ಒಬ್ಬನ ಜೀವ ಉಳಿಸಲು 7 ಲಕ್ಷ ಸಾಲ ಮಾಡಿ ಏರ್​ ಆಂಬ್ಯುಲೆನ್ಸ್​ ವ್ಯವಸ್ಥೆ ಮಾಡಿದ್ರು ಆದ್ರೆ ಬಲಿಯಾಗಿದ್ದು 7 ಮಂದಿ! Air Ambulance

ಏರ್​ ಆಂಬ್ಯುಲೆನ್ಸ್​ ದುರಂತಕ್ಕೆ 7 ಮಂದಿ ಬಲಿ ( Air Ambulance )
ಏರ್​ ಆಂಬ್ಯುಲೆನ್ಸ್​ ದುರಂತಕ್ಕೆ 7 ಮಂದಿ ಬಲಿ ( Air Ambulance )
Published on

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್​ ರಾಜಧಾನಿ ರಾಂಚಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಪತನ
  • ಸೋಮವಾರ (ಫೆ.23) ಸಂಜೆ ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಪತನಗೊಂಡ ವಿಮಾನ
  • ಏಳು ಮಂದಿಯ ಜೀವವನ್ನು ಕಸಿದುಕೊಂಡ ಏರ್​ ಆಂಬ್ಯುಲೆನ್ಸ್​ ಪತನ
Air Ambulance : ಜಾರ್ಖಂಡ್​ ರಾಜಧಾನಿ ರಾಂಚಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಪತನಗೊಂಡು ( Air Ambulance ), ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವುದು ದೃಢವಾಗಿದೆ. ಸೋಮವಾರ (ಫೆ.23) ಸಂಜೆ ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ವಿಮಾನ ಪತನಗೊಂಡಿತು. ಈ ದುರಂತದ ಬೆನ್ನಲ್ಲೇ ಎಲ್ಲರ ಮನಕಲಕುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ.
ಜಾರ್ಖಂಡ್‌ನ ಹೋಟೆಲ್ ಉದ್ಯಮಿಯನ್ನು ರಾಷ್ಟ್ರ ರಾಜಧಾನಿಯ ಅತ್ಯುನ್ನತ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲೆಂದು ಆತನ ಕುಟುಂಬ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಏರ್​ ಆಂಬ್ಯುಲೆನ್ಸ್​ ಅನ್ನು ಬಾಡಿಗೆ ಪಡೆದಿತ್ತು. ಜೀವ ಉಳಿಸಬೇಕಿದ್ದ ಏರ್​ ಆಂಬ್ಯುಲೆನ್ಸ್​ ಇದೀಗ 7 ಮಂದಿಯ ಜೀವವನ್ನು ಕಸಿದುಕೊಂಡಿರುವುದು ನಿಜಕ್ಕೂ ದುರಂತವೇ ಸರಿ.
ಅಂದಹಾಗೆ, ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ನಿನ್ನೆ (ಫೆ.23) ಸಂಜೆ 7.11 ಕ್ಕೆ ಹೊರಟಿತು. ಸುಮಾರು 20 ನಿಮಿಷಗಳ ನಂತರ ಏರ್​ ಟ್ರಾಫಿಕ್​ ಕಂಟ್ರೋಲ್​ (ATC)ನಿಂದ ಸಂಪರ್ಕ ಕಳೆದುಕೊಂಡಿತು. ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಜಾರ್ಖಂಡ್​ನ ಛತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತು.
ಈ ದುರಂತದಲ್ಲಿ ಮೃತಪಟ್ಟವರನ್ನು ದೆಹಲಿಗೆ ಸಾಗಿಸಲಾಗುತ್ತಿದ್ದ ರೋಗಿ ಸಂಜಯ್ ಕುಮಾರ್ ಶಾ, ಅವರ ಪತ್ನಿ ಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಹೋಟೆಲ್​ಗೆ​ ಬೆಂಕಿ

ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಂದ್ವಾದಲ್ಲಿ ಸಂಜಯ್ ಅವರು ಹೋಟೆಲ್ ನಡೆಸುತ್ತಿದ್ದರು. ಕಳೆದ ಸೋಮವಾರ, ಅವರ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತು. ಧಗಧಗನೇ ಉರಿಯುತ್ತಿದ್ದ ಬೆಂಕಿಯಲ್ಲಿ ಸಂಜಯ್ ಸಿಲುಕಿಕೊಂಡರು. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಂಜಯ್​ಗೆ ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಸಂಜಯ್​ ಅವರಿಗೆ ಶೇ. 65 ರಷ್ಟು ಸುಟ್ಟ ಗಾಯಗಳಾದವು. ಬಳಿಕ ಅವರನ್ನು ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಸುಧಾರಿಸದಿದ್ದಾಗ, ವೈದ್ಯರು ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಇದು ಖಾಸಗಿಯಾಗಿ ನಡೆಸಲ್ಪಡುವ ಉನ್ನತ ಆಸ್ಪತ್ರೆಯಾಗಿದೆ.
ಸಂಜಯ್ ಅವರ ಗಂಭೀರ ಆರೋಗ್ಯ ಸ್ಥಿತಿಯಿಂದಾಗಿ ರಸ್ತೆ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ಅವರ ಕುಟುಂಬವು ಸಂಬಂಧಿಕರನ್ನು ಸಂಪರ್ಕಿಸಿ, ಏರ್ ಆಂಬ್ಯುಲೆನ್ಸ್‌ಗಾಗಿ 7.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿತು. ಅದರಲ್ಲಿ ಒಂದಿಷ್ಟು ಹಣವನ್ನು ದೆಹಲಿಯಲ್ಲಿ ಚಿಕಿತ್ಸೆಗಾಗಿ ಮೀಸಲು ಇಡಲಾಗಿತ್ತು. ಆದರೆ, ನಡೆದಿದ್ದು ಮಾತ್ರ ಘೋರ ದುರಂತ.
ಸಂಜಯ್ ಅವರ ಅಣ್ಣ ವಿಜಯ್ ಶಾ, ರಾಂಚಿ ವಿಮಾನ ನಿಲ್ದಾಣದಲ್ಲಿ ಸಂಜಯ್​ ಅವರನ್ನು ಬೀಳ್ಕೊಡಲು ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್​ ಬಂದಾಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳಿಂದ ಅಪಘಾತದ ಬಗ್ಗೆ ನಮಗೆ ಮಾಹಿತಿ ತಿಳಿಯಿತು ಎಂದು ವಿಜಯ್​ ಶಾ ಹೇಳಿದ್ದಾರೆ. ಅಲ್ಲದೆ, ಎಲ್ಲವೂ ಒಂದೇ ಕ್ಷಣದಲ್ಲಿ ಕೊನೆಗೊಂಡಿತು ಎಂದು ಕಣ್ಣೀರು ಹಾಕಿದ್ದಾರೆ.
ಸಂಜಯ್ ಮತ್ತು ಅವರ ಪತ್ನಿ ಅರ್ಚನಾ ಸಾವಿನಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ರಾಂಚಿಯಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ, ಸಂಜಯ್ ಅವರನ್ನು ಎಂದಿಗೂ ವಿಮಾನದಲ್ಲಿ ಕರೆದೊಯ್ಯುವ ಅಗತ್ಯವಿರಲಿಲ್ಲ. ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು. ನಾನು ಸಂಜಯ್ ಮತ್ತು ನನ್ನ ಸಹೋದರಿ ಅರ್ಚನಾ ದೇವಿ ಇಬ್ಬರನ್ನೂ ಕಳೆದುಕೊಂಡೆ ಎಂದು ಸಂಬಂಧಿಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net