ಗಂಡದಿರೇ ಎಚ್ಚರ..!ಪಕೋಡಾ ತರಲು ಹೋದ ಪತಿ; ಪ್ರಿಯಕರನೊಂದಿಗೆ ಓಡಿಹೋದ ಪತ್ನಿ? Wife Ran Away

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಸಿವಾಗ್ತಿದೆ ಪಕೋಡಾ ತನ್ನಿ ಎಂದ ಪತ್ನಿ
  • ಪತ್ನಿಗೆ ಪಕೋಡಾ ತರಲು ಹೋದ ಪತಿ
  • ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ
ಉತ್ತರ ಪ್ರದೇಶ: ಮನೆಗೆ ಹಿಂತಿರುಗುತ್ತಿದ್ದಾಗ ಪತ್ನಿಗೆ ಹಸಿವಾದ ಕಾರಣ ಬಿಸಿಬಿಸಿ ಪಕೋಡಾ ತರಲು ಹೋದ ಪತಿ, ಬರುವಷ್ಟರಲ್ಲಿ ಪತ್ನಿ ಮಾಯ( Wife Ran Away) ವಾಗಿದ್ದಾಳೆ. ಸಿನಿಮಾ ಸ್ಟೈಲ್‌ನಲ್ಲಿ ನಡೆದ ಈ ಅಸಲಿ ಘಟನೆ ಈಗ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೋಳಿ ಹಬ್ಬಕ್ಕೆಂದು ತವರು ಮನೆಗೆ ಹೋಗಿದ್ದ ಪತ್ನಿ

ಅಮ್ರೋಹಾ ಜಿಲ್ಲೆಯ ಪ್ರೀತಮ್ ಸಿಂಗ್ ಕಳೆದ ವರ್ಷ ಡಿಸೆಂಬರ್ 1 ರಂದು ರಾಂಪುರದ 18 ವರ್ಷದ ಯುವತಿ ರಿಮ್ಜಿಮ್ ಎಂಬಾಕೆಯನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವು ತಿಂಗಳ ಬಳಿಕ ರಿಮ್ಜಿಮ್ ಹೋಳಿ ಹಬ್ಬದ ಆಚರಣೆಗಾಗಿ ತವರು ಮನೆಗೆ ಹೋಗಿದ್ದಳು.
ಹಬ್ಬ ಮುಗಿದ ಮೇಲೆ, ಪತ್ನಿಯನ್ನು ಕರೆತರಲು ಪ್ರೀತಮ್ ಮಾರ್ಚ್ 9 ರಂದು ಅತ್ತೆ ಮನೆಗೆ ಹೋಗಿದ್ದ. ದಂಪತಿಗಳು ಖುಷಿಯಾಗಿಯೇ ಅಲ್ಲಿಂದ ಮನೆಗೆ ಮರಳುತ್ತಿದ್ದರು. ಆದರೆ, ದಾರಿಯಲ್ಲಿ ಈ ರೀತಿಯ ಅನಾಹುತ ನಡೆಯಲಿದೆ ಎಂದು ತಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎನ್ನುತ್ತಾನೆ ಪ್ರೀತಮ್.

ಹಸಿವಾಗುತ್ತಿದೆ, ಪಕೋಡಾ ತನ್ನಿ; ಎಂದು ಪರಾರಿ!

ಪ್ರಯಾಣದ ಮಧ್ಯೆ ಇಬ್ಬರೂ ಬಿಲಾರಿ ಬಸ್ ನಿಲ್ದಾಣದಲ್ಲಿ ಮುಂದಿನ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದರು. ಈ ವೇಳೆ ರಿಮ್ಜಿಮ್ ತನಗೆ ಹಸಿವಾಗುತ್ತಿದೆ ಎಂದು ಹೇಳಿ, ಬಿಸಿಬಿಸಿ ಪಕೋಡಾ ತಿನ್ನುವ ಆಸೆ ವ್ಯಕ್ತಪಡಿಸಿದ್ದಾಳೆ. ಪತ್ನಿಯ ಆಸೆ ತೀರಿಸಲು ಪ್ರೀತಮ್ ಹತ್ತಿರದ ಅಂಗಡಿಗೆ ಹೋಗಿ ಪಕೋಡಾ ಆರ್ಡರ್ ಮಾಡಿದ್ದಾನೆ. ತಿಂಡಿ ಪೊಟ್ಟಣ ಹಿಡಿದು ಕೇವಲ ಐದಾರು ನಿಮಿಷಗಳಲ್ಲಿ ವಾಪಸ್ ಬಂದ ಪ್ರೀತಮ್‌ಗೆ ಅಲ್ಲಿದ್ದ ದೃಶ್ಯ ಕಂಡು ದಿಕ್ಕೇ ತೋಚದಂತಾಗಿದೆ.

ಹುಡುಕಾಟದ ನಂತರ ಬಯಲಾಯ್ತು ಶಂಕೆ

ಆರಂಭದಲ್ಲಿ ಹೆಂಡತಿ ಹತ್ತಿರದಲ್ಲೇ ಎಲ್ಲಿಯಾದರೂ ಹೋಗಿರಬಹುದು ಎಂದು ಪ್ರೀತಮ್ ಆತಂಕದಿಂದ ಹುಡುಕಾಡಿದರು. ಆದರೆ ಅಕ್ಕಪಕ್ಕದವರನ್ನು ಕೇಳಿದರೂ ಯಾರೂ ಅವಳು ಹೋದ ಸುಳಿವು ನೀಡಲಿಲ್ಲ. ಹತಾಶರಾದ ಪ್ರೀತಮ್ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಠಾಣೆಯಲ್ಲಿ ದೂರು ದಾಖಲಿಸುವಾಗ ಪ್ರೀತಮ್ ಶಂಕೆ ವ್ಯಕ್ತಪಡಿಸಿದ್ದಾರೆ. ರಿಮ್ಜಿಮ್ ತನ್ನ ತವರೂರಿನ ಯುವಕನ ಜೊತೆ ಓಡಿಹೋಗಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಆಕೆಯ ಮೊಬೈಲ್ ಲೊಕೇಶನ್ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಪಕೋಡಾ ತರಲು ಹೋದ ಪತಿಗೆ ಹೆಂಡತಿ ಕೈಕೊಟ್ಟು ಹೋದ ಈ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net