ವಿಶ್ವದ ಅತ್ಯಂತ ಪವರ್​ಫುಲ್​ ಪಾಸ್‌ಪೋರ್ಟ್‌ಗಳ ಆಯ್ಕೆ ಹೇಗೆ? ಯಾವ ಅಂಶಗಳ ಮೇಲೆ ಸ್ಥಾನ ಹಂಚಿಕೆ?

ಪವರ್​ಪುಲ್​ ಪಾಸ್​ಪೋರ್ಟ್​ಗಳು
ಪವರ್​ಪುಲ್​ ಪಾಸ್​ಪೋರ್ಟ್​ಗಳು
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ಪ್ರಕಟಗೊಂಡ ವಿಶ್ವದ ಅತ್ಯಂತ ಪವರ್​ಫುಲ್​ ಪಾಸ್‌ಪೋರ್ಟ್ ಪಟ್ಟಿ
  • ಇದರ ಆಯ್ಕೆ ಹೇಗೆ? ಯಾವ ಅಂಶಗಳ ಆಧಾರದ ಮೇಲೆ ಸ್ಥಾನ?
Powerful Passports: ವಿಶ್ವದ ಅತ್ಯಂತ ಪವರ್​ಫುಲ್​ ಪಾಸ್‌ಪೋರ್ಟ್​ಗಳು ಯಾವುದು ಎಂದು ತಿಳಿದುಕೊಳ್ಳಲು ಅನೇಕರಿಗೆ ತೀವ್ರ ಕುತೂಹಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡ ಗ್ಲೋಬಲ್ ಪಾಸ್‌ಪೋರ್ಟ್ ಸೂಚ್ಯಂಕ 2026ರ ಪಟ್ಟಿಯಲ್ಲಿ ಹಲವು ರಾಷ್ಟ್ರಗಳು ಸ್ಥಾನ ಪಡೆದಿವೆ. ಇದರಲ್ಲಿ, ಭಾರತ ಎಲ್ಲಿದೆ? ಯಾವ ಅಂಶಗಳನ್ನು ಪರಿಗಣಿಸಿ ಸ್ಥಾನ ಘೋಷಿಸಲಾಗುವುದು ಎಂಬುದರ ಕಂಪ್ಲೀಟ್​ ವಿವರ ಇಲ್ಲಿದೆ ನೋಡಿ.
ಈ ವರ್ಷ ಬಿಡುಗಡೆಯಾದ ಇತ್ತೀಚಿನ ಶ್ರೇಯಾಂಕದಲ್ಲಿ, ಒಂಬತ್ತು ಯುರೋಪಿಯನ್ ರಾಷ್ಟ್ರಗಳು ವಿಶ್ವದ ಟಾಪ್ 10 ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಸಾಲಿಗೆ ಸೇರಿವೆ. ಭಾರತೀಯ ಪಾಸ್‌ಪೋರ್ಟ್‌ನ ಶ್ರೇಣಿ ಮತ್ತಷ್ಟು ಕುಸಿದಿದ್ದು, ಸ್ವೀಡನ್​ ದೇಶ ಅಗ್ರಸ್ಥಾನವನ್ನು ಅಲಂಕರಿಸಿದೆ.

ಸ್ವೀಡನ್ ಪ್ರಥಮ

ಈ ಪಟ್ಟಿಯಲ್ಲಿ ಸ್ವೀಡನ್ ಮೊದಲ ಸ್ಥಾನ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಪ್ರಯಾಣ ಸೌಲಭ್ಯಗಳು, ಉತ್ತಮ ಜೀವನಮಟ್ಟ ಮತ್ತು ಅನುಕೂಲಕರ ಹೂಡಿಕೆಯ ವಾತಾವರಣದ ವಿಷಯದಲ್ಲಿ ಸ್ವೀಡನ್ ಉತ್ತಮ ಆಲ್​ರೌಂಡ್​ ಪ್ರದರ್ಶನದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ವೀಡನ್ ಬಳಿಕ, ಸ್ವಿಜರ್​ಲ್ಯಾಂಡ್, ಫಿನ್ಲ್ಯಾಂಡ್​ ಮತ್ತು ಜರ್ಮನಿ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ. ಇನ್ನು, ನೆದರ್ಲ್ಯಾಂಡ್ಸ್ ಮತ್ತು ಡೆನ್ಮಾರ್ಕ್ ಐದನೇ ಸ್ಥಾನವನ್ನು ಹಂಚಿಕೊಂಡಿವೆ. ಐರ್ಲೆಂಡ್, ಯುಕೆ ಮತ್ತು ನಾರ್ವೆ ಕೂಡ ಪಟ್ಟಿಯಲ್ಲಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದ ಏಕೈಕ ಯುರೋಪಿಯನ್ ಅಲ್ಲದ ದೇಶ ಸಿಂಗಾಪುರ.

