ನಾನು ಸಂಸತ್ತಿಗೆ ಹೋಗುವುದು ಕೆಲಸ ಮಾಡಲು, ಗದ್ದಲ ಮಾಡಲಿಕ್ಕಲ್ಲ! ಎಎಪಿ ಆರೋಪಕ್ಕೆ ಚಡ್ಡಾ ಖಡಕ್ ತಿರುಗೇಟು | Raghav Chadha

ನಾನು ಸಂಸತ್ತಿಗೆ ಹೋಗುವುದು ಕೆಲಸ ಮಾಡಲು, ಗದ್ದಲ ಮಾಡಲಿಕ್ಕಲ್ಲ! ಎಎಪಿ ಆರೋಪಕ್ಕೆ ಚಡ್ಡಾ ಖಡಕ್ ತಿರುಗೇಟು
ನಾನು ಸಂಸತ್ತಿಗೆ ಹೋಗುವುದು ಕೆಲಸ ಮಾಡಲು, ಗದ್ದಲ ಮಾಡಲಿಕ್ಕಲ್ಲ! ಎಎಪಿ ಆರೋಪಕ್ಕೆ ಚಡ್ಡಾ ಖಡಕ್ ತಿರುಗೇಟು
Published on
ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ಅದರ ಪ್ರಭಾವಿ ಸಂಸದ ರಾಘವ್ ಚಡ್ಡಾ(Raghav Chadha) ನಡುವಿನ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ಶನಿವಾರ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ತಮ್ಮ ವಿರುದ್ಧ ಪಕ್ಷದ ನಾಯಕರು ಮಾಡಿರುವ ಎಲ್ಲಾ ಆರೋಪಗಳನ್ನು ಸಂಪೂರ್ಣ ಸುಳ್ಳು ಮತ್ತು ಯೋಜಿತ ಪಿತೂರಿ ಎಂದು ಬಣ್ಣಿಸಿದ್ದಾರೆ. ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ಬೆಳವಣಿಗೆಯು ಇಂಡಿಯಾ ಒಕ್ಕೂಟದ ಆಂತರಿಕ ಭದ್ರತೆಗೂ ಸವಾಲಾಗಿದೆ.

ಸಂಘಟಿತ ಅಭಿಯಾನದ ವಿರುದ್ಧ ಆಕ್ರೋಶ

ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿದ ಚಡ್ಡಾ, ನನ್ನ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳ ಅಭಿಯಾನ ನಡೆಯುತ್ತಿದೆ. ಸಂಸತ್ತಿನಲ್ಲಿ ನನ್ನ ಉದ್ದೇಶ ಪ್ರಭಾವ ಬೀರುವುದೇ ಹೊರತು, ಗದ್ದಲ ಸೃಷ್ಟಿಸುವುದಲ್ಲ ಎಂದು ಗುಡುಗಿದ್ದಾರೆ. ತೆರಿಗೆದಾರರ ಹಣದಲ್ಲಿ ನಡೆಯುವ ಸಂಸತ್ತಿನ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಸಂಸದನ ಜವಾಬ್ದಾರಿ ಎಂದು ಚಡ್ಡಾ ನೆನಪಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳು ಸುಳ್ಳು ಹೇಳುವುದಿಲ್ಲ

ವಿರೋಧ ಪಕ್ಷಗಳು ನಡೆಸುವ ಸಭೆತ್ಯಾಗ ಗಳಲ್ಲಿ ರಾಘವ್ ಭಾಗವಹಿಸುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಚಡ್ಡಾ, ಇದು ಹಸಿಬಿಸಿ ಸುಳ್ಳು. ಸಂಸತ್ತಿನ ಪ್ರತಿಯೊಂದು ನಡವಳಿಕೆಯೂ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ. ನಾನು ಸಭೆತ್ಯಾಗದಲ್ಲಿ ಭಾಗವಹಿಸದ ಒಂದು ಸಂದರ್ಭವನ್ನಾದರೂ ತೋರಿಸಲಿ ಎಂದು ನನ್ನ ವಿಮರ್ಶಕರಿಗೆ ಸವಾಲು ಹಾಕುತ್ತೇನೆ ಎಂದಿದ್ದಾರೆ. ದಾಖಲೆಗಳೇ ಸಾಕ್ಷಿಯಾಗಿರುವಾಗ ಇಂತಹ ಆರೋಪ ಮಾಡುವುದು ಹಾಸ್ಯಾಸ್ಪದ ಎಂದು ರಾಘವ್​ ಲೇವಡಿ ಮಾಡಿದ್ದಾರೆ.
ಚುನಾವಣಾ ಆಯುಕ್ತರ ಮಸೂದೆ: ಸಹಿ ಹಾಕದ ರಹಸ್ಯವೇನು..?
ಮುಖ್ಯ ಚುನಾವಣಾ ಆಯುಕ್ತರ (CEC) ನೇಮಕಾತಿಗೆ ಸಂಬಂಧಿಸಿದ ಮೋಷನ್‌ಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪಕ್ಕೂ ಚಡ್ಡಾ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಈ ವಿಷಯದ ಬಗ್ಗೆ ಯಾರೂ ಅಧಿಕೃತವಾಗಿ ಅಥವಾ ಅನೌಪಚಾರಿಕವಾಗಿ ಸಂಪರ್ಕಿಸಿಯೇ ಇಲ್ಲ. ಸಹಿ ಹಾಕುವಂತೆ ಯಾವುದೇ ಪಕ್ಷದ ನಾಯಕರು ಕೇಳಿಲ್ಲ. ಕುತೂಹಲಕಾರಿ ವಿಷಯವೆಂದರೆ, ನಮ್ಮ ಪಕ್ಷದ ಅನೇಕ ಇತರ ಸಂಸದರು ಕೂಡ ಆ ಮೋಷನ್‌ಗೆ ಸಹಿ ಹಾಕಿಲ್ಲ. ಹಾಗಿದ್ದ ಮೇಲೆ ನನ್ನನ್ನು ಮಾತ್ರ ಗುರಿ ಮಾಡುತ್ತಿರುವುದು ಏಕೆ ಎಂದು ಚಡ್ಡಾ ಪ್ರಶ್ನಿಸಿದ್ದಾರೆ.

ಜನಸಾಮಾನ್ಯರ ಧ್ವನಿಯಾಗಿ ರಾಘವ್ ಚಡ್ಡಾ

ಸಂಸತ್ತಿನಲ್ಲಿ ತಾವು ನಡೆಸಿದ ಹೋರಾಟಗಳನ್ನು ಪಟ್ಟಿ ಮಾಡಿದ ಚಡ್ಡಾ, ತಾವು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಜಿಎಸ್‌ಟಿ ಮತ್ತು ಆದಾಯ ತೆರಿಗೆ: ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆಯ ವಿರುದ್ಧ ನಿರಂತರ ಧ್ವನಿ ಎತ್ತಿದ್ದಾರೆ.
ದೆಹಲಿ ಮಾಲಿನ್ಯ ಮತ್ತು ಪಂಜಾಬ್ ನೀರು: ಈ ಎರಡು ರಾಜ್ಯಗಳ ಪ್ರಮುಖ ಸಮಸ್ಯೆಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಮೂಲಸೌಕರ್ಯ: ರೈಲ್ವೆ ಪ್ರಯಾಣಿಕರ ಸಮಸ್ಯೆ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದ ಕುರಿತು ಚರ್ಚೆ ನಡೆಸಿದ್ದಾರೆ.
ಮಹಿಳಾ ಆರೋಗ್ಯ: ಮುಟ್ಟಿನ ಆರೋಗ್ಯ ಮತ್ತು ನಿರುದ್ಯೋಗದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಕೆಲವೇ ಸಂಸದರಲ್ಲಿ ಇವರೂ ಒಬ್ಬರಾಗಿದ್ದರು.

ಪ್ರತಿ ಸುಳ್ಳೂ ಬಯಲಾಗಲಿದೆ"

ಪಕ್ಷದ ಒಳಗಿನವರೇ ತಮ್ಮ ವಿರುದ್ಧ ತಿರುಗಿಬಿದ್ದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಘವ್, ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು. ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಚರ್ಚಿಸುವುದು ನನ್ನ ಆದ್ಯತೆಯಾಗಿದೆ. ನನ್ನ ವಿರುದ್ಧ ಮಾಡುತ್ತಿರುವ ಪ್ರತಿಯೊಂದು ಸುಳ್ಳು ಆರೋಪವೂ ಕಾಲಕ್ರಮೇಣ ಬಯಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ವಿಶ್ಲೇಷಣೆ

ರಾಘವ್ ಚಡ್ಡಾ ಮತ್ತು ಎಎಪಿ ಹೈಕಮಾಂಡ್ ನಡುವಿನ ಈ ವಾಕ್ಸಮರವು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹೊಂದಿರುವ ಎಎಪಿ, ತನ್ನ ಅತ್ಯಂತ ವಾಕ್ಚತುರ ಸಂಸದನ ವಿರುದ್ಧವೇ ತಿರುಗಿಬಿದ್ದಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ರಾಘವ್ ಚಡ್ಡಾ ಅವರನ್ನು ಪಕ್ಷದಿಂದ ದೂರ ಇಡುವ ಪ್ರಯತ್ನವೇ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯವೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net