ರೋಬಾಟ್​​ಗಿಂತ ಮನುಷ್ಯರೇ ಬೆಸ್ಟ್!

ಎಐ ಚಿತ್ರ
ಎಐ ಚಿತ್ರ
Published on

ಕಾರು ಕಾರ್ಖಾನೆಗಳಲ್ಲಿ ಮಾನವರಂತೆಯೇ ಇರುವ ರೋಬಾಟ್​ಗಳ (ಹ್ಯೂಮನಾಯ್ಡ್) ಮೇಲೆ ಬಿಲಿಯನ್​ಗಟ್ಟಲೇ ಹಣ ಹೂಡಿಕೆ ಮಾಡಿದರೂ, ಅವುಗಳ ಉತ್ಪಾದಕತೆ ಮಾನವರಿಗಿಂತ ತುಂಬ ಕಡಿಮೆಯಿದ್ದು, ಮಂದಗತಿಯಲ್ಲಿ ಸಾಗುತ್ತಿದೆ. ಅಮೆರಿಕದ ಸೌತ್ ಕ್ಯಾರೋಲಿನಾದ ಬಿಎಂಡಬ್ಲ್ಯು ಮತ್ತು ಜಾರ್ಜಿಯಾದ ಹುಂಡೈ ಪ್ಲಾಂಟ್​ನಲ್ಲಿ ಎಐ ರೋಬಾಟ್​ಗಳು ಟ್ರಾಲಿ ಎಳೆಯುವುದು ಹಾಗೂ ಬಿಡಿಭಾಗಗಳನ್ನು ಎತ್ತುವ ಕೆಲಸವನ್ನು ಮಾಡುತ್ತಿವೆ. ರೋಬಾಟ್​ಗಳು ಮಾನವರಿಗಿಂತ ನಿಧಾನವಾಗಿ ಕೆಲಸ ಮಾಡುತ್ತವೆ ಎಂದು ಬಿಎಂಡಬ್ಲ್ಯುನ ಲಾಜಿಸ್ಟಿಕ್ಸ್ ಉಪಾಧ್ಯಕ್ಷ ಉಲ್ರಿಚ್ ವೀಲ್ಯಾಂಡ್ ಒಪ್ಪಿಕೊಂಡಿದ್ದಾರೆ. ಎಐನ ತಪ್ಪುಗಳು ಮತ್ತು ಮಂದಗತಿಯ ಕೆಲಸದಿಂದ ಬೇಸತ್ತ ಫೋರ್ಡ್ ಕಂಪನಿಯು 350 ಅನುಭವಿ ಮತ್ತು ನಿವೃತ್ತ ಇಂಜಿನಿಯರ್​ಗಳನ್ನು ಕೆಲಸಕ್ಕೆ ಮರಳಿ ಕರೆಸಿಕೊಂಡಿದೆ. ಇವರ ನೆರವಿನಿಂದ ಗುಣಮಟ್ಟ ಸುಧಾರಿಸಿದೆ. ಇದೇ ಕಾರಣಕ್ಕೆ ‘ಜೆಡಿ ಪವರ್’ ಅಧ್ಯಯನದಲ್ಲಿ ಫೋರ್ಡ್​ಗೆ ಪ್ರಥಮ ಸ್ಥಾನ ಸಿಕ್ಕಿದ್ದು, ಕಾರ್ಯ ನಿರ್ವಹಣೆಯಲ್ಲಿ ರೋಬಾಟ್​ಗಳಿಗಿಂತ ಮನುಷ್ಯರೇ ಉತ್ತಮ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಜಾಗತಿಕ ವಾಹನ ಮತ್ತು ಉತ್ಪಾದನಾ ವಲಯದಲ್ಲಿ ಅತಿಯಾದ ಆಟೊಮೇಷನ್ ಹಿನ್ನಡೆ ಕಂಡಿದ್ದು, ರೋಬಾಟ್​ಗಳ ಬದಲಿಗೆ ಮಾನವ ಇಂಜಿನಿಯರ್​ಗಳ ಕಾರ್ಯಕ್ಷಮತೆ ಮತ್ತು ವಿವೇಚನೆಗೆ ಮತ್ತೆ ಹೆಚ್ಚಿನ ಪ್ರಾಶಸ್ಱ ನೀಡಲಾಗುತ್ತಿದೆ. ಸಾಮಾನ್ಯ ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ, ಸಮಸ್ಯೆ ಪರಿಹರಿಸುವ, ಪ್ರಕ್ರಿಯೆ ಆಪ್ಟಿಮೈಸ್ ಮಾಡುವ ಮತ್ತು ಸಿಸ್ಟಮ್ ನಿರ್ವಹಿಸುವ ಇಂಜಿನಿಯರಿಂಗ್ ಹುದ್ದೆಗಳು ಹೆಚ್ಚುತ್ತಿವೆ. ಎಲೆಕ್ಟ್ರಿಕಲ್ ವೈರಿಂಗ್, ಆಂತರಿಕ ಫಿಟ್ಟಿಂಗ್ ಮತ್ತು ಸಣ್ಣ ಲೋಪದೋಷಗಳನ್ನು ಗುರುತಿಸುವಲ್ಲಿ ಮಾನವನ ಸ್ಪರ್ಶ, ಕಣ್ಣಿನ ನೋಟ ಹಾಗೂ ಅನುಭವಕ್ಕೆ ಸರಿಸಾಟಿಯಾದ ನಿಖರತೆಯನ್ನು ರೋಬಾಟ್​ಗಳು ಇನ್ನೂ ಸಾಧಿಸಿಲ್ಲ. ರೋಬಾಟ್​ಗಳು ಭಾರ ಎತ್ತುವ ಅಥವಾ ನಿರಂತರ ಒಂದೇ ರೀತಿಯ ದೈಹಿಕ ಶ್ರಮಕ್ಕೆ ಮಾತ್ರ ಸೀಮಿತ; ಆದರೆ ನಿರ್ಣಯ, ವಿವೇಚನೆ ಮತ್ತು ಸೃಜನಶೀಲತೆಯ ಅಗತ್ಯವಿರುವ ಯಾವುದೇ ಕೆಲಸದಲ್ಲಿ ಮಾನವ ಬುದ್ಧಿಮತ್ತೆಯೇ ಅಂತಿಮ.