ಈ ಶ್ರೇಯಾಂಕಗಳು ಹೇಗೆ ನಿರ್ಧಾರ?

ಸಾಂಪ್ರದಾಯಿಕ ಪಾಸ್‌ಪೋರ್ಟ್ ಶ್ರೇಯಾಂಕಗಳು ಮುಖ್ಯವಾಗಿ ವೀಸಾ ಮುಕ್ತ ಪ್ರಯಾಣವನ್ನು ಪರಿಗಣಿಸುತ್ತವೆ. ಆದಾಗ್ಯೂ, ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕವು ಸ್ವಲ್ಪ ವಿಭಿನ್ನ. ಪಾಸ್‌ಪೋರ್ಟ್ ನಿಮಗೆ ಎಷ್ಟು ದೇಶಗಳಿಗೆ ಭೇಟಿ ಕೊಡಲು ಅವಕಾಶ ನೀಡುತ್ತದೆ ಎಂಬುದರ ಜತೆಗೆ, ದೇಶದ ನಾಗರಿಕರು ಎಷ್ಟು ಚೆನ್ನಾಗಿ ಕೆಲಸ ನಿರ್ವಹಿಸಬಹುದು, ಹೂಡಿಕೆ ಮಾಡಬಹುದು ಮತ್ತು ವಿದೇಶದಲ್ಲಿ ವಾಸಿಸಬಹುದು ಎಂಬುದನ್ನು ನಿರ್ಣಯಿಸುತ್ತದೆ. ಇದು ಒಟ್ಟು 14 ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ.

125ನೇ ಸ್ಥಾನಕ್ಕೆ ಭಾರತ

ಈ ಶ್ರೇಯಾಂಕದಲ್ಲಿ ಭಾರತ ಬಯಸಿದ ಸ್ಥಾನವನ್ನು ಸಾಧಿಸಿಲ್ಲ. ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕ 2026ರಲ್ಲಿ, ಭಾರತವು 200 ದೇಶಗಳ ಪೈಕಿ 125ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಪ್ರಯಾಣ ಸೌಲಭ್ಯಗಳ ವಿಷಯದಲ್ಲಿ ಭಾರತೀಯ ಪಾಸ್‌ಪೋರ್ಟ್ ಇನ್ನೂ ಹಲವು ದೇಶಗಳಿಗಿಂತ ಹಿಂದುಳಿದಿದೆ ಎಂದು ವರದಿ ಬಹಿರಂಗಪಡಿಸಿದೆ. ಮತ್ತೊಂದು ಪ್ರಮುಖ ಶ್ರೇಯಾಂಕ ಸಂಸ್ಥೆಯಾದ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿಯೂ ಭಾರತಕ್ಕೆ ಆದ್ಯತೆ ನೀಡಿಲ್ಲ.
ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು 56 ದೇಶಗಳಿಗೆ ವೀಸಾ ಮುಕ್ತ ಮತ್ತು ವೀಸಾ ಆನ್ ಎಂಟ್ರಿಯೊಂದಿಗೆ ಪ್ರಯಾಣಿಸಬಹುದು. ಇವುಗಳಲ್ಲಿ ಹೆಚ್ಚಿನವು ಏಷ್ಯಾ, ಆಫ್ರಿಕಾ, ಕೆರಿಬಿಯನ್ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿನ ದೇಶಗಳು ಸೇರಿವೆ. ಆದಾಗ್ಯೂ, ಭಾರತೀಯರು ಇನ್ನೂ ಯುಎಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಲು ಮುಂಚಿತವಾಗಿಯೇ ವೀಸಾವನ್ನು ಪಡೆಯಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net