ನಾನು ಅಮಾಯಕಿ, ಕೊಲೆ ಕೇಸ್​ನಲ್ಲಿ ನನ್ನನ್ನು ಸಿಲುಕಿಸಿದ್ದಾರೆ: ಸುಪ್ರೀಂ​ಗೆ ಅಫಿಡವಿಟ್ ಸಲ್ಲಿಸಿದ ಸೋನಮ್ ರಘುವಂಶಿ! Meghalaya Honeymoon Murder Case

ನಾನು ಅಮಾಯಕಿ, ಕೊಲೆ ಕೇಸ್​ನಲ್ಲಿ ನನ್ನನ್ನು ಸಿಲುಕಿಸಿದ್ದಾರೆ: ಸುಪ್ರೀಂ​ಗೆ ಅಫಿಡವಿಟ್ ಸಲ್ಲಿಸಿದ ಸೋನಮ್ ರಘುವಂಶಿ! Meghalaya Honeymoon Murder Case
ನಾನು ಅಮಾಯಕಿ, ಕೊಲೆ ಕೇಸ್​ನಲ್ಲಿ ನನ್ನನ್ನು ಸಿಲುಕಿಸಿದ್ದಾರೆ: ಸುಪ್ರೀಂ​ಗೆ ಅಫಿಡವಿಟ್ ಸಲ್ಲಿಸಿದ ಸೋನಮ್ ರಘುವಂಶಿ! Meghalaya Honeymoon Murder Case
Published on

