ಭಾರತದ ಅಣ್ವಸ್ತ್ರ ಬಲ ವೃದ್ಧಿ; ತಕ್ಕ ಉತ್ತರ ನೀಡಲು ಸಿದ್ಧತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಭಾರತವು ಕಳೆದ ಮೂರು ವರ್ಷಗಳಲ್ಲೇ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ಒಟ್ಟು 26 ಅಣ್ವಸ್ತ್ರಗಳನ್ನು ಸೇರ್ಪಡೆಗೊಳಿಸಿದೆ. ಇದರೊಂದಿಗೆ ದೇಶದ ಅಣ್ವಸ್ತ್ರಗಳ ಒಟ್ಟು ಸಂಖ್ಯೆ 190ಕ್ಕೆ ತಲುಪಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. 
ಪ್ರಮುಖ ಬೆಳವಣಿಗೆಯೊಂದರಲ್ಲಿ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ಶಾಂತಿಕಾಲದಲ್ಲಿಯೇ 12 ಅಣ್ವಸ್ತ್ರಗಳನ್ನು ಮಿಸೈಲ್​ಗಳ (ಕ್ಷಿಪಣಿ) ಮೇಲೆ ಲೋಡ್ ಮಾಡಿ, ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಿದೆ. ಭಾರತವು ಸಾಂಪ್ರದಾಯಿಕವಾಗಿ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಗಳನ್ನು ಪ್ರತ್ಯೇಕವಾಗಿ ಇಡುತ್ತಿತ್ತು. ಆದರೆ ಬದಲಾಗುತ್ತಿರುವ ಜಾಗತಿಕ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ಶಾಂತಿಕಾಲದಲ್ಲೂ ಶಸ್ತ್ರಾಸ್ತ್ರಗಳನ್ನು ಕ್ಷಿಪಣಿಗಳಿಗೆ ಜೋಡಿಸಿ ನಿಯೋಜನೆ ಮಾಡಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ದೇಶದ ರಕ್ಷಣಾ ಬಜೆಟ್​ನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ, ಜಾಗತಿಕ ಪರಿಸ್ಥಿತಿಗಳನ್ನು ಗಮನಿಸಿ ಅಣ್ವಸ್ತ್ರಗಳ ಸಂಗ್ರಹ ಹೆಚ್ಚಿಸಿಕೊಳ್ಳುವತ್ತಲೂ ವಿಶೇಷ ಗಮನ ನೀಡಿದೆ. ‘ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಈಗ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿದ್ದು, ಒಟ್ಟು ಸಂಖ್ಯೆ 190ಕ್ಕೆ ತಲುಪಿದೆ. ಪಾಕಿಸ್ತಾನದ ಬಳಿ 170 ಅಣ್ವಸ್ತ್ರಗಳಿವೆ’ ಎಂದು ಸ್ವೀಡನ್ ಮೂಲದ ಪ್ರತಿಷ್ಠಿತ ಜಾಗತಿಕ ರಕ್ಷಣಾ ಥಿಂಕ್​ಟ್ಯಾಂಕ್ ‘ಸ್ಟಾಕ್​ಹೋಮ್ ಇಂಟರ್​ನ್ಯಾಷನಲ್ ಪೀಸ್ ರಿಸರ್ಚ್ ಇನ್​ಸ್ಟಿಟ್ಯೂಟ್’ (ಎಸ್​ಐಪಿಆರ್​ಐ-ಸಿಪ್ರಿ) 2026ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 

