ಸರ್‌ಜಿ, ಈ ಐಡಿಯಾ ಹೇಗಿದೆ...? ಪ್ರಧಾನಿ ಮೋದಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯ ತಿಳಿಸಿದ ಸಂಸದ ಸಿನ್ಹಾ!...ಅಷ್ಟಕ್ಕೂ ಅವರ ಪ್ಲಾನ್​ ಏನು..? | Shatrughan Sinha

Shatrughan Sinha | ಪ್ರಧಾನಿ ಮೋದಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯ ತಿಳಿಸಿದ ಸಂಸದ ಸಿನ್ಹಾ!...ಅಷ್ಟಕ್ಕೂ ಅವರ ಪ್ಲಾನ್​ ಏನು..?
Shatrughan Sinha | ಪ್ರಧಾನಿ ಮೋದಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯ ತಿಳಿಸಿದ ಸಂಸದ ಸಿನ್ಹಾ!...ಅಷ್ಟಕ್ಕೂ ಅವರ ಪ್ಲಾನ್​ ಏನು..?
Published on
ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಶಾಸಕರು ಮತ್ತು ಸಂಸದರ ಪಕ್ಷಾಂತರ ಪರ್ವ ಜೋರಾಗಿದ್ದು, ಈ ನಡುವೆ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ (Shatrughan Sinha) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ದಿನ ಮುಂಚಿತವಾಗಿ ಜನ್ಮದಿನದ ಶುಭಾಶಯ ಕೋರುವ ಮೂಲಕ ತಮ್ಮ ಸೌಹಾರ್ದತೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿನ್ಹಾ, ನಾಳೆ ನಿಮ್ಮ ಜನ್ಮದಿನದ ಶುಭಾಶಯಗಳ ಪ್ರವಾಹದಲ್ಲಿ ನನ್ನ ಸಂದೇಶ ಕಳೆದುಹೋಗುವ ಮುನ್ನವೇ ನಿಮಗೆ ಮುಂಚಿತವಾಗಿ ಶುಭ ಹಾರೈಸುತ್ತಿದ್ದೇನೆ. ಸಖತ್ ಐಡಿಯಾ ಅಲ್ವೇ ಸರ್‌ಜಿ..? ನಮ್ಮ ಸ್ನೇಹಿತ, ಸಮಾಜದ ಬಂಧು ಹಾಗೂ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೂ ದೇವರು ಉತ್ತಮ ಆರೋಗ್ಯ, ಪ್ರೀತಿ, ಸಂತೋಷ, ಶಾಂತಿ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಸಿನ್ಹಾ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ, ಕಳೆದ ಜೂನ್​ನಲ್ಲಿ ಪ್ರಧಾನಿ ಮೋದಿ ಅವರು ಸತತ 12 ವರ್ಷಗಳ ಪ್ರಧಾನಿ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲೂ ಶತ್ರುಘ್ನ ಸಿನ್ಹಾ ಅವರು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಅಂದೂ ಕೂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, ಪ್ರಧಾನಿಗೆ ಉತ್ತಮ ಆರೋಗ್ಯ ಮತ್ತು ಸುಖಕರ ಜೀವನವನ್ನು ಹಾರೈಸಿದ್ದರು. ಜೊತೆಗೆ ನ್ಯೂಸ್18 ಇಂಡಿಯಾ ನಡೆಸಿದ ಸಂವಾದದಲ್ಲೂ ಪ್ರಧಾನಿಯವರನ್ನು ಕೊಂಡಾಡಿದ್ದ ಸಿನ್ಹಾ, ಮೋದಿಯವರನ್ನು ತಮ್ಮ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದರು. ಅಲ್ಲದೆ, ಪ್ರಧಾನಿ ಮೋದಿಯವರ ಕಠಿಣ ಪರಿಶ್ರಮದಿಂದ ಜನ ಪ್ರೇರಣೆ ಪಡೆಯಬೇಕು ಎಂದಿದ್ದರು.

