ಅಸ್ಸಾಂ ಅಧಿಪತಿಯಾಗಿ ಹಿಮಂತ ಬಿಸ್ವಾ ಶರ್ಮಾ ಪಟ್ಟಾಭಿಷೇಕ; ಹೊಸ ಇತಿಹಾಸ ನಿರ್ಮಿಸಿದ ಕಾಂಗ್ರೆಸ್ಸೇತರ ನಾಯಕ | Himanta Biswa Sarma

Himanta Biswa Sarma | ಪ್ರಮಾಣ ವಚನ ಸ್ವೀಕರಿಸಿದ  ಹಿಮಂತ ಬಿಸ್ವಾ ಶರ್ಮಾ
Himanta Biswa Sarma | ಪ್ರಮಾಣ ವಚನ ಸ್ವೀಕರಿಸಿದ ಹಿಮಂತ ಬಿಸ್ವಾ ಶರ್ಮಾ
Published on
Himanta Biswa Sarma: ಅಸ್ಸಾಂ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲೊಂದು ಸ್ಥಾಪನೆಯಾಗಿದ್ದು, ಹಿಮಂತ ಬಿಸ್ವಾ ಶರ್ಮಾ ಸತತ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಗುವಾಹಟಿಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಶರ್ಮಾಗೆ ಪ್ರಮಾಣ ವಚನವನ್ನು ಬೋಧಿಸಿದರು. 57 ವರ್ಷದ ಹಿಮಂತ ಬಿಸ್ವಾ ಶರ್ಮಾ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ರಾಜ್ಯದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಸ್ಸಾಂನಲ್ಲಿ ಸತತ ಮೂರನೇ ಬಾರಿ ಎನ್‌ಡಿಎ ಸರ್ಕಾರ ಆಡಳಿತ ನಡೆಸಲಿದ್ದು, 2016 ರಲ್ಲಿ ಸರ್ಬಾನಂದ ಸೋನೊವಾಲ್ ನೇತೃತ್ವದಲ್ಲಿ ಮೈತ್ರಿಕೂಟವು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದು ಇಲ್ಲಿ ಗಮನಾರ್ಹ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದ್ದು, 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ 82 ಸ್ಥಾನಗಳನ್ನು ಗೆದ್ದಿದೆ. ಮೈತ್ರಿ ಪಕ್ಷಗಳಾದ ಅಸ್ಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ತಲಾ 10 ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರದ ಬಲವನ್ನು ಮತ್ತಷ್ಟು ಹೆಚ್ಚಿಸಿವೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರ ದಂಡು!..

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶದ ಗಣ್ಯಾತಿಗಣ್ಯರು ಗುವಾಹಟಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್ ಹಾಗೂ ಪಬಿತ್ರ ಮಾರ್ಗರಿಟಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ನಾಲ್ವರು ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂಪುಟವು ಬಿಜೆಪಿ ಮತ್ತು ಮಿತ್ರಪಕ್ಷಗಳಾದ ಎಜಿಪಿ ಹಾಗೂ ಬಿಪಿಎಫ್ ಸಂಯೋಜನೆಯನ್ನು ಹೊಂದಿದ್ದು, ಶರ್ಮಾರ ಮೊದಲ ಸಂಪುಟದಲ್ಲಿದ್ದ ಅಜಂತಾ ನಿಯೋಗ್, ಅತುಲ್ ಬೋರಾ ಮತ್ತು ಚರಣ್ ಬೋರೋ ಸಚಿವ ಸ್ಥಾನವನ್ನು ಉಳಿಸಿಕೊಂಡರೆ, ಮಾಜಿ ಕೇಂದ್ರ ಸಚಿವ ರಾಮೇಶ್ವರ್ ತೇಲಿ ರಾಜ್ಯ ರಾಜಕೀಯಕ್ಕೆ ಮರಳುವ ಮೂಲಕ ಹೊಸದಾಗಿ ಸಂಪುಟ ಸೇರಿದ್ದಾರೆ.

ರಾಮೇಶ್ವರ್ ತೇಲಿ ದುಲಿಯಾಜನ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಧ್ರುಬಾ ಗೊಗೊಯ್​​ರನ್ನು 10,459 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಎರಡು ಅವಧಿಗೆ ದಿಬ್ರುಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಇವರು, 2024ರಲ್ಲಿ ರಾಜ್ಯಸಭಾ ಸಂಸದರಾಗಿ ನಾಮನಿರ್ದೇಶನಗೊಂಡಿದ್ದರು. ಅಲ್ಲದೆ ಕೇಂದ್ರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಅತುಲ್ ಬೋರಾ ಅವರು ಅಸ್ಸಾಂ ಗಣ ಪರಿಷತ್ (ಎಜಿಪಿ) ಅಧ್ಯಕ್ಷರಾಗಿದ್ದು, ಬೊಕಾಖಾಟ್ ಕ್ಷೇತ್ರದಿಂದ ರೈಜೋರ್ ದಳದ ಹರಿ ಪ್ರಸಾದ್ ಸೈಕಿಯಾ ವಿರುದ್ಧ 60,537 ಮತಗಳ ಭರ್ಜರಿ ಅಂತರದಿಂದ ಜಯಗಳಿಸಿದ್ದಾರೆ. 2016 ರಿಂದ 2026ರವರೆಗೆ ಸತತವಾಗಿ ಅಸ್ಸಾಂನ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಸಚಿವರಾಗಿ ಕಾರ್ಯನಿರ್ವಹಿಸಿದ ದೀರ್ಘ ಅನುಭವ ಇವರಿಗಿದೆ.

ಚರಣ್ ಬೋರೋ ಅವರು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ನ ಹಿರಿಯ ನಾಯಕರಾಗಿದ್ದು, ಮಜ್ಬತ್ ಕ್ಷೇತ್ರದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿ ಪ್ರೀತಿ ರೇಖಾ ಬಾರ್ಲಾ ಅವರನ್ನು 55,546 ಮತಗಳಿಂದ ಸೋಲಿಸಿದ್ದಾರೆ. ಇದು ಅವರ ಸತತ ಮೂರನೇ ಗೆಲುವಾಗಿದ್ದು, 2016 ರಿಂದಲೂ ನಿರಂತರವಾಗಿ ವಿಧಾನಸಭೆಯಲ್ಲಿ ಮಜ್ಬತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಅಜಂತಾ ನಿಯೋಗ್ ಅವರು ಅಸ್ಸಾಂನ ಮೊದಲ ಮಹಿಳಾ ಹಣಕಾಸು ಸಚಿವೆಯೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಗೋಲಾಘಾಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಕಾಂಗ್ರೆಸ್‌ನ ಬಿಟುಪನ್ ಸೈಕಿಯಾರನ್ನು 43,759 ಮತಗಳ ಅಂತರದಿಂದ ಪರಾಭವಗೊಳಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಮೂಲಕ ಶರ್ಮಾರ ಎರಡನೇ ಅವಧಿಯ ಸರ್ಕಾರದಲ್ಲಿಯೂ ತಮ್ಮ ಪ್ರಭಾವವನ್ನು ಮುಂದುವರಿಸಿದ್ದಾರೆ.(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net