ಅವಲಂಬನೆ ಏಕೆ?

ಕಂಪನಿಗಳು ತಮ್ಮ ಕಾರ್ಖಾನೆಗಳ ಸ್ವರೂಪವನ್ನು ಬದಲಾಯಿಸದೆ ಆಟೋಮೇಷನ್ ಹೆಚ್ಚಿಸಲು ರೋಬಾಟ್​ಗಳ ಮೇಲೆ ನಂಬಿಕೆ ಇಡುತ್ತಿವೆ. ಏಕೆಂದರೆ ಈ ರೋಬಾಟ್​ಗಳು ಊಟದ ವಿರಾಮ, ಯೂನಿಯನ್ ಅಥವಾ ಆರೋಗ್ಯ ವಿಮೆ ಕೇಳುವುದಿಲ್ಲ. ಆದರೆ, ಸ್ಪರ್ಧೆಗೆ ಬಿದ್ದು ದುಬಾರಿ ರೋಬಾಟ್​ಗಳನ್ನು ತರುವುದರಿಂದ ಕೆಲಸ ನಿಧಾನವಾಗುತ್ತದೆ ಹಾಗೂ ಮಾನವರ ಬಳಿ ಕೇವಲ ಕಡಿಮೆ ಸಂಬಳದ, ಬೇಸರ ತರಿಸುವ ಕೆಲಸಗಳು ಮಾತ್ರ ಉಳಿಯುತ್ತವೆ. ಚೀನಾದಲ್ಲಿ ಬಲವಾದ ಬಿಡಿಭಾಗಗಳ ಪೂರೈಕೆ ಸರಪಳಿ ಇರುವುದರಿಂದ ರೋಬಾಟ್​ಗಳು ಅಗ್ಗದ ಬೆಲೆಯಲ್ಲಿ ತಯಾರಾಗುತ್ತವೆ. ಇದನ್ನು ಗಮನಿಸಿದ ಅಮೆರಿಕದ ಸಂಪರ್ಕ ನಿಯಂತ್ರಕ ಸಂಸ್ಥೆ (ಎಫ್​ಸಿಸಿ) ಇವುಗಳ ಆಮದಿನ ಮೇಲೆ ನಿಷೇಧ ಹೇರಿದೆ. ಟೆಸ್ಲಾದ ಎಲಾನ್ ಮಸ್ಕ್ ಅವರು ಆಪ್ಟಿಮಸ್ ರೋಬಾಟ್ ಉತ್ಪಾದನೆಗಾಗಿ ಕ್ಯಾಲಿಫೋರ್ನಿಯಾದಲ್ಲಿ ಮಾಡೆಲ್ ಎಸ್ ಮತ್ತು ಎಕ್ಸ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ. ಲಾಸ್ ಏಂಜಲೀಸ್​ನಲ್ಲಿರುವ ಟೆಸ್ಲಾದ ರೆಸ್ಟೋರೆಂಟ್​ನಲ್ಲಿ ಈ ರೋಬಾಟ್ ಬಳಸಿದ ನಂತರ, ಮಾನವನ ಕೈಗಳ ಚಾತುರ್ಯ ಮತ್ತು ಸೂಕ್ಷ್ಮತೆಯನ್ನು ನಕಲು ಮಾಡುವುದು ಕಷ್ಟಕರವಾದ ಸವಾಲು ಎಂದು ಮಸ್ಕ್ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ರೋಬಾಟ್​ಗಳು ಕೆಲಸದ ವೇಗ ಮತ್ತು ಉತ್ಪಾದಕತೆಯಲ್ಲಿ ಮಾನವರಿಗಿಂತ ಹಿಂದುಳಿದಿವೆ.