ಪ್ರಮುಖ ಮುಖ್ಯಾಂಶಗಳು

  • ಮೇಘಾಲಯ ಹನಿಮೂನ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಸೋನಮ್ ರಘುವಂಶಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ರಿಲೀಫ್
  • ತಾನು ನಿರಪರಾಧಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಫಿಡವಿಟ್ ಸಲ್ಲಿಸಿದ ಹನಿಮೂನ್ ಕೊಲೆ ಆರೋಪಿ ಸೋನಮ್
  • ಬಂಧನ ಪ್ರಕ್ರಿಯೆಯ ದಾಖಲೆಯಲ್ಲಿನ ಸಣ್ಣ ಟೈಪಿಂಗ್ ದೋಷದಿಂದಾಗಿ ಕೊಲೆ ಆರೋಪಿಗೆ ಮಂಜೂರಾಯಿತು ಜಾಮೀನು
  • ಕೇವಲ ತಾಂತ್ರಿಕ ದೋಷದ ಆಧಾರದ ಮೇಲೆ ಜಾಮೀನು ಸಿಕ್ಕಿದ್ದರೆ ಮರು ಬಂಧನ ಮಾಡಲು ಕಾನೂನಿನಲ್ಲಿ ಅಡ್ಡಿಯಿಲ್ಲ
ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣಕ್ಕೆ (Meghalaya Honeymoon Murder Case) ಸಂಬಂಧಿಸಿದಂತೆ ಈಗ ಮತ್ತೊಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಮುಖ್ಯ ಆರೋಪಿ ಸೋನಮ್ ರಘುವಂಶಿ ತಾನು ನಿರಪರಾಧಿಯಾಗಿದ್ದು, ಈ ಕೇಸ್‌ನಲ್ಲಿ ತನ್ನನ್ನು ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಮೇಘಾಲಯ ಹೈಕೋರ್ಟ್ ತಮಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿರುವ ಸೋನಮ್, ಈ ಕುರಿತು ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಕೇವಲ ಅನುಮಾನ ಹಾಗೂ ಸನ್ನಿವೇಶಗಳ ಆಧಾರದ ಮೇಲೆ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ನಡೆಸುತ್ತಿದ್ದು, ಬರಿ ಆರೋಪಗಳನ್ನೇ ಅಪರಾಧಕ್ಕೆ ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಅದರಲ್ಲಿ ವಾದಿಸಿದ್ದಾರೆ.
ಜೂನ್ 29 ರಂದು ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಸೋನಮ್ ರಘುವಂಶಿ ಈ ಪ್ರತಿ ಅಫಿಡವಿಟ್ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ಮೇಘಾಲಯ ಹೈಕೋರ್ಟ್​ ಆದೇಶವನ್ನು ಎತ್ತಿಹಿಡಿಯುವ ಮೂಲಕ ಆರೋಪಿ ಸೋನಮ್​ಗೆ ಬಿಗ್​ ರಿಲೀಫ್ ನೀಡಿದೆ.
ಹೈಕೋರ್ಟ್ ಆದೇಶದ ಬಳಿಕ ಸೋನಮ್​ ಬಿಡುಗಡೆಯಾಗಿರುವುದರಿಂದ, ಈ ಹಂತದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ. ಅಲ್ಲದೆ, ಆರೋಪಿಗಳ ಮೇಲಿನ ಆರೋಪಗಳನ್ನು ಸುದೀರ್ಘ ವಿಚಾರಣೆಯ ಮೂಲಕವೇ ಸಾಬೀತುಪಡಿಸಬೇಕು ಮತ್ತು ಕಾನೂನಿನ ಪ್ರಕಾರ ಅಪರಾಧ ಸಾಬೀತಾಗುವವರೆಗೆ ಪ್ರತಿಯೊಬ್ಬರನ್ನೂ ನಿರಪರಾಧಿ ಎಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನವೊಂದನ್ನು ಮಾಡಿದ್ದು, ಕೇವಲ ಬಂಧನ ಪ್ರಕ್ರಿಯೆಯಲ್ಲಿನ ತಾಂತ್ರಿಕ ಅಥವಾ ಕಾರ್ಯವಿಧಾನದ ದೋಷದ ಆಧಾರದ ಮೇಲೆ ಯಾರಿಗಾದರೂ ಜಾಮೀನು ಮಂಜೂರಾಗಿದ್ದರೆ, ಅಂತಹ ಆರೋಪಿಯನ್ನು ಕಾನೂನು ನಿಬಂಧನೆಗಳ ಪ್ರಕಾರವೇ ಮರು-ಬಂಧನ ಮಾಡಲು ಅಧಿಕಾರಿಗಳಿಗೆ ಯಾವುದೇ ಕಾನೂನು ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಸೋನಮ್ ಪರ ವಕೀಲರು ವಾದ ಮಂಡಿಸಿ, ತಮ್ಮ ಕಕ್ಷಿದಾರರನ್ನು ಬಂಧಿಸುವಾಗ ಬಂಧನಕ್ಕೆ ನಿಖರವಾದ ಕಾರಣಗಳನ್ನು ಸರಿಯಾಗಿ ತಿಳಿಸಿರಲಿಲ್ಲ ಮತ್ತು ಆ ಸಮಯದಲ್ಲಿ ಅವರಿಗೆ ಸೂಕ್ತ ಕಾನೂನು ನೆರವು ಅಥವಾ ವಕೀಲರ ಸಂಪರ್ಕವನ್ನೂ ಒದಗಿಸಿರಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ, ಈ ಆಕ್ಷೇಪಣೆಗಳನ್ನು ಕೆಳಹಂತದ ನ್ಯಾಯಾಲಯಗಳಲ್ಲಿ ಜಾಮೀನು ಅರ್ಜಿ ಸಲ್ಲಿಸುವಾಗ ಏಕೆ ಮುಂಚಿತವಾಗಿಯೇ ಎತ್ತಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇನ್ನೊಂದೆಡೆ, ಮೇಘಾಲಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನಟೋರಿಯಸ್ ಹನಿಮೂನ್ ಹತ್ಯೆ ಪ್ರಕರಣದ ಭೀಕರತೆಯನ್ನು ಕೋರ್ಟ್ ಮುಂದೆ ಬಿಚ್ಚಿಟ್ಟು ಪ್ರಬಲ ವಾದ ಮಂಡಿಸಿದರು. ಇದು ಅತ್ಯಂತ ಘೋರವಾದ ಹಾಗೂ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ನಡೆಸಿರುವ ರಕ್ತಸಿಕ್ತ ಕೊಲೆಯಾಗಿದೆ. ಇಂತಹ ಗಂಭೀರ ಪ್ರಕರಣದಲ್ಲಿ, ಬಂಧನದ ದಾಖಲೆಗಳಲ್ಲಿದ್ದ ಕೇವಲ ಒಂದು ಸಣ್ಣ ಮುದ್ರಣ ದೋಷವನ್ನು ಆಧಾರವಾಗಿಟ್ಟುಕೊಂಡು ಹೈಕೋರ್ಟ್ ಆರೋಪಿಗೆ ಜಾಮೀನು ಮಂಜೂರು ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸುವ ಮೂಲಕ ಸೋನಮ್ ಜಾಮೀನು ರದ್ದತಿಗೆ ಬಲವಾದ ಒತ್ತಾಯ ಮಾಡಿದರು.
ಬಂಧನದ ಜ್ಞಾಪನಾ ಪತ್ರದಲ್ಲಿ ಹತ್ಯೆಗೆ ಸಂಬಂಧಿಸಿದ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 103 (Section 103 BNS) ಎಂದು ನಮೂದಿಸುವ ಬದಲು, ತಪ್ಪು ಗ್ರಹಿಕೆಯಿಂದ ಸೆಕ್ಷನ್ 403 ಎಂದು ಟೈಪ್ ಮಾಡಲಾಗಿತ್ತು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಇದು ಕೇವಲ ಒಂದು ಸಣ್ಣ ಲಿಪಿಕ ದೋಷವಾಗಿದ್ದು, ಈ ಹಿಂದೆ ಮೂರು ಬಾರಿ ಸೋನಮ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು ಮತ್ತು ಆಕೆಯ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿವೆ ಎಂಬುದನ್ನು ನೆನಪಿಸಿದರು. ಈ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಅರೆಸ್ಟ್ ಮೆಮೋದಲ್ಲಿನ ಇಂತಹ ಟೈಪಿಂಗ್ ದೋಷಗಳು ಬಂಧನವನ್ನು ರದ್ದುಗೊಳಿಸಲು ಅಥವಾ ಜಾಮೀನು ನೀಡಲು ಪ್ರಬಲ ಆಧಾರವಾಗುತ್ತವೆಯೇ ಎಂಬ ಕಾನೂನು ಅಂಶವನ್ನು ಕೂಲಂಕಷವಾಗಿ ಪರಿಶೀಲಿಸಲು, ಈ ವಿಷಯವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವ ಕುರಿತು ಪರಿಗಣಿಸುವುದಾಗಿ ತಿಳಿಸಿತು.