ವಿಶ್ವದಲ್ಲಿ ಪ್ರಸ್ತುತ ಒಟ್ಟು 9 ಪರಮಾಣು ಸಜ್ಜಿತ ದೇಶಗಳಿವೆ- ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್. ಈ ಒಂಬತ್ತು ದೇಶಗಳ ಬಳಿ ಒಟ್ಟು 12,187 ಅಣ್ವಸ್ತ್ರಗಳಿದ್ದು, ಅವುಗಳಲ್ಲಿ 9,745 ಅಣ್ವಸ್ತ್ರಗಳು ತಕ್ಷಣ ಬಳಕೆಗೆ ಯೋಗ್ಯವಾದ ಸ್ಥಿತಿಯಲ್ಲಿವೆ. 2025ರಲ್ಲಿ ಭಾರತದ ಬಳಿ 180 ಪರಮಾಣು ಶಸ್ತ್ರಾಸ್ತ್ರಗಳಿದ್ದವು, ಅವು ಈಗ (2026ರಲ್ಲಿ) 190ಕ್ಕೆ ಏರಿಕೆಯಾಗಿವೆ. ಇವುಗಳಲ್ಲಿ 12 ಶಸ್ತ್ರಾಸ್ತ್ರಗಳನ್ನು ನೇರವಾಗಿ ನಿಯೋಜಿಸಲಾಗಿದ್ದು, ಇನ್ನುಳಿದ 178 ಶಸ್ತ್ರಾಸ್ತ್ರಗಳನ್ನು ಶಸ್ತ್ರಾಗಾರದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.

ಪಾಕಿಸ್ತಾನದ ಬಳಿ ಸದ್ಯ 170 ಅಣ್ವಸ್ತ್ರಗಳಿದ್ದು, 2023ರ ನಂತರ ಅದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ, ಚೀನಾದ ಅಣ್ವಸ್ತ್ರಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, 600ರಿಂದ 620ಕ್ಕೆ ತಲುಪಿದೆ.

ಅಣ್ವಸ್ತ್ರಗಳ ನಿಯೋಜನೆ

ಅಣ್ವಸ್ತ್ರಗಳು ಸ್ವತಂತ್ರವಾಗಿ ಕೆಲಸ ಮಾಡುವುದಿಲ್ಲ. ಅವುಗಳನ್ನು ಶತ್ರು ದೇಶಗಳ ಗುರಿಯ ಮೇಲೆ ದಾಳಿ ಮಾಡಲು ಒಂದು ವಿತರಣಾ ವ್ಯವಸ್ಥೆಯ ಅಗತ್ಯವಿರುತ್ತದೆ. ಇದನ್ನು ಮುಖ್ಯವಾಗಿ ಮೂರು ವಿಧಾನಗಳಲ್ಲಿ ಮಾಡಲಾಗುತ್ತದೆ.

  • ನೆಲದ ಮೇಲಿನ ಮಿಸೈಲ್ ಲಾಂಚರ್​ಗಳಲ್ಲಿ ಅಳವಡಿಸಲಾದ ಬ್ಯಾಲಿಸ್ಟಿಕ್ ಮಿಸೈಲ್​ನಿಂದ ಅಣ್ವಸ್ತ್ರ ಪ್ರಯೋಗಿಸಲಾಗುತ್ತದೆ. 
  • ಆಧುನಿಕ ಫೈಟರ್ ಜೆಟ್​ಗಳ ಮೂಲಕ ಅಣ್ವಸ್ತ್ರಗಳನ್ನು ಪ್ರಯೋಗಿಸುವುದು.
  • ಸಮುದ್ರದಲ್ಲಿನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳಿಂದಲೂ ಶತ್ರುರಾಷ್ಟ್ರಗಳ ಮೇಲೆ ಅಣ್ವಸ್ತ್ರ ದಾಳಿ ಮಾಡಬಹುದು.
  • ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ಎದುರಿಸುವ ತಂತ್ರಗಾರಿಕೆ
  • ಅಣ್ವಸ್ತ್ರಗಳನ್ನು ಮಿಸೈಲ್​ಗಳೊಂದಿಗೆ ಜೋಡಿಸುವ ಪ್ರಕ್ರಿಯೆಯಲ್ಲಿ ಎರಡು ವಿಧಾನಗಳಿವೆ.

1. ಡಿ-ಮೇಟೆಡ್: ಇದರಲ್ಲಿ ಅಣ್ವಸ್ತ್ರ ಮತ್ತು ಮಿಸೈಲ್​ಗಳನ್ನು ಬೇರೆ ಬೇರೆ ಕಡೆ ಇಡಲಾಗುತ್ತದೆ. ತುರ್ತು ಪರಿಸ್ಥಿತಿ ಅಥವಾ ಯುದ್ಧದ ಸಂದರ್ಭ ಬಂದಾಗ ಮಾತ್ರ ಇವೆರಡನ್ನೂ ಜೋಡಿಸಿ ಫೈರ್ ಮಾಡಲಾಗುತ್ತದೆ. ಭಾರತ ಇದುವರೆಗೆ ಇದೇ ನೀತಿಯನ್ನು ಪಾಲಿಸುತ್ತಿತ್ತು.