ಉದ್ಯೋಗಕ್ಕೆ ಬೆದರಿಕೆ

ಬಿಎಂಡಬ್ಲೂ್ಯ ಕಂಪನಿ ‘ಫಿಗರ್ ಎಐ’ ಮತ್ತು ಮರ್ಸಿಡಿಸ್ ಕಂಪನಿ ಆಪ್​ಟ್ರಾನಿಕ್ ರೋಬಾಟ್​ಗಳನ್ನು ಬಳಸುತ್ತಿವೆ. ‘ರೋಬಾಟ್​ಗಳು ಬರುವುದರಿಂದ ಮಾನವರಿಗೆ ಅವುಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಉತ್ತಮ ಉದ್ಯೋಗಗಳು ಸಿಗಲಿವೆ’ ಎಂದು ಹುಂಡೈನ ಮುಖ್ಯ ಆಡಳಿತಾಧಿಕಾರಿ ಬ್ರೆಂಟ್ ಸ್ಟಬ್ಸ್ ಪ್ರತಿಪಾದಿಸಿದ್ದಾರೆ. ಆದರೆ, ಅಮೆರಿಕದ ಯುನೈಟೆಡ್ ಆಟೋಮೋಟಿವ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಶಾನ್ ಫೇನ್ ಇದನ್ನು ಮಾನವ ಉದ್ಯೋಗಗಳಿಗೆ ತೀವ್ರ ಬೆದರಿಕೆ ಎಂದು ಬಣ್ಣಿಸಿದ್ದಾರೆ. ಈ ವಿರೋಧದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಹುಂಡೈ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ರೋಬಾಟ್​ಗಳ ಬಳಕೆ ತಗ್ಗಿರುವುದೇಕೆ?

