ಟೆ, ಜವಳಿ ಮತ್ತು ಚರ್ಮದ ಸರಕುಗಳು

ಜವಳಿ, ಉಡುಪು ಮತ್ತು ಚರ್ಮದ ಉತ್ಪನ್ನಗಳು ಈ ಒಪ್ಪಂದದಿಂದ ಅತಿದೊಡ್ಡ ಲಾಭ ಗಳಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಶೇಕಡಾ 10 ರಷ್ಟಿರುವ EU ನಲ್ಲಿ ಆಮದು ಸುಂಕಗಳನ್ನು ಕಡಿಮೆ ಮಾಡುವ ಅಥವಾ ತೆಗೆದುಹಾಕುವ ಸಾಧ್ಯತೆಯಿದೆ. ಇದು ಭಾರತೀಯ ರಫ್ತುದಾರರು ಹಿಂದಿನ ವ್ಯಾಪಾರ ರಿಯಾಯಿತಿಗಳನ್ನು ಕಳೆದುಕೊಂಡ ನಂತರ ಸ್ಪರ್ಧಾತ್ಮಕತೆಯನ್ನು ಮರಳಿ ಪಡೆಯಲು ಮತ್ತು ಈ ವಲಯಗಳಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

3. ವೈನ್ ಮತ್ತು ಆಲ್ಕೋಹಾಲ್ ಉತ್ಪನ್ನಗಳು

ಆಮದು ಮಾಡಿಕೊಂಡ ವೈನ್‌ಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ನಿರೀಕ್ಷೆಯಿದ್ದು, ಶೇಕಡಾ 150 ರಿಂದ ಶೇಕಡಾ 20 ರಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ. ಇದು ಯುರೋಪಿಯನ್ ವೈನ್‌ಗಳು ಭಾರತೀಯ ಗ್ರಾಹಕರಿಗೆ ತಲುಪುವ ಉದ್ದೇಶವನ್ನು ಹೊಂದಿದ್ದರು ಸಹ, ಸುಂಕ ಕಡಿತದಿಂದಾಗಿ ಸ್ಥಳೀಯ ವೈನ್​ ಉತ್ಪಾದಕರಿಗೆ ಆರ್ಥಿಕ ತೊಂದರೆಯಾಗುವ ಸಂಭವವಿದೆ.

4. ರಾಸಾಯನಿಕಗಳು

FTA ಯು EU ಗೆ ಭಾರತದ ರಾಸಾಯನಿಕ ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಸಾಯನಿಕಗಳ ಮೇಲಿನ ಶೇಕಡಾ 22 ವರೆಗಿನ ಸುಂಕಗಳನ್ನು ಬಹುತೇಕ ಸಂಪೂರ್ಣವಾಗಿ ತೆಗೆದುಹಾಕುವ ನಿರೀಕ್ಷೆಯಿದೆ. ವಿಶೇಷವಾಗಿ ಸಾವಯವ ರಾಸಾಯನಿಕ ಮತ್ತು ಔಷಧೀಯ ರಾಸಾಯನಿಕ ವಿಭಾಗಗಳಲ್ಲಿ ಈ ಬದಲಾವಣೆಯ ನಿರೀಕ್ಷೆಯಿದೆ.

5. ಸಂಸ್ಕರಿಸಿದ ಆಹಾರಗಳು

ಈ ಒಪ್ಪಂದದಲ್ಲಿ ಪಾಸ್ತಾ ಮತ್ತು ಚಾಕೊಲೇಟ್‌ಗಳಂತಹ ವಸ್ತುಗಳನ್ನು ಒಳಗೊಂಡಂತೆ ಸಂಸ್ಕರಿಸಿದ ಆಹಾರಗಳ ಮೇಲಿನ ಶೇಕಡಾ 50 ವರೆಗಿನ ಆಮದು ಸುಂಕಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿರೀಕ್ಷೆಯಿದೆ. ಇದು ಯುರೋಪಿಯನ್ ಆಹಾರ ಉತ್ಪನ್ನಗಳನ್ನು ಭಾರತದಲ್ಲಿ ಅಗ್ಗವಾಗಿಸುವ ಸಾಧ್ಯತೆಯಿದೆ, ಜೊತೆಗೆ EU ನಲ್ಲಿ ಭಾರತೀಯ ಸಂಸ್ಕರಿಸಿದ ಆಹಾರ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲಿದೆ.

6. ಆಲಿವ್ ಎಣ್ಣೆ, ಹಣ್ಣಿನ ರಸಗಳು

ಭಾರತವು ಯುರೋಪ್‌ನಿಂದ ಆಮದು ಮಾಡಿಕೊಳ್ಳುವ ಹಲವಾರು ದೈನಂದಿನ ಬಳಕೆಯ ವಸ್ತುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುತ್ತದೆ ಎಂದು EU ಹೇಳಿದೆ. ಆಲಿವ್ ಎಣ್ಣೆ, ಕುರಿ ಮಾಂಸ ಮತ್ತು ಹಣ್ಣಿನ ರಸಗಳಂತಹ ದಿನನಿತ್ಯದ ವಸ್ತುಗಳ ಸುಂಕಗಳನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ಅದು ಹೇಳಿದೆ.
ಒಟ್ಟಾರೆಯಾಗಿ, ಭಾರತ-EU FTA ಸುಮಾರು 27 ಟ್ರಿಲಿಯನ್‌ ಡಾಲರ್​ ಆರ್ಥಿಕ ಉತ್ಪಾದನೆಯೊಂದಿಗೆ ಸುಮಾರು 2 ಬಿಲಿಯನ್ ಜನರ ಬೃಹತ್ ಮುಕ್ತ ಮತ್ತು ವ್ಯಾಪಾರ ಮಾರುಕಟ್ಟೆಯನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, ಇದು ಎರಡೂ ಕಡೆಗಳಲ್ಲಿ ವ್ಯಾಪಾರ, ಬೆಲೆ ನಿಗದಿ ಮತ್ತು ಗ್ರಾಹಕ ಆಯ್ಕೆಗಳನ್ನು ಮರುರೂಪಿಸುವ ಸಾಧ್ಯತೆಯಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net