9/11 ದಾಳಿಗೆ 25 ವರ್ಷ!...ಭಯೋತ್ಪಾದನೆ ವಿರುದ್ಧ ಭಾರತದ ಅಚಲ ನಿರ್ಧಾರ ಪುನರುಚ್ಚರಿಸಿದ ಪ್ರಧಾನಿ ಮೋದಿ! | 9/11 Anniversary

9/11 Anniversary | ಪ್ರಧಾನಿ ನರೇಂದ್ರ ಮೋದಿ
9/11 Anniversary | ಪ್ರಧಾನಿ ನರೇಂದ್ರ ಮೋದಿ
Published on
9/11 Anniversary: ಅಮೆರಿಕದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ 25 ವರ್ಷಗಳು ತುಂಬಿದ ಸಂದರ್ಭದಲ್ಲಿ, ಜಗತ್ತು ಈ ಭೀಕರ ಘಟನೆಯನ್ನು ಸ್ಮರಿಸಿಕೊಳ್ಳುತ್ತಿರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಇಂದು (ಶುಕ್ರವಾರ ಸೆ.11) ದಾಳಿಯ ಸಂತ್ರಸ್ತರನ್ನು ನೆನಪಿಸಿಕೊಂಡಿದ್ದಾರೆ. ಇದರೊಂದಿಗೆ ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲುವ ಭಾರತದ ದೃಢ ಸಂಕಲ್ಪವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಭೀಕರ 9/11 ದಾಳಿ ನಡೆದು 25 ವರ್ಷಗಳಾಗಿವೆ. ನಾವು ಸಂತ್ರಸ್ತರನ್ನು ಸ್ಮರಿಸುತ್ತೇವೆ ಹಾಗೂ ಗೌರವಿಸುತ್ತೇವೆ. ಜತೆಗೆ ಯಾರ ಜೀವನ ಎಂದೆಂದಿಗೂ ಬದಲಾಗಿ ಹೋಯಿತೋ, ಆ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಯೋತ್ಪಾದನೆಯು ವಿಶ್ವದಾದ್ಯಂತ ಅಪಾರ ಸಂಖ್ಯೆಯ ಜೀವಗಳನ್ನು ಬಲಿ ಪಡೆದಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತ ದೇಶವಾಗಿ, ಭಾರತವು ಹಲವಾರು ದಶಕಗಳಿಂದ ಈ ಹೋರಾಟದ ಮುಂಚೂಣಿಯಲ್ಲಿದೆ ಎಂದರು.
ಭಯೋತ್ಪಾದನೆಯನ್ನು ಎದುರಿಸುವ ಭಾರತದ ಅಚಲ ನಿರ್ಧಾರವನ್ನು ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಬೆದರಿಕೆಯ ರೂಪಗಳು ಬದಲಾಗುತ್ತಲೇ ಇದ್ದರೂ, ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಿಗೆ ನಮ್ಮ ವಿರೋಧ ಹಾಗೂ ಸಂಕಲ್ಪ ಅಚಲವಾಗಿದೆ. ಈ ಪಿಡುಗನ್ನು ಮೆಟ್ಟಿ ನಿಲ್ಲುವ ಎಲ್ಲಾ ಪ್ರಯತ್ನಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎನ್ನುತ್ತಾ, 2014 ರಲ್ಲಿ 9/11 ಸ್ಮಾರಕ ಮತ್ತು ವಸ್ತುಸಂಗ್ರಹಾಲಯಕ್ಕೆ ನೀಡಿದ್ದ ಭೇಟಿಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
9/11 ರ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಅಮೆರಿಕ
2001 ಸೆಪ್ಟೆಂಬರ್ 11 ರಂದು ಅಲ್-ಖೈದಾ ನಡೆಸಿದ 9/11 ದಾಳಿಯ 25 ನೇ ವಾರ್ಷಿಕೋತ್ಸವವನ್ನು ಅಮೆರಿಕ ಆಚರಿಸುತ್ತಿದೆ. ಹೈಜಾಕರ್‌ಗಳು ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ವರ್ಜೀನಿಯಾದ ಪೆಂಟಗನ್‌ಗೆ ಮೂರು ವಿಮಾನಗಳನ್ನು ಅಪ್ಪಳಿಸಿದಾಗ ಬರೋಬ್ಬರಿ 2,977 ಜನರು ಪ್ರಾಣ ಕಳೆದುಕೊಂಡಿದ್ದರು. ಉಗ್ರರು ನಾಲ್ಕನೇ ವಿಮಾನವನ್ನು ಪೆನ್ಸಿಲ್ವೇನಿಯಾದ ಶಾಂಕ್ಸ್ ವಿಲ್ಲೆಯ ಸಮೀಪವಿರುವ ಮೈದಾನದಲ್ಲಿ ಪತನಗೊಳಿಸಿದ್ದರು.
ಸಂತ್ರಸ್ತರಿಗೆ ನಮನ ಸಲ್ಲಿಸುವ ಸಲುವಾಗಿ ಅಮೆರಿಕದಲ್ಲಿ ಶುಕ್ರವಾರದಂದು ಪುಷ್ಪಗುಚ್ಛ ಅರ್ಪಣೆ, ಧ್ವಜಾರೋಹಣ, ಮೌನಾಚರಣೆ, ಜಾಗರಣೆ ಹಾಗೂ ಸಂತ್ರಸ್ತರ ಹೆಸರುಗಳ ವಾಚನ ಸೇರಿದಂತೆ ಹಲವು ಸ್ಮಾರಕ ವಿಧಿವಿಧಾನಗಳು ನಡೆಯಲಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪೆಂಟಗನ್‌ನಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ವಾರದ ಆರಂಭದಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ 9/11 ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್​, ಇತಿಹಾಸದ ಹಾದಿಯಲ್ಲಿ, ಸಮಯವನ್ನು ಘಟನೆಗೆ ಮೊದಲು ಮತ್ತು ನಂತರ ಎಂದು ವಿಭಜಿಸುವ ಕೆಲವು ಕ್ಷಣಗಳು ಇರುತ್ತವೆ ಎಂದು ಹೇಳಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net