ಆಂತರ್ಯದ ಶಕ್ತಿ ಹೆಚ್ಚಿಸಿ ಪ್ಯಾನಿಕ್ ಅಟ್ಯಾಕ್​ನಿಂದ ಪಾರಾಗಿ

panic attacks
panic attacks
Published on

ಯಾವ ಕಾರಣಕ್ಕೆ ಪ್ಯಾನಿಕ್ ಅಟ್ಯಾಕ್ ಆಗುತ್ತಿದೆ, ಮನದೊಳಗೆ ಹುದುಗಿರುವ ಭಯಕ್ಕೆ ಕಾರಣವೇನು, ನಿಜವಾದ ಭಯವೇನು ಇಂತಹ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದೆ, ಅನೇಕರು ಈ ಸಮಸ್ಯೆಯಿಂದ ನರಳುತ್ತಿದ್ದಾರೆ. ‘ನಾನು ನನ್ನೊಳಗೆ ಏನಾಗುತ್ತಿದೆ ಅಂತ ಇದುವರೆಗೆ ಯಾರಿಗೂ ಹೇಳಿಲ್ಲ. ನಿಮ್ಮೊಡನೆ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಒಬ್ಬ ಹುಡುಗ ಹೇಳಿದರೆ, ಮತ್ತೊಬ್ಬ ಯುವತಿ, ‘ಏನಾಗುತ್ತಿದೆ ಎಂದು ಬರೆದು ಕಳುಹಿಸುವೆ’ ಎಂದಿದ್ದಾಳೆ. ಆದರೆ, ಇನ್ನೂ ಬರೆಯುವ ಹಂತಕ್ಕೆ ಹೋಗುತ್ತಿಲ್ಲ.

ಏನಿದು ಪ್ಯಾನಿಕ್ ಅಟ್ಯಾಕ್?: ಅದು ತಮ್ಮ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವ ಒಂದು ಮನೋಭಾವ. ‘ಏನೋ ಅಪಾಯ ಇದೆ’ ಎಂದು ಊಹಿಸಿಕೊಂಡು, ಆ ಲಕ್ಷಣಗಳನ್ನು ದೇಹದಲ್ಲಿ ಹುಡುಕುವುದು. ವಾಸ್ತವವಾಗಿ ಅಪಾಯವಿಲ್ಲದಿದ್ದರೂ, ಆಗಾಗ ಅನಾಹುತವನ್ನು ನೆನಪಿಸಿಕೊಂಡು ಪ್ಯಾನಿಕ್ ಅಟ್ಯಾಕ್​ಗೆ ಒಳಗಾಗುತ್ತಾರೆ.

