ಇತಿಹಾಸ ಮನಮೋಹನ್ ಸಿಂಗ್​ರನ್ನು ಎಂದಿಗೂ ಮರೆಯಲ್ಲ; ಪರಿಣಾಮಕಾರಿ ಪ್ರಧಾನಿ ಎಂದು ನೆನೆಪಿಸಿಕೊಳ್ಳುತ್ತೆ: ಸೋನಿಯಾ ಗಾಂಧಿ | Sonia Gandhi

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ
Published on
ನವದೆಹಲಿ: ಇತಿಹಾಸವು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅತ್ಯಂತ ಪರಿಣಾಮಕಾರಿ ಪ್ರಧಾನಿ ಮತ್ತು ಮೃದು ಸ್ವಭಾವದ ವ್ಯಕ್ತಿ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತದೆ ಮತ್ತು ಎಂದಿಗೂ ಮರೆಯುವುದಿಲ್ಲ ಎಂದು ಮಂಗಳವಾರ(ಆ. 11) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಬಣ್ಣಿಸಿದ್ದಾರೆ.
ಇತ್ತೀಚಿಗೆ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಜು. 29ರಂದು ಸುಪ್ರೀಂ ಕೋರ್ಟ್ ದಿವಂಗತ ನಾಯಕನಿಗೆ ಕ್ಲೀನ್​ ಚಿಟ್​ ನೀಡಿ ಪ್ರಕರಣವನ್ನು ವಜಾಗೊಳಿಸಿದ ಹಿನ್ನೆಲೆ ಇಂದು ಇಂಗ್ಲೀಷ್ ದಿನ ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಸೋನಿಯಾ ಗಾಂಧಿಯವರು, ಈ ತೀರ್ಪು ಭಾರತೀಯ ರಾಜಕೀಯದಲ್ಲಿನ ಒಂದು ದುರಂತ ಪ್ರಸಂಗಕ್ಕೆ ಅಂತ್ಯ ಹಾಡಿದೆ. ಸಮಗ್ರತೆಯ ವ್ಯಕ್ತಿಯಾಗಿದ್ದ ಸಿಂಗ್​ ಅವರನ್ನು ಶಿಕ್ಷೆಗೆ ಗುರಿಪಡಿಸುವ ಪ್ರಯತ್ನಕ್ಕೆ ಪೂರ್ಣ ವಿರಾಮ ಬಿದ್ದಿದೆ ಎಂದು ಪ್ರತಿಪಾದಿಸಿದ್ದಾರೆ.

ಪರಿಣಾಮಕಾರಿ ಪ್ರಧಾನಿ

ಮನಮೋಹನ್ ಸಿಂಗ್ ಅವರ ಸಮಗ್ರತೆ ಮತ್ತು ಹೊಣೆಗಾರಿಕೆಯ ದಾಖಲೆಯು, ಪ್ರಸ್ತುತ ನರೇಂದ್ರ ಮೋದಿ ಸರ್ಕಾರ ಕಾರ್ಯನಿರ್ವಹಿಸಿದ ರೀತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದಿರುವ ಅವರು, ಇತಿಹಾಸವು ಸಿಂಗ್ ಅವರನ್ನು ಶಾಂತ, ಸೌಮ್ಯ, ಆದರೆ ಅತ್ಯಂತ ಪರಿಣಾಮಕಾರಿ ಪ್ರಧಾನಿಯಾಗಿ ದಯೆಯಿಂದ ನೆನಪಿಸಿಕೊಳ್ಳುತ್ತದೆ ಎಂದಿದ್ದಾರೆ.

ಮನಮೋಹನ್ ಸಿಂಗ್ ವಿರುದ್ಧ ಸಂಪೂರ್ಣ ಸಿದ್ಧತೆ ಮತ್ತು ಸಮನ್ವಯದೊಂದಿಗೆ ಲಾಬಿ ಕೆಲಸ ಮಾಡಿತು. ಅಧಿಕಾರಿಶಾಹಿಯಿಂದ ಹಿಡಿದು ನ್ಯಾಯಾಂಗ, ನಾಗರಿಕ ಸಮಾಜ, ನಟರು, ಆರ್‌ಎಸ್‌ಎಸ್ ಮತ್ತು ಬಿಜೆಪಿಯವರೆಗೆ ಎಲ್ಲರೂ ಅಲ್ಲಿದ್ದರು. ಇಂದು, ಆ ಕಾಲದ ಎಲ್ಲಾ ಆರೋಪಗಳು ಇಂದು ನಕಲಿ ಎಂದು ಸಾಬೀತಾಗಿದೆ. ಮನಮೋಹನ್ ಸಿಂಗ್ ನಿರಪರಾಧಿ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಇಡಿ, ಸಿಬಿಐ ದುರುಪಯೋಗ

ಮುಂದುವರೆದು ಮೋದಿ ಸರ್ಕಾರವು ವಿರೋಧಿಗಳನ್ನು ಗುರಿಯಾಗಿಸಲು ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ವಿರೋಧಿಗಳ ಮೇಲೆ ಒತ್ತಡ ಹೇರುವುದು ಅವರ ಗುರಿಯಾಗಿದ್ದು, ಕೆಲವರನ್ನು ಮೌನಗೊಳಿಸಲಾಗಿದೆ. ಕೆಲವರನ್ನು ಬಿಜೆಪಿಗೆ ತರಲಾಗಿದೆ. ಕೆಲವು ಅಸಾಮಾನ್ಯ ಸಂದರ್ಭಗಳಲ್ಲಿ, ಕೆಲವರಿಗೆ ಸಚಿವ ಸ್ಥಾನಗಳನ್ನು ಸಹ ನೀಡಲಾಗಿದೆ ಎಂದು ಟೀಕಿಸಿದ್ದಾರೆ.
ಇನ್ನೂ ಲೇಖನದಲ್ಲಿ 2017 ಫೆ 08ರಂದು ರಾಜ್ಯಸಭೆಯಲ್ಲಿ ಅಂದು ಪ್ರಧಾನಿ ಮೋದಿಯವರು, ಮನಮೋಹನ್ ಸಿಂಗ್ ಅವರನ್ನು ರೇನ್ ಕೋಟ್ ಧರಿಸಿದ ವ್ಯಕ್ತಿ ಎಂದು ಅಪಹಾಸ್ಯ ಮಾಡಿದ್ದನ್ನು ಪ್ರಸ್ತಾಪಿಸಿರುವ ಅವರು, ಪ್ರಧಾನಿ ಮೋದಿ ಅವರ ಹೇಳಿಕೆಗಳು ದೇಶದ ಸಂಸತ್ತಿನ ಇತಿಹಾಸದಲ್ಲಿ ಅತ್ಯಂತ ಅವಮಾನಕರ ಹೇಳಿಕೆಗಳಾಗಿ ಉಳಿಯುತ್ತವೆ ಎಂದು ಬರೆದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net