ರಸ್ತೆ ತಡೆದು ನಮಾಜ್ ಮಾಡಿದರೆ ಕಠಿಣ ಶಿಕ್ಷೆ! ಮಾತು ಕೇಳದಿದ್ದರೆ ಬೇರೆ ಮಾರ್ಗವಿದೆ ಎಂದ ಯುಪಿ ಸಿಎಂ! Yogi Adityanath

ರಸ್ತೆ ತಡೆದು ನಮಾಜ್ ಮಾಡಿದರೆ ಕಠಿಣ ಶಿಕ್ಷೆ! ಮಾತು ಕೇಳದಿದ್ದರೆ ಬೇರೆ ಮಾರ್ಗವಿದೆ ಎಂದ ಯುಪಿ ಸಿಎಂ!
ರಸ್ತೆ ತಡೆದು ನಮಾಜ್ ಮಾಡಿದರೆ ಕಠಿಣ ಶಿಕ್ಷೆ! ಮಾತು ಕೇಳದಿದ್ದರೆ ಬೇರೆ ಮಾರ್ಗವಿದೆ ಎಂದ ಯುಪಿ ಸಿಎಂ!
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಗಳಲ್ಲಿ ನಮಾಜ್ ಮಾಡುವವರ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಭೀಕರ ಎಚ್ಚರಿಕೆ
  • ಕಾನೂನು ಎಲ್ಲರಿಗೂ ಸಮಾನ, ತಪ್ಪಿದರೆ ಕಠಿಣ ಕ್ರಮದ ಮುನ್ಸೂಚನೆ ಎಂದ ಸಿಎಂ ಯೋಗಿ
  • ಮುಸ್ಲಿಂ ಸಮುದಾಯದವರು ದೇಶದ ಹಿತದೃಷ್ಟಿಯಿಂದ ಜನಸಂಖ್ಯೆ ನಿಯಂತ್ರಿಸುವುದು ಅನಿವಾರ್ಯ ಎಂದ ಯುಪಿ ಸಿಎಂ
ಲಖನೌ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಿಸ್ತಿನ ವಿಷಯದಲ್ಲಿ ತಮ್ಮದೇ ಆದ ಕಠಿಣ ಶೈಲಿಗೆ ಹೆಸರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಸೋಮವಾರ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯದವರು ಸಾರ್ವಜನಿಕ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಲ್ಲದೆ, ರಸ್ತೆಗಳು ಕೇವಲ ಸಾಮಾನ್ಯ ನಾಗರಿಕರ ಮತ್ತು ವ್ಯಾಪಾರಿಗಳ ಮುಕ್ತ ಸಂಚಾರಕ್ಕೆ ಇರುವ ಜಾಗವಾಗಿದ್ದು, ಅದನ್ನು ಬ್ಲಾಕ್ ಮಾಡಲು ಯಾರಿಗೂ ಅನುಮತಿ ಇಲ್ಲ ಎಂದು ಯೋಗಿ ಗುಡುಗಿದ್ದಾರೆ.
ಈ ಬಗ್ಗೆ ಲಖನೌದಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋವನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಕೊಡುವ ಯಾವುದೇ ಧಾರ್ಮಿಕ ಆಚರಣೆಗಳನ್ನು ಸರ್ಕಾರ ಸಹಿಸುವುದಿಲ್ಲ ಮತ್ತು ಮುಸ್ಲಿಂ ಸಮುದಾಯದವರು ತಮ್ಮ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಸ್ತೆಗಳು ಪ್ರದರ್ಶನ ನೀಡುವ ಜಾಗವಲ್ಲ! - ಯೋಗಿ ಆರ್ಭಟ!

ವೈರಲ್ ಆಗಿರುವ ವಿಡಿಯೋದಲ್ಲಿ ಅತ್ಯಂತ ಗಂಭೀರವಾಗಿ ಮಾತನಾಡಿರುವ ಸಿಎಂ ಯೋಗಿ, ಉತ್ತರ ಪ್ರದೇಶದಲ್ಲಿ ಜನರು ನಿಜವಾಗಿಯೂ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ನಿಲ್ಲಿಸಿದ್ದಾರೆಯೇ ಎಂದು ನನ್ನನ್ನು ಅನೇಕರು ಕೇಳುತ್ತಾರೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಯುಪಿಯಲ್ಲಿ ಈಗ ರಸ್ತೆಗಳ ಮೇಲೆ ನಮಾಜ್ ನಡೆಯುತ್ತಲೇ ಇಲ್ಲ, ನೀವೇ ಖುದ್ದಾಗಿ ಬಂದು ನೋಡಿ. ರಸ್ತೆಗಳು ಇರುವುದು ಜನರ ಸಂಚಾರಕ್ಕಾಗಿ. ಯಾರಾದರೂ ಬಂದು ಪ್ರಮುಖ ಚೌಕ ಅಥವಾ ರಸ್ತೆಗಳ ಮಧ್ಯೆ ನಿಂತು ತಮಾಷೆ ಮಾಡುತ್ತಾ ಟ್ರಾಫಿಕ್ ಜಾಮ್ ಮಾಡಲು ಸಾಧ್ಯವೇ ಎಂದಿದ್ದಾರೆ. ಅಲ್ಲದೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವ ಹಕ್ಕು ಯಾರಿಗಿದೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಯೋಗಿ, ಕೆಲವರು ನನ್ನ ಬಳಿ ಬಂದು, 'ನಮ್ಮ ಸಂಖ್ಯೆ ದೊಡ್ಡದಾಗಿದೆ, ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ಹೇಗೆ ಮಾಡುವುದು ಎಂದು ಕೇಳಿದರು. ಅದಕ್ಕೆ ನಾನು, ನಿಮಗಾಗಿ ಶಿಫ್ಟ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಉತ್ತರಿಸಿದೆ. ಒಂದು ವೇಳೆ ಮನೆಯಲ್ಲಿ ಅಥವಾ ಮಸೀದಿಯಲ್ಲಿ ಜಾಗ ಸಾಲದಿದ್ದರೆ, ಅದಕ್ಕೆ ತಕ್ಕಂತೆ ಸಮಯವನ್ನು ನಿರ್ವಹಿಸಿ. ಆದರೆ ಅನಗತ್ಯವಾಗಿ ರಸ್ತೆಗಳಲ್ಲಿ ಜನಸಂದಣಿಯನ್ನು ಹೆಚ್ಚಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಎಚ್ಚರಿಸಿದ್ದಾರೆ.

