ಸಿಎಸ್‌ಕೆಗೆ ಭಾರಿ ಆಘಾತ: ಪ್ಲೇ-ಆಫ್ ರೇಸ್‌ನಿಂದ ಹೊರಬೀಳುತ್ತಾ ಋತು ಪಡೆ? ಸ್ಟಾರ್ ಆಲ್‌ರೌಂಡರ್ ಓವರ್ಟನ್ ಟೂರ್ನಿಯಿಂದ ಔಟ್! Jamie Overton

ಸಿಎಸ್‌ಕೆಗೆ ಭಾರಿ ಆಘಾತ: ಪ್ಲೇ-ಆಫ್ ರೇಸ್‌ನಿಂದ ಹೊರಬೀಳುತ್ತಾ ಋತು ಪಡೆ? ಸ್ಟಾರ್ ಆಲ್‌ರೌಂಡರ್ ಓವರ್ಟನ್ ಟೂರ್ನಿಯಿಂದ ಔಟ್!
ಸಿಎಸ್‌ಕೆಗೆ ಭಾರಿ ಆಘಾತ: ಪ್ಲೇ-ಆಫ್ ರೇಸ್‌ನಿಂದ ಹೊರಬೀಳುತ್ತಾ ಋತು ಪಡೆ? ಸ್ಟಾರ್ ಆಲ್‌ರೌಂಡರ್ ಓವರ್ಟನ್ ಟೂರ್ನಿಯಿಂದ ಔಟ್!
Published on
ಚೆನ್ನೈ: ಐಪಿಎಲ್ 2026ರಲ್ಲಿ ಪ್ಲೇ-ಆಫ್ ಹಂತ ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯದ ಸಮಸ್ಯೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಜೇಮಿ ಓವರ್ಟನ್ (Jamie Overton) ಗಂಭೀರ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ತೊರೆದು ಯುನೈಟೆಡ್ ಕಿಂಗ್‌ಡಮ್‌ಗೆ ಮರಳಿದ್ದಾರೆ.
ಗುರುವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಎಸ್‌ಕೆ ಫ್ರಾಂಚೈಸಿ, ಜೇಮಿ ಓವರ್ಟನ್ ಅವರ ಬಲ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ತಪಾಸಣೆಗಾಗಿ ಅವರು ಇಂಗ್ಲೆಂಡ್‌ಗೆ ಮರಳುತ್ತಿದ್ದಾರೆ ಎಂದು ತಿಳಿಸಿದೆ.

ಸಿಎಸ್‌ಕೆ ಪಾಲಿನ 'ಮ್ಯಾಚ್ ವಿನ್ನರ್' ಮರೆಯಾದರೇ?

ಈ ಸೀಸನ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಜೇಮಿ ಓವರ್ಟನ್ ಕೇವಲ ಆಟಗಾರನಾಗಿರಲಿಲ್ಲ, ಬದಲಾಗಿ ತಂಡದ ಬೆನ್ನೆಲುಬಾಗಿದ್ದರು. ಮೇ 11 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ 36 ರನ್‌ಗಳಿಗೆ 3 ವಿಕೆಟ್ ಕಿತ್ತು ಚೆನ್ನೈಗೆ 5 ವಿಕೆಟ್‌ಗಳ ಭರ್ಜರಿ ಜಯ ತಂದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲಾ ವಿಕೆಟ್ ಪಡೆಯುವ ಓವರ್ಟನ್ ಅವರ ಅನುಪಸ್ಥಿತಿ ಈಗ ನಾಯಕ ಋತುರಾಜ್ ಗಾಯಕ್ವಾಡ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಐಪಿಎಲ್ 2026ರಲ್ಲಿ ಓವರ್ಟನ್ ಆರ್ಭಟ: ಅಂಕಿ-ಅಂಶಗಳ ಇಣುಕು