ಶತ್ರುಘ್ನ ಸಿನ್ಹಾ ಅವರ ರಾಜಕೀಯ ಪಯಣ

ಶತ್ರುಘ್ನ ಸಿನ್ಹಾ ಅವರು ಬಿಜೆಪಿಯೊಂದಿಗೆ ಸುದೀರ್ಘ ಸಂಬಂಧ ಹೊಂದಿದ್ದು, 1980 ರ ದಶಕದಲ್ಲಿ ತಮ್ಮ ರಾಜಕೀಯ ಜೀವನವನ್ನು ಅದೇ ಪಕ್ಷದಿಂದ ಪ್ರಾರಂಭಿಸಿದ್ದರು. ಆದರೆ, 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದಾಗ ಅವರಿಗೆ ಯಾವುದೇ ಸಚಿವಸ್ಥಾನ ಸಿಗಲಿಲ್ಲ. ತದನಂತರ ಅವರು ಬಿಜೆಪಿ ಪಕ್ಷದ ನಿಲುವಿಗೆ ವಿರುದ್ಧವಾದ ಹಲವು ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದರು. ಅಂತಿಮವಾಗಿ 2019 ರಲ್ಲಿ ಬಿಜೆಪಿಯನ್ನು ತೊರೆದ ಸಿನ್ಹಾ, ಕಾಂಗ್ರೆಸ್ ಸೇರ್ಪಡೆಯಾದರು. ಆ ಬಳಿಕ 2022ರ ಮಾರ್ಚ್​​​ನಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ ಅವರು, ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

ಟಿಎಂಸಿ ಆಂತರಿಕ ಭಿನ್ನಮತ ಮತ್ತು ಸಿನ್ಹಾ ನಿಲುವು!

ಟಿಎಂಸಿ ಸಂಸದರ ನಡುವೆ ಆಂತರಿಕ ಭಿನ್ನಮತದ ವರದಿಗಳು ಹೊರಬಿದ್ದಿರುವ ಬೆನ್ನಲ್ಲೇ ಶತ್ರುಘ್ನ ಸಿನ್ಹಾ ಅವರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಸುಮಾರು 20 ಟಿಎಂಸಿ ಸಂಸದರು ಬಂಡಾಯ ಎದ್ದಿದ್ದಾರೆ ಎನ್ನಲಾದ ಪತ್ರವೊಂದು ಮಾಧ್ಯಮಗಳಲ್ಲಿ ಹರಿದಾಡಿದಾಗ, ಅದರಲ್ಲಿ ಸಿನ್ಹಾ ಅವರ ಹೆಸರು ಕೂಡ ಸೇರಿತ್ತು. ಆದರೆ, ಆ ಪತ್ರ ವೈರಲ್​ ಆದ ಕೆಲವೇ ನಿಮಿಷಗಳಲ್ಲಿ ಸ್ಪಷ್ಟಿಕರಣ ನೀಡಿದ ಅವರು, ತಾವು ಯಾವುದೇ ಕಾರಣಕ್ಕೂ ಮಮತಾ ಬ್ಯಾನರ್ಜಿ ಅವರನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಮಗೆ ರಾಜಕೀಯದಲ್ಲಿ ಬೇರೆ ದಾರಿಗಳಿಲ್ಲದ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ಆಹ್ವಾನಿಸಿ ಟಿಎಂಸಿಗೆ ಸೇರಿಸಿಕೊಂಡು ಸಂಸದರನ್ನಾಗಿ ಮಾಡಿದ್ದರು ಎಂದು ಸಿನ್ಹಾ ನೆನಪಿಸಿಕೊಂಡಿದ್ದರು.
ಹಿಂದೆ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ಈಗ ಟಿಎಂಸಿ ಪಕ್ಷದ ಒಳಗಡೆ ಆಂತರಿಕ ಕಸರತ್ತುಗಳು ನಡೆಯುತ್ತಿರುವ ಮಧ್ಯೆಯೇ ಶತ್ರುಘ್ನ ಸಿನ್ಹಾ ಅವರು ಪ್ರಧಾನಿ ಮೋದಿ ಅವರನ್ನು ಪದೇ ಪದೇ ಸಾರ್ವಜನಿಕವಾಗಿ ಹೊಗಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net