ಇದು ಹೇಗೆ ಸಾಧ್ಯ?; ಟಿ20 ವಿಶ್ವಕಪ್ ಗೆದ್ದರೂ ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಮೊದಲ ಬಾರಿ ಮುಕ್ತವಾಗಿ ಮಾತನಾಡಿದ ಸೂರ್ಯಕುಮಾರ್ ಯಾದವ್ | Suryakumar Yadav

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್
Published on
Suryakumar Yadav: ಏಷ್ಯಾಕಪ್​ ಮತ್ತು ಟಿ20 ವಿಶ್ವಕಪ್​ ಗೆದ್ದರೂ ಕೂಡ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿ ಪ್ರವಾಸಕ್ಕೆ ತಮ್ಮನ್ನು ಕೈಬಿಟ್ಟು, ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ನೇಮಿಸಿದ ಬಗ್ಗೆ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. 
ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಸೂರ್ಯಕುಮಾರ್, ತಂಡದಿಂದ ಕೈಬಿಟ್ಟಾಗ ತಮ್ಮ ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಆಯ್ಕೆದಾರರ ನಿರ್ಧಾರವನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಸ್ವಲ್ಪ ಸಮಯದ ಬಳಿಕ, ಇದು ಹೇಗೆ ನಡೆಯಬಹುದು? ಹೇಗೆ ಸಾಧ್ಯ ಪ್ರಶ್ನೆ ಎಂದು ನನ್ನಲ್ಲಿ ಪ್ರಶ್ನೆ ಮೂಡಿತ್ತು ಎಂದಿದ್ದಾರೆ.
ಐರ್ಲೆಂಡ್ ಪ್ರವಾಸದ ತಂಡದಲ್ಲಿ ನನ್ನ ಹೆಸರು ಇಲ್ಲದಿದ್ದಾಗ ನಾನು ಮುಗುಳ್ನಗುತ್ತಿದ್ದೆ. ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ, ನಾನು ಕಷ್ಟಕರ ಸಂದರ್ಭಗಳಲ್ಲಿದ್ದಾಗ ಅಥವಾ ವಿಷಯಗಳು ನನ್ನ ರೀತಿಯಲ್ಲಿ ನಡೆಯದಿದ್ದಾಗಲೆಲ್ಲಾ, ನಾನು ಯಾವಾಗಲೂ ನಗುತ್ತಾ ನನ್ನ ಶಾಂತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ನನಗೆ ನೀಡಲಾದ ಅವಕಾಶಗಳಿಗಾಗಿ ನಾನು ಯಾವಾಗಲೂ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, 2026ರ ಆರಂಭದಲ್ಲಿ ತಂಡದಿಂದ ತಮ್ಮ ಹೊರಗಿಡುವ ಬಗ್ಗೆ ಊಹಿಸಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅವರು, ಮುಂದಿನ ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸುತ್ತೇನೆ ಎಂದು ಭಾವಿಸಿದ್ದೆ. ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್‌ನಂತಹ ದೊಡ್ಡ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಆದರೆ ಎಲ್ಲರೂ ಒಂದೇ ರೀತಿ ಯೋಚನೆ ಮಾಡೋದಿಲ್ಲ. ಆಯ್ಕೆದಾರರು ಇದು ಭವಿಷ್ಯಕ್ಕೆ ಉತ್ತಮ ನಿರ್ಧಾರ ಎಂದು ಭಾವಿಸಿ, ಅವರು ಆ ನಿರ್ಧಾರವನ್ನು ತೆಗೆದುಕೊಂಡರು. ನಾನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ.
ಆಯ್ಕೆದಾರರ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೂ, ಬದಲಾವಣೆ ಏಕೆ ಬೇಕು ಎಂಬ ಪ್ರಶ್ನೆಯನ್ನು ತೊಡೆದುಹಾಕಲು ಸಾಧ್ಯವಾಗಲಿಲ್ಲ. ಸ್ವಲ್ಪ ನಿರಾಶೆಯಾಯಿತು. ಏಕೆಂದರೆ ನೀವು ಎರಡು ವರ್ಷಗಳಲ್ಲಿ ಒಂದೇ ಒಂದು ಸರಣಿಯನ್ನು ಸೋತಿಲ್ಲ. ವಿಶ್ವಕಪ್ ಮತ್ತು ಏಷ್ಯಾ ಕಪ್ ಗೆದ್ದಿದ್ದೀರಿ. ಬಳಿಕ ನೀವು ಅದನ್ನು ಮುಂದುವರಿಸಬೇಕೆಂದು ಬಯಸುತ್ತೀರಿ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ಬದಲಾವಣೆ ಏಕೆ? ಬದಲಾವಣೆಗೆ ಕಾರಣವೇನು? ಅದೇ ನನ್ನ ಮನಸ್ಸಿನಲ್ಲಿ ಓಡುತ್ತಲೇ ಇತ್ತು ಎಂದು ಹೇಳಿದ್ದಾರೆ.

