ಭಯಾನಕ ಘಟನೆ; ಗರ್ಭಿಣಿ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಈಜು ಕೊಳದಲ್ಲಿ ಮುಳುಗಿಸಿ ಕೊಂದ ವ್ಯಕ್ತಿ | Horrific incident

ಮೃತ ಫರ್ಹತ್
ಮೃತ ಫರ್ಹತ್
Published on
ಹೈದರಾಬಾದ್​: ತೆಲಂಗಾಣದ ವಾರಂಗಲ್​ನಲ್ಲಿ ಜಿಲ್ಲೆಯಲ್ಲಿ ಇತ್ತೀಚಿಗೆ ನೀರಿನಲ್ಲಿ ಗರ್ಭಿಣಿ ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಹೆಂಡತಿ ಮಕ್ಕಳನ್ನು ನೀರಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಪತಿ ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ. 
ಬುಧವಾರ(ಏ. 01) 26 ವರ್ಷದ ಫರ್ಹತ್ ಮತ್ತು ಅವರ ಪುತ್ರಿಯರಾದ ಉಮೇರಾ (8) ಮತ್ತು ಆಯೇಷಾ (6) ಅವರ ಶವಗಳು ಕುಟುಂಬದ ಒಡೆತನದಲ್ಲಿದ್ದ ವಾರಂಗಲ್-ಕಮ್ಮಮ್ ರಾಷ್ಟ್ರೀಯ ಹೆದ್ದಾರಿಯ ಬಳಿಯ ಈಜುಕೊಳದಲ್ಲಿ ಪತ್ತೆಯಾಗಿದ್ದವವು. ಪತಿ ಅಜರುದ್ದೀನ್ ಶವಗಳನ್ನು ವಾರಂಗಲ್‌ನ ಎಂಜಿಎಂ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಈಜುಕೊಳಕ್ಕೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ ಎನ್ನಲಾಗಿದೆ.
ಆಸ್ಪತ್ರೆಯ ವೈದ್ಯರು ಮಹಿಳೆ ಮತ್ತು ಅವರ ಹೆಣ್ಣುಮಕ್ಕಳನ್ನು ಪರೀಕ್ಷಿಸಿದ ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಫರ್ಹಾತ್ ಅವರ ತಂದೆ ಶೇಕ್ ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಅವರ ಅಳಿಯ ಅಜರುದ್ದೀನ್ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಕೊಂದಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಅಜರುದ್ದೀನ್ ಸಿಮೆಂಟ್ ಇಟ್ಟಿಗೆ ತಯಾರಿಕಾ ಘಟಕವನ್ನು ನಡೆಸುತ್ತಿದ್ದರೆ, ಅವರ ತಂದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ. ಫರ್ಹಾತ್ ಈ ಹಿಂದೆ ಗರ್ಭಿಣಿಯಾಗಿದ್ದಾಗ ಹೆಣ್ಣು ಮಗು ಬೇಡ ಗಂಡು ಮಗು ಬೇಕು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಆದರೆ ಪತ್ನಿ ನಿರಾಕರಿಸಿದ್ದಳು ಎನ್ನಲಾಗಿದೆ. 
ಪೊಲೀಸ್ ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಬುಧವಾರ ಸಂಜೆ ಐಸ್ ಕ್ರೀಮ್ ತಿನ್ನುವ ನೆಪದಲ್ಲಿ ಅಜರುದ್ದೀನ್ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿದ್ದನು. ಬಳಿಕ ಅವರನ್ನು ತಮ್ಮ ಈಜುಕೊಳಕ್ಕೆ ಕರೆದೊಯ್ದು, ಮೊದಲು ಪತ್ನಿ ಬಳಿಕ ಇಬ್ಬರು ಹೆಣ್ಣುಮಕ್ಕಳು ತಳ್ಳಿ ಕೊಲೆ ಮಾಡಿದ್ದಾನೆ. ಘಟನೆ ನಡೆಯುವ ಮುನ್ನ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದನು ಎಂದು ಕಂಡುಕೊಂಡಿದ್ದಾರೆ.
ಆರೋಪಿ ಅಜರುದ್ದೀನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 103 (ಕೊಲೆ) ಅಡಿಯಲ್ಲಿ, ಕೌಟುಂಬಿಕ ಹಿಂಸಾಚಾರ ಕಾಯ್ದೆ ಮತ್ತು ಪಿಸಿ-ಪಿಎನ್‌ಡಿಟಿ ಕಾಯ್ದೆ, 1994 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net