ಅಧ್ಯಯನಹೀನತೆ ಅಭಿಪ್ರಾಯಗಳನ್ನು ನಿರ್ವಿುಸಲಾರದು

ignorance
ignorance
Published on
ಅನಾಸಕ್ತನಲ್ಲಿ ಉಂಟಾಗುವ ಪೂರ್ಣ ಆತ್ಮಾರ್ಪಣಭಾವ ಮುಂದೆ ಉಕ್ತವಾಗುವ ಕಥೆಯಲ್ಲಿ ನಿದರ್ಶಿತವಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಪಂಚಪಾಂಡವರು ಮಹಾಯಜ್ಞವೊಂದನ್ನು ನಿರ್ವಹಿಸಿ ಬಡಬಗ್ಗರಿಗೆ ಅಪಾರವಾದ ದಾನವನ್ನು ಮಾಡಿದರು. ಆ ದಾನದ ಬಾಹುಳ್ಯವನ್ನೂ ಸಮೃದ್ಧಿಯನ್ನೂ ನೋಡಿ ಜನರು ಬೆರಗಾಗಿ ಅಂತಹ ಯಜ್ಞವನ್ನು ಹಿಂದೆ ಯಾರೂ, ಎಂದೂ ನೋಡಿರಲಿಲ್ಲವೆಂದು ಮಾತನಾಡಿಕೊಂಡರು. ಆ ಸಮಯದಲ್ಲಿ ಸಣ್ಣ ಮುಂಗುಸಿಯೊಂದು ಅಲ್ಲಿಗೆ ಬಂತು. ಅದರ ಶರೀರದ ಅರ್ಧಭಾಗ ಸುವರ್ಣಮಯವಾಗಿ ಉಳಿದರ್ಧ ಕಂದುಬಣ್ಣವಾಗಿದ್ದಿತು. ಅದು ಯಜ್ಞಶಾಲೆಯನ್ನು ಹೊಕ್ಕು ಅಲ್ಲಿಯೇ ನೆಲದ ಮೇಲೆ ಹೊರಳಾಡುವುದಕ್ಕೆ ಆರಂಭಿಸಿತು. ತರುವಾಯ ಎದ್ದು ಸುತ್ತಮುತ್ತ ಇದ್ದವರನ್ನು ನೋಡಿ, ‘ನೀವೆಲ್ಲರೂ ಸುಳ್ಳರು! ಇದೆಂತಹ ಯಜ್ಞ! ಬಾಯಲ್ಲಿ ಹೇಳುವುದಕ್ಕೆ ಕೂಡ ಯೋಗ್ಯವಲ್ಲದ ಯಜ್ಞ!’ ಎಂದು ನುಡಿಯಿತು. ಅಲ್ಲಿದ್ದವರು, ‘ಏನು! ಬಡವರಿಗೆ ಕನಕಾಭಿಷೇಕ ಆಗಿರುವುದೂ, ಅದರಿಂದ ದೇಶದಲ್ಲಿ ಪ್ರತಿಯೊಬ್ಬನೂ ಧನವಂತನಾಗಿ ಸುಖಜೀವನವನ್ನು ನಡೆಸುತ್ತಿರುವುದೂ ನಿನಗೆ ತಿಳಿಯದೆ? ಇದು ಯಥಾರ್ಥವಾಗಿಯೂ ಮನುಷ್ಯರು ನಡೆಸಿರುವ ಅತ್ಯಂತ ಆಶ್ಚರ್ಯಕರ ಯಾಗ’ ಎಂದು ಪ್ರತ್ಯುತ್ತರವನ್ನಿತ್ತರು. ಆದರೆ ಮುಂಗುಸಿ ಈ ಪ್ರಕಾರ ನುಡಿಯಿತು- ‘ಒಂದಾನೊಂದು ಕಾಲದಲ್ಲಿ ಒಂದು