14 ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರಚಿದ ರೌಡಿ ಶೀಟರ್ ಕೇವಲ ಒಂದು ಗ್ಯಾಸ್​ ಕನೆಕ್ಷನ್​ನಿಂದ ತಗ್ಲಾಕೊಂಡಿದ್ದೇ ರೋಚಕ! Rowdy Sheeter

14 ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರಚಿದ ರೌಡಿ ಶೀಟರ್ ಕೇವಲ ಒಂದು ಗ್ಯಾಸ್​ ಕನೆಕ್ಷನ್​ನಿಂದ ತಗ್ಲಾಕೊಂಡಿದ್ದೇ ರೋಚಕ! Rowdy Sheeter
14 ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರಚಿದ ರೌಡಿ ಶೀಟರ್ ಕೇವಲ ಒಂದು ಗ್ಯಾಸ್​ ಕನೆಕ್ಷನ್​ನಿಂದ ತಗ್ಲಾಕೊಂಡಿದ್ದೇ ರೋಚಕ! Rowdy Sheeter
Published on

ಪ್ರಮುಖ ಮುಖ್ಯಾಂಶಗಳು

  • 21 ಪ್ರಕರಣಗಳ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅರ್ಚಕನಾಗಿ ವೇಷ ಮರೆಸಿ ಬದುಕುತ್ತಿದ್ದ
  • ಗುರುತಿನ ಚೀಟಿಯಲ್ಲಿದ್ದ ಹೆಸರನ್ನು 'ವೈಷ್ಣವ್ ಗಣೇಶ್ ಮಹಾರಾಜ್' ಎಂದು ಬದಲಿಸಿದ್ದ
  • ಹಳೇ ಮೊಬೈಲ್​ ಸಂಖ್ಯೆ ಲಿಂಕ್ ಆಗಿದ್ದ ಗ್ಯಾಸ್ ಕನೆಕ್ಷನ್ ದಾಖಲೆಗೆ ಹೊಸ ವಿವರ ಅಪ್ಡೇಟ್ ಮಾಡಿ ಸಿಕ್ಕಿಬಿದ್ದ
  • ಗ್ಯಾಸ್ ಬುಕಿಂಗ್ ದಾಖಲೆಯಲ್ಲಿದ್ದ ಹೊಸ ವಿಳಾಸ ಪತ್ತೆಹಚ್ಚಿ ರೌಡಿಶೀಟರ್​ನನ್ನು ಬಂಧಿಸಿದ ಪೊಲೀಸರು
ಹೈದರಾಬಾದ್: ಬರೋಬ್ಬರಿ 21 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 14 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಹೈದರಾಬಾದ್‌ನ 'ಮೋಸ್ಟ್ ವಾಂಟೆಡ್' ರೌಡಿ ಶೀಟರ್ ( Rowdy Sheeter ) ಒಬ್ಬ, ಮಲಕ್‌ಪೇಟೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಅರ್ಚಕನ (ಪೂಜಾರಿ) ವೇಷ ಧರಿಸಿ ಹಾಯಾಗಿ ಜೀವನ ಸಾಗಿಸುತ್ತಿದ್ದ! ಆದರೆ, ವಿಧಿಯ ಆಟ ನೋಡಿ, ಇಷ್ಟು ವರ್ಷ ಪೊಲೀಸರಿಗೆ ದೊರಕದ ಈತ ಕೇವಲ ಒಂದು ಗ್ಯಾಸ್ ಕನೆಕ್ಷನ್ ಪಡೆಯಲು ಹೋಗಿ ಈಗ ಸಿಕ್ಕಿಬಿದ್ದಿದ್ದಾನೆ. ಈ ರೋಚಕ ಕಥೆಯ ಸಂಪೂರ್ಣ ವಿವರ ಇಲ್ಲಿದೆ.

ಸುಲ್ತಾನ್ ಬಜಾರ್‌ನ ಹಳೆಯ ಅಪರಾಧಿ

ಉತ್ತರ ಪ್ರದೇಶ ಮೂಲದ ವೈಷ್ಣವ್ ಕಿಶನ್ ದಾಸ್ ಎಂಬಾತನ ವಿರುದ್ಧ ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ 1999 ರಿಂದಲೇ ರೌಡಿ ಶೀಟ್ ದಾಖಲಾಗಿತ್ತು. ಈತನ ವಿರುದ್ಧ ಹೈದರಾಬಾದ್, ಸೈಬರಾಬಾದ್, ರಾಚಕೊಂಡ ಕಮಿಷನರೇಟ್‌ಗಳು ಸೇರಿದಂತೆ ತೆಲಂಗಾಣದ ವಿವಿಧ ಜಿಲ್ಲೆಗಳಲ್ಲಿ ಬರೋಬ್ಬರಿ 21 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಪೊಲೀಸರ ಪಾಲಿಗೆ ಈತ ದೀರ್ಘಕಾಲದಿಂದ ಮೋಸ್ಟ್ ವಾಂಟೆಡ್ ಅಪರಾಧಿಯಾಗಿದ್ದನು.

