ವಿಧಾನಸಭೆಯಲ್ಲಿ ವಿಜಯ್ 'ಪರ್ಫೆಕ್ಟ್ ಸ್ಕ್ರಿಪ್ಟ್'... ಎದುರಾಳಿಗಳೇ ಇಲ್ಲದಂತೆ ವಿಶ್ವಾಸಮತ ಗೆದ್ದ ದಳಪತಿ ತಂತ್ರ ಹೀಗಿದೆ! | Tamil Nadu Floor Test

 Tamil Nadu Floor Test | ವಿಜಯ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ ಆ ಒಂದು ನಡೆ
Tamil Nadu Floor Test | ವಿಜಯ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ ಆ ಒಂದು ನಡೆ
Published on
Tamil Nadu Floor Test: ತಮಿಳುನಾಡಿನಲ್ಲಿ ಒಂದು ವಾರ ನಡೆದ ಹೈಡ್ರಾಮಾಕ್ಕೆ ಸುಖಾಂತ್ಯ ಸಿಕ್ಕಿದ್ದು, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿಧಾನಸಭೆಯ ಬಹುಮತ ಪರೀಕ್ಷೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಸತತ ಮೂರು ದಿನಗಳ ಕಾಲ ತಮಿಳುನಾಡು ರಾಜ್ಯಪಾಲರು ಟಿವಿಕೆ ಪಕ್ಷದ ಸಂಖ್ಯಾಬಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಿದ್ದರು.
ಆದರೆ, ಅಂತಿಮವಾಗಿ ಸದನದಲ್ಲಿ ನಡೆದ ಅಗ್ನಿಪರೀಕ್ಷೆಯಲ್ಲಿ ವಿಜಯ್ ಬಹುಮತ ಸಾಬೀತುಪಡಿಸಿದ್ದಲ್ಲದೆ, ತಮ್ಮ ಮೈತ್ರಿಕೂಟದ ಆಚೆಗೂ ಬೆಂಬಲ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಜಯದ ಸಂಖ್ಯೆಗಳು ರೋಚಕವಾಗಿದ್ದು, 144 ಶಾಸಕರು ವಿಜಯ್ ಪರವಾಗಿ ಮತ ಚಲಾಯಿಸಿದರೆ, ಕೇವಲ 22 ಶಾಸಕರು ಮಾತ್ರ ವಿರುದ್ಧವಾಗಿ ನಿಂತರು.

ಮತಗಳ ಲೆಕ್ಕಾಚಾರ ಹೀಗಿದೆ!...

ಟಿವಿಕೆಯ 105 ಶಾಸಕರು, ಎಐಎಡಿಎಂಕೆಯ 25 ರೆಬೆಲ್​ ಶಾಸಕರು, ಕಾಂಗ್ರೆಸ್‌ನ 5, ಎಡಪಕ್ಷಗಳ 4, ಐಯುಎಂಎಲ್‌ನ 2, ವಿಸಿಕೆಯ 2 ಮತ್ತು ಎಎಂಎಂಕೆಯ ಒಬ್ಬ ಶಾಸಕರು ವಿಜಯ್ ಅವರಿಗೆ ಬೆಂಬಲ ಸೂಚಿಸಿದರು. ಕೇವಲ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪಕ್ಷವೊಂದು, ತಮಿಳುನಾಡು ರಾಜಕೀಯದ ದಿಗ್ಗಜರಾದ ಕರುಣಾನಿಧಿ ಮತ್ತು ಎಂಜಿಆರ್ ಕಾಲದ ಸಿನಿಮಾ-ರಾಜಕೀಯ ಸಮ್ಮಿಲನವನ್ನು ನೆನಪಿಸುವಂತೆ ಈ ಸಾಧನೆ ಮಾಡಿದೆ. ಬುಧವಾರ ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಹಾಗೂ ಬ್ಲೇಜರ್ ಧರಿಸಿ ಶಾಂತಚಿತ್ತದಿಂದ ವಿಧಾನಸಭೆಗೆ ಬಂದ ವಿಜಯ್ ಆತ್ಮವಿಶ್ವಾಸವು ಯುದ್ಧವನ್ನು ಮೊದಲೇ ಗೆದ್ದಂತೆ ಭಾಸವಾಗುತ್ತಿತ್ತು.
ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ವಿಜಯ್ ತಾವು ಗೆದ್ದಿದ್ದ ಎರಡು ಕ್ಷೇತ್ರಗಳಲ್ಲಿ ತಿರುಚ್ಚಿ ಪೂರ್ವವನ್ನು ಬಿಟ್ಟುಕೊಟ್ಟಿದ್ದರಿಂದ ಮತ್ತು ಸ್ಪೀಕರ್ ಮತವನ್ನು ಹೊರಗಿಟ್ಟಿದ್ದರಿಂದ ಸಂಖ್ಯಾಬಲ 232ಕ್ಕೆ ಇಳಿದಿತ್ತು. ಇದಲ್ಲದೆ, ಸುಪ್ರೀಂ ಕೋರ್ಟ್‌ನಿಂದ ತಡೆ ಪಡೆದಿದ್ದ ಟಿವಿಕೆ ಶಾಸಕ ಶ್ರೀನಿವಾಸ ಸೇತುಪತಿ ಪ್ರಕರಣವೂ ಸೇರಿ ಅಂತಿಮವಾಗಿ ಸದನದ ಬಲ 231 ಆಗಿತ್ತು. ಟಿವಿಕೆಗೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬೆಂಬಲ ನೀಡಿದವು. ಈ ನಡುವೆ, ವಿಜಯ್ ವಿರುದ್ಧ ಈ ಹಿಂದೆ ಸಹಿ ನಕಲಿ ಆರೋಪ ಮಾಡಿದ್ದ ಎಎಂಎಂಕೆ ಶಾಸಕ ಕಾಮರಾಜ್ ಕೂಡ ಯೂ-ಟರ್ನ್ ಹೊಡೆದು ವಿಜಯ್ ಪರ ಮತ ಚಲಾಯಿಸಿದರು.

