ಸಂಸತ್ ಚಲೋ ವೇಳೆ ಲಾಠಿಚಾರ್ಜ್: ಪ್ರತಿಭಟನಾಕಾರರು ಜುಲೈ 20ರಂದು ನಡೆಸಿದ ಸಂಸತ್ ಚಲೋ ವೇಳೆ ಭದ್ರತಾ ಪಡೆಗಳು ಲಾಠಿಚಾರ್ಜ್ ನಡೆಸಿದವು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಘಟನೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಸಹ ವರದಿ ಮಾಡಿದವು. "ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯು, "ರಕ್ತ ಹರಿಯಿತು, ಲಾಠಿ ಬೀಸಲಾಯಿತು; ಆದಾಗ್ಯೂ ಪ್ರತಿಭಟನಾಕಾರರು ಹಿಂಜರಿಯಲಿಲ್ಲ' ಎಂದು ಬರೆಯಿತು. ಬ್ರಿಟನ್, ಜರ್ಮನಿ, ನೆದರ್ಲ್ಯಾಂಡ್ಸ್, ಐರ್ಲೆಂಡ್, ಕೆನಡಾ ಮತ್ತು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದರು. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಹೊರಗೆ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.