ಜೈಲಿನಿಂದ ಬಿಡುಗಡೆ ಮತ್ತು ನಾಪತ್ತೆ

2010ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ವೈಷ್ಣವ್ ಕಿಶನ್ ದಾಸ್‌ನನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಈತ, ಮೇ 2012ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದನು. ಆದರೆ, ಒಮ್ಮೆ ಜೈಲಿನಿಂದ ಹೊರಬಂದ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಪೊಲೀಸರ ಕಣ್ಣು ತಪ್ಪಿಸಿ ಸಂಪೂರ್ಣವಾಗಿ ತಲೆಮರೆಸಿಕೊಂಡಿದ್ದನು.

ಹೆಸರು ಬದಲಾಯಿಸಿ ಅರ್ಚಕನ ವೇಷ

2012ರ ನಂತರ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ವೈಷ್ಣವ್ ತನ್ನ ಗುರುತನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದನು. ತನ್ನ ಆಧಾರ್ ಕಾರ್ಡ್‌ನಲ್ಲಿದ್ದ 'ವೈಷ್ಣವ್ ಕಿಶನ್ ದಾಸ್' ಎಂಬ ಹೆಸರನ್ನು 'ವೈಷ್ಣವ್ ಗಣೇಶ್ ಮಹಾರಾಜ್' ಎಂದು ಬದಲಾಯಿಸಿಕೊಂಡಿದ್ದನು. ಅಷ್ಟೇ ಅಲ್ಲದೆ, ಹೈದರಾಬಾದ್‌ನ ಮಲಕ್‌ಪೇಟೆಯಲ್ಲಿ ವಾಸಿಸುತ್ತಾ, ಯಾರಿಗೂ ಕನಿಷ್ಠ ಅನುಮಾನವೂ ಬಾರದ ರೀತಿಯಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿಕೊಂಡು ಅರ್ಚಕನಾಗಿ ಜೀವನ ನಡೆಸತೊಡಗಿದ್ದನು. ಆದರೂ ಪೊಲೀಸ್ ತಂಡಗಳು ಈತನ ಸುಳಿವಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಲೇ ಇದ್ದವು.

ಸಿಕ್ಕಿಬೀಳಿಸಿದ ಗ್ಯಾಸ್ ಕನೆಕ್ಷನ್

ಇಷ್ಟು ವರ್ಷಗಳ ಕಾಲ ಅತ್ಯಂತ ಚಾಣಾಕ್ಷತನದಿಂದ ಅಡಗಿದ್ದ ರೌಡಿ ಶೀಟರ್, ಇತ್ತೀಚೆಗೆ ತಾನು ಬಳಸುತ್ತಿದ್ದ ಹಳೆಯ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಪೊಲೀಸರಿಗೆ ಪ್ರಮುಖ ಆಧಾರ ಒದಗಿಸಿದ್ದಾನೆ. ಆ ಹಳೆಯ ಮೊಬೈಲ್ ಸಂಖ್ಯೆಗೆ ಗ್ಯಾಸ್ ಕನೆಕ್ಷನ್ ಲಿಂಕ್ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಯು ನವೆಂಬರ್ ತಿಂಗಳಲ್ಲಿ ಗ್ಯಾಸ್ ಕನೆಕ್ಷನ್ ದಾಖಲೆಗಳಿಗೆ ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿದ್ದನು. ಆ ಹೊಸ ನಂಬರ್‌ನ ದಾಖಲಾತಿಯಲ್ಲಿ 'ವೈಷ್ಣವ್ ಗಣೇಶ್ ಮಹಾರಾಜ್' ಎಂಬ ಹೆಸರು ಇರುವುದನ್ನು ಗಮನಿಸಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.

ಕೊನೆಗೂ ಪೊಲೀಸರ ಬಲೆಗೆ

ಗ್ಯಾಸ್ ಕನೆಕ್ಷನ್ ದಾಖಲೆಗಳಲ್ಲಿದ್ದ ವಿಳಾಸವನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೊನೆಗೂ ಆರೋಪಿಯ ಮನೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ, ಈ ತಿಂಗಳ 27ರಂದು ಮಲಕ್‌ಪೇಟೆಯ ಆತನ ನಿವಾಸದ ಮೇಲೆಯೇ ದಾಳಿ ನಡೆಸಿದ ಪೊಲೀಸರು, 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ವೈಷ್ಣವ್ (ವೈಷ್ಣವ್ ಗಣೇಶ್ ಮಹಾರಾಜ್) ಅನ್ನು ಯಶಸ್ವಿಯಾಗಿ ಬಂಧಿಸಿ ಕಾನೂನಿನ ಕಠಿಣ ಕಾವಲಿಗೊಪ್ಪಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net