ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಪ್ರಾಣಭೀತಿ

Hindus in Bangladesh
Hindus in Bangladesh
Published on
ಶೇಖ್​ ಹಸೀನಾ ಪದಚ್ಯುತಿಯ ಬಳಿಕ (2024ರ ಆಗಸ್ಟ್​) ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ದಯನೀಯವಾಗಿದೆ. ಅದರಲ್ಲೂ, ಇತ್ತೀಚೆಗೆ ಉಸ್ಮಾನ್​ ಹದಿ ಹತ್ಯೆ ನಂತರವಂತೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಹಿಂದೂ ಯುವಕ ದೀಪು ಚಂದ್ರ ದಾಸ್​ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲ, ಇಸ್ಲಾಮಿಕ್​ ಮೂಲಭೂತವಾದಿಗಳು ಹಿಂದೂಗಳನ್ನು ಗುರಿಯಾಗಿಸಿ ಹಿಂಸಿಸುತ್ತಿದ್ದಾರೆ. ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಅಷ್ಟಕ್ಕೂ, ದೀಪು ಚಂದ್ರನ ಬಳಿ ಬೇಸಿಕ್​ ಮೊಬೈಲ್​ ಪೋನ್​ ಇತ್ತು. ಅದರಿಂದ ಅವನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲು ಸಾಧ್ಯವೇ ಇಲ್ಲ. ಒಟ್ಟಾರೆ, ಹಿಂದೂಗಳ ವಿರುದ್ಧ ಭಾರಿ ಷಡ್ಯಂತ್ರ ನಡೆಯುತ್ತಿದೆ. ಮೂಲಭೂತವಾದಿಗಳ ಅಟ್ಟಹಾಸದ ಎದುರು ಪೊಲೀಸರು ಏನೂ ಮಾಡದಂತಾಗಿದ್ದಾರೆ. ಹಾಗಾಗಿ, ಹಿಂದೂಗಳು ಪ್ರತಿದಿನ, ಪ್ರತಿಕ್ಷಣ ಜೀವಭೀತಿಯಲ್ಲೇ ಬದುಕುವಂತಾಗಿದೆ'.
ಈಗಿನ ಸ್ಥಿತಿಯ ಘೋರ ವಾಸ್ತವವನ್ನು ಹೀಗೆ ಮಾಧ್ಯಮಗಳಿಗೆ ವಿವರಿಸುತ್ತ ಭಾವುಕರಾದವರು ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರಿಶ್ಚಿಯನ್​ ಯೂನಿಟಿ ಸಂಟನೆಯ ಪ್ರಧಾನ ಕಾರ್ಯದರ್ಶಿ ಮಹೀಂದ್ರಕುಮಾರ್​ ನಾಥ್​.
"ಬಾಂಗ್ಲಾದೇಶ ಈಗ ಮತೀಯ ಮೂಲಭೂತವಾದಿಗಳ ನಿಯಂತ್ರಣದಲ್ಲಿದೆ. ಅವರು ತಮ್ಮ ಅಕ್ಕ&ಪಕ್ಕ ಬೇರೆ ಧರ್ಮ, ಸಮುದಾಯಗಳ ಜನರು ವಾಸಿಸುವುದು ಬಯಸುತ್ತಿಲ್ಲ. ಹಾಗಾಗಿ, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ಮತ್ತು ಹಿಂದೂ ಮಂದಿರಗಳ ಮೇಲೆ ದಾಳಿಯ ಘಟನೆಗಳು ಹೆಚ್ಚುತ್ತಿವೆ. ಹಿಂದೂಗಳ ಮನೆಗಳ ಮೇಲೆ ಮಾತ್ರವಲ್ಲ ಉದಾರವಾದಿ ಮುಸ್ಲಿಮರ ಮನೆ ಮೇಲೂ ದಾಳಿ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಹಿಂದೆಂದೂ ಕಂಡಿರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಅವರ ಕಷ್ಟವನ್ನು ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ' ಎಂದಿದ್ದಾರೆ ಮಹೀಂದ್ರಕುಮಾರ್​ ನಾಥ್​.
ಹೌದು, ಬಾಂಗ್ಲಾದೇಶ ಸಂಪೂರ್ಣವಾಗಿ ಬದಲಾಗಿದೆ. ಎಷ್ಟೆಂದರೆ ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ಈಗ ಬಾಂಗ್ಲಾದೇಶವೇ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ರಕ್ಷಣಾ ತಜ್ಞರೇ ವಿಶ್ಲೇಷಿಸುತ್ತಿದ್ದಾರೆ. ದೊಡ್ಡ ವಿಪ್ಲವದಲ್ಲಿ ಸಿಲುಕಿರುವ ಬಾಂಗ್ಲಾದೇಶದಲ್ಲಿ ಈಗ ಮತೀಯ ಮೂಲಭೂತವಾದಿಗಳ ಕೈ ಮೇಲಾಗಿದೆ. ಅವರು ನೆಲದ ಕಾನೂನು ಪಾಲಿಸುವುದಿಲ್ಲ, ಇತರರ ನಂಬಿಕೆಗಳನ್ನು ಗೌರವಿಸುವುದಿಲ್ಲ, ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲ, ವಿರೋಧ, ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ. ಹಾಗಾಗಿಯೇ, ಕೆಲ ದಿನಗಳ ಹಿಂದಿನ ಹಿಂಸಾಚಾರದಲ್ಲಿ ಮಾಧ್ಯಮ ಕಚೇರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಪ್ರಾಣ ಉಳಿಸಿಕೊಳ್ಳಲು ಟೇರಸ್​ ಹತ್ತಿದ ಪತ್ರಕರ್ತರು, ಆ ಕಹಿ ಅನುಭವವನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ.