2. ಮೇಟೆಡ್: ಇದರಲ್ಲಿ ಅಣ್ವಸ್ತ್ರಗಳನ್ನು ಮೊದಲೇ ಮಿಸೈಲ್ ಮೇಲೆ ಫಿಟ್ ಮಾಡಿ ಸಿದ್ಧವಾಗಿಡ ಲಾಗುತ್ತದೆ, ಇದರಿಂದ ಶತ್ರುದೇಶ ದಾಳಿ ಮಾಡಿದ ತಕ್ಷಣ ಕ್ಷಣಮಾತ್ರದಲ್ಲಿ ಮರುದಾಳಿ ಮಾಡಬಹುದು.

ಸಿಪ್ರಿ ವರದಿಯ ಪ್ರಕಾರ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ಶಾಂತಿಕಾಲದಲ್ಲಿ ತನ್ನ 12 ಪರಮಾಣು ಶಸ್ತ್ರಾಸ್ತ್ರಗಳನ್ನು ಮಿಸೈಲ್​ಗಳ ಮೇಲೆ ಲೋಡ್ ಮಾಡಿ ‘ಮೇಟೆಡ್’ (ನಿಯೋಜನೆ) ಸ್ಥಿತಿಯಲ್ಲಿಟ್ಟಿದೆ. ಈ ಮೂಲಕ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಒಳಗೊಂಡಿರುವ ಜಾಗತಿಕ ಹೈ-ಅಲರ್ಟ್ ಪರಮಾಣು ಕ್ಲಬ್​ಗೆ ಭಾರತ 6ನೇ ದೇಶವಾಗಿ ಸೇರ್ಪಡೆಯಾಗಿದೆ.

ಕಾರ್ಯತಂತ್ರ ಬದಲಾವಣೆ

ನ್ಯೂಕ್ಲಿಯರ್ ಟ್ರಯಾಡ್ ಬಲಪಡಿಸುವುದು: ‘ನ್ಯೂಕ್ಲಿಯರ್ ಡೀಟರೆನ್ಸ್’ (ಪರಮಾಣು ಪ್ರತಿರೋಧ) ಎಂದರೆ ಶತ್ರುದೇಶಕ್ಕೆ ನಮ್ಮ ಮೇಲಿನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ಪ್ರದರ್ಶಿಸುವುದು. ವಾಯು, ನೆಲ ಮತ್ತು ಸಮುದ್ರ- ಈ ಮೂರೂ ಮಾರ್ಗಗಳಿಂದ ಪರಮಾಣು ದಾಳಿ ಮಾಡುವ ಸಾಮರ್ಥ್ಯಕ್ಕೆ ‘ನ್ಯೂಕ್ಲಿಯರ್ ಟ್ರಯಾಡ್’ ಎನ್ನಲಾಗುತ್ತದೆ. ಭಾರತದ ಪರಮಾಣು ಜಲಾಂತರ್ಗಾಮಿ ‘ಐಎನ್​ಎಸ್ ಅರಿಹಂತ್’ ಮತ್ತು 2024ರ ಆಗಸ್ಟ್​ನಲ್ಲಿ ನೌಕಾಪಡೆಗೆ ಸೇರಿದ ‘ಐಎನ್​ಎಸ್ ಅರಿಘಾತ್’ ಗಸ್ತು ತಿರುಗಲು ಹೋದಾಗ, ಸಮುದ್ರದ ಆಳದಲ್ಲಿ ಮಿಸೈಲ್ ಮತ್ತು ಬಾಂಬ್​ಗಳನ್ನು ಪ್ರತ್ಯೇಕವಾಗಿಡುವುದು ಅಸಾಧ್ಯ. ಆದ್ದರಿಂದ ಅವುಗಳನ್ನು ಸದಾ ನಿಯೋಜಿತ ಸ್ಥಿತಿಯಲ್ಲೇ ಇಡಬೇಕಾಗುತ್ತದೆ.