‘ನಾನು ನನ್ನತನವನ್ನು ಕಳೆದುಕೊಂಡು ಬಿಡುತ್ತೇನೆ’, ‘ನನ್ನ ಪ್ರಾಣಕ್ಕೆ ಸಂಚಕಾರ ಬರಬಹುದು’, ‘ತೀವ್ರಮಟ್ಟದ ಅಪಾಯಕ್ಕೆ ನಾನು ಒಳಗಾಗಬಹುದು’, ‘ಯಾರೋ ನನ್ನನ್ನು ನಿಯಂತ್ರಿಸುತ್ತಾರೆ. ‘ನನಗೆ ನನ್ನ ಮೇಲೆ ನಿಯಂತ್ರಣವೇ ಇಲ್ಲದಂತೆ ಮಾಡಿಬಿಡುತ್ತಾರೆ Connor, ‘ನನಗೆ ಸೇರಿದ್ದನ್ನು ಯಾರೋ ತೆಗೆದುಕೊಂಡು ಹೋಗಿಬಿಡುತ್ತಾರೆ’. ‘ಯಾರೋ ನನ್ನ ಮೇಲೆ ದೈಹಿಕ ಹಲ್ಲೆ/ಅತ್ಯಾಚಾರ ಮಾಡಿಬಿಡುವರು’. ಇಂತಹ ಯಾವುದೇ ಆಲೋಚನೆಗಳು ಒಂದೊಂದಾಗಿ ಅಥವಾ ಒಟ್ಟುಗೂಡಿ ನಮ್ಮ ಮನಸ್ಸನ್ನು ಆಕ್ರಮಿಸಿದಾಗ ಕತ್ತಲೆ ಕವಿದಂತಾಗುತ್ತದೆ. ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ದೇಹ ಅದಕ್ಕೆ ಪ್ರತಿಕ್ರಿಯಿಸಿ, ಕೆಲವು ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ತಲೆ ತಿರುಗುವುದು, ಮೈ ನಡುಗುವುದು, ಬೆವರುವುದು, ಉಸಿರಾಡಲು ಆಗದಿರುವುದು, ಮೈಯೆಲ್ಲ ಬಿಸಿಯಾಗುವುದು, ಎದೆನೋವು, ಹೊಟ್ಟೆ ಹಿಡಿದುಕೊಂಡಂತೆ ಭಾಸವಾಗುವುದು, ಒಳಗೆ ಏನೋ ಸಂಕಟ ಇಂತಹ ಲಕ್ಷಣಗಳು ಒಮ್ಮೆ ಕಾಣಿಸಿಕೊಂಡಾಗ, ಇದು ಪ್ಯಾನಿಕ್ ಅಟ್ಯಾಕ್ ಆಗುವ ಹಂತ ಎಂದು ಅವರು ಭಾವಿಸುತ್ತಾರೆ. ಒಂದು ಲಕ್ಷಣ ಕಾಣಿಸಿಕೊಂಡ ಕೂಡಲೇ, ಉಳಿದ ಲಕ್ಷಣಗಳು ಪ್ರಾರಂಭವಾಗುತ್ತವೆ ಎಂದು ತಮ್ಮ ದೇಹದ ಸ್ವಭಾವವನ್ನೇ ಗಮನಿಸಲು ಪ್ರಾರಂಭಿಸುತ್ತಾರೆ. ಅವರ ಮನಸ್ಸಿನೊಳಗೆ ಬರುವ ಈ ಭಾವನೆ ಉಳಿದ ಲಕ್ಷಣಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ. ಹೀಗಾಗುತ್ತದೆ ಅಂದುಕೊಂಡು ಹಾಗೆಯೇ ಆದಾಗ ತಮ್ಮ ಭಯ ಸರಿ ಎಂದು ಭಾವಿಸಿ ಅವರು ನಡುಗಲು ಪ್ರಾರಂಭಿಸುತ್ತಾರೆ.

ಎಲ್ಲಿಯೋ ಕೇಳಿದ್ದು, ಯಾರಿಗೋ ಆಗಿದ್ದು ತನಗೂ ಆಗಿಬಿಡಬಹುದು ಎನ್ನುವ ಆಲೋಚನೆ ಸಹ ಅಂತಹ ಭಯವನ್ನು ಸೃಷ್ಟಿಸಬಹುದು. ಈ ಭಯ ಹೇಗೆ ಪ್ರಚೋದನೆಗೊಳ್ಳುತ್ತದೆ ಎಂದು ಗುರುತಿಸಿದರೆ, ಅದನ್ನು ಹೊರಹಾಕಲು ಪ್ರಯತ್ನಿಸಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಕೆಟ್ಟದು ಆಗಿಯೇ ಬಿಡುವುದು ಎಂದು ಗಟ್ಟಿಯಾಗಿ ಅವರು ನಂಬುತ್ತಾರೆ. ಒಂದಷ್ಟು ಹೊತ್ತು ಅದೇ ಗುಂಗಿನಲ್ಲಿ ಮುಳುಗಿಬಿಡುತ್ತಾರೆ. ಆ ಸಮಯದಲ್ಲಿ ಏನೂ ಮಾಡಬೇಕು ಎನಿಸುವುದಿಲ್ಲ. ಕೆಲಸವಿರಬಹುದು, ಆಹಾರ ಸೇವನೆಯಿರಬಹುದು. ಜನರೊಡನೆ ಮಾತನಾಡುವುದಿರಬಹುದು. ಏನೂ ಬೇಡ ಎನಿಸುತ್ತದೆ. ಇದು ತೀರಾ ಅಪರೂಪಕ್ಕೊಮ್ಮೆ ಆದರೆ, ಚಿಂತಿಸಬೇಕಿಲ್ಲ. ಆದರೆ ಆಗಾಗ ಆಗುತ್ತಿದ್ದರೆ, ಖಂಡಿತ ಅದಕ್ಕೆ ಪರಿಹಾರವನ್ನು ಹುಡುಕಿಕೊಳ್ಳಬೇಕು.

