SIR Workload | ಎಸ್​ಐಆರ್​ಗೆ ಮತ್ತೊಂದು ಬಲಿ...? ಗುಜರಾತ್​ ಮೂಲದ ಬಿಎಲ್​ಒ ಸಾವಿಗೆ ಶರಣು!

SIR Workload |  ಅರವಿಂದ್ ವಧೇರ್ ಮೃತ ದುರ್ದೈವಿ
SIR Workload | ಅರವಿಂದ್ ವಧೇರ್ ಮೃತ ದುರ್ದೈವಿ
Published on
ಗಾಂಧಿನಗರ: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ತೊಡಗಿರುವ ಅಧಿಕಾರಿಗಳ ನೋವಿನ ನಡುವೆಯೇ, ಬೂತ್ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ ದೇಶದ ಅನೇಕ ಕಡೆಗಳಲ್ಲಿ ಒಂಬತ್ತು ಬಿಎಲ್‌ಒಗಳು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ನಾಲ್ವರು ಎಸ್‌ಐಆರ್ ಪ್ರಕ್ರಿಯೆಯ ಅತಿಯಾದ ಕೆಲಸದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ನಡೆದಿರುವ ಈ ಘಟನೆಯು ಬಿಎಲ್‌ಒಗಳ ಮೇಲೆ ಹೆಚ್ಚುತ್ತಿರುವ ಕೆಲಸದ ಒತ್ತಡದ ಬಗ್ಗೆ ಕಳವಳವನ್ನು ಪ್ರತಿಬಿಂಬಿಸುತ್ತದೆ.
40 ವರ್ಷದ ಶಿಕ್ಷಕ ಅರವಿಂದ್ ವಧೇರ್ ಮೃತ ದುರ್ದೈವಿ ಎನ್ನಲಾಗಿದ್ದು, ಕೊಡಿನಾರ್ ತಾಲ್ಲೂಕಿನ ಛಾರಾ ಗ್ರಾಮದಲ್ಲಿ ಬಿಎಲ್‌ಒ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿಯನ್ನು ಉಲ್ಲೇಖಿಸಿ ಬರೆದಿರುವ ಡೆತ್​ ನೋಟ್​​ನಲ್ಲಿ ಎಸ್‌ಐಆರ್ ಅಡಿಯಲ್ಲಿ ಕೆಲಸದ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಈ ಎಸ್‌ಐಆರ್ ಕೆಲಸವನ್ನು ನಾನು ಇನ್ನು ಮುಂದೆ ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ಕೆಲವು ದಿನಗಳಿಂದ ನಾನು ದಣಿದಿದ್ದೇನೆ ಮತ್ತು ಇದರಿಂದ ತೊಂದರೆಗೊಳಗಾಗಿದ್ದೇನೆ ಎಂದು ಅವರು ಬರೆದಿದ್ದಾರೆ. ಅಧಿಕೃತ ದಾಖಲೆಗಳನ್ನು ಹೊಂದಿರುವ ತಮ್ಮ ಬ್ಯಾಗ್ ಅನ್ನು ಶಾಲೆಗೆ ಸಲ್ಲಿಸಬೇಕೆಂದು ಸಹ ಅದರಲ್ಲಿ ಉಲ್ಲೇಖಿಸಿದ್ದಾರೆ.
ಅರವಿಂದ್ ವಧೇರ್​ರ ಈ ಸಾವು ಗುಜರಾತ್‌ನ ಶೈಕ್ಷಣಿಕ ಸಂಘಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಗುಜರಾತ್‌ನ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘವು ಆನ್‌ಲೈನ್ SIR ಪ್ರಕ್ರಿಯೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ ಮತ್ತು ಮುಂದಿನ ಕ್ರಮದ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ.

ಇದೇ ಮೊದಲಲ್ಲ.......

ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ, 50 ವರ್ಷದ ಬಿಎಲ್‌ಒ ರಮೇಶ್‌ಭಾಯ್ ಪರ್ಮಾರ್ ಹೃದಯಾಘಾತದಿಂದ ನಿಧನರಾಗಿದ್ದು, ಎಸ್‌ಐಆರ್ ಕೆಲಸದ ಅತಿಯಾದ ಒತ್ತಡ ಕಾರಣವೇ ಹೀಗಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿಯ ಮಹಿಳಾ ಬಿಎಲ್‌ಒ ಒಬ್ಬರು ಕೆಲಸದ ಹೊರೆ ಅಸಹನೀಯವಾಗಿದೆ ಎಂಬ ಹೇಳಿಕೆ ನೀಡಿದ್ದು, ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಕೆ, ತಮ್ಮ ನಾಲ್ಕು ವರ್ಷದ ಮಗಳು ಸೇರಿದಂತೆ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡಲಾಗದೆ, ಗಣತಿ ನಮೂನೆಗಳನ್ನು ಸಂಗ್ರಹಿಸುವುದರಲ್ಲಿಯೇ ಇಡೀ ದಿನಗಳನ್ನು ಕಳೆಯುವಂತಾಗಿದೆ ಎಂದರು. ಈ ಪ್ರಕ್ರಿಯೆಯ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ ಮತ್ತು ಭಯಭೀತರಾಗಿದ್ದಾರೆ, ಆದ್ದರಿಂದ ನಾವು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜಸ್ಥಾನದಲ್ಲೂ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗಿದ್ದು. ಸವಾಯಿ ಮಾಧೋಪುರ ಜಿಲ್ಲೆಯ ಹರಿಯೋಮ್ ಬೈರ್ವಾ ಎಂಬ ಬಿಎಲ್‌ಒ ಬುಧವಾರ ಹೃದಯಾಘಾತದಿಂದ ನಿಧನರಾಗಿರುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಅಧಿಕಾರಿಗಳು ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದು, ಕೆಲವು ದಿನಗಳ ಹಿಂದೆ, ಜೈಪುರದಲ್ಲಿ, ಸರ್ಕಾರಿ ಶಾಲಾ ಶಿಕ್ಷಕ ಮತ್ತು ಬಿಎಲ್‌ಒ ಮುಖೇಶ್ ಜಂಗಿದ್ (45) ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಡುವನ್ನು ಪೂರೈಸಲು ಬೂತ್​ ಮಟ್ಟದ ಅಧಿಕಾರಿಗಳು ತುಂಬಾ ಒತ್ತಡದಲ್ಲಿ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಕೇರಳದ ಬಿಎಲ್‌ಒ ಅನೀಶ್ ಜಾರ್ಜ್ (44), ಕಣ್ಣೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿ, ಬಿಎಲ್‌ಒ ಆಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಡರಾತ್ರಿ ಎಸ್‌ಐಆರ್ ಕೆಲಸಗಳನ್ನು ಮುಗಿಸಲು ಒತ್ತಡ ಹೇರಿದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net