ವಿದೇಶದಿಂದ ಬರುವಾಗ ಚಿನ್ನ ತರುವಿರಾ? ಎಷ್ಟು ಗೋಲ್ಡ್​ಗೆ ಅನುಮತಿ? ಹೀಗಿದೆ ಹೊಸ ಬ್ಯಾಗೇಜ್​ ರೂಲ್ಸ್​ | Baggage Rules

ಹೊಸ ಬ್ಯಾಗೇಜ್​ ನಿಯಮ
ಹೊಸ ಬ್ಯಾಗೇಜ್​ ನಿಯಮ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಬಜೆಟ್ ಬಳಿಕ 2026 ಬ್ಯಾಗೇಜ್​ ರೂಲ್ಸ್​ನಲ್ಲಿ ಕೊಂಚ ಬದಲಾವಣೆ
  • ವಿದೇಶದಿಂದ ಬರುವ ಭಾರತೀಯ ಮತ್ತು ಭಾರತೀಯ ಮೂಲದ ಪ್ರವಾಸಿಗರು ತರುವ ಚಿನ್ನಕ್ಕೆ ಮಿತಿ
  • ಮಹಿಳೆಯರು ಮತ್ತು ಪುರುಷರು ಎಷ್ಟು ಗ್ರಾಂ ಚಿನ್ನ ತರಬಹುದು ಎಂದು ತಿಳಿಸಲಾಗಿದೆ
ನವದೆಹಲಿ: ಕೇಂದ್ರ ಬಜೆಟ್​ ಆಗಿದ್ದೇ ತಡ, ಸರ್ಕಾರ ತನ್ನ ಹಿಂದಿನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಪೈಕಿ 2026ರ ಬ್ಯಾಗೇಜ್ ನಿಯಮ ಕೂಡ ಒಂದು. ವಿದೇಶದಿಂದ ಬರುವ ಭಾರತೀಯ ಮೂಲದ ನಿವಾಸಿ ಅಥವಾ ಪ್ರವಾಸಿಗರು ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಎಷ್ಟು ಗ್ರಾಂ ಚಿನ್ನವನ್ನು ತರಬಹುದು ಎಂಬುದಕ್ಕೆ ಫೆ.2ರಿಂದ ಜಾರಿಯಾಗಿರುವ ಬದಲಾವಣೆಯಲ್ಲಿ ಉತ್ತರ ಲಭಿಸಿದೆ.
ಭಾರತಕ್ಕೆ ಆಗಮಿಸುವ ಭಾರತೀಯ ಮೂಲದ ನಿವಾಸಿ ಅಥವಾ ಪ್ರವಾಸಿಗರು ಕಸ್ಟಮ್ಸ್ ಸುಂಕವನ್ನು ಪಾವತಿಸದೆ 75,000 ರೂ. ವರೆಗಿನ ವಸ್ತುಗಳನ್ನು ತರಬಹುದು ಎಂದು ತಿಳಿಸಲಾಗಿದೆ. ಈ ವಸ್ತುಗಳನ್ನು ಆ ವ್ಯಕ್ತಿಯೇ ತನ್ನೊಂದಿಗೆ ಕೊಂಡೊಯ್ಯಬೇಕು ಅಥವಾ ಪ್ರಯಾಣಿಕರ ವಿಶ್ವಾಸಾರ್ಹ ಸಾಮಾನು ಸರಂಜಾಮುಗಳಲ್ಲಿ ಸೇರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಇದಕ್ಕೂ ಮೊದಲು, ಸುಂಕ ರಹಿತ ಮಿತಿ 50,000 ರೂ. ಇತ್ತು.

ಚಿನ್ನಕ್ಕೆ ಮಿತಿ!

ಮಿತಿ ಮೀರಿ ಮತ್ತು ನಿಯಮಗಳಿಗೆ ವಿರುದ್ಧವಾಗಿ ವಿದೇಶದಿಂದ ಚಿನ್ನ ತರುವಲ್ಲಿ ಸಿಕ್ಕಿಬೀಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬದಲಾದ ನಿಯಮಗಳಲ್ಲಿ, ವಿದೇಶದಿಂದ ಬರುವ ಮಹಿಳೆಯರು ಕೇವಲ 40 ಗ್ರಾಂ ಚಿನ್ನ ಮತ್ತು ಪುರುಷರು ಕೇವಲ 20 ಗ್ರಾಂ ಆಭರಣಗಳನ್ನು ಯಾವುದೇ ಸುಂಕವಿಲ್ಲದೆ ಮರಳಿ ತರಬಹುದಾಗಿದೆ. ಅದೇ ವಿದೇಶದಲ್ಲಿ ಒಂದು ವರ್ಷದಿಂದ ನೆಲೆಸಿರುವ ಭಾರತೀಯ ನಿವಾಸಿ, ಕಸ್ಟಮ್ಸ್ ಸುಂಕ ಕಟ್ಟದೆಯೇ ಕೆಲವು ಆಭರಣಗಳನ್ನು ತಮ್ಮೊಂದಿಗೆ ತರಬಹುದು. ಮುಖ್ಯವಾಗಿ, ಈ ಆಭರಣಗಳು ತಮ್ಮ ವೈಯಕ್ತಿಕ ಬಳಕೆಗಾಗಿ ತರಬೇಕಿದೆ. ಬಿಸ್ಕತ್ತು ಮತ್ತು ಬಾರ್‌ಗಳ ರೂಪದಲ್ಲಿರುವ ಚಿನ್ನಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಸ್ತುತ, ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿದ್ದು, 10 ಗ್ರಾಂ ಚಿನ್ನದ ಬೆಲೆ 2 ಲಕ್ಷ ರೂ.ಗೆ ಸನ್ನಿಹಿತವಾಗಿದೆ. ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಪ್ರಮುಖ ನಿರ್ಧಾರವನ್ನೇ ತೆಗೆದುಕೊಂಡಿದೆ. ವಿದೇಶದಿಂದ ಚಿನ್ನದ ಆಭರಣಗಳನ್ನು ತರುವ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಮೂಲಕ ಬ್ಯಾಗೇಜ್ ನಿಯಮಗಳನ್ನು ಇದೇ ಫೆ.2ರಿಂದ ಜಾರಿಗೆ ತರಲಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ತಿಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net