ಗ್ಲ್ಯಾಸ್ಗೋದಲ್ಲಿ ಮುಂದುವರಿದ ಪದಕಗಳ ಬೇಟೆ: 111 ಕೆಜಿ ಎತ್ತಿ 'ಬೆಳ್ಳಿ' ಪಡೆದ ಜ್ಞಾನೇಶ್ವರಿ ಯಾದವ್! Gyaneshwari Yadav
ವೇಟ್ಲಿಫ್ಟರ್ ಜ್ಞಾನೇಶ್ವರಿ ಯಾದವ್
Published on:
Copied
Follow Us
ಗ್ಲ್ಯಾಸ್ಗೋ: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
ಭಾರತದ ಹೆಮ್ಮೆಯ ವೇಟ್ಲಿಫ್ಟರ್ ಜ್ಞಾನೇಶ್ವರಿ ಯಾದವ್ (Gyaneshwari Yadav) ಮಹಿಳೆಯರ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಭಾರತದ ಪದಕದ ಖಾತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಇದು ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ತಂಡಕ್ಕೆ ಸಿಕ್ಕ ಐದನೇ ಪದಕವಾಗಿದೆ.
ಸ್ಪರ್ಧೆಯುದ್ದಕ್ಕೂ ಅತ್ಯುತ್ತಮ ಫಾರ್ಮ್ನಲ್ಲಿದ್ದ ಜ್ಞಾನೇಶ್ವರಿ ಯಾದವ್, ಸ್ನ್ಯಾಚ್ ವಿಭಾಗದಲ್ಲಿ 82 ಕೆಜಿ, 85 ಕೆಜಿ ಹಾಗೂ 88 ಕೆಜಿ ಭಾರವನ್ನು ಅದ್ಭುತವಾಗಿ ಎತ್ತುವ ಮೂಲಕ ಭರ್ಜರಿ ಆರಂಭ ಪಡೆದರು.
ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲೂ ಪೈಪೋಟಿ ತೀವ್ರವಾಗಿತ್ತು. ಆರಂಭದಲ್ಲಿ 103 ಕೆಜಿ ಎತ್ತಿದ ಜ್ಞಾನೇಶ್ವರಿಗೆ ನೈಜೀರಿಯಾದ ಬಲಶಾಲಿ ಆಟಗಾರ್ತಿ ಓನೋಮ್ ದಿದಿಹ್ ಕಠಿಣ ಸ್ಪರ್ಧೆ ನೀಡಿದರು. ದಿದಿಹ್ 105 ಕೆಜಿ ಎತ್ತುವ ಮೂಲಕ ಮುನ್ನಡೆ ಕಾಯ್ದುಕೊಂಡರು. ರೋಚಕ ಹಂತ ತಲುಪಿದ ಎರಡನೇ ಪ್ರಯತ್ನದಲ್ಲಿ ಜ್ಞಾನೇಶ್ವರಿ 107 ಕೆಜಿ ಎತ್ತಿದರೆ, ನೈಜೀರಿಯಾದ ಆಟಗಾರ್ತಿ 110 ಕೆಜಿ ಎತ್ತಿ ಮೇಲುಗೈ ಸಾಧಿಸಿದರು.
ಕೊನೆಯ ಹಾಗೂ ನಿರ್ಣಾಯಕ ಪ್ರಯತ್ನದಲ್ಲಿ ಭಾರತೀಯ ತಾರೆ ಜ್ಞಾನೇಶ್ವರಿ 111 ಕೆಜಿ ಭಾರವನ್ನು ಸಲೀಸಾಗಿ ಎತ್ತುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ನೈಜೀರಿಯಾದ ಓನೋಮ್ ದಿದಿಹ್ ಚಿನ್ನದ ಪದಕ ಗೆದ್ದರೆ, ಕೆನಡಾದ ರೆಬೆಕಾ ಗ್ರೌಲ್ಕ್ಸ್ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಈ ಬಾರಿಯ ಕ್ರೀಡಾಕೂಟಕ್ಕೂ ಮುನ್ನ ಭಾರತೀಯ ವೇಟ್ಲಿಫ್ಟಿಂಗ್ ತಂಡವು ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಡೋಪಿಂಗ್ ವಿವಾದಗಳಿಂದಾಗಿ ತಂಡದ ಸದಸ್ಯರ ಸಂಖ್ಯೆಯನ್ನು 16 ರಿಂದ 11 ಕ್ಕೆ ಇಳಿಸಲಾಯಿತು.
ಅಷ್ಟೇ ಅಲ್ಲದೆ, ಪ್ರಮುಖ ವೇಟ್ಲಿಫ್ಟರ್ ದಿಲ್ಬಾಗ್ ಸಿಂಗ್ ಕೂಡ ಕೊನೇ ಕ್ಷಣದಲ್ಲಿ ತಂಡದಿಂದ ಹೊರಬಿದ್ದಿದ್ದರು. ಇಷ್ಟೆಲ್ಲಾ ಹಿನ್ನಡೆಗಳು ಮತ್ತು ಅಡೆತಡೆಗಳ ನಡುವೆಯೂ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಯನ್ನು ಜಗತ್ತಿನ ಎತ್ತರಕ್ಕೆ ಏರಿಸಿದ್ದಾರೆ, (ಏಜನ್ಸೀಸ್).