'ಈಡಿಯಟ್ಸ್ ವಿಜ್ಞಾನ ಗೊತ್ತಿಲ್ಲ'; E20 ಪೆಟ್ರೋಲ್ ವಿರೋಧಿಸುವವರ ವಿರುದ್ಧ ಕೇಂದ್ರ ಸಚಿವ ಸುರೇಶ್ ಗೋಪಿ ಕಿಡಿ

ಕೇಂದ್ರ ಸಚಿವ ಸುರೇಶ್​ ಗೋಪಿ
ಕೇಂದ್ರ ಸಚಿವ ಸುರೇಶ್​ ಗೋಪಿ
Published on: 
  • ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಟೀಕಿಸುವವರು ಅದರ ಹಿಂದಿನ ವಿಜ್ಞಾನವನ್ನು ಅರಿಯದ ಮೂರ್ಖರು.

  • ಪೆಟ್ರೋಲ್​ನಲ್ಲಿ ಎಥೆನಾಲ್ ವಿರೋಧಿಸುವವರ ವಿರುದ್ಧ ಸಚಿವ ಸುರೇಶ್ ಗೋಪಿ ಕಿಡಿ.

  • E20 ಪೆಟ್ರೋಲ್ ಕುರಿತು ಅಪಪ್ರಚಾರ ಮಾಡುತ್ತಿರುವ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಗೋಪಿ.

ತ್ರಿಶೂರ್: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಟೀಕೆ ಮಾಡುವವರು ಈಡಿಯಟ್ಸ್​. ಅವರಿಗೆ ವಿಜ್ಞಾನ ಗೊತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಕಿಡಿಕಾರಿದರು.

ಸಂಸತ್ ಕ್ಷೇತ್ರವಾದ ತ್ರಿಶೂರ್‌ನಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಎಥೆನಾಲ್​ ಬಳಕೆ ಬಗ್ಗೆ ಉಲ್ಲೇಖಿಸಿದರು.

'E20 ಪೆಟ್ರೋಲ್ ಕುರಿತು ಅಪಪ್ರಚಾರ ಮಾಡುತ್ತಿರುವವರ ರಾಜಕೀಯ ಚಿಂತನೆಗಳು ವಿಕೃತಗೊಂಡಿವೆ. ಎಥೆನಾಲ್ ಮಿಶ್ರಣದ ಹಿಂದಿನ ವಿಜ್ಞಾನ ತಿಳಿಯದವರು ಈಡಿಯಟ್​ಗಳು..ಅವರು ಕೊನೆಯವರೆಗೂ ಮೂರ್ಖರಾಗಿಯೇ ಉಳಿಯುತ್ತಾರೆ ಎಂದು ಕಿಡಿಕಾರಿದರು.

ಸಿಬಿಐ ತನಿಖೆಯ ಎಚ್ಚರಿಕೆ

ಇಂಧನದಲ್ಲಿ ಎಥೆನಾಲ್ ಅಂಶವನ್ನು ಪರೀಕ್ಷಿಸುತ್ತೇವೆ ಎಂದು ಹೇಳುವವರು, ಕ್ಯಾನಿಷ್ಟರ್‌ಗಳಲ್ಲಿ ಪೆಟ್ರೋಲ್ ಖರೀದಿಸಿ ಅದಕ್ಕೆ ಬೇರೆ ಯಾವುದೋ ವಸ್ತುವನ್ನು ಬೆರೆಸಿ ಮಾದರಿಗಳನ್ನು ಸಂಗ್ರಹಿಸುತ್ತಿರಬಹುದು ಎಂದು ಆರೋಪಸಿದಿರು. ಅಂತಹವರ ಸುಳ್ಳು ಹೇಳಿಕೆ ತನಿಖೆ ಮಾಡಲು ನಾವು ಸಿಬಿಐ ತನಿಖೆ ಒಪ್ಪಿಸುತ್ತೇವೆ. ಆಗ ಸತ್ಯಾಂಶ ಹೊರ ಬರುತ್ತದೆ. ಇದರಿಂದ ಆಗ ಈ ಜನರೇ ಸಿಬಿಐ ವಿರುದ್ಧವೂ ತಿರುಗಿಬೀಳುತ್ತಾರೆ ಎಂದು ಕಿಡಿಕಾರಿದರು

ಪೆಟ್ರೋಲ್‌ನಲ್ಲಿ E10 ನಿಂದ E20 ವರೆಗಿನ ಎಥೆನಾಲ್ ಮಿಶ್ರಣವನ್ನು 'ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ'ದ ಆಳವಾದ ವೈಜ್ಞಾನಿಕ ಸಂಶೋಧನೆ ಮತ್ತು ಮರು-ಸಂಶೋಧನೆಯ ನಂತರವೇ ಜಾರಿಗೆ ತರಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗದ ಎಂಜಿನ್‌ಗಳಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸಲು ಎಥೆನಾಲ್ ಮಿಶ್ರಣವೊಂದೇ ಏಕೈಕ ತಿದ್ದುಪಡಿ ಮಾರ್ಗವಾಗಿದೆ ಎಂದರು.

ಜಾಗತಿಕ ನಿಯಮಗಳು ಮತ್ತು ಪರಿಸರ

ಜಿನೀವಾ ಒಪ್ಪಂದಗಳ ಮೂಲಕ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ವಾತಾವರಣಕ್ಕೆ ನಾವು ಬಿಡುವ ಹೊಗೆಯ ರಾಸಾಯನಿಕ ಸಂಯೋಜನೆ ಏನು ಎಂಬುದರ ಬಗ್ಗೆ ಎಚ್ಚರವಿರಬೇಕು. ರಾಷ್ಟ್ರಗಳು ಈ ನಿಯಮಗಳಿಗೆ ಬದ್ಧವಾಗಿಲ್ಲದಿದ್ದರೆ ಭೂಮಿಯ ಆರೋಗ್ಯ ಅಪಾಯಕ್ಕೆ ಸಿಲುಕುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿಗದಿತ ಶೇ. 20ರ ಮಿತಿಯನ್ನು ಎಥೆನಾಲ್ ಅಂಶ ಮೀರುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಕೇರಳದಲ್ಲಿ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ, ಕರ್ನಾಟಕದಲ್ಲಿ ನಡೆಸಿದಪರೀಕ್ಷೆಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುವ ಪೆಟ್ರೋಲ್‌ನಲ್ಲಿ ಶೇ. 20ಕ್ಕಿಂತ ಹೆಚ್ಚಿನ ಎಥೆನಾಲ್ ಅಂಶ ಪತ್ತೆಯಾಗಿದ್ದು, ಕೆಲವು ಮಾದರಿಗಳಲ್ಲಿ ಇದು ಶೇ. 31.2ರಷ್ಟಿದೆ ಎಂದು ವರದಿಯಾಗಿತ್ತು. ಆದಾಗ್ಯೂ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ IOCL, BPCL ಮತ್ತು HPCL ಜಂಟಿ ಹೇಳಿಕೆ ನೀಡಿ ಈ ಸಂಶೋಧನೆಗಳನ್ನು ತಳ್ಳಿಹಾಕಿವೆ, (ಏಜೆನ್ಸೀಸ್).