ಕಳೆದ ತಿಂಗಳು ದೇಶದಲ್ಲಿ ಚಿನ್ನದ ಆಮದು ಎಷ್ಟು ಹೆಚ್ಚಳ? ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸುವ ವರದಿ

ಚಿನ್ನ ಆಮದು
ಚಿನ್ನ ಆಮದು
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನ ಮತ್ತು ಬೆಳ್ಳಿ ಹೊಸ ದಾಖಲೆ ನಿರ್ಮಿಸುತ್ತಿವೆ
  • ಅಕ್ಟೋಬರ್ ತಿಂಗಳಲ್ಲಿ ಆಮದು ಶೇ.200ರಷ್ಟು ಹೆಚ್ಚಾಗಿದೆ
  • ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆಗೊಳಿಸಿದ ಮಾಹಿತಿ
ನವದೆಹಲಿ: ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನದತ್ತ ಮುಖಮಾಡುತ್ತಿವೆ. ಅಂತಾರಾಷ್ಟ್ರೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕುಸಿದಿದ್ದ ದರಗಳು ಇದೀಗ ಮತ್ತೆ ಏರುತ್ತಿವೆ. ಇದರೊಂದಿಗೆ, ಚಿನ್ನ ಮತ್ತು ಬೆಳ್ಳಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಆದಾಗ್ಯೂ, ಗೋಲ್ಡ್​ ಹಾಗೂ ಸಿಲ್ವರ್​ ಬೆಲೆಯಲ್ಲಿ ಭಾರಿ ಏರಿಕೆಯ ಹೊರತಾಗಿಯೂ, ಅಕ್ಟೋಬರ್ ತಿಂಗಳಲ್ಲಿ ಆಮದು ಶೇ.200ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿಅಂಶಗಳು ತೋರಿಸಿವೆ. ಇದು ನಿಜಕ್ಕೂ ಅಚ್ಚರಿಯ ಬೆಳವಣಿಗೆಯೇ ಸರಿ.
ಸೋಮವಾರ (ನ.17) ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ, ಅಕ್ಟೋಬರ್‌ನಲ್ಲಿ ದೇಶೀಯ ಚಿನ್ನದ ಆಮದು 14.72 ಬಿಲಿಯನ್ ಡಾಲರ್​ (ಅಂದರೆ 1.30 ಲಕ್ಷ ಕೋಟಿ ರೂ.) ದಾಖಲಾಗಿದೆ. ಕಳೆದ ವರ್ಷ (2024), ಅಕ್ಟೋಬರ್‌ನಲ್ಲಿ ಕೇವಲ 4.92 ಬಿಲಿಯನ್ ಡಾಲರ್​ (43.6 ಸಾವಿರ ಕೋಟಿ ರೂ.) ಆಮದು ಮಾಡಿಕೊಳ್ಳಲಾಗಿದೆ. ದೀಪಾವಳಿ ಸೇರಿ ಹಬ್ಬದ ಸೀಸನ್​ನಲ್ಲಿ ಚಿನ್ನದ ಬೇಡಿಕೆ ಮತ್ತು ಬೆಲೆ ಏರಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ಚಿನ್ನದ ಆಮದು ಶೇ.200ರಷ್ಟು ಏರಿದೆ ಎಂದು ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.
ಮದುವೆ, ಶುಭಕಾರ್ಯಗಳ ಸೀಸನ್ ಮುಂದುವರಿದಂತೆ ಬೆಲೆಗಳು ಸಹ ಇನ್ನೂ ಹೆಚ್ಚಿವೆ ಮತ್ತು ಪರಿಣಾಮವಾಗಿ ಬೇಡಿಕೆ ಮಂದಗತಿಯಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಬೆಳ್ಳಿ ಆಮದು ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ 3,810 ಕೋಟಿ ರೂ.ನಿಂದ 24 ಸಾವಿರ ಕೋಟಿ ರೂ.ಗಳನ್ನು ಮೀರಿದೆ. ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳ ಆಮದುಗಳಿಂದಾಗಿ, ದೇಶದ ವ್ಯಾಪಾರ ಕೊರತೆಯು ಅಕ್ಟೋಬರ್‌ನಲ್ಲಿ ಗರಿಷ್ಠ 41.68 ಬಿಲಿಯನ್ ಡಾಲರ್​ (3.7 ಲಕ್ಷ ಕೋಟಿ ರೂ.) ತಲುಪಿದೆ.
ಚಿನ್ನ ಮತ್ತು ಬೆಳ್ಳಿ ಆಮದು ಹೆಚ್ಚಳವು ವ್ಯಾಪಾರ ಕೊರತೆ ಹೆಚ್ಚಾಗಲು ಒಂದು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗಳಿಂದಾಗಿ, ಸೆಪ್ಟೆಂಬರ್ 2025 ರವರೆಗೆ ಕಡಿಮೆ ಚಿನ್ನದ ಆಮದುಗಳಿಂದಾಗಿ ಚಿನ್ನದ ಡಿಮಾಂಡ್​ ಕುಸಿಯಿತು. ಅಕ್ಟೋಬರ್‌ನಲ್ಲಿ ಇದು ಹಿಮ್ಮುಖವಾಯಿತು ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದರು.
2025ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 26.51 ಬಿಲಿಯನ್ ಡಾಲರ್​ ಮೌಲ್ಯದ ಚಿನ್ನದ ಆಮದು 299.77 ಟನ್‌ಗಳನ್ನು ತಲುಪಿತು. ಕಳೆದ ವರ್ಷ (2024) ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಇದು 29.04 ಬಿಲಿಯನ್ ಡಾಲರ್​ ಮೌಲ್ಯದ 401.27 ಟನ್‌ಗಳಷ್ಟಿತ್ತು. ಆದಾಗ್ಯೂ, ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net