ಗೃಹಬಂಧನವೇ ಗತಿ

ಕಳೆದ ಹಲವು ದಿನಗಳಿಂದ ಬಾಂಗ್ಲಾದೇಶದ ಹಲವೆಡೆ ಹಿಂಸೆ ತಾಂಡವವಾಡುತ್ತಿದೆ. ಹಿಂದೂ ಮಂದಿರಗಳ ಎದುರು ಮೂಲಭೂತವಾದಿಗಳು ಜಮಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಹಿಂದೂಗಳ ಅಂಗಡಿಗಳು ಧ್ವಂಸಗೊಂಡಿವೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಪ್ರಾಣ ಉಳಿದರೆ ಸಾಕು ಎಂಬಂಥ ಸಂದಿಗ್ಧ ಸ್ಥಿತಿ. ಪರಿಣಾಮ, ಮನೆಯಿಂದ ಹೊರಬರಲು ಭಯಪಡುವಂತಾಗಿದ್ದು, ಸ್ವಯಂ ಗೃಹಬಂಧನ ವಿಧಿಸಿಕೊಂಡಿದ್ದಾರೆ. "ಹೊರಗಡೆ ಹೋದರೆ ಸುರತವಾಗಿ ಮನೆಗೆ ಮರಳುವ ಬಗ್ಗೆ ವಿಶ್ವಾಸವಿಲ್ಲ. ಹಿಂಸೆ ನಿಲ್ಲುವವರೆಗಾದರೂ ನಾವು ಮನೆಗಳಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಯಿದೆ' ಎನ್ನುತ್ತಾರೆ ಹಿಂದೂ ವ್ಯಾಪಾರಸ್ಥರು. 25 ವರ್ಷದ ಹಿಂದೂ ಯುವಕ ದೀಪು ಚಂದ್ರನ ಹತ್ಯೆಯಂತೂ ಸ್ಥಳಿಯರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಬಾಂಗ್ಲಾದೇಶದ ಮೈಮನ್​ಸಿಂಗ್​ ನಗರದ ಭಾಲುಕಾ ಪ್ರದೇಶದಲ್ಲಿ (ರಾಜಧಾನಿ ಢಾಕಾದಿಂದ 80 ಕಿ.ಮೀ. ದೂರದಲ್ಲಿದೆ) ಡಿಸೆಂಬರ್​ 18ರಂದು ದೀಪು ಚಂದ್ರನನ್ನು ನಗ್ನಗೊಳಿಸಿ, ಭೀಕರವಾಗಿ ಹತ್ಯೆ ಮಾಡಿದ್ದಲ್ಲದೆ ಶವವನ್ನು ಮರಕ್ಕೆ ನೇತು ಹಾಕಿ, ದುರುಳರು ಬೆಂಕಿ ಹಚ್ಚಿದರು ಮತ್ತು ಆ ಶವ ಮರದಲ್ಲಿ ದಹನವಾಗುತ್ತಿರುವುದನ್ನು ನೋಡಿ ಮೂಲಭೂತವಾದಿಗಳ ದೊಡ್ಡ ಗುಂಪು ಕೇಕೆ ಹಾಕಿ ಸಂಭ್ರಮಿಸಿತು. ಈ ಗುಂಪಲ್ಲಿ ಹೆಚ್ಚಿನವರು 18ರಿಂದ 28 ವರ್ಷದ ಯುವಕರೇ ಇದ್ದರು. ಈ ಘಟನೆಯ ಬಳಿಕ ಹಿಂದೂಗಳು ಮತ್ತಷ್ಟು ಆತಂಕಿತರಾಗಿದ್ದಾರೆ. ಹಾಗಾಗಿ, ಮನೆಯಿಂದ ಆಚೆ ಬರುವುದನ್ನೇ ಕಡಿಮೆ ಮಾಡಿದ್ದಾರೆ.

