ಹವಾಮಾನ ವಿಜ್ಞಾನಿಗಳ ಪ್ರಕಾರ, ಹೀಟ್ ಡೋಮ್ ನಿಧಾನವಾಗಿ ಪಶ್ಚಿಮ ಯುರೋಪ್ನಿಂದ ಪೂರ್ವದ ಕಡೆಗೆ ಚಲಿಸಲಿದೆ. ಅಂಟಾರ್ಟಿಕಾ ಕಡೆಯಿಂದ ಬರುವ ತಂಪಾದ ಮಾರುತಗಳು ಸ್ವಲ್ಪ ಸಮಾಧಾನ ತರಲಿವೆ. ಫ್ರಾನ್ಸ್ನ ಪಶ್ಚಿಮ ಭಾಗದಲ್ಲಿ ಮತ್ತು ಜರ್ಮನಿ, ಇಟಲಿ ಹಾಗೂ ಬ್ರಿಟನ್ನಲ್ಲೂ ತಾಪಮಾನ ತಾತ್ಕಾಲಿಕವಾಗಿ ಕಡಿಮೆಯಾಗಲಿದೆ. ಆದರೆ ಈ ಪರಿಹಾರ ಕೆಲವು ದಿನಗಳ ಮಟ್ಟಿಗೆ ಮಾತ್ರ ಇರಲಿದೆ. ಹವಾಮಾನ ವಿಜ್ಞಾನಿಗಳ ಮುನ್ಸೂಚನೆಯ ಪ್ರಕಾರ, ಜುಲೈ ತಿಂಗಳಲ್ಲಿ ಯುರೋಪ್ನ ಮೇಲೆ ಮತ್ತೊಂದು ಹೀಟ್ ಡೋಮ್ ಸಕ್ರಿಯಗೊಳ್ಳಬಹುದು. ಇದರ ಪ್ರಭಾವ ಪಶ್ಚಿಮ ಮತ್ತು ಮಧ್ಯ ಯುರೋಪ್ನಲ್ಲಿ ಹೆಚ್ಚಾಗಿರಲಿದೆ. ಸ್ಪೇನ್, ಪೋರ್ಚುಗಲ್, ಫ್ರಾನ್ಸ್ನಲ್ಲಿ ತೀವ್ರ ಶಾಖದ ಅಲೆಯ ಅವಧಿ 6 ರಿಂದ 9 ದಿನಗಳು ಇರುವ ಸಾಧ್ಯತೆಯಿದೆ. ಜರ್ಮನಿ, ದಕ್ಷಿಣ ಇಂಗ್ಲೆಂಡ್, ಉತ್ತರ ಇಟಲಿಯಲ್ಲಿ ಜುಲೈ 7ರಿಂದ 10 ನಡುವೆ ಮತ್ತೊಮ್ಮೆ ಹೀಟ್ ಡೋಮ್ ಸಕ್ರಿಯವಾಗಲಿದೆ. ಇದು ಪ್ರಸ್ತುತ ಇರುವ ಬಿಸಿಲಿಗಿಂತಲೂ ಹೆಚ್ಚು ಅಪಾಯಕಾರಿಯಾಗಬಹುದು. ಏಕೆಂದರೆ ಮೊದಲ ಹಂತದ ಶಾಖದ ಅಲೆಯು ಈಗಾಗಲೇ ಮಣ್ಣಿನ ತೇವಾಂಶವನ್ನು ಒಣಗಿಸಿದೆ, ರಸ್ತೆ ಮತ್ತು ಕಟ್ಟಡಗಳನ್ನು ಕಾಯಿಸಿದೆ. ಇಂತಹ ಸಂದರ್ಭದಲ್ಲಿ ಸತತವಾಗಿ ಬರುವ ಎರಡನೇ ಶಾಖದ ಅಲೆಯು ನಗರಗಳನ್ನು ಮತ್ತಷ್ಟು ಕಾಡಲಿದೆ. ಆಗಸ್ಟ್ವರೆಗೆ ಯುರೋಪ್ನಲ್ಲಿ ಇದೇ ರೀತಿಯ ಬಿಸಿ ವಾತಾವರಣ ಮುಂದುವರಿಯಲಿದ್ದು, ಈ ವರ್ಷ ಎಲ್-ನಿನೋ ಪ್ರಭಾವದಿಂದಾಗಿ ಯುರೋಪ್ನಲ್ಲಿ ತೀವ್ರ ಬರಗಾಲ ಎದುರಾಗುವ ಆತಂಕವೂ ಇದೆ.