  • ಆಧುನಿಕ ಕಾರುಗಳಲ್ಲಿ ಗ್ರಾಹಕರಿಗೆ ಹತ್ತಾರು ಆಯ್ಕೆಗಳು ಇರುತ್ತವೆ. ಪ್ರತಿ ಸಣ್ಣ ವಿನ್ಯಾಸ ಬದಲಾವಣೆಗೂ ರೋಬಾಟ್​ಗಳನ್ನು ಮರು-ಪೋ›ಗ್ರಾಂ ಮಾಡಲು ಅಪಾರ ಸಮಯ ತಗಲುತ್ತದೆ ಮತ್ತು ಇದು ವೆಚ್ಚದಾಯಕ ಕೂಡ. ಆದರೆ ಇಂಜಿನಿಯರ್​ಗಳು ತಕ್ಷಣ ಹೊಂದಿಕೊಳ್ಳುತ್ತಾರೆ.
  • ಸಂಕೀರ್ಣ ಹ್ಯೂಮನಾಯ್ಡ್ ರೋಬಾಟ್​ಗಳಲ್ಲಿ ಸಣ್ಣ ತಾಂತ್ರಿಕ ದೋಷ ಉಂಟಾದರೂ ಇಡೀ ಅಸೆಂಬ್ಲಿ ಲೈನ್ ಸ್ಥಗಿತಗೊಳ್ಳುತ್ತದೆ. ಇವುಗಳ ನಿರ್ವಹಣೆ, ಸೆನ್ಸಾರ್ ಮಾಪನಾಂಕ ನಿರ್ಣಯ ಮತ್ತು ದುರಸ್ತಿ ಅತ್ಯಂತ ದುಬಾರಿ.
  • ರೋಬಾಟ್​ಗಳು ಪೋ›ಗ್ರಾಂ ಮಾಡಿದ ಕೆಲಸವನ್ನು ಮಾತ್ರ ಪುನರಾವರ್ತಿಸುತ್ತವೆ. ಆದರೆ ಇಂಜಿನಿಯರ್​ಗಳು ಉತ್ಪಾದನಾ ಪ್ರಕ್ರಿಯೆಯನ್ನು ವಿಶ್ಲೇಷಿಸಿ, ಹೊಸ ಸುಧಾರಣೆಗಳನ್ನು ತಂದು ನಷ್ಟವನ್ನು ತಡೆಯುತ್ತಾರೆ.

ಪರಿಣಾಮಗಳು

  • ಸಂಪೂರ್ಣ ಆಟೊಮೇಷನ್ ಬದಲಿಗೆ ಮಾನವರು ಮತ್ತು ಯಂತ್ರಗಳು ಜತೆಗೂಡಿ ಕೆಲಸ ಮಾಡುವ ‘ಕೋಬಾಟ್ಸ್’ (ಇಟ್ಝ್ಝಚಿಟ್ಟಚಠಿಜಿಡಛಿ ್ಕಚಿಟಠಿಠ) ಸಂಸ್ಕೃತಿ ರೂಪುಗೊಳ್ಳುತ್ತಿದೆ.
  • ಅತಿಯಾದ ಯಾಂತ್ರೀಕರಣದ ಬಂಡವಾಳ ಹೂಡಿಕೆ ಕಡಿಮೆಯಾಗಿ, ಕಂಪನಿಗಳು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ವೇಗವಾಗಿ ವಾಹನ ವಿನ್ಯಾಸ ಬದಲಾಯಿಸಲು ಸಾಧ್ಯವಾಗುತ್ತಿದೆ.

ಮಾನವನಿಗೆ ಇಲ್ಲ ಸರಿಸಾಟಿ

ಸಮಸ್ಯೆಗಳಿಗೆ ಪರಿಹಾರ: ನಿಯಮಾವಳಿಗಳ ಹೊರತಾಗಿಯೂ ಹೊಸ ಸನ್ನಿವೇಶ ಅಥವಾ ತಾಂತ್ರಿಕ ಬಿಕ್ಕಟ್ಟು ಎದುರಾದಾಗ ಮನುಷ್ಯರು ತಮ್ಮ ಸಾಮಾನ್ಯ ಜ್ಞಾನ, ಅನುಭವ, ಕುಶಲತೆ, ಕಾಳಜಿ ಮತ್ತು ವಿವೇಚನೆಯಿಂದ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ರೋಬಾಟ್​ಗಳು ಪೋ›ಗ್ರಾಂ ಮಾಡದ ಸನ್ನಿವೇಶಗಳಲ್ಲಿ ಸ್ಥಗಿತಗೊಳ್ಳುತ್ತವೆ.

ಹೊಂದಾಣಿಕೆ: ಕೆಲಸದ ಸ್ವರೂಪ ಅಥವಾ ಉತ್ಪನ್ನದ ವಿನ್ಯಾಸವು ಬದಲಾದಾಗ ಮನುಷ್ಯರು ಕಡಿಮೆ ಸಮಯದಲ್ಲಿ ಅದಕ್ಕೆ ಒಗ್ಗಿಕೊಳ್ಳುತ್ತಾರೆ. ರೋಬಾಟ್​ಗಳಿಗೆ ಮರು-ಕೋಡಿಂಗ್ ಮತ್ತು ದುಬಾರಿ ಸೆಟಪ್ ಬದಲಾವಣೆಗಳು ಬೇಕಾಗುತ್ತವೆ.