ಕಾನೂನು ಎಲ್ಲರಿಗೂ ಸಮಾನ: ತಪ್ಪಿದರೆ ಕಠಿಣ ಕ್ರಮದ ಮುನ್ಸೂಚನೆ!

ಸರ್ಕಾರದ ನಿಯಮ ಎಂದರೆ ಅದು ಕಾನೂನಿನ ನಿಯಮ ಎಂದು ಒತ್ತಿ ಹೇಳಿದ ಯೋಗಿ, ಸಾರ್ವಜನಿಕ ಮೂಲಸೌಕರ್ಯಗಳನ್ನು ವೈಯಕ್ತಿಕ ಅಥವಾ ಧಾರ್ಮಿಕ ಕಾರಣಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನಿಮಗೆ ನಮಾಜ್ ಮಾಡುವುದು ಮುಖ್ಯ ಎಂದಾದರೆ, ಅದನ್ನು ನಿಮ್ಮ ನಿಮ್ಮ ಶಿಫ್ಟ್‌ಗಳ ಅವಧಿಯಲ್ಲಿ ನಿಗದಿಪಡಿಸಿದ ಜಾಗದಲ್ಲಿ ಮಾಡಿ. ನಾವು ಯಾರ ಧಾರ್ಮಿಕ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ, ಆದರೆ ರಸ್ತೆಯ ಮೇಲಂತೂ ನಮಾಜ್ ಮಾಡಲು ಬಿಡುವುದಿಲ್ಲ. ಒಂದು ವೇಳೆ ನೇರವಾದ ಮಾತುಗಳಿಗೆ ಒಪ್ಪದಿದ್ದರೆ, ಸರ್ಕಾರ ಬೇರೆ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂದು ಯೋಗಿ ನೀಡಿರುವ ಎಚ್ಚರಿಕೆ ಈಗ ಯುಪಿ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಮೂಡಿಸಿದೆ.
ಉತ್ತರ ಪ್ರದೇಶದ ಸತತ ಎರಡನೇ ಬಾರಿಯ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಈ ಹಿಂದೆಯೂ ಇಂತಹ ಕಠಿಣ ನಿಲುವುಗಳನ್ನೇ ತಳೆದಿದ್ದರು. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಪರ ಪ್ರಚಾರ ನಡೆಸುವಾಗಲೂ ಅವರು ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ರಸ್ತೆಗಳಲ್ಲಿ ನಮಾಜ್ ಮಾಡಲು ಮುಕ್ತ ಅವಕಾಶ ನೀಡುತ್ತಿರುವ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಯೋಗಿ ತೀವ್ರ ವಾಗ್ದಾಳಿ ನಡೆಸಿದ್ದರು.

ವಿರೋಧ ಪಕ್ಷಗಳ ತೀವ್ರ ಆಕ್ರೋಶ ಮತ್ತು ಯೋಗಿ ಅಚಲ ನಿಲುವು!

ಯೋಗಿ ಆದಿತ್ಯನಾಥ್ ಅವರ ಈ ಬೇರೆ ಮಾರ್ಗದ ಎಚ್ಚರಿಕೆಯ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಯೋಗಿ ಆದಿತ್ಯನಾಥ್ ಅವರು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಹೆದರಿಸುವ ಮತ್ತು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ.
ಅದರೆ, ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಸಾರ್ವಜನಿಕ ರಸ್ತೆಗಳು ಮತ್ತು ಜನಸಾಮಾನ್ಯರ ನೆಮ್ಮದಿಗೆ ಭಂಗ ತರುವ ಯಾವುದೇ ಕೃತ್ಯಗಳು ಕಾನೂನುಬಾಹಿರವಾಗಿದ್ದು, ಸಾಮಾನ್ಯ ಜೀವನಕ್ಕೆ ಅಡ್ಡಿಪಡಿಸುವ ಇಂತಹ ಆಚರಣೆಗಳ ವಿರುದ್ಧ ಬುಲ್ಡೋಜರ್ ಸರ್ಕಾರದ ಶಿಸ್ತಿನ ಕ್ರಮ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net