ಪ್ರಧಾನಿ ಮೋದಿ, ಗೃಹ ಸಚಿವ ಷಾರನ್ನು ದುಶ್ಶಾಸನ ಮತ್ತು ದುರ್ಯೋಧನರಿಗೆ ಹೋಲಿಸಿದ ದೀದಿ! | Mamata Banerjee

Mamata Banerjee
Mamata Banerjee
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಗೃಹ ಸಚಿವರ ಇತ್ತೀಚಿನ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಪಹಲ್ಗಾಮ್ ದಾಳಿಯನ್ನು ಕೇಂದ್ರ ಸರ್ಕಾರವೇ ನಡೆಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಂಗಾಳದ ಬಂಕುರಾದ ಬಿರ್ಸಿಂಗ್‌ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಗೃಹ ಸಚಿವ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ದುಶ್ಶಾಸನ ಮತ್ತು ದುರ್ಯೋಧನ ಎಂದು ಕರೆದರು.
ಶಕುನಿಯ ಶಿಷ್ಯ ದುಶ್ಶಾಸನ ಮಾಹಿತಿ ಸಂಗ್ರಹಿಸಲು ಬಂಗಾಳಕ್ಕೆ ಬಂದಿದ್ದಾನೆ. ಚುನಾವಣೆಗಳು ಬಂದ ತಕ್ಷಣ ದುಶ್ಶಾಸನ ಮತ್ತು ದುರ್ಯೋಧನ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ ಎಂದಿರುವ ಮಮತಾ, ಡಿಸೆಂಬರ್ 20 ರಂದು ಪ್ರಧಾನಿ ಮೋದಿ ಬಂಗಾಳಕ್ಕೆ ಭೇಟಿ ನೀಡಿದ್ದರೆ, ಷಾ ಮುಂಬರುವ ಬಂಗಾಳ ಚುನಾವಣೆಗೆ ಮುನ್ನ ರಾಜ್ಯಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ. ಬಂಗಾಳ ಭಯೋತ್ಪಾದಕರ ಕೇಂದ್ರವಾಗಿದೆ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಮತಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್ ಘಟನೆ ಹೇಗೆ ಸಂಭವಿಸಿತು? ಅಲ್ಲಿ ನೀವು ದಾಳಿ ನಡೆಸಿದ್ದೀರಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರ ಕೈವಾಡವಿದೆ ?ಎಂದು ಪ್ರಶ್ನಿಸಿದರು.
ಟಿಎಂಸಿ ಎಕ್ಸ್ ಪೋಸ್ಟ್..
ಗೃಹ ಸಚಿವ ಅಮಿತ್​ ಷಾ ಹೇಳಿಕೆಗೆ ಇತ್ತ ಟಿಎಂಸಿ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದು, ಷಾಗೆ ಧನ್ಯವಾದ ಅರ್ಪಿಸುತ್ತಾ, ಅವರ ಭವಿಷ್ಯವಾಣಿಗಿಂತ ಉತ್ತಮ ಶಕುನವನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಹಿಂದಿನ ಅವರ ಮಾತುಗಳನ್ನು ಸಹ ಉಲ್ಲೇಖಿಸಿದ್ದು, ಇತಿಹಾಸವು ಸೂಚಕವಾಗಿದ್ದರೆ ಅದು ಅವರಿಗೆ ಉತ್ತಮ ಸುದ್ದಿ ಎಂದಿದೆ. ಅಮಿತ್​ ಷಾ ಬಗ್ಗೆ ನಮಗೆ ಒಂದು ವಿಷಯ ಇಷ್ಟ. ಅವರ ಭವಿಷ್ಯವಾಣಿಗಳು. 2021 ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಕಾ 200 ಎಂದು ಘೋಷಿಸಿದರು. ಬದಲಾಗಿ ಬಿಜೆಪಿ 77 ಸ್ಥಾನಗಳನ್ನು ಗಳಿಸಿತು. 2024 ರ ಲೋಕಸಭಾ ಚುನಾವಣೆಯಲ್ಲಿ ಅವರು 30 ಸ್ಥಾನಗಳನ್ನು ಪಡೆಯುವುದಾಗಿ ವಿಶ್ವಾಸದಿಂದ ಭವಿಷ್ಯ ನುಡಿದರು. ಬಿಜೆಪಿ 12 ಸ್ಥಾನಗಳಿಗೆ ಕುಸಿದಿದೆ. ಮತ್ತು ಈಗ 2026 ಕ್ಕೆ, ಅವರು ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತದ ಗೆಲುವನ್ನು ಘೋಷಿಸಿದ್ದಾರೆ ಎಂದು ಬರೆಯಲಾಗಿದೆ.
ಅಮಿತ್​ ಷಾ ಮಾತು
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದರೆ ರಾಜ್ಯದಲ್ಲಿನ ನುಸುಳುಕೋರರನ್ನು ಗುರುತಿಸಿ ಹೊರಹಾಕುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಭರವಸೆ ನೀಡಿದ್ದಾರೆ. ಬಂಗಾಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಗೃಹ ಸಚಿವ ಷಾ, ನುಸುಳುಕೋರರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ರಾಷ್ಟ್ರೀಯ ಗ್ರಿಡ್ ರಚಿಸಲಾಗುವುದು ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ನಾವು ಬಂಗಾಳದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತೇವೆ ಮತ್ತು ಅಭಿವೃದ್ಧಿಯ ಹೊಳೆಯನ್ನೇ ಹರಿಸುತ್ತೇವೆ ಎಂದು ರಾಜ್ಯದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಬಡವರ ಕಲ್ಯಾಣವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ..

ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವನ್ನು ವಿರುದ್ಧ ವಾಗ್ದಾಳಿ ನಡೆಸಿದ ಷಾ, ಬ್ಯಾನರ್ಜಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಭಯವು ಉತ್ತುಂಗದಲ್ಲಿದೆ, ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ, ಪ್ರಧಾನಿ ಮೋದಿ ಆರಂಭಿಸಿರುವ ಎಲ್ಲಾ ಅಭಿವೃದ್ದಿ ಯೋಜನೆಗಳು ಇಲ್ಲಿನ ಟೋಲ್ ಸಿಂಡಿಕೇಟ್‌ಗೆ ಬಲಿಯಾಗಿವೆ ಎಂದರು.
ಕಳೆದ 14 ವರ್ಷಗಳಿಂದ ಭಯ ಮತ್ತು ಭ್ರಷ್ಟಾಚಾರ ಎನ್ನುವುದು ಪಶ್ಚಿಮ ಬಂಗಾಳದಲ್ಲಿ ತುಂಬಿ ತುಳುಕುತ್ತಿದೆ, ಮುಂಬರುವ ಏಪ್ರಿಲ್ 15 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ನಾವು ಬಂಗಾಳದ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನವನ್ನು ಪ್ರಾರಂಭಿಸುತ್ತೇವೆ. ಈ ಬಂಗ ಭೂಮಿ ತುಂಬಾ ಮಹತ್ವದ್ದಾಗಿದೆ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net