

ಹೈದರಾಬಾದ್: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭಾನುವಾರ(ನ. 08) ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಕೆಟಿಆರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆಸ್ತಿಯನ್ನು ಹಂಚಿಕೊಳ್ಳಲು ಇಷ್ಟಪಡದೇ ತನ್ನ ಸ್ವಂತ ತಂಗಿಯನ್ನೇ ಮನೆಯಿಂದ ಓಡಿಸಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹುಟ್ಟುಹಬ್ಬದ ನಿಮಿತ್ಯ ಸ್ವಕ್ಷೇತ್ರ ಕೋಡಂಗಲ್ನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಭೆಯಲ್ಲಿ ಮಾತನಾಡಿರುವ ಅವರು, ಒಬ್ಬ ಸಹೋದರನಾಗಿ ನಿಮಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನಾನು ಇಂದಿರಮ್ಮ ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಆದರೆ, ಕೆ.ಟಿ.ರಾಮರಾವ್ ಅವರನ್ನು ನೋಡಿ, ಕುಟುಂಬದ ಆಸ್ತಿ ಹಂಚಿಕೊಳ್ಳಲು ಇಷ್ಟಪಡದೇ ತಮ್ಮ ಸಹೋದರಿ ಕೆ.ಕವಿತಾ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಕವಿತಾ ಜೈಲು ಸೇರಿದ್ದನ್ನೂ ಉಲ್ಲೇಖಿಸಿರುವ ಅವರು, ಜೈಲು ಶಿಕ್ಷೆಯನ್ನು ಅನುಭವಿಸಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಆ ಸಹೋದರಿ ಈಗ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಆಕೆಯ ತಪ್ಪು ಏನೇ ಇರಲಿ, ಆರು ತಿಂಗಳು ಜೈಲುವಾಸ ಅನುಭವಿಸಿ ಮನೆಗೆ ಮರಳಿದ ತನ್ನ ಸಹೋದರಿಯನ್ನು ಆತ ನೋಡಿಕೊಳ್ಳಬೇಕಿತ್ತು. ಆದರೆ, ತಪ್ಪು ಮಾಡಿದ್ದಾಳೆ ಮತ್ತು ಮದ್ಯ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಿ, ಸ್ವಂತ ಸಹೋದರಿಯನ್ನೇ ಮನೆಯಿಂದ ಹೊರಹಾಕಿದ ವ್ಯಕ್ತಿ, ಕೆಸಿಆರ್ ಮತ್ತು ಅವರ ಪುತ್ರನನ್ನು ಬಿಟ್ಟರೆ ಈ ಭೂಮಿಯ ಮೇಲೆ ಮತ್ತೆ ಯಾರಾದಾರೂ ಇದ್ದಾರೆಯೇ ಎಂದು ಕಿಡಿಕಾರಿದ್ದಾರೆ.
ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್(ಕೆಸಿಆರ್) ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ರೆಡ್ಡಿ, ಒಬ್ಬ ತಂದೆ ತನ್ನ ಮಗನಿಗೆ ತನ್ನ ಸಹೋದರಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಬೇಕಿತ್ತು, ಆದರೆ ಕೆಸಿಆರ್ ಹಾಗೆ ಮಾಡುವಲ್ಲಿ ವಿಫಲರಾಗಿದ್ದಾರೆ. ತನ್ನ ಕುಟುಂಬ ಸದಸ್ಯರಿಗೆ ಒಳ್ಳೆಯದನ್ನು ಕಲಿಸಲು ಸಾಧ್ಯವಾಗದ ವ್ಯಕ್ತಿ, ನಾಲ್ಕು ಕೋಟಿ ತೆಲಂಗಾಣ ಜನರಿಗೆ ಒಳ್ಳೆಯದನ್ನು ಮಾಡುತ್ತಾನೆಯೇ ಎಂದು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸ್ವಸಹಾಯ ಸಂಘಗಳ ಸದಸ್ಯರ ಸಂಖ್ಯೆ 70 ಲಕ್ಷಕ್ಕೆ ಏರಿಕೆಯಾಗಿದ್ದು, 2034ರ ವೇಳೆಗೆ ಈ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ನವೆಂಬರ್ 19ರಂದು, ಮಹಿಳೆಯರಿಗೆ ಉಚಿತ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಕಾರ್ಯಕ್ರಮದ ಎರಡನೇ ಹಂತಕ್ಕೆ ಸರ್ಕಾರ ಚಾಲನೆ ನೀಡಲಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).