ಎಐಎಡಿಎಂಕೆಯಲ್ಲಿ ಅಸಮಾಧಾನ ಸ್ಫೋಟ!..

ಎಐಎಡಿಎಂಕೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ, ವಿಜಯ್ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದ್ದರೂ, ಎಸ್‌ಪಿ ವೇಲುಮಣಿ ನೇತೃತ್ವದ 25 ಶಾಸಕರ ಬಂಡಾಯ ಬಣವು ಟಿವಿಕೆ ಪರವಾಗಿ ಮತ ಚಲಾಯಿಸಿತು. ಇದು ಎಐಎಡಿಎಂಕೆಯೊಳಗಿನ ಬಿರುಕನ್ನು ಬಟಾ ಬಯಲು ಮಾಡಿದ್ದು, ಇಪಿಎಸ್​ ಅನರ್ಹತೆಯ ಬೆದರಿಕೆಯಿಂದಾಗಿ ಕೆಲವು ಶಾಸಕರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರಿಂದ ವೇಲುಮಣಿ ಬಣಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಬೇಕಾದ 2/3 ಬಹುಮತ ಸಿಗಲಿಲ್ಲ.
ಇನ್ನುಳಿದಂತೆ ಪಿಎಂಕೆ ಮತ್ತು ಬಿಜೆಪಿ ಮತದಾನದಿಂದ ದೂರ ಉಳಿದರೆ, ಡಿಎಂಕೆ ಪಕ್ಷವು ವಿಜಯ್​ರನ್ನು ಕಟುವಾಗಿ ಟೀಕಿಸಿದರೂ ಮತದಾನದ ವೇಳೆ ಹೊರನಡೆದು ಪರೋಕ್ಷವಾಗಿ ಬಹುಮತದ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಯಿತು. ವಿಜಯ್​​ರ ಈ ಯಶಸ್ಸಿಗೆ ಅವರ ರಾಜಕೀಯ ಪ್ರಬುದ್ಧತೆಯೇ ಮುಖ್ಯ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರು ಎಂ.ಕೆ. ಸ್ಟಾಲಿನ್ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಗೌರವ ಸೂಚಿಸಿದರು. ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯಕಾಂತ್ ಹೇಳಿದಂತೆ, ವಿಜಯ್ ವಿರೋಧ ಪಕ್ಷಗಳನ್ನು ಶತ್ರುಗಳಂತೆ ನೋಡದೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಗುಣ ಪ್ರದರ್ಶಿಸಿದರು.
ಬಹುಮತದ ಈ ಪರೀಕ್ಷೆಯಲ್ಲಿ ವಿಜಯ್ ಗೆದ್ದಿರಬಹುದು, ಆದರೆ ಇನ್ನು ಮುಂದೆ ರಾಜ್ಯವನ್ನು ಆಡಳಿತಾತ್ಮಕವಾಗಿ ಮುನ್ನಡೆಸುವ ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಜವಾದ ಪರೀಕ್ಷೆ ಆರಂಭವಾಗಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net