ತಕ್ಕ ಉತ್ತರ ನೀಡಲು ಸಿದ್ಧತೆ

ಭಾರತವು ‘ನೋ ಫಸ್ಟ್ ಯೂಸ್’ (ಮೊದಲು ಪರಮಾಣು ದಾಳಿ ಮಾಡುವುದಿಲ್ಲ) ನೀತಿಯನ್ನು ಹೊಂದಿದೆ. ಆದರೆ ಪಾಕಿಸ್ತಾನಕ್ಕೆ ಅಂತಹ ಯಾವುದೇ ನಿಯಮವಿಲ್ಲ. ಪಾಕಿಸ್ತಾನವು 60-70 ಕಿ.ಮೀ. ವ್ಯಾಪ್ತಿಯ ನಾಸರ್​ನಂತಹ ಸಣ್ಣ ಪ್ರಮಾಣದ ಟ್ಯಾಕ್ಟಿಕಲ್ ಪರಮಾಣು ಮಿಸೈಲ್​ಗಳನ್ನು ಹೊಂದಿದೆ. ಇತ್ತೀಚಿನ ಆಪರೇಷನ್ ಸಿಂಧೂರದ ನಂತರ ಉಭಯ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಯಾವುದೇ ಹಠಾತ್ ಕ್ರಮಕ್ಕೆ ತಕ್ಕ ಉತ್ತರ ನೀಡಲು ಭಾರತ ಈ ಸಿದ್ಧತೆ ಮಾಡಿಕೊಂಡಿದೆ.

ಭಾರತವು ಅಣ್ವಸ್ತ್ರಗಳನ್ನು ಹೆಚ್ಚಿಸಿಕೊಂಡಿದ್ದೇಕೆ?

ಭಾರತದ ಈ ನಿರ್ಧಾರದ ಸಂಪೂರ್ಣ ಗಮನ ಈಗ ಚೀನಾದ ಮೇಲಿದೆ. ಚೀನಾ ದೇಶವು ಭಾರತಕ್ಕಿಂತ ಮೂರು ಪಟ್ಟು ದೊಡ್ಡದಾಗಿದೆ ಮತ್ತು ಅದರ ಮಿಲಿಟರಿ ನೆಲೆಗಳು ದೂರದವರೆಗೆ ಹರಡಿಕೊಂಡಿವೆ. ರಕ್ಷಣಾ ತಜ್ಞರ ಪ್ರಕಾರ, ಚೀನಾವು ಅಮೆರಿಕಕ್ಕೆ ಪೈಪೋಟಿ ನೀಡಲು ಅತ್ಯಂತ ವೇಗವಾಗಿ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತ್ತಿದೆ. ಚೀನಾದ ಈ ನಡೆ ಭಾರತಕ್ಕೆ ನೇರ ಭೀತಿಯಾಗಿದೆ. ಆದ್ದರಿಂದ ಭಾರತವು ಈಗ ಚೀನಾದ ಯಾವುದೇ ಮೂಲೆಯನ್ನು ತಲುಪಬಲ್ಲ 6ರಿಂದ 8 ಸಾವಿರ ಕಿಲೋಮೀಟರ್ ವ್ಯಾಪ್ತಿಯ ಅಗ್ನಿ-6ನಂತಹ ದೀರ್ಘಾವಧಿಯ ಮಿಸೈಲ್​ಗಳು ಮತ್ತು ಅಣ್ವಸ್ತ್ರಗಳ ತಯಾರಿಕೆಗೆ ಮುಂದಾಗಿದೆ. ಅಲ್ಲದೆ, ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಯುದ್ಧ ಸಾರಿದರೂ ಭಾರತವು ಒಂಟಿಯಾಗಿ ಎರಡೂ ದೇಶಗಳನ್ನು ಮಟ್ಟಹಾಕಬಲ್ಲದು ಎಂಬ ಸಂದೇಶವನ್ನು ರವಾನಿಸಲು ಈ ಹೆಚ್ಚಳ ಮಾಡಲಾಗಿದೆ.

