ಇನ್ಮುಂದೆ ರೈಲು ಪ್ರಯಾಣ ದರ ಕೊಂಚ ಹೆಚ್ಚಳ! ಇಲ್ಲಿದೆ ನೋಡಿ ಪೂರ್ಣ ವಿವರ

ರೈಲು ದರ ಕೊಂಚ ಹೆಚ್ಚಳ
ರೈಲು ದರ ಕೊಂಚ ಹೆಚ್ಚಳ
Published on

ಪ್ರಮುಖ ಮುಖ್ಯಾಂಶಗಳು

  • 26ರಿಂದ ಪರಿಷ್ಕೃತ ದರ ಜಾರಿ
  • ಕೆಲವು ವರ್ಗದ ಟಿಕೆಟ್ ಮಾತ್ರ ತುಟ್ಟಿ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ರೈಲ್ವೆ ಪ್ರಯಾಣ ದರ ಪರಿಷ್ಕರಣೆಗೆ ಮುಂದಾಗಿದೆ. ಡಿ.26ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಹೊಸ ದರದಿಂದಾಗಿ ಇಲಾಖೆಗೆ ವಾರ್ಷಿಕ 600 ಕೋಟಿ ರೂ. ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆ.

ದೂರದ ಹಾಗೂ ಕೆಲವು ವರ್ಗಗಳ ಪ್ರಯಾಣ ದರದಲ್ಲಿ ಅಲ್ಪ ಹೆಚ್ಚಳ ಇರಲಿದ್ದು, ಸಬ್-ಅರ್ಬನ್ ಮತ್ತು ಕಡಿಮೆ ದೂರದ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚುತ್ತಿರುವ ಕಾರ್ಯಾಚರಣೆ ಖರ್ಚನ್ನು ಸರಿದೂಗಿಸುವ ಸಲುವಾಗಿ ಈ ಹೆಚ್ಚಳ ಮಾಡಲಾಗುತ್ತಿದ್ದು, ಬಹುತೇಕ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸೇವೆ ನೀಡುವುದನ್ನು ಗಮನದಲ್ಲಿ ಇರಿಸಿಕೊಂಡೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ನಾನ್-ಎ.ಸಿ. ಕೋಚ್​ನಲ್ಲಿ 500 ಕಿ.ಮೀ. ದೂರ ಪ್ರಯಾಣಿಸುವವರು 10 ರೂ. ಹೆಚ್ಚು ಪಾವತಿಸಬೇಕಾಗುತ್ತದೆೆ. ಸಾಮಾನ್ಯ ದರ್ಜೆಯಲ್ಲಿ 215 ಕಿ.ಮೀ. ವರೆಗೆ ದರ ಹೆಚ್ಚಳ ಅನ್ವಯಿಸುವುದಿಲ್ಲ.

600 ಕೋಟಿ ರೂ. ಹೆಚ್ಚುವರಿ ಆದಾಯ

ರೈಲ್ವೇ ಜಾಲ ವಿಸ್ತರಣೆ ಮತ್ತು ಸುರಕ್ಷತೆ ಅಭಿವೃದ್ಧಿ ಪ್ರಯತ್ನ ಗಳಿಂದಲೂ ಸಿಬ್ಬಂದಿ ಸಂಖ್ಯೆ ಏರಿದ್ದು, ಖರ್ಚು ಹೆಚ್ಚಾಗಿದೆ. ಇಲಾಖೆಯಲ್ಲಿ ಮಾನವಶಕ್ತಿಗೆ ಭರಿಸುವ ಖರ್ಚು 1.15 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಪಿಂಚಣಿ ವೆಚ್ಚ 60 ಸಾವಿರ ಕೋಟಿ ರೂ. ಆಗಿದೆ. 2024-25ರ ವರ್ಷದಲ್ಲಿ ಒಟ್ಟು ಕಾರ್ಯಾಚರಣೆ ವೆಚ್ಚ 2.63 ಲಕ್ಷ ಕೋಟಿ ರೂ.ಗೆ ತಲುಪಿದೆ. ಪರಿಷ್ಕೃತ ದರದಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಗೆ 600 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಹೀಗಿರಲಿದೆ ದರ ಹೆಚ್ಚಳ

  • ಸಾಮಾನ್ಯ ದರ್ಜೆ: ಈ ದರ್ಜೆಯಲ್ಲಿ 215 ಕಿ.ಮೀ.ಗೂ ಹೆಚ್ಚಿನ ದೂರದ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 1 ಪೈಸೆಯಂತೆ ದರ ಹೆಚ್ಚಾಗಲಿದೆ. 215 ಕಿ.ಮೀ. ಒಳಗಿನ ಪ್ರಯಾಣಕ್ಕೆ ದರ ಹೆಚ್ಚಳ ಅನ್ವಯಿಸುವುದಿಲ್ಲ.
  • ಮೇಲ್, ನಾನ್-ಎ.ಸಿ.: ಮೇಲ್ ಹಾಗೂ ಹವಾನಿಯಂತ್ರಿತವಲ್ಲದ ಎಕ್ಸ್​ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆಯಂತೆ ಹೆಚ್ಚಾಗಲಿದೆ.
  • ಎ.ಸಿ. ಎಕ್ಸ್​ಪ್ರೆಸ್: ಹವಾ ನಿಯಂತ್ರಿತ ಎಕ್ಸ್​ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆಯಂತೆ ಪ್ರಯಾಣ ದರ ಹೆಚ್ಚಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net