ಗ್ರಾಮವಿತ್ತು. ಅದರಲ್ಲಿ ಬಡ ಬ್ರಾಹ್ಮಣನೊಬ್ಬ ತನ್ನ ಹೆಂಡತಿ, ಮಗ, ಸೊಸೆ ಜತೆ ವಾಸವಾಗಿದ್ದ. ಅಧ್ಯಾಪಕ ವೃತ್ತಿಯಿಂದ, ಎಲ್ಲಿಯೋ ಅಲ್ಪಸ್ವಲ್ಪ ದೊರೆವ ದಾನಗಳಿಂದ ಜೀವನ ನಡೆಸುತ್ತಿದ್ದ. ಹೀಗಿರುವಲ್ಲಿ ಮೂರು ವರ್ಷದ ಕ್ಷಾಮ ಸಂಭವಿಸಲು, ಆ ಬಡಬ್ರಾಹ್ಮಣನಿಗೂ ಆತನ ಸಂಸಾರಕ್ಕೂ ಎಂದೂ ಇಲ್ಲದ ಸಂಕಟ ಪ್ರಾಪ್ತವಾಯಿತು. ಕೊನೆಗೆ, ಅನೇಕ ದಿನಗಳು ಏಕಪ್ರಕಾರವಾಗಿ ಉಪವಾಸವಿರಬೇಕಾದ ದುಸ್ಥಿತಿ ಒದಗಿತು. ಆರನೆಯ ದಿನ ಮನೆಯ ಯಜಮಾನ ಎಲ್ಲಿಯೋ ಭಾಗ್ಯವಶಾತ್ ದೊರೆತ ಗೋಧಿ ಹಿಟ್ಟನ್ನು ಮನೆಗೆ ತಂದು, ಅದನ್ನು ಮನೆಯಲ್ಲಿರುವ ನಾಲ್ಕು ಮಂದಿಗೆ ಸಮನಾಗಿ ಹಂಚಿದ. ರೊಟ್ಟಿ ಮಾಡಿ ಅದನ್ನು ತಿನ್ನುವ ಸಮಯಕ್ಕೆ ಸರಿಯಾಗಿ ಮನೆಯ ಬಾಗಿಲನ್ನು ಯಾರೋ ತಟ್ಟುವ ಸದ್ದು ಕೇಳಿಸಿತು. ಯಜಮಾನ ಬಾಗಿಲು ತೆರೆದು ನೋಡಿದಾಗ ಅತಿಥಿಯೊಬ್ಬ ನಿಂತಿದ್ದ. ನಿಮಗೆ ತಿಳಿದಂತೆ ಭಾರತವರ್ಷದಲ್ಲಿ ಅತಿಥಿ ಪವಿತ್ರಪುರುಷ. ತತ್ಕಾಲಕ್ಕೆ ಅವನು ದೇವರಂತೆ. ಆದುದರಿಂದ ಆ ಬ್ರಾಹ್ಮಣ ‘ಸ್ವಾಮಿ, ಒಳಗೆ ದಯಮಾಡಿಸಿ’ ಎಂದು ನುಡಿದು ತನ್ನ ಪಾಲಿಗೆ ಬಂದಿದ್ದ ಆಹಾರವನ್ನು ಆತನ ಮುಂದಿಟ್ಟ. ಅತಿಥಿ ಅದನ್ನು ಬೇಗನೆ ತಿಂದು ‘ಹೇ ಭಗವನ್, 10 ದಿವಸಗಳಿಂದ ಉಪವಾಸವಿದ್ದೇನೆ. ಈಗ ತಾವು ಕೊಟ್ಟ ಅಲ್ಪಾಹಾರ ನನ್ನ ಹಸಿವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದ. ಆಗ ಬ್ರಾಹ್ಮಣನ ಹೆಂಡತಿ, ‘ನನ್ನ ಭಾಗವನ್ನೂ ಅವರಿಗೆ ಕೊಡಿ’ ಎಂದಳು. ಆದರೆ ಗಂಡ ಹಾಗಾಗಲಾರದೆಂದ. ಅದಕ್ಕೆ ಪತ್ನಿ, ‘ಇಲ್ಲಿಗೆ ಬಂದಿರುವವನು ಬಡವ, ಅಲ್ಲದೆ ಅತಿಥಿ; ನಾವಾದರೋ ಗೃಹಸ್ಥರು. ಆತನಿಗೆ ಊಟವಿಕ್ಕಿ ಉಪಚಾರ ಮಾಡುವುದು ನಮ್ಮ ಕರ್ತವ್ಯ. ಇನ್ನೂ ಹೆಚ್ಚಾಗಿ ಭೋಜನ ಒದಗಿಸುವುದಕ್ಕೆ ನಮ್ಮಲ್ಲಿಲ್ಲ; ನಾನು ತಮ್ಮ ಧರ್ಮಪತ್ನಿಯಾಗಿ ನನ್ನ ಭಾಗವನ್ನು ಕೊಡುವುದು ನನ್ನ ಕರ್ತವ್ಯ’ ಎಂದು ಹೇಳಿ ತನ್ನ ಪಾಲನ್ನು ಅತಿಥಿಗೆ ಅರ್ಪಿಸಿದಳು. ಆತ ಅದನ್ನೂ ತಿಂದು ತನಗಿನ್ನೂ ಹಸಿವಿದೆ ಎಂದ. ಆಗ ಮಗ, ‘ನನ್ನ ಪಾಲನ್ನೂ ತೆಗೆದುಕೊಳ್ಳಿ ಸ್ವಾಮಿ! ತಂದೆಯ ಭಾರ ಇಳಿಸಲು ಸಹಾಯ ಮಾಡುವುದು ಮಗನ ಕರ್ತವ್ಯ’ ಎಂದ. ಅತಿಥಿ ಅದನ್ನೂ ತಿಂದ. ಆದರೂ ಆತನ ಹಸಿವು ಅಡಗಲಿಲ್ಲ. ಮಗನ ಹೆಂಡತಿಯೂ ಅತಿಥಿಗೆ ತನ್ನ ಭಾಗವರ್ನ°ಸಿದಳು. ಆಗ ಅವನಿಗೆ ತೃಪ್ತಿಯಾಗಿ, ಅವರನ್ನು ಹರಸಿ, ಹೊರಟು ಹೋದ. ಆ ರಾತ್ರಿಯೇ ಹಸಿವಿನಿಂದ ಆ ನಾಲ್ವರೂ ಸತ್ತು ಹೋದರು. ಅತಿಥಿ ಭೋಜನ ಮಾಡುವಾಗ ಹಿಟ್ಟಿನ ಕೆಲವು ಕಣಗಳು ನೆಲದ ಮೇಲೆ ಬಿದ್ದಿದ್ದವು. ನಾನು ಅವುಗಳ ಮೇಲೆ ಹೊರಳಲು ನನ್ನ ದೇಹದ ಅರ್ಧಭಾಗ ನೀವು ನೋಡುವಂತೆ ಸುವರ್ಣಮಯವಾಯಿತು! ಅಂದಿನಿಂದ ಅಂತಹ ಇನ್ನೊಂದು ಯಜ್ಞವನ್ನು ನೋಡಬೇಕೆಂಬ ಆಸೆಯಿಂದ ನಾನು ಇಡೀ ಜಗತ್ತಿನಲ್ಲಿ ಸುತ್ತುತ್ತಿದ್ದೇನೆ. ಆದರೆ ಎಲ್ಲಿಯೂ ಅದು ನನ್ನ ಕಣ್ಣಿಗೆ ಬೀಳಲಿಲ್ಲ. ಇನ್ನೆಲ್ಲಿಯೂ ನನ್ನ ದೇಹದ ಉಳಿದರ್ಧ ಭಾಗ ಚಿನ್ನವಾಗಲಿಲ್ಲ. ಆದುದರಿಂದಲೇ ಯಾಗವೆಂದು ಕರೆಸಿ ಕೊಳ್ಳುವುದಕ್ಕೆ ಕೂಡ ಇದು ಅರ್ಹತೆಯನ್ನು ಪಡೆದಿಲ್ಲ!’