ಏನು ಮಾಡಬಾರದು?:

  • ದೇಹದಲ್ಲಿ ಏನೋ ಲಕ್ಷಣ ಕಾಣಿಸಿಕೊಂಡ ಕೂಡಲೇ, ಹಾಂ, ಈಗ ಇತರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ತಾನು ಪ್ಯಾನಿಕ್ ಅಟ್ಯಾಕ್​ಗೆ ಒಳಗಾಗಲಿದ್ದೇನೆ ಎಂದು ನಂಬಿಕೊಂಡು ದೇಹದಲ್ಲಿ ಇತರ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ನಿರೀಕ್ಷಿಸಲು ಪ್ರಾರಂಭಿಸುವುದು!

  • ‘ಅಯ್ಯೋ, ಪ್ಯಾನಿಕ್ ಅಟ್ಯಾಕ್ ಆಗಿಬಿಡುತ್ತದೆ. ನಾನು ಅಲ್ಲಿಗೆ ಬರಲ್ಲ/ಅವರ ಜೊತೆ ಹೋಗಲ್ಲ/ಆ ಕೆಲಸ ಮಾಡಲ್ಲ ಅಂತ ಪಲಾಯನವಾದಿ ಪರಿಹಾರದ ಮೊರೆ ಹೋಗುವುದು.

  • ತನಗೆ ಆಗಾಗ ಪ್ಯಾನಿಕ್ ಅಟ್ಯಾಕ್ ಆಗುತ್ತದೆ ಅಂತ ತಮಗೆ ತಾವೇ ಹೇಳಿಕೊಳ್ಳುತ್ತಿರುವುದು.

ಏನು ಮಾಡಬಹುದು?:

  • ಮೊದಲನೆಯದಾಗಿ, ಗಮನವನ್ನು ಹೊರಗೆ ಆಗುತ್ತಿರುವುದರತ್ತ ಹರಿಸುವುದು. 5-4-3-2-1 ಸೂತ್ರವನ್ನು ಅನುಸರಿಸಿ ಎನ್ನುತ್ತಾರೆ ಕೆಲವು ತಜ್ಞರು. ಅಂದರೆ, ನಿಮ್ಮೆದುರಿಗೆ ಇರುವ ಐದು ವಸ್ತುಗಳನ್ನು ನೋಡಿ, ನಾಲ್ಕು ಶಬ್ದಗಳನ್ನು ಕೇಳಿಸಿಕೊಳ್ಳಿ, ಮೂರು ವಸ್ತುಗಳನ್ನು ಸ್ಪರ್ಶಿಸಿ, ಎರಡು ವಾಸನೆಗಳನ್ನು ಗುರುತಿಸಿ, ಯಾವುದಾದರೂ ಒಂದು ರುಚಿಯನ್ನು ನೆನಪಿಸಿಕೊಳ್ಳಿ.

  • ಪ್ಯಾನಿಕ್ ಅಟ್ಯಾಕ್ ಆದಾಗ ಮನಸ್ಸು ಕತ್ತಲೆಯ ಗೂಡಿನಲ್ಲಿ ಕುಳಿತುಬಿಡುವುದರಿಂದ ದಿಕ್ಕೇ ತೋಚದಂತೆ ಆಗುತ್ತದೆ. ಹಾಗಾಗಿ, ಮನಸ್ಸಿಗೆ ಹೊಸ ಆಲೋಚನೆಗಳನ್ನು ಕೊಡುವುದು ಸಹಾಯಕಾರಿ. ಸಂಗೀತ ಕೇಳುವುದು, ಸುರಕ್ಷಿತ ಜಾಗದಲ್ಲಿ ಕೂರುವುದು, ಮುದ ನೀಡುವಂತಹ ವಸ್ತುಗಳನ್ನು ಮುಟ್ಟುವುದು ಒಳ್ಳೆಯದು.