ದ್ವೀತಿಯ ದರ್ಜೆಯ ನಾಗರಿಕರು

ಪಾಕಿಸ್ತಾನದೊಂದಿಗೆ ಹೋರಾಡಿ, ಭಾರತದ ನೆರವಿನಿಂದ 1971ರಲ್ಲಿ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶ ವಾಗಿ ಉದಯವಾಯಿತು. ಭಾರತ ಮತ್ತು ನೇಪಾಳದ ನಂತರ ಅತಿ ಹೆಚ್ಚು ಹಿಂದೂಗಳು ನೆಲೆಸಿರುವ ರಾಷ್ಟ್ರ ಬಾಂಗ್ಲಾದೇಶ. ಆದರೆ, 1971ರಿಂದಲೂ ಹಿಂದೂಗಳನ್ನು ದ್ವೀತಿಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳಲಾಗಿದೆ. ಹಿಂದೂಗಳು ಹೆಚ್ಚಿರುವ ಜಿಲ್ಲೆ ಅಥವಾ ಪ್ರದೇಶಗಳಿಗೆ ಮೂಲಸೌಕರ್ಯ ವಿಸ್ತರಿಸಲು ನಿರಾಕರಿಸುವುದು, ಮಂದಿರಗಳ ನಿರ್ಮಾಣಕ್ಕೆ ಅನುಮತಿ ನೀಡದಿರುವುದು, ಹಾಲಿ ಇರುವ ಮಂದಿರಗಳ ನಿರ್ವಹಣೆಗೆ ಅಡ್ಡಿ ಮಾಡುವುದು, ವ್ಯಾಪಾರ ವಹಿವಾಟಿನಲ್ಲಿ ಹಿಂದೂಗಳು ಮೇಲುಗೈ ಸಾಧಿಸದಂತೆ ನೋಡಿಕೊಳ್ಳುವುದು ಹೀಗೆ 1971ರಲ್ಲಿ ಬಿತ್ತಿದ ಅಸಹನೆಯ ಬೀಜ ಅಲ್ಪಸಂಖ್ಯಾತರಾದ ಹಿಂದೂ, ಕ್ರೈಸ್ತ ಮತ್ತು ಬೌದ್ಧರ ಬದುಕನ್ನು ಅಸಹನೀಯಗೊಳಿಸಿದೆ, ಸಂಕಷ್ಟಕ್ಕೆ ದೂಡಿದೆ. 1971ರ ನಂತರ ಮುಸ್ಲಿಂ ಜನಸಂಖ್ಯೆ ಪ್ರಮಾಣ ತೀವ್ರ ಏರುಗತಿ ಕಂಡಿದ್ದರೆ, ಹಿಂದೂಗಳ ಜನಸಂಖ್ಯೆ ಪ್ರಮಾಣ ಕುಸಿಯುತ್ತಲೇ ಬಂದಿದೆ. ಸಾರ್ವತ್ರಿಕ ಚುನಾವಣೆ ಬಂದಾಗಲಂತೂ ಹಿಂದೂಗಳು ರಾಜಕೀಯ ಶಕ್ತಿಯಾಗಿ ಬೆಳೆಯದಂತೆ ತಡೆಯಲಾಗುತ್ತದೆ. 2026ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಚುನಾವಣೆ ಮುಂದೂಡುವ ತಂತ್ರಗಳು ಇದರ ಹಿಂದೆ ಇದೆ ಎನ್ನಲಾಗಿದೆ.