ಆರಂಭದಲ್ಲಿ ನಾಥನ್ ಎಲ್ಲಿಸ್ ಅವರ ಬದಲಿಯಾಗಿ ತಂಡ ಸೇರಿದ್ದ ಓವರ್ಟನ್, ಅತ್ಯಲ್ಪ ಅವಧಿಯಲ್ಲಿ ತಂಡದ ಅನಿವಾರ್ಯ ಆಟಗಾರನಾಗಿ ಬೆಳೆದಿದ್ದರು. ಈ ಸೀಸನ್‌ನಲ್ಲಿ ಅವರ ಸಾಧನೆ ಇಲ್ಲಿದೆ.
ಪಂದ್ಯಗಳು: 10
ರನ್‌ಗಳು: 136
ವಿಕೆಟ್‌ಗಳು: 14 (ಸಿಎಸ್‌ಕೆ ಪರ ಈ ಸೀಸನ್‌ನ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್)
ಮಿಡಲ್ ಓವರ್‌ಗಳ ಕಿಂಗ್: ಮಿಡಲ್ ಓವರ್‌ಗಳಲ್ಲಿ (7 ರಿಂದ 15ನೇ ಓವರ್) ಓವರ್ಟನ್ ಬರೋಬ್ಬರಿ 10 ವಿಕೆಟ್ ಕಬಳಿಸಿದ್ದಾರೆ. ಈ ಹಂತದಲ್ಲಿ ಅವರ ಎಕಾನಮಿ ದರ ಕೇವಲ 7.61 ಆಗಿತ್ತು.
ರಶೀದ್ ಖಾನ್ (13 ವಿಕೆಟ್) ಮತ್ತು ನೂರ್ ಅಹ್ಮದ್ (12 ವಿಕೆಟ್) ಅವರ ನಂತರ ಮಿಡಲ್ ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು.

ಗಾಯಾಳುಗಳ ಪಟ್ಟಿ ಮತ್ತು ಪ್ಲೇ-ಆಫ್ ಸವಾಲು

ಈ ಬಾರಿಯ ಐಪಿಎಲ್ ಸಿಎಸ್‌ಕೆ ಪಾಲಿಗೆ ದೈಹಿಕವಾಗಿ ಅತ್ಯಂತ ಕಠಿಣವಾಗಿದೆ. ಓವರ್ಟನ್ ಹೊರಬರುವ ಮೊದಲೇ ತಂಡವು ಪ್ರಮುಖ ಆಟಗಾರರನ್ನು ಗಾಯದ ಕಾರಣದಿಂದ ಕಳೆದುಕೊಂಡಿದೆ:
ಆಯುಷ್ ಮ್ಹಾತ್ರೆ: ತಂಡದ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಹೊರಗಿದ್ದಾರೆ.
ಖಲೀಲ್ ಅಹ್ಮದ್: ತಂಡದ ಪ್ರಮುಖ ವೇಗಿಯಾಗಿದ್ದರು.
ರಾಮಕೃಷ್ಣ ಘೋಷ್: ಇವರು ಕೂಡ ಗಾಯದ ಸಮಸ್ಯೆಯಿಂದ ಲಭ್ಯವಿಲ್ಲ.
ಪ್ರಮುಖ ಆಟಗಾರರು ಒಬ್ಬೊಬ್ಬರಾಗಿ ತಂಡದಿಂದ ಹೊರಬೀಳುತ್ತಿರುವುದು ಸಿಎಸ್‌ಕೆ ಲಯವನ್ನು ಕೆಡಿಸಿದೆ. ಗಣಿತದ ಲೆಕ್ಕಾಚಾರದ ಪ್ರಕಾರ ಚೆನ್ನೈ ಇನ್ನೂ ಪ್ಲೇ-ಆಫ್ ರೇಸ್‌ನಲ್ಲಿದ್ದರೂ, ಓವರ್ಟನ್ ಅವರಂತಹ ಮ್ಯಾಚ್ ವಿನ್ನರ್ ಇಲ್ಲದೆ ಮುಂಬರುವ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯದ ಮಾತಾಗಿದೆ. ಅವರ ಅನುಪಸ್ಥಿತಿಯು ಬೌಲಿಂಗ್ ಸಮತೋಲನದ ಮೇಲೆ ಮಾತ್ರವಲ್ಲದೆ, ಲೋಯರ್ ಆರ್ಡರ್ ಬ್ಯಾಟಿಂಗ್ ಮೇಲೂ ಭಾರಿ ಪರಿಣಾಮ ಬೀರಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಈಗ "ಥಾಲಾ" ಧೋನಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಚಾಣಾಕ್ಷ ನಡೆಗಳ ಮೇಲೆ ಭರವಸೆ ಇಟ್ಟಿದ್ದಾರೆ. ಓವರ್ಟನ್ ಅವರ ಸ್ಥಾನವನ್ನು ತುಂಬುವಂತಹ ಬದಲಿ ಆಟಗಾರ ಯಾರು ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net