

ನವದೆಹಲಿ: ದೀಪಾವಳಿ ಮತ್ತು ಧಂತೇರಸ್ ಹಬ್ಬದ ಶಾಪಿಂಗ್ ಸಮಯದಲ್ಲಿ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಈ ಹಿನ್ನೆಲೆ ರಾಮಲೀಲಾ ಮೈದಾನದಲ್ಲಿ ನಡೆಯುವ ನ. 01ರ ಇಂಡಿಯಾ ಬ್ಲಾಕ್ ರ್‍ಯಾಲಿಯನ್ನು ಮುಂದೂಡುವಂತೆ ದೆಹಲಿ ವ್ಯಾಪಾರಿಗಳ ಸಂಘಟನೆ(ಸಿಟಿಐ) ಮಾಡಿದ್ದ ಮನವಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ.
ದೆಹಲಿ ವ್ಯಾಪಾರಿಗಳಿಗೆ ಸಲಹೆ ನೀಡಿರುವ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿದರೆ ಮಾತ್ರ ತಮ್ಮ ಪ್ರತಿಭಟನೆಯನ್ನು 30 ಸೆಕೆಂಡುಗಳಲ್ಲಿ ನಿಲ್ಲಿಸಬಹುದು. ಈ ಕುರಿತು ಪ್ರಧಾನಿ ಮೋದಿಯವರ ಜೊತೆ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ದೆಹಲಿಯ ಪ್ರತಿಯೊಬ್ಬ ವ್ಯಾಪಾರಿಗೂ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಮಾತುಗಳನ್ನು ಕೇಳುತ್ತೇವೆ. ಸರ್ಕಾರವು ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದೆ, ರಸ್ತೆಗಳನ್ನು ಬಂದ್ ಮಾಡಿದೆ ಮತ್ತು ನಮ್ಮ ರಾಜಧಾನಿಯನ್ನೇ ಲಾಕ್‌ಡೌನ್ ಮಾಡಿದೆ.
ಮತವನ್ನು ಕದ್ದಿರುವ ಪರಿಸ್ಥಿತಿಯಲ್ಲಿ ಯಾವುದೂ ಸುರಕ್ಷಿತವಲ್ಲ. ನಿಮ್ಮ ಅಂಗಡಿ, ನಿಮ್ಮ ಉಳಿತಾಯ, ನಿಮ್ಮ ಮಕ್ಕಳ ಭವಿಷ್ಯ ಎಲ್ಲವೂ ಅಪಾಯದಲ್ಲಿವೆ. ಆರೋಪಿ ಸಂಖ್ಯೆ 4 ಆಗಿರುವ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಮೋದಿಯವರಿಗೆ ಹೇಳಿ, ಆಗ ಕೇವಲ 30 ಸೆಕೆಂಡುಗಳಲ್ಲಿ ಪ್ರತಿಭಟನೆಗಳು ನಿಲ್ಲುತ್ತವೆ ಎಂದಿದ್ದಾರೆ.
ನ. 1ರಂದು ನಡೆಯಬೇಕಿರುವ ವಿರೋಧ ಪಕ್ಷಗಳ ಪ್ರತಿಭಟನೆಯನ್ನು 10ರವರೆಗೆ ಮುಂದೂಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಸಿಟಿಐ) ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದರು. ಕೆಲವು ದಿನಗಳ ಬಳಿಕ ರಾಹುಲ್ ಗಾಂಧಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದ ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು, ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ರ‍್ಯಾಲಿಯನ್ನು ಮುಂದೂಡಬೇಕೆಂದು ವಿನಂತಿಸಿದ್ದರು. ಪ್ರತಿಭಟನೆ ನಡೆದರೇ ಸುಮಾರು 10,000 ಕೋಟಿ ರೂ.ಗಳವರೆಗೆ ನಷ್ಟವಾಗಲಿದೆ ಎಂದು ತಿಳಿಸಿದ್ದರು (ಏಜೆನ್ಸೀಸ್).