ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಾಗಲ್ಲ ಅಂದ್ರೆ, ಡಿಸಿಎಂ ಹುದ್ದೆಯನ್ನೂ ರದ್ದು ಮಾಡಿ: ಉದ್ದವ್ ಠಾಕ್ರೆ | Uddhav Thackeray

ಶಿವಸೇನಾ ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ದವ್ ಠಾಕ್ರೆ
ಶಿವಸೇನಾ ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ದವ್ ಠಾಕ್ರೆ
Published on
ಮುಂಬೈ: ಮಹಾರಾಷ್ಟ್ರ ಎರಡೂ ಸದನಗಳಲ್ಲಿ ನಿಯಮಗಳನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಸಾಧ್ಯವಿಲ್ಲ ಎಂದಾದ್ರೆ, ಸಾಂವಿಧಾನಿಕ ಹುದ್ದೆಯಲ್ಲ ಉಪಮುಖ್ಯಮಂತ್ರಿ ಹುದ್ದೆಯನ್ನೂ ರದ್ದು ಮಾಡಿ ಎಂದು ಶಿವಸೇನಾ ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ದವ್ ಠಾಕ್ರೆ(Uddhav Thackeray) ಹೇಳಿದ್ದಾರೆ.
ಸೋಮವಾರದಿಂದ(ಡಿ. 08) ನಾಗ್ಪುರದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಉದ್ಧವ್ ಠಾಕ್ರೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಮುಂಬೈನಲ್ಲಿ ಮಾತನಾಡಿರುವ ಅವರು, ಯಾರಿಗೆ ಯಾವುದಾದರೂ ಖಾತೆ ನೀಡಿ, ಆದರೆ ಡಿಸಿಎಂ ಎಂದು ಕರೆಯಬೇಡಿ. ಈ ಸರ್ಕಾರವು ನಾಗ್ಪುರದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಘೋಷಿಸಬೇಕು. ಇದು ನಮ್ಮ ಬೇಡಿಕೆ. ಅದು ಈಡೇರದಿದ್ದರೆ ನಾವು ನ್ಯಾಯಾಲಯವನ್ನೂ ಸಂಪರ್ಕಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕನನ್ನು ಘೋಷಿಸಬೇಕೆಂದು ನಾವು ಮೊದಲ ಅಧಿವೇಶನದಲ್ಲೇ ಒತ್ತಾಯಿಸಿದ್ದೆವು. ಈಗ ಒಂದು ವರ್ಷ ಕಳೆದಿದೆ. ವಿಧಾನಮಂಡಲದ ಇತಿಹಾಸದಲ್ಲಿ ಮೊದಲ ಬಾರಿಗೆ, ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಲ್ಲ. ಈ ಸರ್ಕಾರ ಬಲಿಷ್ಠವಾಗಿದೆ ಮತ್ತು ಕೇಂದ್ರ ಸರ್ಕಾರದ ಬೆಂಬಲವಿದೆ. ಇಷ್ಟೆಲ್ಲಾ ಇದ್ದರೂ ಈ ಸರ್ಕಾರ ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಏಕೆ ಹೆದರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಹುದ್ದೆಯನ್ನು ಪಡೆಯಲು, ವಿರೋಧ ಪಕ್ಷವು ವಿಧಾನಸಭೆಯ ಒಟ್ಟು ಬಲದ ಕನಿಷ್ಠ ಶೇ. 10ರಷ್ಟು ಶಾಸಕರನ್ನು ಹೊಂದಿರಬೇಕು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ಸದಸ್ಯರಿದ್ದು, ವಿರೋಧ ಪಕ್ಷದ ನಾಯಕನ ಹುದ್ದೆ ಪಡೆಯಲು ಒಂದು ಪಕ್ಷ 28 ಶಾಸಕರನ್ನು ಗೆದ್ದಿರಬೇಕು.
ಆದಾಗ್ಯೂ ವಿರೋಧ ಪಕ್ಷದ ನಾಯಕನ ಸ್ಥಾನದ ಮಾನದಂಡಗಳನ್ನು ಪೂರೈಸುವ ಯಾವುದೇ ವಿರೋಧ ಪಕ್ಷವಿಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 15 ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಎಸ್‌ಪಿ 10 ಶಾಸಕರನ್ನು ಹೊಂದಿದೆ. ಮತ್ತೊಂದೆಡೆ, ಬಿಜೆಪಿ 132 ಶಾಸಕರನ್ನು ಹೊಂದಿದ್ದು, ಶಿಂಧೆ ಶಿವಸೇನೆ 57 ಮತ್ತು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಶಾಸಕರನ್ನು ಹೊಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net