ವೋಟ್​ ಚೋರಿ; ಸೋತ ಚುನಾವಣೆಗಳ ಬಗ್ಗೆ ಮಾತ್ರ ಆರೋಪಿಸುವುದು ಸರಿಯಲ್ಲ ಎಂದ ಮಾಜಿ ಕಾಂಗ್ರೆಸ್ಸಿಗ | Ashwani Kumar

ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್
ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್
Published on
ದೆಹಲಿ: ಕಾಂಗ್ರೆಸ್ ಪಕ್ಷವನ್ನು ಪಕ್ಕಕ್ಕಿಟ್ಟು ಪರಿಣಾಮಕಾರಿ ವಿರೋಧ ಪಕ್ಷ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಆದರೆ ಪಕ್ಷ ಎಲ್ಲೋ ನೆಲೆಯನ್ನು ಕಳೆದುಕೊಂಡಿದೆ ಎಂದು ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್ ಹೇಳಿದ್ದಾರೆ.
ತಮ್ಮ ಗಾರ್ಡಿಯನ್ಸ್ ಆಫ್ ದಿ ರಿಪಬ್ಲಿಕ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕುಮಾರ್, ನಿಮಗೆ ಮನಸ್ಸಿನ ಸಂಕುಚಿತತೆ ಅಗತ್ಯವಿಲ್ಲ, ಬದಲಾಗಿ ಚೈತನ್ಯದ ವಿಶಾಲತೆ, ಹೃದಯದ ಉದಾರತೆ ಬೇಕು. ಅದು ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್​ರಲ್ಲಿತ್ತು ಎಂದರು.
ಯಾವುದೇ ಸರ್ಕಾರ ಎಲ್ಲವನ್ನೂ ತಪ್ಪಾಗಿ ಮಾಡುತ್ತದೆ, ಈ ಪ್ರಧಾನಿ ಎಲ್ಲವನ್ನೂ ತಪ್ಪಾಗಿ ಮಾಡುತ್ತಾರೆ ಎಂಬ ಭಾವನೆಯೂ ಸರಿಯಲ್ಲ ಎಂದಿರುವ ಅಶ್ವನಿ ಕುಮಾರ್, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದೃಷ್ಟಿಕೋನದ ಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವವಿದೆ. ಅದರ ಪ್ರಸ್ತುತ ನಾಯಕರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ನಾನು ಪಕ್ಷವನ್ನು ತೊರೆದಿರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ನಾಗರಿಕತೆ ಮತ್ತು ಸಭ್ಯತೆಯನ್ನು ತಪ್ಪದೆ ಕಾಪಾಡಿಕೊಂಡಿದ್ದಕ್ಕಾಗಿ ಸೋನಿಯಾ ಗಾಂಧಿಯವರ ಬಗ್ಗೆ ನನಗೆ ಅತ್ಯುನ್ನತ ವೈಯಕ್ತಿಕ ಗೌರವವಿದೆ ಎಂದರು.
ಸೋನಿಯಾ ಗಾಂಧಿ ಅವರೊಂದಿಗಿನ ನನ್ನ ದೀರ್ಘ, ವೈಯಕ್ತಿಕ ಒಡನಾಟದಲ್ಲಿ ನಾನು ಕಂಡಿದ್ದೆಂದರೆ ಅವರಲ್ಲಿ ದುರಹಂಕಾರವಿಲ್ಲ, ಬಲವಾದ ದೃಷ್ಟಿಕೋನಗಳಿವೆ. ಅವರು ಸಾರ್ವಜನಿಕ ಜೀವನದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಪ್ರಧಾನಿಯನ್ನಾಗಿಸಲು ಅನೇಕ ಜನರಿದ್ದಾಗಲೂ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಅವರ ನಾಗರಿಕತೆ ಮತ್ತು ಘನತೆಗಾಗಿ ಆಯ್ಕೆ ಮಾಡಿದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು. ಉದಾಹರಣೆಗೆ, ರಾಹುಲ್ ಗಾಂಧಿ ಅವರ ಹೃದಯ ಸರಿಯಾದ ಸ್ಥಳದಲ್ಲಿದೆ. ಅವರು ಆದರ್ಶವಾದಿ, ಬಡವರ ಪರವಾಗಿ ಮಾತನಾಡುತ್ತಾರೆ ನನಗೆ ಅದು ಇಷ್ಟ. ಆದರೆ ಎಲ್ಲೋ, ಕಾಂಗ್ರೆಸ್‌ನ ಸಂದೇಶ ತಪ್ಪಾಗಿದೆ. ಆ ವಿಷಯವಾಗಿ ನಾನು ಇದಕ್ಕಿಂತ ಹೆಚ್ಚಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಪಕ್ಷಗಳ ಮತ ಕಳ್ಳತನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, ಇದು ಗಂಭೀರ ವಿಷಯವಾಗಿದ್ದು, ಇವಿಎಂಗಳನ್ನು ಬಳಸಿ ನಡೆಸಿದ ಚುನಾವಣೆಗಳ ಫಲಿತಾಂಶಗಳ ಆಧಾರದ ಮೇಲೆ ಸರ್ಕಾರಗಳನ್ನು ರಚಿಸಿದಾಗ, ಆರೋಪವು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದರು. ವಿರೋಧ ಪಕ್ಷಗಳ ಒಕ್ಕೂಟ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ದಿನನಿತ್ಯ ಒತ್ತಿ ಹೇಳುತ್ತಿದೆ, ಇವಿಎಂಗಳನ್ನು ದುರುಪಯೋಗಪಡಿಸಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಬಹುದೇ ಎನ್ನುವುದು ನನಗೆ ತಿಳಿದಿಲ್ಲ, ಆದರೆ ಪ್ರತಿಪಕ್ಷಗಳು ಏನನ್ನಾದರೂ ಹೇಳುತ್ತಿದ್ದರೆ, ಅದನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಕುಮಾರ್​, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಫಲಿತಾಂಶವನ್ನು ಉಲ್ಲೇಖಿಸಿ, ಯಾರೇ ಆಗಲಿ ಅನುಕೂಲಕರ ತೀರ್ಪನ್ನು ಸ್ವೀಕರಿಸಿ ಸರ್ಕಾರ ರಚಿಸಲು ಆಯ್ಕೆ ಮಾಡಿ, ತಾನು ಸೋತ ಚುನಾವಣೆಗಳನ್ನು ಮಾತ್ರ ಪ್ರಶ್ನಿಸಿದಾಗ ಅದು ತನ್ನ ನೈತಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದರು. ಗಾರ್ಡಿಯನ್ಸ್ ಆಫ್ ದಿ ರಿಪಬ್ಲಿಕ್ ಪುಸ್ತಕವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಲೋಕೂರ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಸರನ್ ಬಿಡುಗಡೆ ಮಾಡಿದರು. ದಿ.ಮನಮೋಹನ್ ಸಿಂಗ್ ಪತ್ನಿ ಗುರುಶರಣ್ ಕೌರ್, ಮಾಜಿ ಉಪರಾಷ್ಟ್ರಪತಿ ಎಂ. ಹಮೀದ್ ಅನ್ಸಾರಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕೂಡ ಉಪಸ್ಥಿತರಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net