ನಾನು ಜನರನ್ನು ದಾರಿ ತಪ್ಪಿಸಲು ಬಂದಿಲ್ಲ! ಡಿಎಂಕೆ ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿದೆ! ದ್ರಾವಿಡ ಪಕ್ಷಗಳ ವಿರುದ್ದ ಹರಿಹಾಯ್ದ ಸಿಎಂ ವಿಜಯ್​! CM Vijay

ನಾನು ಜನರನ್ನು ದಾರಿ ತಪ್ಪಿಸಲು ಬಂದಿಲ್ಲ! ಡಿಎಂಕೆ ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿದೆ! ದ್ರಾವಿಡ ಪಕ್ಷಗಳ ವಿರುದ್ದ ಹರಿಹಾಯ್ದ ಸಿಎಂ ವಿಜಯ್​!
ನಾನು ಜನರನ್ನು ದಾರಿ ತಪ್ಪಿಸಲು ಬಂದಿಲ್ಲ! ಡಿಎಂಕೆ ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿದೆ! ದ್ರಾವಿಡ ಪಕ್ಷಗಳ ವಿರುದ್ದ ಹರಿಹಾಯ್ದ ಸಿಎಂ ವಿಜಯ್​!
Published on
ತಿರುಚಿರಾಪಳ್ಳಿ: ತಮಿಳುನಾಡಿನ ಜನತೆ ನನ್ನನ್ನು ಮುಖ್ಯಮಂತ್ರಿಯಾಗಿ ಅಲ್ಲ, ರಾಜ್ಯದ ಮೊದಲ ಸೇವಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸಲು ರಾಜಕೀಯಕ್ಕೆ ಬಂದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ (TVK) ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್(CM Vijay) ಭಾವುಕರಾಗಿ ನುಡಿದಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಹಮ್ಮಿಕೊಂಡಿದ್ದ ತಮ್ಮ ಮೊದಲ ಬೃಹತ್ ಸಾರ್ವಜನಿಕ ಧನ್ಯವಾದ ಸಮಾವೇಶದಲ್ಲಿ ಮಾತನಾಡಿದ ವಿಜಯ್​, ಡಿಎಂಕೆ ಮತ್ತು ಎಐಎಡಿಎಂಕೆಯ ದ್ರಾವಿಡ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ರಚನೆಗಾಗಿ ತಾವು ಕುದುರೆ ವ್ಯಾಪಾರ ಮಾಡಿದ್ದೇವೆ ಎಂಬ ವಿಪಕ್ಷಗಳ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಈ ಎರಡೂ ದ್ರಾವಿಡ ಪಕ್ಷಗಳೇ ಒಳಸಂಚು ನಡೆಸಿದ್ದವು ಎಂದು ತಿರುಗೇಟು ನೀಡಿದ್ದಾರೆ.

ಡಿಎಂಕೆ ವಿರುದ್ಧ ವಾಗ್ದಾಳಿ, ಎಐಎಡಿಎಂಕೆಗೆ ಭವಿಷ್ಯವಿಲ್ಲ!