ಭಾವನಾತ್ಮಕ ಬುದ್ಧಿಮತ್ತೆ: ಸಹೋದ್ಯೋಗಿಗಳ ಜತೆ ಸಮನ್ವಯ ಸಾಧಿಸುವುದು, ಕೆಲಸಕ್ಕಾಗಿ ಅವರನ್ನು ಹುರಿದುಂಬಿಸುವುದು, ಗ್ರಾಹಕರ ಭಾವನೆಗಳನ್ನು ಅರ್ಥೈಸಿಕೊಳ್ಳುವುದು, ಸ್ಪಂದಿಸುವುದು, ಮಾತುಕತೆ ನಡೆಸುವುದು ಮತ್ತು ತಂಡವನ್ನು ಮುನ್ನಡೆಸುವುದು ಮಾನವರಿಂದ ಮಾತ್ರ ಸಾಧ್ಯ.

ಸೃಜನಶೀಲತೆ: ರೋಬಾಟ್​ಗಳು ಇರುವ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತವೆ. ಆದರೆ ಹೊಸ ಉತ್ಪನ್ನಗಳ ವಿನ್ಯಾಸ, ಕೆಲಸವನ್ನು ಇನ್ನಷ್ಟು ಸುಲಭಗೊಳಿಸುವ ಹೊಸ ಉಪಾಯಗಳು ಮತ್ತು ಪ್ರಕ್ರಿಯೆ ಸುಧಾರಣೆಗಳು ಮಾನವನ ಕಲ್ಪನಾಶಕ್ತಿಯಿಂದಲೇ ಹುಟ್ಟುತ್ತವೆ.

ಸೂಕ್ಷ್ಮ ಗ್ರಹಿಕೆ: ಎಲೆಕ್ಟ್ರಿಕಲ್ ವೈರಿಂಗ್, ಸೂಕ್ಷ ್ಮ ಜೋಡಣೆ ಹಾಗೂ ಕಣ್ಣು ಮತ್ತು ಬೆರಳುಗಳ ಸ್ಪರ್ಶದಿಂದ ಗುಣಮಟ್ಟ ಪರಿಶೀಲಿಸುವಲ್ಲಿ ಮಾನವನ ಇಂದ್ರಿಯಗಳ ನಿಖರತೆಯನ್ನು ಯಾವುದೇ ಸೆನ್ಸಾರ್ ಸಂಪೂರ್ಣವಾಗಿ ಮೀರಿಸಲು ಸಾಧ್ಯವಾಗಿಲ್ಲ.

ಸ್ಪಷ್ಟ ನಿದರ್ಶನಗಳು

ಎಲಾನ್ ಮಸ್ಕ್ ಒಡೆತನದ ಟೆಸ್ಲಾ

ಕಂಪನಿಯು 2018ರಲ್ಲಿ ಮಾಡೆಲ್ 3 ಕಾರುಗಳ ಉತ್ಪಾದನೆಗೆ ‘ಏಲಿಯನ್ ಡ್ರೆಡ್​ನಾಟ್’ ಎಂಬ ಸಂಪೂರ್ಣ ಮಾನವರಹಿತ ಸ್ವಯಂಚಾಲಿತ ಫ್ಯಾಕ್ಟರಿ ಕಲ್ಪನೆಯನ್ನು ಜಾರಿಗೆ ತಂದಿತು. ವೈರಿಂಗ್ ಮತ್ತು ಬ್ಯಾಟರಿ ಪ್ಯಾಕ್ ಜೋಡಣೆಗೆ ನೂರಾರು ರೋಬಾಟ್​ಗಳನ್ನು ಬಳಸಲಾಯಿತು.

ಸಮಸ್ಯೆ: ಸಂಕೀರ್ಣ ವೈರಿಂಗ್ ಹಾರ್ನೆಸ್​ಗಳನ್ನು ಜೋಡಿಸು ವಲ್ಲಿ ರೋಬಾಟ್​ಗಳು ಪದೇಪದೆ ವಿಫಲವಾದವು. ಸಣ್ಣ ದೋಷವೂ ಇಡೀ ಅಸೆಂಬ್ಲಿ ಲೈನ್ ನಿಲ್ಲುವಂತೆ ಮಾಡಿ ಭಾರಿ ನಷ್ಟ ಉಂಟುಮಾಡಿತು.

