ಕೇವಲ 20 ರೂಪಾಯಿ ಬಿಸ್ಕತ್ತಿನಲ್ಲಿ 25 ಗ್ರಾಂ ಮೋಸ: ಕಂಪನಿಗೆ ಬಿತ್ತು ಬರೋಬ್ಬರಿ 50 ಸಾವಿರ ರೂ. ದಂಡ, ಇದು ಗ್ರಾಹಕನ ತಾಕತ್ತು! Biscuit Packet

ಕೇವಲ 20 ರೂಪಾಯಿ ಬಿಸ್ಕತ್ತಿನಲ್ಲಿ 25 ಗ್ರಾಂ ಮೋಸ: ಕಂಪನಿಗೆ ಬಿತ್ತು ಬರೋಬ್ಬರಿ 50 ಸಾವಿರ ರೂ. ದಂಡ, ಇದು ಗ್ರಾಹಕನ ತಾಕತ್ತು! Biscuit Packet
ಕೇವಲ 20 ರೂಪಾಯಿ ಬಿಸ್ಕತ್ತಿನಲ್ಲಿ 25 ಗ್ರಾಂ ಮೋಸ: ಕಂಪನಿಗೆ ಬಿತ್ತು ಬರೋಬ್ಬರಿ 50 ಸಾವಿರ ರೂ. ದಂಡ, ಇದು ಗ್ರಾಹಕನ ತಾಕತ್ತು! Biscuit Packet
Published on

ಪ್ರಮುಖ ಮುಖ್ಯಾಂಶಗಳು

  • 20 ರೂಪಾಯಿಯ ಬಿಸ್ಕತ್ತು ಪ್ಯಾಕೆಟ್‌ಗೆ ಪಾರ್ಲೆ ಕಂಪನಿಗೆ ಬಿದ್ದ ದಂಡ ಎಷ್ಟು ಗೊತ್ತಾ?
  • ತೂಕದಲ್ಲಿ ಮೋಸ ಮಾಡಿದ ಪಾರ್ಲೆ ಬಿಸ್ಕತ್ತು ಕಂಪನಿ ಮತ್ತು ಹೈಪರ್ ಮಾರ್ಕೆಟ್‌ಗೆ ಭಾರಿ ದಂಡ
  • 25 ಗ್ರಾಂ ಬಿಸ್ಕತ್ತು ಕಮ್ಮಿ ಕೊಟ್ಟು ಮೋಸ ಮಾಡಿದ ಪಾರ್ಲೆ ಕಂಪನಿಗೆ ಗ್ರಾಹಕರ ನ್ಯಾಯಾಲಯ ಬಿಗ್ ಶಾಕ್
  • ತೂಕ ಕಡಿಮೆ ಇದ್ದಿದ್ದಕ್ಕೆ ಸಿಡಿದೆದ್ದ ಗ್ರಾಹಕ ಪಾರ್ಲೆ ಕಂಪನಿಗೆ ಬಿತ್ತು 50,000 ರೂಪಾಯಿ ದಂಡ
ತಿರುವನಂತಪುರಂ : ಅಂಗಡಿಯಿಂದ ಕೊಂಡುಕೊಳ್ಳುವ ದಿನಸಿ ವಸ್ತುಗಳ ಪ್ಯಾಕೆಟ್ ಮೇಲೆ ನಮೂದಿಸಿರುವ ತೂಕಕ್ಕೂ, ಒಳಗಿರುವ ವಸ್ತುವಿನ ನಿಜವಾದ ತೂಕಕ್ಕೂ ವ್ಯತ್ಯಾಸವಿದ್ದರೆ ನಾವೇನು ಮಾಡುತ್ತೇವೆ? ಹೆಚ್ಚಿನವರು "ಹಾಳಾಗಿ ಹೋಗಲಿ ಬಿಡು" ಎಂದು ಸುಮ್ಮನಾಗುತ್ತಾರೆ. ಆದರೆ, ಕಣ್ಣೂರಿನ ಗ್ರಾಹಕರೊಬ್ಬರು ಈ ಮೋಸದ ವಿರುದ್ಧ ಸಿಡಿದೆದ್ದು, ಬ್ರ್ಯಾಂಡೆಡ್ ಕಂಪನಿಯೊಂದಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ. ಕೇವಲ 20 ರೂಪಾಯಿತ ಬಿಸ್ಕತ್ತು ಪ್ಯಾಕೆಟ್‌ನಲ್ಲಿ ( Biscuit Packet ) 25 ಗ್ರಾಂ ತೂಕ ಕಡಿಮೆಯಿದ್ದಿದ್ದಕ್ಕಾಗಿ ಪಾರ್ಲೆ ಕಂಪನಿ ಮತ್ತು ಹೈಪರ್ ಮಾರ್ಕೆಟ್‌ಗೆ ಗ್ರಾಹಕರ ನ್ಯಾಯಾಲಯ 50,000 ರೂ. ಭಾರಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಘಟನೆಯ ವಿವರಕ್ಕೆ ಹೋಗುವುದಾದರೆ, ಕಣ್ಣೂರು ಜಿಲ್ಲೆಯ ಅಂಚರಕಂಡಿಯ ನಿವಾಸಿ ಟಿ.