ಕೊಲೆ ಪ್ರಕರಣದ ಹಿನ್ನೆಲೆ ಏನು?

ಮಧ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರು ಮೇ 2025ರಲ್ಲಿ ತಮ್ಮ ಪತ್ನಿ ಸೋನಮ್ ಜೊತೆ ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಆದರೆ, ನಾಂಗ್ರಿಯಾಟ್‌ನಲ್ಲಿನ ಹೋಮ್‌ಸ್ಟೇಯೊಂದರಿಂದ ಚೆಕ್-ಔಟ್ ಆದ ಬಳಿಕ ಈ ದಂಪತಿ ದಿಢೀರ್ ನಾಪತ್ತೆಯಾಗಿದ್ದರು. ತದನಂತರ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸೋಹ್ರಾದ 'ವೈಸಾವ್‌ಡಾಂಗ್ ಜಲಪಾತ'ದ ಬಳಿಯ ಕಣಿವೆಯೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹಾ ಹಾಗೂ ಇತರ ಕೆಲವು ಸಹಚರರೊಂದಿಗೆ ಸೇರಿ, ಪತಿಯನ್ನು ಕೊಲೆ ಮಾಡಲು ಮುಂಚಿತವಾಗಿಯೇ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಗಂಭೀರ ಆರೋಪ ಹೊರಿಸಿದ್ದಾರೆ. ಈಗಾಗಲೇ ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ 700ಕ್ಕೂ ಹೆಚ್ಚು ಪುಟಗಳ ಬೃಹತ್ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆ ಮಾಡಿದ್ದು, ಸದ್ಯ ಕೋರ್ಟ್‌ನಲ್ಲಿ ಸಾಕ್ಷಿಗಳ ವಿಚಾರಣೆಯೊಂದಿಗೆ ಪ್ರಕರಣದ ಸುದೀರ್ಘ ನ್ಯಾಯಾಂಗ ಪ್ರಕ್ರಿಯೆ ಚಾಲ್ತಿಯಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net