ಅವರ ಕೆಲಸ ನಿಜಕ್ಕೂ ಮೆಚ್ಚುವಂತದ್ದು!...ಶತ್ರು ಪಾಳಯದ ಸುವೇಂದು ಅಧಿಕಾರಿ ಆಡಳಿತಕ್ಕೆ ಮನಸೋತ ಕಮ್ಯುನಿಸ್ಟ್ ಮಾಜಿ ಸಿಎಂ ಪತ್ನಿ | Mira Bhattacharjee

 Mira Bhattacharjee | ಶತ್ರು ಪಾಳಯದ ಸುವೇಂದು ಅಧಿಕಾರಿ ಆಡಳಿತಕ್ಕೆ ಮನಸೋತ ಕಮ್ಯುನಿಸ್ಟ್ ಮಾಜಿ ಸಿಎಂ ಪತ್ನಿ
Mira Bhattacharjee | ಶತ್ರು ಪಾಳಯದ ಸುವೇಂದು ಅಧಿಕಾರಿ ಆಡಳಿತಕ್ಕೆ ಮನಸೋತ ಕಮ್ಯುನಿಸ್ಟ್ ಮಾಜಿ ಸಿಎಂ ಪತ್ನಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ದಿವಂಗತ ಬುದ್ಧದೇವ್ ಭಟ್ಟಾಚಾರ್ಯ ಅವರ ಪತ್ನಿ ಮೀರಾ ಭಟ್ಟಾಚಾರ್ಯ ಅವರು ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಹೊಸ ಸರ್ಕಾರವು ತನ್ನ ಚುನಾವಣಾ ಭರವಸೆಗಳನ್ನು ಅತ್ಯಂತ ವೇಗವಾಗಿ ಜಾರಿಗೆ ತರುತ್ತಿರುವ ಶೈಲಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಜ್ ತಕ್ ಬಾಂಗ್ಲಾ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮೀರಾ ಭಟ್ಟಾಚಾರ್ಯ, ನೂತನ ಸರ್ಕಾರವು ಚುನಾವಣಾ ಪ್ರಚಾರದ ಅವಧಿಯಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಅತ್ಯಂತ ವೇಗವಾಗಿ ಹೆಜ್ಜೆ ಇಟ್ಟಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ಕೆಲಸ ಮಾಡಿರುವ ರೀತಿ ನಿಜಕ್ಕೂ ಶ್ಲಾಘನೀಯ. ಅವರು ತಮ್ಮ ಭರವಸೆಗಳನ್ನು ಇಷ್ಟು ಬೇಗ ಅನುಷ್ಠಾನಕ್ಕೆ ತರುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಮೀರಾ ಭಟ್ಟಾಚಾರ್ಯ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಕಲ್ಯಾಣ ಯೋಜನೆಗಳ ಅನುಷ್ಠಾನವೇ ಸರ್ಕಾರದ ಪ್ರಾಮಾಣಿಕ ಪ್ರಯತ್ನಕ್ಕೆ ಸಾಕ್ಷಿ. ಯಾರೇ ಆಗಲಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದರೂ, ರಾಜ್ಯದ ಜನರ ಹಿತಸ್ಮರಣೆಗಾಗಿ ಕೆಲಸ ಮಾಡುವವರು ನಮ್ಮ ಗೌರವಕ್ಕೆ ಅರ್ಹರು ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ತಾವೆಂದೂ ವೈಯಕ್ತಿಕವಾಗಿ ಭೇಟಿಯಾಗಿಲ್ಲ, ಆದರೆ ಅವರು ಪಶ್ಚಿಮ ಬಂಗಾಳದ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಮೀರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಎಡರಂಗ ಮತ್ತು ಟಿಎಂಸಿ ಆಡಳಿತವನ್ನು ಹೋಲಿಸಲು ಸಾಧ್ಯವಿಲ್ಲ