ಪಿ. ಆಶಿಕ್ ಅವರು ಚಕ್ಕರಕಲ್‌ನಲ್ಲಿರುವ ಮೆಟ್ರೋ ಹೈಪರ್ ಮಾರ್ಕೆಟ್‌ನಲ್ಲಿ ಜುಲೈ ಮಧ್ಯಾಹ್ನ ಸಾಮಾನ್ಯ ದಿನಸಿ ಖರೀದಿ ಮಾಡುತ್ತಿದ್ದರು. ಈ ವೇಳೆ 20 ರೂ. ಬೆಲೆಯ 'ಪಾರ್ಲೆ 20-20' ಬಿಸ್ಕತ್ತು ಪ್ಯಾಕೆಟ್ ಒಂದನ್ನು ಖರೀದಿಸಿದ್ದರು. ಆದರೆ, ಕೈಯಲ್ಲಿ ಹಿಡಿದಾಗ ಪ್ಯಾಕೆಟ್‌ನ ತೂಕ ಕೊಂಚ ಕಡಿಮೆ ಎನಿಸಿ ಸಂಶಯಗೊಂಡ ಆಶಿಕ್, ಅದನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿತ್ತು. ಪ್ಯಾಕೆಟ್ ಮೇಲೆ 150 ಗ್ರಾಂ ಎಂದು ನಮೂದಿಸಲಾಗಿತ್ತು, ಆದರೆ ಒಳಗಿದ್ದ ಬಿಸ್ಕತ್ತಿನ ನಿಜವಾದ ತೂಕ ಕೇವಲ 125 ಗ್ರಾಂ ಮಾತ್ರ ಇತ್ತು.
ತಮಗೆ ಲೇಬಲ್ ಮೂಲಕ ಶೇ. 16 ರಷ್ಟು ಕಮ್ಮಿ ತೂಕ ನೀಡಿ ಮೋಸ ಮಾಡಿರುವುದನ್ನು ಮನಗಂಡ ಆಶಿಕ್, ಅದನ್ನು ಸುಮ್ಮನೆ ಬಿಡಲು ಸಿದ್ಧರಿರಲಿಲ್ಲ. ಕೂಡಲೇ ತಮ್ಮ ವಕೀಲರಾದ ಕೆ.ಪಿ. ಮುಹಮ್ಮದ್ ಸಿನಾನ್ ಅವರ ಮೂಲಕ ಕಣ್ಣೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ರವಿ ಸುಶಾ ಹಾಗೂ ಸದಸ್ಯರಾದ ಮೊಳಿಕುಟ್ಟಿ ಮ್ಯಾಥ್ಯೂ ಮತ್ತು ಕೆ.ಪಿ. ಸಜೀಶ್ ಅವರಿದ್ದ ಪೀಠವು, ಅಳತೆ ಮತ್ತು ತೂಕ ಇಲಾಖೆಯಿಂದ ಪರಿಶೀಲನೆ ನಡೆಸಿತು. ಪರಿಶೀಲನೆಯಲ್ಲಿ ಬಿಸ್ಕತ್ತು ಪ್ಯಾಕೆಟ್ ನಮೂದಿಸಿದ ತೂಕಕ್ಕಿಂತ ಕಡಿಮೆಯಿರುವುದು ಅಧಿಕೃತವಾಗಿ ದೃಢಪಟ್ಟಿತು.
ನ್ಯಾಯಾಲಯದಲ್ಲಿ ಸಾಕ್ಷ್ಯಗಳು ಗಟ್ಟಿಯಾಗುತ್ತಿದ್ದಂತೆ, ಪಾರ್ಲೆ ಕಂಪನಿ ಮತ್ತು ಹೈಪರ್ ಮಾರ್ಕೆಟ್ ಪರಸ್ಪರ ಒಬ್ಬರ ಮೇಲೊಬ್ಬರು ಬೆರಳು ತೋರಿಸಲು ಪ್ರಾರಂಭಿಸಿದವು. ದೂರಿನಲ್ಲಿರುವ ಬಿಸ್ಕತ್ತು ಪ್ಯಾಕೆಟ್ ತಮಗೆ ಸೇರಿದ್ದೇ ಅಲ್ಲ ಎಂದು ಪಾರ್ಲೆ ಕಂಪನಿ ಸಂಪೂರ್ಣವಾಗಿ ಕೈತೊಳೆದುಕೊಳ್ಳಲು ಯತ್ನಿಸಿತು. ಇನ್ನೊಂದೆಡೆ, ಜುಲೈ 26, 2024 ರಂದು ಬಿಸ್ಕತ್ತು ಮಾರಾಟ ಮಾಡಿದ ಮೆಟ್ರೋ ಹೈಪರ್ ಮಾರ್ಕೆಟ್, ಪ್ಯಾಕೆಟ್ ತೂಕ ಕಡಿಮೆಯಿದ್ದರೆ ಅದಕ್ಕೆ ತಯಾರಿಕಾ ಕಂಪನಿಯೇ ಜವಾಬ್ದಾರ ಹೊರತು ನಾವಲ್ಲ ಎಂದು ವಾದಿಸಿತು.
