ಆಪರೇಷನ್ ಸಿಂಧೂರ ವೇಳೆ ಪಾಕ್ ಎದುರಿಸಲು ಭಾರತ ಪರದಾಡಿತ್ತು ಎಂದ ಕೈ ಸಚಿವ; ಕ್ಷಮೆ ಕೇಳಲ್ಲ ಅಂತ ನೇಗಿ ಮೊಂಡುತನ! | Jagat Singh Negi

ಆಪರೇಷನ್ ಸಿಂಧೂರ ವೇಳೆ ಪಾಕ್ ಎದುರಿಸಲು ಭಾರತ ಪರದಾಡಿತ್ತು ಎಂದ ಕೈ ಸಚಿವ; ಕ್ಷಮೆ ಕೇಳಲ್ಲ ಅಂತ ನೇಗಿ ಮೊಂಡುತನ! | Jagat Singh Negi
Published on: 

ಶಿಮ್ಲಾ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಕಠಿಣ ಸಮಯ ಎದುರಾಗಿತ್ತು ಮತ್ತು ರಫೇಲ್ ಯುದ್ಧವಿಮಾನಗಳು ನಿರುಪಯುಕ್ತವಾಗಿವೆ ಎಂದು ಹಿಮಾಚಲ ಪ್ರದೇಶದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ (Jagat Singh Negi) ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಯು ದೊಡ್ಡ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಚಿವರ ಈ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯ ಅಧಿವೇಶನದ ವೇಳೆ ಭ್ರಷ್ಟಾಚಾರದ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು. ಈ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗತ್ ಸಿಂಗ್ ನೇಗಿ, ಡಸಾಲ್ಟ್ ಏವಿಯೇಷನ್‌ನ ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

Also Read
ಕದನ ವಿರಾಮಕ್ಕೆ ಬೇಡಿಕೊಂಡಿದ್ದ ಪಾಕ್​, ತಕ್ಷಣ ಒಪ್ಪದೆ ವಿಕ್ರಮ ಮೆರೆದ ಭಾರತ!...ಆಪರೇಷನ್ ಸಿಂಧೂರ ರಹಸ್ಯ ಬಿಚ್ಚಿಟ್ಟ ಮಾಜಿ ಸಿಡಿಎಸ್ | Operation Sindoor
ಆಪರೇಷನ್ ಸಿಂಧೂರ ವೇಳೆ ಪಾಕ್ ಎದುರಿಸಲು ಭಾರತ ಪರದಾಡಿತ್ತು ಎಂದ ಕೈ ಸಚಿವ; ಕ್ಷಮೆ ಕೇಳಲ್ಲ ಅಂತ ನೇಗಿ ಮೊಂಡುತನ! | Jagat Singh Negi

700 ಕೋಟಿ ರೂಪಾಯಿ ಬೆಲೆಯ ವಿಮಾನವನ್ನು 2,300 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಅಷ್ಟೊಂದು ಹಣ ನೀಡಿ ಖರೀದಿಸಿದ ಯುದ್ಧವಿಮಾನಗಳು ನಿರುಪಯುಕ್ತವೆಂದು ಸಾಬೀತಾಗಿದ್ದು, ಇದರಿಂದಾಗಿ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಕಠಿಣ ಪರಿಸ್ಥಿತಿ ಎದುರಾಯಿತು ಎಂದು ನೇಗಿ ಸದನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕವೂ ತಮ್ಮ ನಿಲುವಿಗೆ ಬದ್ಧರಾಗಿರುವ ನೇಗಿ, ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.

ಕಡತದಿಂದ ಹೇಳಿಕೆ ತೆಗೆದುಹಾಕಲು ಪಟ್ಟು; ಕಲಾಪ ಮುಂದೂಡಿಕೆ

ಸಚಿವರ ಈ ಹೇಳಿಕೆಯನ್ನು ಖಂಡಿಸಿ ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ಸಭಾಧ್ಯಕ್ಷರ ಪೀಠದಿಂದ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದು, ಸಚಿವರ ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎನ್‌ಡಿಟಿವಿ ಜೊತೆ ಮಾತನಾಡಿದ ಜೈ ರಾಮ್ ಠಾಕೂರ್, ಸಚಿವರ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕುವಂತೆ ನಾವು ಔಪಚಾರಿಕವಾಗಿ ಒತ್ತಾಯಿಸಿದ್ದೇವೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ತನ್ನ ಮುಂದಿರುವ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ತಮ್ಮ ಸಚಿವರ ಈ ಹೇಳಿಕೆಯನ್ನು ಬೆಂಬಲಿಸುತ್ತಾರೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಸಚಿವ ನೇಗಿ ಅವರ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್ ನಾಯಕರಿಗೂ ಮುಜುಗರ ಉಂಟುಮಾಡಿದ್ದು, ಇತರ ಸಚಿವರು ಈ ಬಗ್ಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಹೆಚ್ಚೇನೂ ಮಾತನಾಡದೆ, ವಾಸ್ತವ ಏನೆಂಬುದು ಎಲ್ಲರಿಗೂ ತಿಳಿದಿದೆ ಎಂದಷ್ಟೇ ಪ್ರತಿಕ್ರಿಯಿಸಿ ಮೌನಕ್ಕೆ ಶರಣಾದರು.

ಸೇನೆಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರ ವಾಗ್ದಾಳಿ

ವಿಧಾನಸಭೆಯ ಹೊರಗೂ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಸಚಿವರು ಭಾರತೀಯ ಸಶಸ್ತ್ರ ಪಡೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಪಿನ್ ಸಿಂಗ್ ಪರ್ಮಾರ್ ಮಾತನಾಡಿ, ನೇಗಿ ಅವರು ಸದನದಲ್ಲಿ ತಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಗಂಭೀರತೆಯನ್ನೇ ಅರಿತಿಲ್ಲ. ಅಮಾಯಕ ನಾಗರಿಕರ ಬದುಕನ್ನು ಛಿದ್ರಗೊಳಿಸಿದ ಭಯೋತ್ಪಾದಕರನ್ನು ಅದೇ ಜಾಗದಲ್ಲಿ ನಮ್ಮ ಸೇನೆ ಹೊಡೆದುರುಳಿಸಿದೆ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಸುಧೀರ್ ಶರ್ಮಾ ಸಹ ಕಂದಾಯ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಗತ್ ಸಿಂಗ್ ನೇಗಿ ಅವರಿಗೆ ಅಂತಹ ಅಭಿಪ್ರಾಯಗಳಿದ್ದರೆ, ಅವರು ಇಲ್ಲಿರುವ ಬದಲು ನೇರವಾಗಿ ಲಾಹೋರ್‌ಗೆ ಹೋಗಲಿ. ಹಿಮಾಚಲ ಪ್ರದೇಶದ ಪ್ರತಿ ಮೂರನೇ ಮನೆಯ ಒಬ್ಬ ಸದಸ್ಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ರಾಜ್ಯದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ. ಕಾಂಗ್ರೆಸ್ ತನ್ನ ರಾಜಕೀಯ ನೆಲೆಯನ್ನು ಕಳೆದುಕೊಂಡಿದ್ದು, ದೆಹಲಿಯಿಂದ ಹಿಮಾಚಲದವರೆಗೆ ಅಸ್ತಿತ್ವ ಉಳಿಸಿಕೊಳ್ಳಲು ಆ ಪಕ್ಷದ ನಾಯಕರು ಹೀಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶರ್ಮಾ ಟೀಕಿಸಿದ್ದಾರೆ(ಏಜೆನ್ಸೀಸ್​).