ಇದು ಹೇಗೆ ಸಾಧ್ಯ?

ತಂಡದಿಂದ ಕೈಬಿಟ್ಟ ನಂತರ, ಸುಮಾರು ಒಂದೂವರೆ ತಿಂಗಳು ಮನೆಯಲ್ಲಿಯೇ ಇದ್ದು, ಈ ಪ್ರಶ್ನೆಯ ಬಗ್ಗೆ ಯೋಚಿಸುತ್ತಲೇ ಇದ್ದೆ. ನಾನು 'ಇದು ಹೇಗೆ ಸಾಧ್ಯ? ಇದು ಹೇಗೆ ಸಾಧ್ಯ?' ಎಂದು ಯೋಚಿಸುತ್ತಿದ್ದೆ, ನಾವು ವಿಶ್ವಕಪ್ ಗೆದ್ದಿದ್ದೆವು. ಹೌದು, ಐಪಿಎಲ್ ನಾನು ಬಯಸಿದಷ್ಟು ಚೆನ್ನಾಗಿ ನಡೆಯಲಿಲ್ಲ. ಆದರೆ ನಾವು ಮನೆಯಲ್ಲಿ ಕುಳಿತಿದ್ದೆವು. ಸ್ನೇಹಿತರು ಬಂದರು, ಕುಟುಂಬದವರು ಬಂದರು. ಎಲ್ಲರೂ ಪರವಾಗಿಲ್ಲ, ಇದು ಜೀವನದ ಒಂದು ಭಾಗ ಎಂದು ಹೇಳಿದರು. ಆದರೆ ಎಲ್ಲರೂ ಹೋದಾಗ, ನೀವು ಮನೆಯಲ್ಲಿ ಒಬ್ಬಂಟಿಯಾಗಿರುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೈಬಿಡುವ ಬಗ್ಗೆ ನಿರ್ಧಾರ 

ತಂಡ ಘೋಷಣೆಗೆ ಸುಮಾರು ಎರಡು ಅಥವಾ ಮೂರು ದಿನಗಳ ಮೊದಲು ಆಯ್ಕೆ ಸಮಿತಿಯು ತಮ್ಮನ್ನು ಸಂಪರ್ಕಿಸಿತ್ತು ಎಂಬುದನ್ನು ಬಹಿರಂಗಪಡಿಸಿರುವ ಯಾದವ್, ಆಯ್ಕೆ ಸಮಿತಿಯವರು ಎರಡು ಅಥವಾ ಮೂರು ದಿನಗಳ ಹಿಂದೆ ನನಗೆ ಕರೆ ಮಾಡಿದರು. ಆ ವೇಳೆ ಕೈಬಿಡುವ ಬಗ್ಗೆ ತಿಳಿಸಿದ್ದರು ಎಂದು ಹೇಳಿದರು. ನಾನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಏಕೆಂದರೆ ಅದು ನನ್ನ ನಿರ್ಧಾರವಲ್ಲ. ಯಾರು ನಿರ್ಧಾರ ತೆಗೆದುಕೊಂಡರೂ ಅದು ತಂಡಕ್ಕೆ ಉತ್ತಮ ಎಂದು ಭಾವಿಸಿರಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್). 
ಇದೇ ವೇಳೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಿದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಶ್ರೇಯಸ್ ಅವರನ್ನು ಬಹಳ ಸಮಯದಿಂದ ಬಲ್ಲೆ ಮತ್ತು ಅವರಲ್ಲಿ ಉತ್ತಮ ಆಟಗಾರ, ಒಳ್ಳೆಯ ವ್ಯಕ್ತಿ ಮತ್ತು ಉತ್ತಮ ನಾಯಕನ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net