ಆದರೆ, ಎರಡೂ ಕಡೆಯ ವಾದಗಳನ್ನು ಆಕ್ಷೇಪಿಸಿದ ಗ್ರಾಹಕರ ಆಯೋಗವು, ಯಾವುದೇ ಕಾರಣಕ್ಕೂ ಮಾರಾಟಗಾರರು ಅಥವಾ ತಯಾರಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ತಿಳಿಸಿತು. ಗ್ರಾಹಕರಿಗೆ ತೂಕದಲ್ಲಿ ಮೋಸ ಮಾಡುವುದು ಅನುಚಿತ ವ್ಯಾಪಾರ ಪ್ರವೃತ್ತಿ ಮತ್ತು ಸೇವೆಯಲ್ಲಿನ ಲೋಪವಾಗಿದೆ. ಗ್ರಾಹಕರ ಕೈಗೆ ನೀಡುವ ಪ್ರತಿಯೊಂದು ಉತ್ಪನ್ನವೂ ಅದರ ಮೇಲೆ ನಮೂದಿಸಿದ ತೂಕ ಮತ್ತು ಗುಣಮಟ್ಟವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಚಿಲ್ಲರೆ ಮಾರಾಟಗಾರರ ಮೂಲಭೂತ ಕರ್ತವ್ಯವಾಗಿದೆ ಎಂದು ಪೀಠ ಸ್ಪಷ್ಟಪಡಿಸಿತು.
ಪ್ರಕರಣದ ಅಂತಿಮ ತೀರ್ಪು ನೀಡಿದ ಆಯೋಗವು, ಪಾರ್ಲೆ ಕಂಪನಿ ಹಾಗೂ ಮೆಟ್ರೋ ಹೈಪರ್ ಮಾರ್ಕೆಟ್‌ಗೆ ಒಟ್ಟಾರೆಯಾಗಿ 50,000 ರೂ. ದಂಡ ವಿಧಿಸಿತು. ಪಾರ್ಲೆ ಬಿಸ್ಕತ್ತು ಕಂಪನಿಯು ಗ್ರಾಹಕರಿಗೆ 25,000 ರೂ. ಪರಿಹಾರ ಹಾಗೂ 10,000 ರೂ. ಕೋರ್ಟ್ ವೆಚ್ಚ ಸೇರಿ ಒಟ್ಟು 35,000 ರೂ. ಪಾವತಿಸಬೇಕು. ಹಾಗೆಯೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ ಮೆಟ್ರೋ ಹೈಪರ್ ಮಾರ್ಕೆಟ್ 10,000 ರೂ. ಪರಿಹಾರ ಮತ್ತು 5,000 ರೂ. ಕೋರ್ಟ್ ವೆಚ್ಚ ಸೇರಿ ಒಟ್ಟು 15,000 ರೂ. ಪಾವತಿಸಬೇಕೆಂದು ಆದೇಶ ನೀಡಲಾಯಿತು.
ದಂಡದ ಮೊತ್ತವನ್ನು ಪಾವತಿಸಲು ಎರಡೂ ಸಂಸ್ಥೆಗಳಿಗೆ ಒಟ್ಟು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ನಿಯಮಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ಒಟ್ಟು ಪರಿಹಾರದ ಮೊತ್ತವಾದ 35,000 ರೂ.ಗೆ ಪ್ರಕರಣ ದಾಖಲಾದ ದಿನದಿಂದ ಅನ್ವಯವಾಗುವಂತೆ ಶೇ. 12 ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಸಿದೆ. ಗ್ರಾಹಕರ ಹಕ್ಕನ್ನು ರಕ್ಷಿಸುವಲ್ಲಿ ಈ ತೀರ್ಪು ಪ್ರಮುಖ ಮೈಲಿಗಲ್ಲಾಗಿದ್ದು, ಗ್ರಾಹಕರ ನಂಬಿಕೆಯ ವಿಷಯದಲ್ಲಿ ಸಣ್ಣ ಮೋಸವೂ ದೊಡ್ಡ ದಂಡಕ್ಕೆ ಕಾರಣವಾಗಬಹುದು ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net