Amit Shah | ನೀವು ಒಳನುಸುಳುಕೋರರನ್ನು ರಕ್ಷಿಸಿದರೆ, ಬಿಹಾರದಂತೆ ನಿಮ್ಮನ್ನು ನಿರ್ನಾಮ ಮಾಡುತ್ತೇವೆ: ದೀದಿಗೆ ಅಮಿತ್​ ಷಾ ಎಚ್ಚರಿಕೆ

Amit Shah | ಕೇಂದ್ರ ಗೃಹ ಸಚಿವ ಅಮಿತ್​ ಷಾ
Amit Shah | ಕೇಂದ್ರ ಗೃಹ ಸಚಿವ ಅಮಿತ್​ ಷಾ
Published on
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಳನುಸುಳುವವರನ್ನು ಸಮರ್ಥಿಸಿಕೊಂಡರೆ, ಅವರ ಭವಿಷ್ಯ ಬಿಹಾರ ಚುನಾವಣೆಯಂತೆಯೇ ಆಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ(Amit Shah) ಬುಧವಾರ (ಡಿ.10) ಎಚ್ಚರಿಸಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಷಾ, ವಿಪಕ್ಷಗಳು ಒಳನುಸುಳುವವರ ವಿಷಯ ಪ್ರಸ್ತಾಪಿಸಿದ ತಕ್ಷಣ ಓಡಿಹೋಗುತ್ತಾರೆ ಎಂದು ಕಿಡಿಕಾರಿದ್ದಾರೆ. 
ಬಂಗಾಳವು ಬಾಂಗ್ಲಾದೊಂದಿಗೆ 1600 ಕಿಲೋಮೀಟರ್ ಗಡಿಯನ್ನು ಹೊಂದಿದ್ದು, ಹೆಚ್ಚಿನ ಒಳನುಸುಳುವಿಕೆ ಅಲ್ಲಿಂದ ಸಂಭವಿಸುತ್ತದೆ ಎಂದಿದ್ದಾರೆ. ಅಲ್ಲದೆ, ವಿಪಕ್ಷಗಳ ಮತ ಬ್ಯಾಂಕ್ ರಾಜಕೀಯದಿಂದಾಗಿ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ಕಣ್ಣು ಮುಚ್ಚಿಕೊಂಡಿವೆ ಎಂದು ಷಾ ಕಿಡಿಕಾರಿದ್ದಾರೆ. 
ಮುಂದುವರೆದು ಮಾತನಾಡಿದ ಷಾ, ನೀವು ಒಳನುಸುಳುಕೋರರ ಸಹಾಯದಿಂದ ಕೆಲವು ಚುನಾವಣೆಗಳನ್ನು ಗೆಲ್ಲಬಹುದು. ಆದರೆ ಹಾಗೆ ಮಾಡುವುದರಿಂದ, ನೀವು ನಮ್ಮ ದೇಶದ ಭದ್ರತೆಯನ್ನು ರಾಜಿ ಮಾಡಿಕೊಳ್ಳುತ್ತೀರಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಟಿಎಂಸಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಷಾ, ನೀವು ಒಳನುಸುಳುವವರ ಪರವಾಗಿ ಮಾತನಾಡಿದರೆ, ಬಿಹಾರದಂತೆ ನಿಮ್ಮನ್ನು ನಾಶಪಡಿಸಲಾಗುತ್ತದೆ ಎಂದು ಟಿಎಂಸಿ ಸದಸ್ಯರಿಗೆ ಹೇಳಲು ನಾನು ಬಯಸುತ್ತೇನೆ ಎಂದು ಟಿಎಂಸಿ ವಿರುದ್ದ ಟೀಕಾಪ್ರಹಾರ ನಡೆಸಿದ್ಧಾರೆ.
ಒಳನುಸುಳುವವರು ಅಲ್ಲಿ ಮತ ಚಲಾಯಿಸುವುದಿಲ್ಲ ಎಂದು ಬಿಹಾರದ ಜನರು ಸ್ಪಷ್ಟಪಡಿಸಿದ್ದಾರೆ. ಈಗ ಬಂಗಾಳದ ಜನರು ಅದನ್ನೇ ಮಾಡಲಿದ್ದಾರೆ. ನಾವು ಬಂಗಾಳದಲ್ಲಿಯೂ ಗೆಲ್ಲುತ್ತೇವೆ. ಮುಂಬರುವ ದಿನಗಳಲ್ಲಿ ನಮಗೆ ತಿಳಿಯುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಕಾರಣ

ಬಿಜೆಪಿ ನಿರಂತರವಾಗಿ ಚುನಾವಣೆಗಳಲ್ಲಿ ಗೆಲ್ಲಲು ಕಾರಣವೇನು ಎಂಬುದನ್ನು ವಿವರಿಸುತ್ತಾ ಗೃಹ ಸಚಿವರು, ನೀವು ತ್ರಿವಳಿ ತಲಾಖ್, ರಾಮ ಮಂದಿರ ಮತ್ತು ಒಳನುಸುಳುಕೋರರನ್ನು ವಿರೋಧಿಸಿದ್ದೀರಿ. ಆದ್ದರಿಂದ ನಾವು ಚುನಾವಣೆಗಳನ್ನು ಗೆದ್ದಿದ್ದೇವೆ. ಅಲ್ಲದೆ, ಸಾರ್ವಜನಿಕರು ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯೊಂದಿಗಿದ್ದಾರೆ. ಆದರೆ ವಿರೋಧ ಪಕ್ಷಗಳು ಓಲೈಕೆಯಲ್ಲಿ ತೊಡಗಿವೆ ಎಂದು ಅಮಿತ್​ ಷಾ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಿಂದಲೇ ವೋಟ್ ಚೋರಿ

1. ಸ್ವಾತಂತ್ರ್ಯಕ್ಕೂ ಸಿಗುವುದಕ್ಕೂ ಮುನ್ನ, ಸರ್ದಾರ್ ಪಟೇಲ್ ಅವರು ಜವಾಹರಲಾಲ್ ನೆಹರು ಅವರಿಗಿಂತ ಹೆಚ್ಚಿನ ಮತಗಳನ್ನು ಪಡೆದರು. ಆದರೆ ನೆಹರು ಪ್ರಧಾನಿಯಾದರು ಎಂದು ಷಾ ಆರೋಪಿಸಿದ್ದಾರೆ. 
2. ಇಂದಿರಾ ಗಾಂಧಿ ರಾಯ್ ಬರೇಲಿಯಿಂದ ಚುನಾವಣೆಯಲ್ಲಿ ಗೆದ್ದಾಗ ಮತ ಕಳ್ಳತನ ಮಾಡಿದರು ಮತ್ತು ಅಲಹಾಬಾದ್ ಹೈಕೋರ್ಟ್ ಚುನಾವಣೆಯನ್ನು ಅಕ್ರಮ ಎಂದು ತೀರ್ಪು ನೀಡಿತು. ಇದಾದ ಬಳಿಕ ಪ್ರಧಾನ ಮಂತ್ರಿಯಾದವರು ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೊಸ ಕಾನೂನು ರಚಿಸುವ ಮೂಲಕ ಇಂದಿರಾ ಸ್ವತಃ ವಿನಾಯಿತಿ ಪಡೆದರು ಎಂದು ಹೇಳಿದರು.  
3. ಮತ ಕಳ್ಳತನ ಮೂರನೇ ಉದಾಹರಣೆಯೆಂದರೆ ಅರ್ಹತೆ ಇಲ್ಲದವರೂ ಮತ ಚಲಾಯಿಸಬಹುದು ಎಂದು ಷಾ ಹೇಳಿದರು. ಸೋನಿಯಾ ಗಾಂಧಿ ದೇಶದ ನಾಗರಿಕರಾಗುವ ಮೊದಲೇ ಮತದಾರರಾಗಿದ್ದರು ಎಂದು ಇತ್ತೀಚಿನ ನ್ಯಾಯಾಲಯದಲ್ಲಿನ ಪ್ರಕರಣವನ್ನು ಉಲ್ಲೇಖಿಸಿದರು(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net