ಇಂಡಿಯಾ ಒಕ್ಕೂಟದಲ್ಲಿ ಯಾವುದು... ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಅಖಿಲೇಶ್ | Akhilesh Yadav

Akhilesh Yadav | ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್
Akhilesh Yadav | ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್
Published on
ಲಖನೌ: ಇಂಡಿಯಾ ಮೈತ್ರಿಕೂಟದಲ್ಲಿ ಒಗ್ಗಟ್ಟಿದ್ದು, ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲಿದೆ ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ದೃಢಪಡಿಸಿದ್ದಾರೆ.
ಭಾನುವಾರ ಹರಿಯಾಣದ ರೇವಾರಿಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ಮಾಹಿತಿ ತಿಳಿಸಿದರು.
ಮುಂದೆಯೂ ಕೂಡ ಇಂಡಿಯಾ ಒಕ್ಕೂಟ ಅಸ್ತಿತ್ವದಲ್ಲಿರುತ್ತದೆ ಮತ್ತು ಕಾಂಗ್ರೆಸ್ ನಮ್ಮೊಂದಿಗಿರುತ್ತದೆ. ನಮ್ಮ ಮೈತ್ರಿಯಲ್ಲಿ ಸ್ಥಾನಗಳ ಹಂಚಿಕೆಗಿಂತ ಗೆಲುವೇ ಮುಖ್ಯ ಮಾನದಂಡವಾಗಿದ್ದು, ಯಾರು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೋ ಅಂತಹವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೂ ಬಿಜೆಪಿ ಭರ್ಜರಿ ಜಯ ದಾಖಲಿಸಿತ್ತು. 2022ರ ಚುನಾವಣೆಯಲ್ಲಿ ಇವು ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾಗಲೂ ಬಿಜೆಪಿ ಅಧಿಕಾರ ಉಳಿಸಿಕೊಂಡಿತ್ತು. ಆದರೆ ಇತ್ತೀಚಿನ 2024ರ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟವು ರಾಜ್ಯದ 80 ಸ್ಥಾನಗಳಲ್ಲಿ 43 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಸಮಾಜವಾದಿ ಪಕ್ಷ 37 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿವೆ.

ಮಹಿಳಾ ಮೀಸಲಾತಿ ಬಗ್ಗೆ ಹೇಳಿದ್ದೇನು..?

ಇದೇ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಖಿಲೇಶ್, ಕಳೆದ ವಾರ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ, ಎನ್‌ಡಿಎ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು. 16ನೇ ಜನಗಣತಿ ಪೂರ್ಣಗೊಳ್ಳುವವರೆಗೆ ಈ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದಿರುವ ಯಾದವ್​, 2011ರ ಹಳೆಯ ಜನಗಣತಿಯ ಅಂಕಿಅಂಶಗಳನ್ನು ಬಳಸಿದರೆ ಮೀಸಲಾತಿಯ ಆಧಾರವೇ ತಪ್ಪಾಗುತ್ತದೆ, ಹೊಸ ಜನಗಣತಿ ನಡೆಯುವವರೆಗೆ ಈ ವಿಷಯದ ಬಗ್ಗೆ ಚರ್ಚಿಸಬಾರದು ಎನ್ನುವುದು ವಿಪಕ್ಷಗಳ ಇಚ್ಛೆಯಾಗಿದೆ ಎಂದರು.
2029ರ ವೇಳೆಗೆ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ಮತ್ತು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543 ರಿಂದ 816ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಒಳಗೊಂಡಿದ್ದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಶುಕ್ರವಾರ ಕೆಳಮನೆಯಲ್ಲಿ ತಿರಸ್ಕೃತಗೊಂಡಿದೆ. 2011ರ ಜನಗಣತಿಯ ಆಧಾರದ ಮೇಲಿನ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಈ ಕಾನೂನನ್ನು ಜಾರಿಗೆ ತರುವುದು ಸರ್ಕಾರ ಉದ್ದೇಶವಾಗಿತ್ತು.

ಮಸೂದೆಗೆ ಸೋಲು..

ಸಂಸತ್ತಿನಲ್ಲಿ ನಡೆದ ಮತದಾನದ ವಿವರಗಳ ಪ್ರಕಾರ, ಚರ್ಚೆಯ ಬಳಿಕ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರು. ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (ಅಂದರೆ ಸುಮಾರು 326 ಮತಗಳು) ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ ಚಲಾವಣೆಯಾಗಿದ್ದು 298 ಮತಗಳು.
ಇಂಡಿಯಾ ಕೂಟದ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೊಸ ಜನಗಣತಿಯಿಲ್ಲದೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಇದು ಒಬಿಸಿ ಸಮುದಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ವಾದಿಸಿದವು. 2029ರ ಚುನಾವಣೆಯಿಂದ ಮೀಸಲಾತಿ ಜಾರಿಯಾಗಲಿದೆ ಎಂಬ ಸರ್ಕಾರದ ಪ್ರಸ್ತಾಪವನ್ನು ಚುನಾವಣಾ ಗಿಮಿಕ್ ಎಂದು ಕರೆದಿದ್ದ ವಿಪಕ್ಷಗಳು, ಅಂತಿಮವಾಗಿ ಸದನದಲ್ಲಿ ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net