ಉದ್ಯೋಗ ನಷ್ಟ

ಶಾಲೆಗಳಲ್ಲಿ ಹಿಂದೂ ಶಿಕ್ಷಕರಿಂದ, ಇತರ ಕಚೇರಿಗಳಲ್ಲೂ ಹಿಂದೂ ಸಿಬ್ಬಂದಿಯಿಂದ ಒತ್ತಾಯಪೂರ್ವಕ ರಾಜೀನಾಮೆ ಪಡೆಯಲಾಗುತ್ತಿದೆ. ಹೀಗಾದರೆ ಹಿಂದೂಗಳು ಬದುಕು ಕಟ್ಟಿಕೊಳ್ಳುವುದು ಹೇಗೆ? ಉದ್ಯೋಗ ಅರಸಲು ಎಲ್ಲಿ ಹೋಗಬೇಕು? ಮತೀಯ ಮೂಲಭೂತ ವಾದಿಗಳು ಹಿಂದೂಗಳನ್ನೇ ಗುರಿಯಾಗಿಸಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಶಾಲೆ&ಕಾಲೇಜುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ದೇವಸ್ಥಾನಗಳು ಕೂಡ ಸುರತವಾಗಿ ಉಳಿದಿಲ್ಲ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 61 ಜಿಲ್ಲೆಗಳಲ್ಲಿ ಹಿಂದೂಗಳು ನೆಲೆಸಿದ್ದು, ಅವರು ಸುರತ ಬದುಕಿಗಾಗಿ ಪರಿತಪಿಸುವಂತಾಗಿದೆ. 2024ರ ಆಗಸ್ಟ್​ನಲ್ಲಿ ಹಿಂದೂಗಳ ಮನೆಗಳು, ದೇವಸ್ಥಾನಗಳಿಗೆ ನುಗ್ಗಿ ದಾಂಧಲೆ ನಡೆಸಲಾಗಿತ್ತು. ಬೆಂಕಿ ಹಚ್ಚಿ, ಲೂಟಿ ಮಾಡಿದ ಪ್ರಕರಣಗಳಂತೂ ಆತಂಕ ಹುಟ್ಟುಹಾಕಿದ್ದವು. ಅದರ ವಿರುದ್ಧ ಬಾಂಗ್ಲಾ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಇಂಥ ಘಟನೆಗಳು ಮತ್ತೆಮತ್ತೆ ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಗೆ ಈಗ ಅಂತಾರಾಷ್ಟ್ರೀಯ ಒತ್ತಡವೇ ಏರ್ಪಡಬೇಕಿದೆ.