ಚೀನಾ ಮತ್ತು ಪಾಕಿಸ್ತಾನವನ್ನು ಭಾರತ ಒಟ್ಟಿಗೆ ಎದುರಿಸಬಲ್ಲದೇ?

ಸಂಖ್ಯಾತ್ಮಕವಾಗಿ ನೋಡಿದರೆ ಚೀನಾ ನಮಗಿಂತ ತುಂಬ ಮುಂದಿದೆ. ಚೀನಾದ ಬಳಿ 620 ಅಣ್ವಸ್ತ್ರಗಳಿದ್ದರೆ, ಚೀನಾ ಮತ್ತು ಪಾಕಿಸ್ತಾನದ ಒಟ್ಟು ಶಸ್ತ್ರಾಸ್ತ್ರಗಳನ್ನು ಸೇರಿಸಿದರೆ ಅದು ಭಾರತಕ್ಕಿಂತ 4 ಪಟ್ಟು ಹೆಚ್ಚಾಗುತ್ತದೆ. ಆದರೆ, ರಕ್ಷಣಾ ತಜ್ಞರ ಪ್ರಕಾರ, ಪರಮಾಣು ಯುದ್ಧವು ಕೇವಲ ಸಂಖ್ಯೆಗಳ ಮೇಲೆ ನಿರ್ಧಾರವಾಗುವುದಿಲ್ಲ. ಒಂದು ಇಡೀ ದೇಶವನ್ನು ಧ್ವಂಸಗೊಳಿಸಲು ಕೇವಲ 5ರಿಂದ 10 ಅಣ್ವಸ್ತ್ರಗಳು ಸಾಕು. ಒಂದು ವೇಳೆ ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್ ಮತ್ತು ಕರಾಚಿಯ ಮೇಲೆ ಕೇವಲ 5 ಅಣ್ವಸ್ತ್ರಗಳನ್ನು ಹಾಕಿದರೂ ಆ ದೇಶ ಸರ್ವನಾಶವಾಗುತ್ತದೆ. 

ಅದೇ ರೀತಿ, ಚೀನಾವು ಭಾರತದ ಶೇಕಡ 80ರಷ್ಟು ಪರಮಾಣು ನೆಲೆಗಳನ್ನು ನಾಶಪಡಿಸಿದರೂ, ಭಾರತದ ಬಳಿ ಉಳಿಯುವ ಕೇವಲ 30 ಅಣ್ವಸ್ತ್ರಗಳು ಚೀನಾದ 15 ಪ್ರಮುಖ ಮಹಾನಗರಗಳನ್ನು ನಕ್ಷೆಯಿಂದಲೇ ಅಳಿಸಿಹಾಕಲು ಸಾಕಾಗುತ್ತದೆ. ಆದ್ದರಿಂದ, ಭಾರತದ ಸದ್ಯದ 190 ಅಣ್ವಸ್ತ್ರಗಳ ಸಂಗ್ರಹ ಮತ್ತು 12 ಅಣ್ವಸ್ತ್ರಗಳ ತಕ್ಷಣದ ನಿಯೋಜನೆಯು ಚೀನಾ ಮತ್ತು ಪಾಕಿಸ್ತಾನದ ಜಂಟಿ ಆಕ್ರಮಣಶೀಲತೆಯನ್ನು ತಡೆಯಲು ಸಂಪೂರ್ಣ ಸಮರ್ಥವಾಗಿದೆ.

