ಮುಂಬೈ: (Hiran Chatterjee) ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಬೆಂಗಾಲಿ ಚಿತ್ರರಂಗದ ಖ್ಯಾತ ನಟ ಮತ್ತು ಬಿಜೆಪಿ ಶಾಸಕ ಹಿರನ್ ಚಟರ್ಜಿ ಅವರು ಮಾಡೆಲ್ ರಿತಿಕಾ ಗಿರಿ ಅವರೊಂದಿಗೆ ಎರಡನೇ ಮದುವೆಯಾಗಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಅವರ ಮಗಳು ಮತ್ತು ಮೊದಲ ಪತ್ನಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಹಿರನ್ ಚಟರ್ಜಿ ಅವರ 19 ವರ್ಷದ ಮಗಳು ನಿಯಾಸಾ ಚಟರ್ಜಿ, ನನ್ನ ತಂದೆಯ ಮದುವೆಯ ಫೋಟೋಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ. ಅಪ್ಪ ಈ ರೀತಿ ಮಾಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ನನಗೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ.
ನನ್ನ ತಾಯಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪನ ಈ ವರ್ತನೆಯಿಂದ ನಮ್ಮ ಇಡೀ ಕುಟುಂಬ ಮಾನಸಿಕವಾಗಿ ಕುಸಿದುಹೋಗಿದೆ. ಒಬ್ಬ ತಂದೆಯಾಗಿ ಅವರು ಸೋತಿದ್ದಾರೆ ಎಂದು ನಿಯಾಸಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ತನ್ನ ತಾಯಿಯ ಪರವಾಗಿ ನಿಂತಿರುವ ನಿಯಾಸಾ, ಇನ್‌ಸ್ಟಾಗ್ರಾಮ್‌ನಲ್ಲಿ ತಾಯಿಯ ಜೊತೆಗಿನ ವಿಡಿಯೋ ಹಂಚಿಕೊಂಡು, "ನನ್ನ ತಾಯಿ ನನಗೆ ತಂದೆ ಮತ್ತು ತಾಯಿ ಇಬ್ಬರೂ ಹೌದು. ಅವರೇ ನನ್ನ ಹೀರೋ," ಎಂದು ಬರೆದುಕೊಂಡಿದ್ದಾರೆ.
ಹಿರನ್ ಅವರ ಮೊದಲ ಪತ್ನಿ ಅನಿಂದಿತಾ ಚಟರ್ಜಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನೊಂದಿಗೆ ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆಯದೆಯೇ ಹಿರನ್ ಎರಡನೇ ಮದುವೆಯಾಗಿದ್ದಾರೆ, ಇದು ಕಾನೂನುಬಾಹಿರ ಎಂದು ಅವರು ಆರೋಪಿಸಿದ್ದಾರೆ.
ನಡೆದಿದ್ದೇನು?:
ಹಿರಣ್ ಚಟರ್ಜಿ ಮತ್ತು ರಿತಿಕಾ ಗಿರಿ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ವಾರಣಾಸಿಯ ಗಂಗಾ ನದಿಯ ದಡದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಈ ಜೋಡಿ ವಿವಾಹವಾಗುತ್ತಿರುವುದು ಕಂಡುಬಂದಿದೆ. ಈ ಫೋಟೋಗಳು ಹೊರಬಂದ ತಕ್ಷಣ, ಟಾಲಿವುಡ್‌ನಿಂದ ಬಂಗಾಳ ರಾಜಕೀಯದವರೆಗೆ ಚರ್ಚೆಗಳು ಸುತ್ತಿಕೊಂಡವು.
ಹಿರಣ್ ಚಟರ್ಜಿ ಅವರ ಎರಡನೇ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಅವರ ಮೊದಲ ಪತ್ನಿ ಅನಿಂದಿತಾ ಚಟರ್ಜಿ ಕೋಲ್ಕತ್ತಾದ ಆನಂದಪುರ ಪೊಲೀಸ್ ಠಾಣೆಯಲ್ಲಿ ಹಿರಣ್ ಚಟರ್ಜಿ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮಿಬ್ಬರ ನಡುವೆ ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಆಗಿಲ್ಲ. ವಿಚ್ಛೇದನ ಪಡೆಯದೆಯೇ ಅವರು ಎರಡನೇ ಮದುವೆಯಾಗಿದ್ದಾರೆ ಎಂದಿದ್ದಾರೆ.
ನಾವು 2000 ದ ಡಿಸೆಂಬರ್ 11 ರಿಂದ ವಿವಾಹವಾಗಿದ್ದೇವೆ. ನಮಗೆ 19 ವರ್ಷದ ಮಗಳು ಕೂಡ ಇದ್ದಾಳೆ. ನಾನು ಬಹಳ ಸಮಯದಿಂದ ಚಿತ್ರಹಿಂಸೆ ಎದುರಿಸುತ್ತಿದ್ದೆ ಆದರೆ ನನ್ನ ಮಗಳು ಮತ್ತು ನಮ್ಮ ಕುಟುಂಬದ ಹಿತದೃಷ್ಟಿಯಿಂದ ನಾನು ಮೌನವನ್ನು ಕಾಯ್ದುಕೊಂಡೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿರಣ್ ಮತ್ತು ಮಾಡೆಲ್ ರಿತಿಕಾ ಗಿರಿ ಅವರ ವಿವಾಹ ಮಹೋತ್ಸವ ವಾರಣಾಸಿಯ ಗಂಗಾ ನದಿಯ ದಡದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದಿದೆ. ಈ ಮದುವೆಯ ಫೋಟೋಗಳು ಹೊರಬೀಳುವವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ವೈರಲ್ ಆದ ಬೆನ್ನಲ್ಲೇ ಬಂಗಾಳದ ರಾಜಕೀಯ ಮತ್ತು ಚಿತ್ರರಂಗದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಈ ಕುರಿತು ಶಾಸಕ ಹಿರಣ್ ಚಟರ್ಜಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.