ಇನ್ಮುಂದೆ ತಮಿಳುನಾಡಿನಲ್ಲಿ ಅಸಲಿ ರಾಜಕೀಯ ಜಗಳ ಇರುವುದು ಕೇವಲ ಟಿವಿಕೆ ಮತ್ತು ಡಿಎಂಕೆ ನಡುವೆ ಮಾತ್ರ ಎಂದು ವಿಜಯ್ ಘೋಷಿಸಿದ್ದಾರೆ. ಅಲ್ಲದೆ, ಡಿಎಂಕೆ ಪಕ್ಷವು ಕೇವಲ ‘ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿದೆ ಎಂದು ಜರೆದ ಸಿಎಂ ವಿಜಯ್​, ಡಿಎಂಕೆ ನಮ್ಮನ್ನು ಎಷ್ಟು ವಿರೋಧಿಸುತ್ತದೆಯೋ, ಅಷ್ಟು ನಮಗೆ ರಾಜಕೀಯವಾಗಿ ಲಾಭವಾಗಲಿದೆ ಎಂದರು. ಇನ್ನು ಎಐಎಡಿಎಂಕೆಯನ್ನು ಶಕ್ತಿಹೀನ ಪಕ್ಷ ಎಂದು ಕರೆದ ಸಿಎಂ, ಆ ಪಕ್ಷಕ್ಕೆ ತಮಿಳುನಾಡಿನಲ್ಲಿ ಇನ್ಮುಂದೆ ಯಾವುದೇ ಭವಿಷ್ಯವಿಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯದ ಹಕ್ಕುಗಳ ವಿಷಯದಲ್ಲಿ ರಾಜಿ ಇಲ್ಲ: ರಾಜ್ಯದ ಹಕ್ಕುಗಳು ಮತ್ತು ಜಾತ್ಯತೀತತೆಯ ವಿಷಯದಲ್ಲಿ ನಾನು ಎಂದಿಗೂ ಎಂ.ಕೆ. ಸ್ಟಾಲಿನ್ ಅವರಂತೆ ಅತ್ತಿತ್ತ ತೂಗಾಡುವುದಿಲ್ಲ. ನಮ್ಮ ನಿಲುವು ಸ್ಪಷ್ಟ. ಜಾತ್ಯತೀತತೆಯ ತತ್ವದಲ್ಲಿ ಯಾವುದೇ ರಾಜಿ ಇಲ್ಲ. ತಮಿಳುನಾಡಿನ ಹಕ್ಕುಗಳನ್ನು ನಾವು ಯಾರ ಮುಂದೆಯೂ ಬಿಟ್ಟುಕೊಡುವುದಿಲ್ಲ. ಪ್ರಮುಖವಾಗಿ ನದಿ ನೀರಿನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿಷಯದಲ್ಲಿ ನಾವು ಎಂದಿಗೂ ತಲೆಬಾಗುವುದಿಲ್ಲ ಎಂದು ಸಿಎಂ ವಿಜಯ್ ಖಡಾಖಂಡಿತವಾಗಿ ಹೇಳಿದ್ದಾರೆ.

ಕೋಟ್-ಸೂಟ್ ವಿವಾದಕ್ಕೆ ವಿಜಯ್ ಪಂಚ್!

ಸಾರ್ವಜನಿಕವಾಗಿ ತಾವು ಕೋಟ್ ಮತ್ತು ಸೂಟ್ ಧರಿಸುವ ಕುರಿತು ಕೇಳಿಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ವಿಜಯ್​, ಅಧಿಕಾರದಲ್ಲಿರುವವರು ಮತ್ತು ಸಮಾಜದ ಪ್ರಭಾವಿ ವರ್ಗದವರು ಮಾತ್ರ ಕೋಟ್-ಸೂಟ್ ಧರಿಸಬೇಕಾ ಎಂದಿದ್ದಾರೆ. ನಮಗೆ ಅದಕ್ಕೆ ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಎರಡು ಬಣ್ಣಗಳು (ಕಪ್ಪು-ಬಿಳುಪು) ಮನುಷ್ಯನ ಮನಸ್ಸಿನ ಎರಡು ಬದಿಯನ್ನು ಪ್ರತಿಬಿಂಬಿಸುತ್ತವೆ. ನನಗೆ ಯಾವುದೇ ಅದ್ದೂರಿ ಬಣ್ಣದ ಬಟ್ಟೆಗಳನ್ನು ಧರಿಸಲು ಇಷ್ಟವಿಲ್ಲ. ನನ್ನ ಆಡಳಿತವೂ ಈ ಬಣ್ಣದಷ್ಟೇ ಪಾರದರ್ಶಕವಾಗಿರುತ್ತದೆ ಎಂದರು.
ಮೇ 10 ರಂದು ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಜೋಸೆಫ್ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಒಟ್ಟು 234 ವಿಧಾನಸಭಾ ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಬಳಿಕ ಕಾಂಗ್ರೆಸ್, ಎಡಪಕ್ಷಗಳು, ಐಯುಎಂಎಲ್ ಮತ್ತು ವಿಸಿಕೆ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಯಶಸ್ವಿಯಾಗಿ ಸರ್ಕಾರ ರಚಿಸಿದ್ದಾರೆ. ತ್ರಿಚಿಯಲ್ಲಿ ನಡೆದ ಈ ಮೊದಲ ರ‍್ಯಾಲಿಗೆ ಹರಿದುಬಂದಿದ್ದ ಜನಸಾಗರ ಇಡೀ ತಮಿಳುನಾಡು ರಾಜಕೀಯದಲ್ಲಿ ಹೊಸ ದಿಕ್ಸೂಚಿಯನ್ನು ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net