ಬದಲಾವಣೆ: ಎಲಾನ್ ಮಸ್ಕ್ ಸಾರ್ವಜನಿಕ ಹೇಳಿಕೆ ನೀಡಿ, ‘ಟೆಸ್ಲಾದಲ್ಲಿ ಅತಿಯಾದ ಆಟೊಮೇಷನ್ ಒಂದು ದೊಡ್ಡ ತಪ್ಪು, ಮಾನವರ ಸಾಮರ್ಥ್ಯವನ್ನು ನಾವು ಕಡೆಗಣಿಸಿದ್ದೆವು’ ಎಂದು ಒಪ್ಪಿಕೊಂಡರು. ನಂತರ ವೈರಿಂಗ್ ಮತ್ತು ಗುಣಮಟ್ಟ ತಪಾಸಣೆಯಂತಹ ಕ್ಲಿಷ್ಟಕರ ಕೆಲಸಗಳಿಂದ ರೋಬಾಟ್​ಗಳನ್ನು ತೆಗೆದು ಇಂಜಿನಿಯರ್​ಗಳನ್ನು ನಿಯೋಜಿಸಿದರು. ಇದರಿಂದ ಉತ್ಪಾದನಾ ವೇಗ ಗಣನೀಯವಾಗಿ ಹೆಚ್ಚಿತು.

ಮರ್ಸಿಡಿಸ್-ಬೆಂಜ್ ಕಂಪನಿಯು ಜರ್ಮನಿಯ ಸಿಂಡೆಲ್​ಫಿಂಗೆನ್ ಕಾರ್ಖಾನೆಯಲ್ಲಿ ಐಷಾರಾಮಿ ಎಸ್-ಕ್ಲಾಸ್ ಕಾರುಗಳ ಉತ್ಪಾದನಾ ಸಾಲಿನಿಂದ ಕೆಲವು ಬೃಹತ್ ರೋಬಾಟ್​ಗಳನ್ನು ತೆಗೆದುಹಾಕಿತು.

ಸಮಸ್ಯೆ: ಎಸ್-ಕ್ಲಾಸ್ ಕಾರುಗಳಲ್ಲಿ ಗ್ರಾಹಕರು ಹಲವು ವೈಯಕ್ತಿಕ ಆಯ್ಕೆಗಳನ್ನು (ವಿವಿಧ ಲೆದರ್, ಕಾರ್ಬನ್-ಫೈಬರ್ ಟ್ರಿಮ್ಳು, ವಿನ್ಯಾಸದ ಲೈಟ್​ಗಳು) ಬಯಸುತ್ತಾರೆ. ಪ್ರತಿ ಗ್ರಾಹಕನ ಆದ್ಯತೆಗೆ ತಕ್ಕಂತೆ ಬೃಹತ್ ಕೈಗಾರಿಕಾ ರೋಬಾಟ್​ಗಳನ್ನು ಪದೇಪದೆ ಮರು-ಪೋ›ಗ್ರಾಂ ಮಾಡಲು ವಾರಗಟ್ಟಲೇ ಸಮಯ ಬೇಕಾಗುತ್ತಿತ್ತು.

ಬದಲಾವಣೆ: ಕಂಪನಿಯು ಬೃಹತ್ ರೋಬಾಟ್​ಗಳ ಬದಲಿಗೆ ಇಂಜಿನಿಯರ್​ಗಳು ಮತ್ತು ಅವರಿಗೆ ನೆರವಾಗುವ ಸಣ್ಣ ಕೋಬಾಟ್​ಗಳನ್ನು ನಿಯೋಜಿಸಿತು. ಮರ್ಸಿಡಿಸ್​ನ ಉತ್ಪಾದನಾ ಮುಖ್ಯಸ್ಥರು ಹೇಳಿದಂತೆ, ರೋಬಾಟ್​ಗಳು ಮಾನವರಷ್ಟು ವೇಗವಾಗಿ ವೈವಿಧ್ಯಮಯ ವಿನ್ಯಾಸ ಗಳಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net