ಚೀನಾದ ಹೆಚ್ಚುತ್ತಿರುವ ಪ್ರಭಾವಕ್ಕೆ ಬ್ರೇಕ್

ಚೀನಾವು ಭಾರತದ ಗಡಿಯ ಸಮೀಪವಿರುವ ಟಿಬೆಟ್​ನ ಗೋಲ್ಮುಡ್ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಿಸೈಲ್ ಬೇಸ್​ಗಳನ್ನು ನಿರ್ವಿುಸುತ್ತಿದೆ. ಇಲ್ಲಿ 4,000 ಕಿ.ಮೀ . ವ್ಯಾಪ್ತಿಯ ಡಿಎಫ್-26 ಪರಮಾಣು ಮಿಸೈಲ್​ಗಳನ್ನು ನಿಯೋಜಿಸಲಾಗಿದೆ, ಇವು ಕೆಲವೇ ನಿಮಿಷಗಳಲ್ಲಿ ಭಾರತದ ಪ್ರಮುಖ ನಗರಗಳನ್ನು ತಲುಪಬಲ್ಲವು. ಚೀನಾಕ್ಕೆ ಹೋಲಿಸಿದರೆ ಭಾರತದ ಬಳಿ ಅಣ್ವಸ್ತ್ರಗಳು ಕಡಿಮೆ ಇರುವುದರಿಂದ, ತನ್ನ ಸೆಕೆಂಡ್ ಸ್ಟ್ರೈಕ್​ (ಮರುದಾಳಿ) ಸಾಮರ್ಥ್ಯವನ್ನು ಅತ್ಯಂತ ವೇಗವಾಗಿ ಕಾಯ್ದುಕೊಳ್ಳಲು ಭಾರತ ಈ ಕ್ರಮ ಕೈಗೊಂಡಿದೆ.

ಭಾರತವು 2023ರವರೆಗೆ ಪಾಕ್​ಗಿಂತ ಕಡಿಮೆ ಅಣ್ವಸ್ತ್ರಗಳನ್ನು ಏಕೆ ಹೊಂದಿತ್ತು?

ಇದಕ್ಕೆ 3 ಮುಖ್ಯ ಕಾರಣಗಳಿದ್ದವು

ಕನಿಷ್ಠ ಪ್ರತಿರೋಧ: ಭಾರತದ ಗುರಿ, ನಮ್ಮ ಮೇಲಿನ ದಾಳಿಯಿಂದ ಶತ್ರುದೇಶಕ್ಕೆ ಭಾರಿ ನಷ್ಟವಾಗುತ್ತದೆ ಎಂದು ಹೆದರಿಸುವುದಷ್ಟೇ ಆಗಿತ್ತು. ಹೆಚ್ಚು ಅಣ್ವಸ್ತ್ರಗಳನ್ನು ಸಂಗ್ರಹಿಸುವುದಕ್ಕಿಂತ, ಇರುವ ಅಣ್ವಸ್ತ್ರಗಳ ಗುಣಮಟ್ಟ ಮತ್ತು ತಂತ್ರಜ್ಞಾನವನ್ನು (ಉದಾಹರಣೆಗೆ ಎಂಐಆರ್​ವಿ ತಂತ್ರಜ್ಞಾನ) ಹೆಚ್ಚಿಸಲು ಭಾರತ ಒತ್ತು ನೀಡಿತ್ತು.

ಪಾಕಿಸ್ತಾನದ ಸಣ್ಣ ಭೌಗೋಳಿಕ ವಿಸ್ತೀರ್ಣ: ಭಾರತದ ವಿಸ್ತೀರ್ಣಕ್ಕೆ ಹೋಲಿಸಿದರೆ ಪಾಕಿಸ್ತಾನವು ನಾಲ್ಕನೇ ಒಂದು ಭಾಗದಷ್ಟಿದೆ. ಆದ್ದರಿಂದ ಪಾಕಿಸ್ತಾನದ ಪ್ರಮುಖ ನಗರಗಳನ್ನು ಗುರಿಯಾಗಿಸಲು ಭಾರತದ ಬಳಿ ಇದ್ದ ಕೆಲವೇ ಕೆಲವು ಶಕ್ತಿಶಾಲಿ ಥರ್ವೇ-ನ್ಯೂಕ್ಲಿಯರ್ ಬಾಂಬ್​ಗಳು ಸಾಕಾಗುತ್ತಿದ್ದವು.

ಸಂಪನ್ಮೂಲಗಳ ಕೊರತೆ: 1998ರ ಪರಮಾಣು ಪರೀಕ್ಷೆಯ ನಂತರ ಭಾರತದ ಮೇಲೆ ಹೇರಲಾಗಿದ್ದ ಜಾಗತಿಕ ನಿರ್ಬಂಧಗಳಿಂದಾಗಿ ಪರಮಾಣು ಇಂಧನದ ಕೊರತೆಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net