ಇದೇ ಮೊದಲಲ್ಲ

ಶೇಖ್​ ಹಸೀನಾ 2024ರ ಆಗಸ್ಟ್​ನಲ್ಲಿ ಪದಚ್ಯುತಿಗೊಂಡು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದ ಬಳಿಕ ಬಾಂಗ್ಲಾದೇಶದಲ್ಲಿ ಮೊಹಮ್ಮದ್​ ಯೂನುಸ್​ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಗಿದೆ. ಆಗಿನಿಂದಲೂ ಹಿಂದೂಗಳ ಮೇಲೆ ಮತ್ತು ಹಿಂದೂ ಶ್ರದ್ಧಾಕೇಂದ್ರಗಳ ಮೇಲಿನ ದಾಳಿ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಉದ್ದೇಶಪೂರ್ವಕವಾಗಿ ಮತ್ತು ದ್ವೇಷಭಾವನೆಯಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿದೆ ಎಂದು ಹಿಂದೂ ಮುಖಂಡರು ಆರೋಪಿಸಿದ್ದಾರೆ. ಇಂಥ ಕೃತ್ಯಗಳನ್ನು ವಿರೋಧಿಸುವವರನ್ನೇ ದಮನಿಸಲಾಗುತ್ತಿದೆ. ನ್ಯಾಯಕ್ಕಾಗಿ ದನಿ ಎತ್ತುವವರ ಮೇಲೆ ಬಲಪ್ರಯೋಗ ಮಾಡುತ್ತಿದ್ದು, ಅಲ್ಪಸಂಖ್ಯಾತರು ಆತಂಕದಿಂದ ಬದುಕುವಂತಾಗಿದೆ. ದೌರ್ಜನ್ಯದ ಇಂಥ ಟನೆಗಳು ಹೆಚ್ಚುತ್ತಲೇ ಇರುವುದು, ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ ಬಾಂಗ್ಲಾದೇಶ ಸಮ್ಮಿಳಿತ ಸನಾತನ ಜಾಗರಣ ವೇದಿಕೆಯ ವಕ್ತಾರ ಸ್ವಾಮಿ ಚಿನ್ಮಯ್​ ಕೃಷ್ಣದಾಸ್​ ಪ್ರಭು ಅವರನ್ನು ಅಲ್ಲಿನ ಸರ್ಕಾರ 2024ರ ನವೆಂಬರ್​ನಲ್ಲಿ ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಿದೆ. ಅಲ್ಲದೆ, ಈ ವರ್ಷ ಮತ್ತೆರಡು ಹೊಸ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಜಾಮೀನು ಕೂಡ ಸಿಗದಂತೆ ಮಾಡಿದೆ. ಸ್ವಾಮಿ ಚಿನ್ಮಯ್​ ಕೃಷ್ಣದಾಸ್​ ಪ್ರಭು ಅವರ ಬಂಧನವನ್ನು ವಿರೋಧಿಸಿ ತೀವ್ರ ಪ್ರತಿಭಟನೆಗಳು ಕೂಡ ನಡೆದವು. ಭಾರತ ಸರ್ಕಾರ ಕೂಡ ಸ್ವಾಮಿ ಚಿನ್ಮಯ್​ ಕೃಷ್ಣದಾಸ್​ ಬಂಧನವನ್ನು ಖಂಡಿಸಿತ್ತು.
ಬಾಂಗ್ಲಾದೇಶದ ಯಾವುದೇ ಜಿಲ್ಲೆಯಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿಲ್ಲ. ಅಂದರೆ ಯಾವುದೇ ಜಿಲ್ಲೆಯಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡ 50ಕ್ಕಿಂತ ಅಧಿಕವಾಗಿಲ್ಲ.
17. ಕೋಟಿ ಬಾಂಗ್ಲಾದೇಶದ ಒಟ್ಟು ಜನಸಂಖ್ಯೆ
1.31. ಕೋಟಿ ಹಿಂದೂಗಳ ಒಟ್ಟು ಜನಸಂಖ್ಯೆ
ಇಳಿಕೆಯಾಗುತ್ತಿದೆ ಹಿಂದೂ ಜನಸಂಖ್ಯೆ
ವರ್ಷ ಪ್ರತಿಶತ
1974 13.50%
1981 12.13%
1991 10.51%
2001 9.60%
2011 8.54%
2022 7.95%
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net