  • ಪ್ಯಾನಿಕ್ ಅಟ್ಯಾಕ್ ಆದಾಗ ಉಸಿರಾಟ ಮತ್ತು心脏 ಬಡಿತಗಳ ವೇಗ ಹೆಚ್ಚಿರುತ್ತದೆ. ಅವೆರಡನ್ನೂ ಕಡಿಮೆ ಮಾಡಲು ಉಸಿರಾಟದ ಮೇಲೆ ನಿಯಂತ್ರಣವನ್ನು ಸಾಧಿಸುವುದು ಅಗತ್ಯ. ಅರ್ಧ ನಿಮಿಷ ಉಸಿರು ಬಿಗಿ ಹಿಡಿಯಿರಿ, ನಂತರ ಉಸಿರಾಡಿ. ಇದನ್ನು ಹಲವು ಸಲ ಮಾಡಿ. ಆ ಸಮಯದಲ್ಲಿ ಮನಸ್ಸಿಗೆ ‘ಈ ಪ್ಯಾನಿಕ್ ಅಟ್ಯಾಕ್ ಕೆಲವು ನಿಮಿಷಗಳ ನಂತರ ಹೊರಟು ಹೋಗುತ್ತದೆ’ ಎಂದು ಹೇಳಿಕೊಳ್ಳಿ. ಐದರಿಂದ ಹತ್ತು ನಿಮಿಷಗಳವರೆಗೆ ಈ ಕಸರತ್ತು ಮಾಡಿದರೆ, ಮನಸ್ಸು ಬೇಗನೆ ತಿಳಿಯಾಗುತ್ತದೆ.

  • ಯಾವುದೇ ಭಯದ ವಾತಾವರಣವನ್ನು ಎದುರಿಸಬೇಕಾದರೆ, ನಾವು ಆ ಭಯವನ್ನು ನೋಡುವ ರೀತಿ ಬದಲಾಗಬೇಕು. ಏನೋ ಆಗಿಬಿಡುವುದು ಎಂದು ಹೆದರಿ ನಡುಗುವ ಬದಲಿಗೆ, ಏನೆಲ್ಲ ಆಗಬಹುದು, ಅದಕ್ಕೆ ನಾನು ಏನೆಲ್ಲ ಉಪಾಯಗಳನ್ನು ಮಾಡಬಹುದು ಎಂದು ಗುರುತಿಸುವುದು ಅತ್ಯುತ್ತಮ ವಿಧಾನ. ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ಕ್ರಮೇಣ ಭಯದ ಪರಿಣಾಮ ಕಡಿಮೆಯಾಗುತ್ತ ಹೋಗುತ್ತದೆ. ಗೂಡಿನೊಳಗೇ ಕುಳಿತಿರುವ ಬದಲಿಗೆ ಎದ್ದು ಓಡಾಡುವುದು, ಬೇರೆಡೆ ಓಡಾಡುವುದು ಉತ್ತಮ.

  • ನಂಬಿಕಸ್ಥರೊಂದಿಗೆ ಭಾವನೆ ಹಂಚಿಕೊಳ್ಳುವುದು ಸಹ ಒಳ್ಳೆಯದು. ಕಾಳಿದಾಸ ಶಾಕುಂತಲದಲ್ಲಿ ಹೇಳುವ ಹಾಗೆ, ‘ಇಷ್ಟ ಜನ ಸಂವಿಭಕ್ತಂ ದುಃಖಂ ಸಹ್ಯಂ ಭವೇತ್’. ಪ್ಯಾನಿಕ್ ಅಟ್ಯಾಕ್ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ನಿಮ್ಮ ಒಳಶಕ್ತಿ ದೀರ್ಘಕಾಲ ಇರುತ್ತದೆ.

(ಲೇಖಕರು ಸಂತೃಪ್ತಿಯ ಮಾರ್ಗದರ್ಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net