ಇದೇ ಸಂದರ್ಭದಲ್ಲಿ ತಮ್ಮ ಪತಿಯ ನೇತೃತ್ವದ ಎಡರಂಗ (Left Front) ಸರ್ಕಾರದ ಸಾಧನೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಮೀರಾ ಭಟ್ಟಾಚಾರ್ಯ, ಎಡಪಕ್ಷಗಳ 34 ವರ್ಷಗಳ ಆಡಳಿತವನ್ನು ತೃಣಮೂಲ ಕಾಂಗ್ರೆಸ್‌ನ (TMC) 15 ವರ್ಷಗಳ ಆಡಳಿತಕ್ಕೆ ಹೋಲಿಸುವುದನ್ನು ತಿರಸ್ಕರಿಸಿದ್ದಾರೆ.
ಟಿಎಂಸಿಯ 15 ವರ್ಷಗಳ ಆಡಳಿತಕ್ಕೂ ಮತ್ತು ಎಡರಂಗದ 34 ವರ್ಷಗಳ ಸುಶಾಸನಕ್ಕೂ ಯಾವುದೇ ಹೋಲಿಕೆಯೇ ಇಲ್ಲ ಎಂದ ಅವರು, ಪಶ್ಚಿಮ ಬಂಗಾಳದಲ್ಲಿ ನಂದನ್, ವಿದ್ಯಾಸಾಗರ್ ಸೇತು, ಸಾಹಿತ್ಯ ಅಕಾಡೆಮಿ ಮತ್ತು ಶಿಶು ಕಿಶೋರ್ ಅಕಾಡೆಮಿ ಸೇರಿದಂತೆ ಹಲವು ಐತಿಹಾಸಿಕ ಸಂಸ್ಥೆಗಳು ಹಾಗೂ ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಿದ ಕೀರ್ತಿ ಎಡರಂಗ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. ಅಲ್ಲದೆ, ಎಡಪಕ್ಷಗಳ ಆಡಳಿತಾವಧಿಯಲ್ಲೇ ಪಶ್ಚಿಮ ಬಂಗಾಳ ದೇಶದ ಮುಂಚೂಣಿ ಕೃಷಿ ರಾಜ್ಯವಾಗಿ ಹೊರಹೊಮ್ಮಿತ್ತು ಎಂಬುದನ್ನು ಸ್ಮರಿಸಿದರು.
ಆ ಕೃಷಿ ತಳಹದಿಯ ಮೇಲೆಯೇ ರಾಜ್ಯಕ್ಕೆ ಬೃಹತ್ ಕೈಗಾರಿಕೆಗಳನ್ನು ತರಲು ಬುದ್ಧದೇವ್ ಭಟ್ಟಾಚಾರ್ಯ ಅವರು ಶ್ರಮಿಸಿದ್ದರು, ಆದರೆ ನಂತರದ ವರ್ಷಗಳಲ್ಲಿ ಆ ಪ್ರಯತ್ನಗಳು ಹಳಿತಪ್ಪಿದವು ಎಂದು ಬೇಸರ ವ್ಯಕ್ತಪಡಿಸಿದರು.

ಸಿಂಗೂರ್ ವಿವಾದ; ಈಗ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ!

ರಾಜ್ಯದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಸಿಂಗೂರ್ ವಿವಾದದ ಕುರಿತು ಮಾತನಾಡಿದ ಮೀರಾ ಭಟ್ಟಾಚಾರ್ಯ, ಅಂದು ಟಾಟಾ ಮೋಟಾರ್ಸ್ ಆಟೋಮೊಬೈಲ್ ಯೋಜನೆಯನ್ನು ವಿರೋಧಿಸಿದ ಸಿಂಗೂರ್‌ನ ಅನೇಕ ನಿವಾಸಿಗಳು ಈಗ ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಅಂದು ತಾವು ಮಾಡಿದ ತಪ್ಪು ಮತ್ತು ಆ ಸಮಯದಲ್ಲಿ ತಮ್ಮನ್ನು ಹೇಗೆ ದಾರಿ ತಪ್ಪಿಸಲಾಯಿತು ಎಂಬುದು ಈಗ ಸಿಂಗೂರ್‌ನ ಜನರಿಗೆ ಅರ್ಥವಾಗಿದೆ. ಅಂದೇ ಆ ಕಾರು ಕಾರ್ಖಾನೆ ಸ್ಥಾಪನೆಯಾಗಿದ್ದರೆ ಬಂಗಾಳದ ಆರ್ಥಿಕ ಚಿತ್ರಣವೇ ಬದಲಾಗುತ್ತಿತ್ತು ಎಂದು ಪ್ರತಿಪಾದಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net