ಧರ್ಮ ವಿಷಯದಲ್ಲಿ ಆ ಮಹಾಭಾವನೆ ಭಾರತ ವರ್ಷದಿಂದ ದೂರ ಹೋಗುತ್ತಿದೆ, ದಾನಶೀಲರಾದ ಮಹಾತ್ಮರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಅಲ್ಪಸ್ವಲ್ಪ ಉಳಿದಿರುವ ಈ ಧರ್ಮಭಾವನೆ ನಿಮಗೆ ಇನ್ನಾವ ದೇಶದಲ್ಲಿಯೂ ಸಿಗದು. ನಾನು ಮೊದಲು ಇಂಗ್ಲಿಷನ್ನು ಓದುತ್ತಿರುವಾಗ ಒಂದು ಕಥೆ ಪುಸ್ತಕ ಓದಿದ್ದೆ. ಅದರಲ್ಲೊಂದು ಕಥೆಯ ವಿಷಯವೇನೆಂದರೆ; ಕರ್ತವ್ಯಪರನಾದ ಹುಡುಗನೊಬ್ಬನು ಕೆಲಸ ಮಾಡಿ, ತಾನು ಸಂಪಾದಿಸಿದ ಕೂಲಿಯಲ್ಲಿ ಅಲ್ಪಭಾಗವನ್ನು ತನ್ನ ತಾಯಿಗೆ ಕೊಟ್ಟನಂತೆ. ಇದನ್ನು ಮಹಾ ಆತ್ಮಾರ್ಪಣ, ಪ್ರೀತಿ ಇವುಗಳಿಗೆ ದೃಷ್ಟಾಂತವಾಗಿ ಕಥೆಗಾರನು ನಾಲ್ಕು ಪುಟಗಳಲ್ಲಿ ಹೊಗಳಿದ್ದ. ಅದನ್ನು ನೋಡಿ ನಾನು ಸಂಪೂರ್ಣವಾಗಿ ಬೆರಗಾದೆ. ಇದೇನು? ಯಾವ ಹಿಂದೂ ಬಾಲಕನೂ ಈ ಕಥೆಯ ನೀತಿಯನ್ನು ತಿಳಿದುಕೊಳ್ಳಲಾರ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುಖವನ್ನು ತಾನು ನೋಡಿಕೊಳ್ಳಬೇಕು ಎಂಬ ಪಾಶ್ಚಾತ್ಯರ ವಾದವನ್ನು ಕೇಳಿದ ಮೇಲೆಯೇ ನನಗೆ ಈ ಕಥೆಯ ನೀತಿ ಅರ್ಥವಾದುದು. ಕೆಲವರು ಕೇವಲ ಸ್ವಾರ್ಥಿಗಳಾಗಿ, ತಮ್ಮ ಸಂಪಾದನೆಯನ್ನೆಲ್ಲ ತಂದೆ, ತಾಯಿ, ಹೆಂಡತಿ, ಮಕ್ಕಳಿಗೆ ಕೂಡ ಕೊಡದೆ, ತಾವೇ ಅನುಭವಿಸುತ್ತಾರೆ. ಇದು ಎಲ್ಲಿಯೂ ಯಾವಾಗಲೂ ಗೃಹಸ್ಥನ ಆದರ್ಶವಾಗಿರಕೂಡದು.
ಸ್ವಾಮಿ ವಿವೇಕಾನಂದರು ಪಾಶ್ಚಾತ್ಯಶಿಷ್ಯರ ಮುಂದೆ ವರ್ಣಿಸಿದ ಈ ಘಟನೆ ಭಾರತೀಯ ಹಾಗೂ ಪಾಶ್ಚಾತ್ಯದೃಷ್ಟಿಕೋನ, ಸಂಸ್ಕೃತಿ ಇವುಗಳ ಭಿನ್ನತೆಯನ್ನು ಎತ್ತಿಹಿಡಿಯುವುದಲ್ಲದೆ ಸಾಮಾಜಿಕ ಸ್ವಾಸ್ಥ್ಯ ಪ್ರಾಚೀನ ಭಾರತ ಅನುಸರಿಸಿದ ಉದಾತ್ತ ಮಾರ್ಗಗಳ ಮೇಲೆಲ್ಲ ಬೆಳಕು ಚೆಲ್ಲುತ್ತದೆ. ಅಸಹಾಯಕ ಸ್ಥಿತಿಯಲ್ಲಿರುವ ಮನುಷ್ಯನೊಬ್ಬನ ಸಹಾಯಕ್ಕೆ ಧಾವಿಸಿ ಆತನನ್ನು ಆ ಕಷ್ಟದಿಂದ ಪಾರು ಮಾಡಬೇಕಾದ ಬದ್ಧತೆಯನ್ನು ಗೃಹಸ್ಥನೊಬ್ಬನಿಗೆ ಸನಾತನ ಧರ್ಮ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದೆ. ನೂರು ಪಾಠಗಳನ್ನು ಈ ಘಟನೆ ಕಲಿಸುತ್ತದೆ. ನೂರು ದೃಷ್ಟಿಕೋನಗಳಿಂದ ಇದನ್ನು ನಾವು ನೋಡಿ ವಿಶ್ಲೇಷಿಸಬಹುದು. ನಿಸ್ವಾರ್ಥವನ್ನು ಯಾವ ಮಟ್ಟಕ್ಕೆ ಒಯ್ಯಬಹುದು ಎಂಬುದು ಈ ಘಟನೆಯಲ್ಲಿ ನಿಚ್ಚಳ. ಧರ್ಮ ಎನ್ನುವ ಶಬ್ದಕ್ಕೆ ವಿಶಾಲ ಅರ್ಥವನ್ನೇ ಸನಾತನ ಸಂಸ್ಕೃತಿ ಕೊಟ್ಟಿದೆಯಾದರೂ ಅಲ್ಲಲ್ಲಿ ಅದನ್ನು ಬಹು ಸಂಕ್ಷಿಪ್ತವಾಗಿಯೂ ವ್ಯಾಖ್ಯಾನ ಮಾಡಿದೆ. ಒಂದು ಕಡೆ ಸ್ವಾಮೀಜಿ ಅದನ್ನು ಪ್ಯೂರಿಟಿ ಬೋಲ್ಡ್​ನೆಸ್ ಅರ್ಥಾತ್ ಪಾವಿತ್ರ್ಯ ಮತ್ತು ನಿರ್ಭಯತೆ ಎಂದು ವಿಶ್ಲೇಷಿಸಿದರೆ ಮತ್ತೊಂದೆಡೆ ಪಾವಿತ್ರ್ಯ ಮತ್ತು ನಿಸ್ವಾರ್ಥತೆ ಎಂತಲೂ ವ್ಯಾಖ್ಯಾನಿಸುತ್ತಾರೆ. ಎಲ್ಲೆಲ್ಲೂ ಪಾವಿತ್ರ್ಯವಂತೂ ತನ್ನ ಸ್ಥಾನವನ್ನು ಪಡೆದುಕೊಂಡೇ ಇದೆ. ಮೇಲೆ ಕಾಣುವ ನಿಸ್ವಾರ್ಥ ಅಥವಾ ತ್ಯಾಗ, ಪ್ರಾಣವನ್ನೇ ಅರ್ಪಿಸುವ ಮಹಾತ್ಯಾಗವು ಮಾನವೀಯ ಮೌಲ್ಯಗಳಲ್ಲಿ ಅತ್ಯುನ್ನತಮಟ್ಟದ್ದು. ಮೌಲ್ಯಗಳಲ್ಲಿ ಅತ್ಯುನ್ನತವಾದದ್ದನ್ನು ಅಭ್ಯಸಿಸದೆ, ಅದು ಅವನ ಸ್ವಭಾವವೇ ಆಗಿದೆಯೇನೋ ಎನ್ನುವ ಮಟ್ಟಕ್ಕೆ ಅಭ್ಯಸಿಸದೆ ಮನುಷ್ಯನೊಬ್ಬ ಆಧ್ಯಾತ್ಮಿಕ ಕ್ಷೇತ್ರದಲ್ಲಾಗಲಿ, ಲೌಕಿಕ ಕ್ಷೇತ್ರದಲ್ಲಾಗಲಿ ಅತ್ಯುನ್ನತ ಸ್ಥಿತಿಯನ್ನು ಪಡೆಯಲಾರ. ತ್ಯಾಗೇನೈಕೇ ಅಮೃತತ್ವ ಮಾನಶುಃ ಎಂದು ಮಹಾನಾರಾಯಣೋಪನಿಷತ್ ಬುದ್ಧಪೂರ್ವ ಕಾಲಕ್ಕೇ ಘಂಟಾಘೊಷವಾಗಿ ಹೇಳಿದೆ. ಮೂರು ದಿನಗಳ ತನ್ನ ಭೋಗವಿಲಾಸಗಳಿಗಾಗಿ ಯಾವ ಪಾಪಕ್ಕೂ ಹೇಸದ ಮನುಷ್ಯವರ್ಗದ ಮುಂದೆ ಇಂಥ ಉದಾಹರಣೆಗಳು ದಿನನಿತ್ಯವೆಂಬಂತೆ ಮೊಳಗಬೇಕು. ಸಹಮಾನವರನ್ನು ನೂರು ರೀತಿಯಲ್ಲಿ ಮೋಸಗೊಳಿಸುವ, ಹಿಂಸಿಸುವ ರಾಕ್ಷಸರಿಗೆ ಅದೆಷ್ಟು ಮನೋಜ್ಞ ಪಾಠವನ್ನು ಮೇಲಿನ ಘಟನೆ ಕಲಿಸಬಹುದು. ಭಾರತೀಯ ಸಂಸ್ಕೃತಿಯುದ್ದಕ್ಕೂ ನಾವು ನೋಡುವುದು ಇಂತಹ ಮಹಾತ್ಮರನ್ನೇ ಎತ್ತಿಹಿಡಿದಿರುವುದನ್ನು! ಸಾಮಾಜಿಕ ನ್ಯಾಯ ಎಂಬ ಮಾತುಗಳನ್ನು ಘೊಷಣೆಗಳಿಗೆ ಸೀಮಿತಗೊಳಿಸಿರುವ ಜನ ಇದನ್ನು ಗಮನಿಸುವುದರಲ್ಲಿ ವಿಫಲರಾಗಿದ್ದಾರೆ. ಸನಾತನ ಧರ್ಮ ಎಂದರೆ ಕೇವಲ ಮನುಷ್ಯನ ವರ್ಗೀಕರಣ ಎಂದು ಬೊಬ್ಬಿಡುವ ರೋಗಗ್ರಸ್ತ ಮನಸ್ಸುಗಳು ಈ ಮತ್ತು ಇಂಥಾ ಸಾವಿರಾರು ಸಂದರ್ಭಗಳು ರಾಮಾಯಣ, ಮಹಾಭಾರತ ಮತ್ತು ಉಪನಿಷತ್ತುಗಳಲ್ಲಿ ಹಾಸುಹೊಕ್ಕಾಗಿರುವುದನ್ನು ಅತ್ಯಂತ ಅನುಕೂಲಕರವಾಗಿಯೇ ಮರೆತುಬಿಡುತ್ತಾರೆ. ಧೀರ ಎನ್ನುವ ಪದಕ್ಕೆ ಭಾರತೀಯ ಸಂಸ್ಕೃತಿ ದೇಶ ದೇಶಗಳನ್ನು ಗೆಲ್ಲಬಲ್ಲ ಸಾಮರ್ಥ್ಯವುಳ್ಳವನು ಎಂಬ ಸೀಮಿತ, ಅವೈಜ್ಞಾನಿಕ ಅರ್ಥವನ್ನು ಎಂದೂ ಕೊಡಲಿಲ್ಲ. ಇತಿಹಾಸಗಳನ್ನು ವಿಶ್ಲೇಷಿಸುವ ಅರೆಬರೆ ಬುದ್ಧಿಯುಳ್ಳ ಜನ ಇದನ್ನು ಗಮನಿಸಬೇಕು. ಚಕ್ರವರ್ತಿ ಸೀಜರ್ ಈಜಿಪ್ಟಿನ ಕ್ಲಿಯೋಪಾತ್ರಾಳ ಮುಂದೆ ದಾಸನಂತೆ ಬಗ್ಗಿನಿಲ್ಲುವ ಭಂಗಿ ಭಾರತೀಯ ಪ್ರಜ್ಞೆಯಲ್ಲಿ ಅವನನ್ನು ಸಾಮಾನ್ಯನ ಮಟ್ಟಕ್ಕೆ ಇಳಿಸುತ್ತದೆ. ನಚಿಕೇತ, ಕಚ, ರಾಮ, ಶಂಕರ, ರಾಮಕೃಷ್ಣ, ವಿವೇಕಾನಂದರು, ಬುದ್ಧ, ಮೇಲಿನ ಘಟನೆಯ ಬ್ರಾಹ್ಮಣ ಇತ್ಯಾದಿಗಳು ಶಾಶ್ವತಸತ್ಯಗಳ ಮುಂದೆ, ಲೋಕಹಿತದ ಮುಂದೆ ತಾತ್ಕಾಲಿಕ ಆಕರ್ಷಣೆಗಳು. ವೈಯಕ್ತಿಕ ಹಿತಗಳು ನಗಣ್ಯವಾಗುತ್ತವೆ ಎಂದು ನಿಜಾರ್ಥದಲ್ಲಿ ಧೀಶಕ್ತಿಯನ್ನು ಧೀಮಂತಿಕೆಯನ್ನು ಮೆರೆದು ಧೀರ ಎನ್ನುವ ಸ್ಥಾನಕ್ಕೆ ಸಂಪೂರ್ಣ ಅರ್ಹತೆ ಪಡೆದವರಾಗುತ್ತಾರೆ. ಯುರೋಸೆಂಟ್ರಿಕ್ ದೃಷ್ಟಿಕೋನ ಭಾರತೀಯ ಭವ್ಯತೆಯನ್ನು ಎಂದೂ ಅರ್ಥ ಮಾಡಿಕೊಳ್ಳಲಾರದು. ಅವರು ಬರೆದಿರುವ ಭಾರತೀಯ ಚರಿತ್ರೆ ಮೂರನೆಯ ದರ್ಜೆಯ ಚರಿತ್ರೆ ಪಕ್ಕಕ್ಕಿಡಬೇಕಾದ್ದು. ಭಾರತೀಯ ವಿದ್ಯಾವಂತರೇ ತಮ್ಮ ಚರಿತ್ರೆಯ ನಿರ್ವಪಕರಾಗಬೇಕು ಎಂದು ಸ್ವಾಮಿ ವಿವೇಕಾನಂದರೇ ಬಹು ಹಿಂದೆಯೇ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಮೇಲೆ ಪ್ರಸ್ತಾಪಿಸಿದ ಬಡ ಬ್ರಾಹ್ಮಣ ಮತ್ತು ಅವನ ಸಂಸಾರ ಗೃಹಸ್ಥ ಧರ್ಮವನ್ನು ಅಷ್ಟೇ ಏಕೆ ಮಾನವೀಯ ಮೌಲ್ಯಗಳ ಒಟ್ಟು ಸಾರವನ್ನು ಸಂಪೂರ್ಣವಾಗಿ, ಪ್ರಾಯೋಗಿಕವಾಗಿ ಅನುಷ್ಠಾನಿಸಿದ ಶ್ರೇಷ್ಠ ಉದಾಹರಣೆ, ಅವನೊಬ್ಬ ಮಹಾತ್ಮ; ಪ್ರಾತಃಸ್ಮರಣೀಯ. ಪರಿಮಾಣದಲ್ಲಿ ಕಿರಿದಾಗಿ ಕಂಡರೂ ಅರ್ಥದಲ್ಲಿ ತ್ಯಾಗದ ವ್ಯಾಪ್ತಿಯಲ್ಲಿ ಸಾರ್ವಕಾಲಿಕ ಉದಾಹರಣೆಯಾಗಬಲ್ಲ ಯಜ್ಞ ಅವನು ಮಾಡಿದ್ದು. ರಾಮಾಯಣದ ಅಳಿಲಿನಂತೆ; ನಮ್ಮ ಕಾರ್ಯಗಳ ಹಿಂದೆ ನಮ್ಮ ಭಾವನೆ ಮತ್ತು ನಿಸ್ವಾರ್ಥ, ಜೀವನವನ್ನೇ ತಪಸ್ಸನ್ನಾಗಿಸಬಲ್ಲದು. ಜೀವನವನ್ನು ತಪಸ್ಸನ್ನಾಗಿಸುವುದಕ್ಕೇ ಕರ್ಮಯೋಗ ನಿರ್ವಣವಾಗಿರುವುದು. ಪ್ರತಿಕ್ಷಣ, ಪ್ರತಿದಿನ ಅದು ಅನುಷ್ಠಾನ ಸಾಧ್ಯ. ಇಂತಹ ಎಷ್ಟೋ ಉದಾಹರಣೆಗಳು ಈ ರಾಷ್ಟ್ರದಲ್ಲಿ ಸಿಗುತ್ತವೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net